ಗುರುವಾರ , ಆಗಸ್ಟ್ 13, 2020
25 °C

ಮನ್ನಾ ಡೇ ಬ್ಯಾಂಕ್ ಖಾತೆಯಲ್ಲಿ ರೂ.30 ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನ್ನಾ ಡೇ ಬ್ಯಾಂಕ್ ಖಾತೆಯಲ್ಲಿ ರೂ.30 ಲಕ್ಷ ಕಳವು

ಕೋಲ್ಕತ್ತ:  ಹಿರಿಯ ಹಿನ್ನಲೆ ಗಾಯಕ ಮನ್ನಾ ಡೇ ಜೀವನ್ಮರಣದೊಂದಿಗೆ ಹೋರಾಡುತ್ತಿರುವಾಗ, ಅವರ ಇಲ್ಲಿನ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿಗಳು ನಾಪತ್ತೆಯಾಗಿರುವ ಪ್ರಕರಣ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈಗ ಅವರ ಕುಟುಂಬ ವಿವಾದದಲ್ಲಿ ಸಿಲುಕಿದೆ.ಬೆಂಗಳೂರಿನಲ್ಲಿರುವ ಈ ಖ್ಯಾತ ಗಾಯಕನ ಪುತ್ರಿ ಸುಮಿತಾ ಮತ್ತು ಪತಿ ಜ್ಞಾನರಂಜನ್ ದೇವ್ ಕೋಲ್ಕತ್ತ ಪೊಲೀಸರಿಗೆ ಪತ್ರ ಬರೆದು, ಮನ್ನಾ ಡೇ ಬ್ಯಾಂಕ್ ಖಾತೆಯಿಂದ ಅವರ  ಸೋದರ ಸಂಬಂಧಿ ತಾರಿತ್ ಸುಮಾರು 30 ಲಕ್ಷ ರೂಪಾಯಿಗಳನ್ನು ಲಪಟಾಯಿಸಿರುವುದಾಗಿ ಆರೋಪಿಸಿದ್ದಾರೆ.ಅಲ್ಲದೆ, ಮನ್ನಾ ಡೇ ಪತ್ನಿ ಸುಲೋಚನಾ ಅವರಿಗೆ ಸೇರಿದ ಬೆಲೆಬಾಳುವ ಚಿನ್ನಾಭರಣಗಳನ್ನು ಸಹ ತಾರಿತ್ ಸ್ವಾಧೀನಪಡಿಸಿಕೊಂಡಿರುವುದಾಗಿ ಅವರು ಪತ್ರದಲ್ಲಿ ದೂರಿದ್ದಾರೆ. ಇದರೊಂದಿಗೆ ಈ ಬ್ಯಾಂಕ್ ಖಾತೆಯ ಲಾಕರ್‌ನಲ್ಲಿರಿಸಿದ್ದ ಹಲವು ಬೆಲೆಬಾಳುವ ಕೈಗಡಿಯಾರಗಳನ್ನು ಕೂಡಾ ತಾರಿತ್ ತೆಗೆದುಕೊಂಡಿರುವುದಾಗಿ ಅವರು ಆಪಾದಿಸಿದ್ದಾರೆ.ಇಲ್ಲಿರುವ ಮನ್ನಾ ಡೇ ಅವರ ಪಿತ್ರಾರ್ಜಿತ ಮನೆ ಬಳಿಯ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯಲ್ಲಿ ಗಾಯಕನೊಂದಿಗೆ ತಾರಿತ್ ಜಂಟಿ ಖಾತೆ ಹೊಂದಿದ್ದಾರೆ. ಆದರೆ ಗಾಯಕ ಬೆಂಗಳೂರಿನಲ್ಲಿ ನೆಲೆಸಿದ ನಂತರ ವೃದ್ಧಾಪ್ಯದ ಕಾರಣ ಅವರ ಖಾತೆಯನ್ನು ತಾರಿತ್ ಅವರೇ ನೋಡಿಕೊಂಡಿದ್ದರು.ಮನ್ನಾ ಡೇ ಗೈರುಹಾಜರಿಯನ್ನು ದುರುಪಯೋಗ ಪಡಿಸಿಕೊಂಡಿರುವ ತಾರಿತ್, ಗಾಯಕ ಮತ್ತು ಅವರ ಪತ್ನಿಯ ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಕದ್ದಿರುವುದು ಮಾತ್ರವಲ್ಲದೆ, ಈ ಖಾತೆಯ ದಾಖಲೆ ಮತ್ತು ಲಾಕರ್‌ನ್ನು ತನ್ನ ಮತ್ತು ಪತ್ನಿ ಅರ್ಪಿತಾ ಅವರ ಬ್ಯಾಂಕ್ ಖಾತೆ ಇರುವ ಹತ್ತಿರದ ಇನ್ನೊಂದು ಶಾಖೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸುಮಿತಾ ದೂರಿದ್ದಾರೆ.ಕಳೆದ ಕೆಲವು ತಿಂಗಳಿಂದ ಅಸ್ವಸ್ಥರಾಗಿರುವ ಡೇ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿ ಐಸಿಸಿಯುನಲ್ಲಿದ್ದರೂ, ತಾರಿತ್ ಹಣ ನೀಡದಿದ್ದಾಗ, ಗಾಯಕನ ಬ್ಯಾಂಕ್ ಖಾತೆ ಪರಿಶೀಲಿಸಲಾಗಿ ಹಣ ಮತ್ತಿತರ ವಸ್ತುಗಳು ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.