ಶನಿವಾರ, ಮೇ 8, 2021
18 °C
ನಗರ ಸಂಚಾರ

ಮಮಕಾರದ ನಿರೀಕ್ಷೆಯಲ್ಲಿ ಅಪ್ಪಂದಿರು...

ವಿಜಯ್ ಹೂಗಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಹೆಸರು ಮಲ್ಲಿಕಾರ್ಜುನ, ವಯಸ್ಸು ಎಪ್ಪತ್ತು, ಕಳೆದ ಎರಡ್ಮೂರು ವರ್ಷಗಳಿಂದ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು. ಮೂವರೂ ಉತ್ತಮ ರೀತಿಯಲ್ಲಿ ಸಂಪಾದನೆ ಮಾಡುವ ಉದ್ಯೋಗದಲ್ಲಿದ್ದಾರೆ. ಆದರೆ, ಇವರಿಗೆ ಅಪ್ಪನ ಬಗ್ಗೆ ಪ್ರೀತಿ ಇದ್ದರೂ ಯಾರೊಬ್ಬರಿಗೂ ಆತನನ್ನು ನೋಡಿಕೊಳ್ಳಲು ಪುರಸೊತ್ತು ಇಲ್ಲ. ಮನೆಯಲ್ಲಿರುವ ಸೊಸೆಯಂದಿರಿಗೆ ಮಾವನನ್ನು ಕಂಡರೆ ಆಗಿ ಬರೊಲ್ಲ.ಹೆಸರು ತಮ್ಮಣ್ಣ, ವಯಸ್ಸು 67, ಗ್ರಾಮೀಣ ಪ್ರದೇಶದಿಂದ ಬಂದಿರುವ ಈತ ಮಕ್ಕಳ ವರ್ತನೆಗೆ ಬೇಸತ್ತು ವೃದ್ಧಾಶ್ರಮ ಸೇರಿದ್ದಾರೆ. ಈತನಿಗೆ ಇಬ್ಬರು ಗಂಡು ಮಕ್ಕಳು, ಅವರೂ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಈ ಇಬ್ಬರಿಗೂ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ ತಂದೆ ಮಾತ್ರ ಇವರಿಗೆ ಬೇಕಾಗಿಲ್ಲ. ಇಂತಹದೇ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕ ಏಳು ಜನ ವಯೋವೃದ್ದರು ಹಾವೇರಿಯ ಶ್ರೀಶಕ್ತಿ ಅಸೋಶಿಯೇಶನ್‌ನ ವೃದ್ಧಾಶ್ರಮದಲ್ಲಿ ವಾಸವಾಗಿದ್ದಾರೆ. ಜಗತ್ತಿನಾದ್ಯಂತ (ಭಾನುವಾರ) ವಿಶ್ವ ಅಪ್ಪಂದಿರ ದಿನ ಆಚರಣೆ ಮಾಡಲಾಯಿತು. ಆದರೆ, ಈ ಹತ್ತು ಜನರಲ್ಲಿ ಯಾವೊಬ್ಬರ ಮಕ್ಕಳು ವೃದ್ಧಾಶ್ರಮಕ್ಕೆ ಬಂದು ತಮ್ಮ ತಂದೆಗೆ ಅಪ್ಪಂದಿರ ದಿನದ ಶುಭಾಷಯ ತಿಳಿಸುವುದಿರಲಿ, ಅವರನ್ನು ನೋಡಲು, ಪ್ರೀತಿಯಿಂದ ಎರಡು ಮಾತನಾಡಲು ಯಾರು ಬಂದಿರಲಿಲ್ಲ.ಕುಳಿತರೆ ಸರಕ್ಕನೆ ಎದ್ದು ನಿಲ್ಲಲು ಬಾರದ, ಸರಿಯಾಗಿ ಕಿವಿ ಕೇಳದ, ಎಲ್ಲಿಗಾದರೂ ಹೋಗಬೇಕೆಂದರೆ ಇನ್ನೊಬ್ಬರ ಸಹಾಯ ಅಗತ್ಯವಿರುವ ವೃದ್ಧರು, ಎಲ್ಲೆಲ್ಲಿಂದಲೋ ಬಂದು ಇಲ್ಲಿ ಸೇರಿಕೊಂಡು ತಮ್ಮದೇ ಆದ ಒಂದು ಕುಟುಂಬವನ್ನು ಈ ವೃದ್ಧರು ಕಟ್ಟಿಕೊಂಡಿದ್ದಾರೆ. ಇಂದು (ಭಾನುವಾರ) ವಿಶ್ವ ಅಪ್ಪಂದಿರ ದಿನಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮಾತಿಗೆಳದು, ನಿಮ್ಮ ಮಕ್ಕಳು ಇಲ್ಲಿಗೆ ಬಂದು ನಿಮ್ಮನ್ನು ಮಾತನಾಡಿಸಿಕೊಂಡು ಹೋಗಿದ್ದಾರೆಯೇ ಎಂದರೆ, ನಮ್ಮ ಬಗ್ಗೆ ಮಮತೆ, ಮಮಕಾರ, ಪ್ರೀತಿ ಇದ್ದರೇ ಅವರು ನಮ್ಮನ್ನೇಕೆ ವೃದ್ಧಾಶ್ರಮದಲ್ಲಿ ಬಿಡುತ್ತಿದ್ದರು ಎಂದು ಮರು ಪ್ರಶ್ನೆ ಹಾಕುತ್ತಲೇ ಕಣ್ಣಂಚಿನಲ್ಲಿ ನೀರು ತರಿಸಿದರು.ಅಪ್ಪಂದಿರಿಗೆ ಇಂತಹದೊಂದು ದಿನ ನಿಗದಿಯಾಗಿದೆ ಎಂಬುದು ನಮಗೂ ಗೊತ್ತಿರಲಿಲ್ಲ. ಪತ್ರಿಕೆ ಹಾಗೂ ಟಿವಿಗಳಲ್ಲಿ ನೋಡಿದಾಗ, ತಂದೆಯ ದಿನಾಚರಣೆ ಮಾಡುವ ಮೂಲಕ ಅವನಿಗೂ ಗೌರವ ನೀಡಲಾಗುತ್ತಿದೆ ಎಂಬುದು ಗೊತ್ತಾಯಿತು.ಅದು ಅಲ್ಲದೇ ತಂದೆ ಮಕ್ಕಳು ಅನ್ಯೋನ್ಯವಾಗಿರುವ ಕೆಲವರ ಕಥೆಗಳನ್ನು ಟಿವಿಗಳಲ್ಲಿ ತೋರಿಸಿದಾಗ, ನಮ್ಮ ಮಕ್ಕಳು ನಮ್ಮ ಜತೆ ಚನ್ನಾಗಿದ್ದರೆ, ನಾವು ಕೂಡಾ ಅವರ ಜತೆಯಲ್ಲಿ ಮೊಮ್ಮಕ್ಕಳೊಳಗೆ ನಲಿಯುತ್ತಾ ಇಳಿವಯಸ್ಸಿನ ದಿನಗಳನ್ನು ಕಳೆಯುತ್ತಿದ್ದೇವು. ಆದರೆ, ಇಲ್ಲಿ ಯಾರ ಇಲ್ಲದಂತೆ ಏಕಾಂಗಿಗಳಾಗಿರುವುದನ್ನು ನೆನೆದು ಬೇಸರಗೊಂಡೆವು ಎಂದು ಹೇಳುತ್ತಾರೆ ವೃದ್ಧಾಶ್ರಮದಲ್ಲಿರುವ ವೃದ್ದ ಧಾರವಾಡದ ಮೋಹನ ಜೋಶಿ.ಪ್ರೀತಿಯ ನಿರೀಕ್ಷೆಯಲ್ಲಿ..: ಮಕ್ಕಳನ್ನು ಪಡೆದಾಗ ಎಷ್ಟು ಸಂತೋಷಪಟಿದ್ದೇವೆ. ನಮ್ಮ ಜೀವನವನ್ನು ಮುಡುಪಾಗಿಟ್ಟು ಅವರ ಬೆಳವಣಿಗೆಗೆ ಶ್ರಮಿಸಿದ್ದೇವೆ. ನಾವು ಅವರಿಂದ ಬಹಳ ದೊಡ್ಡದೇನು ನಿರೀಕ್ಷಿಸುವುದಿಲ್ಲ. ಮನೆಯಲ್ಲಿ ಇಟ್ಟುಕೊಂಡು ಮನೆಯಲ್ಲಿರುವ ಮಕ್ಕಳು, ಮೊಮ್ಮಕ್ಕಳ ಜತೆಯಲ್ಲಿ ಪ್ರೀತಿಯಿಂದ ಎರಡು ಮಾತುಗಳನ್ನಾಡುವುದಕ್ಕೆ ಅವಕಾಶ ಕೊಟ್ಟರೆ, ನಾವು ಅವರಿಗಾಗಿ ಜೀವನಪೂರ್ತಿ ತ್ಯಾಗ ಮಾಡಿರುವುದಕ್ಕೆ ಸಾರ್ಥಕತೆ ಬರುತ್ತದೆ. ಅಂತಹ ಪ್ರೀತಿಯ ನಿರೀಕ್ಷೆಯಲ್ಲಿ ಕಾದು ಕುಳಿತ್ತಿದ್ದೇವೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.ಕೆಲವರು ಪುಣ್ಯವಂತ ತಂದೆಗಳು ಇಲ್ಲಿದ್ದಾರೆ. ಅವರ ಜತೆ ಮಕ್ಕಳು ಚನ್ನಾಗಿದ್ದಾರೆ. ಆಗಾಗ ಅವರು ಬಂದು ಮಾತನಾಡಿಕೊಂಡು ಹೋಗುತ್ತಾರೆ. ಇಂತಹ ಅವಕಾಶ ಎಲ್ಲರಿಗೂ ಸಿಗಬೇಕಲ್ಲ ಎಂದು ಬೇಸರದಿಂದಲೇ ನುಡಿಯುತ್ತಾರೆ ವಿಠ್ಠೋಬರಾವ್.ವೃದ್ಧಾಶ್ರಮದಲ್ಲಿ ಸಮಯಕ್ಕೆ ಸರಿಯಾಗಿ ಊಟ, ಉಪಹಾರದ ವ್ಯವಸ್ಥೆ ಇದೆ. ನಾವೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಕುಟುಂಬ ಪ್ರೀತಿಯಿಂದ ವಂಚಿತರಾಗಿದ್ದೇವೆ. ನಮ್ಮ ಯೌವ್ವನದಲ್ಲಿ ಮಕ್ಕಳನ್ನು ಬೆಳೆಸಲು ನಾವು ಪಟ್ಟಂತಹ ಕಷ್ಟ ಕಾರ್ಪಣ್ಯಗಳನ್ನು ಹಾಗೂ ನಾವು ನಮ್ಮ ತಂದೆ ತಾಯಿಗಳನ್ನು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವು.ಅವರ ಬಗ್ಗೆ ನಮಗಿದ್ದ ಗೌರವ ಆದರಗಳೇಷ್ಟು ಎಂಬುದನ್ನು ಮಾತನಾಡಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದೇವೆ. ನಮಗೆ ಹಿಂದೆ ಅಪ್ಪಂದಿರ ದಿನಾಚರಣೆ ಬಗ್ಗೆ ಗೊತ್ತಿರಲಿಲ್ಲ. ಆದರೂ, ಅವರು ಸಾಯುವವರೆಗೆ ಅವರಿಗೆ ಯಾವುದೇ ತೊಂದರೆ ಆಗದಂತೆ ಜೋಪಾನ ಮಾಡುತ್ತಿದ್ದೇವು. ಈಗ ಅಂತಹ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದಲೋ ಏನೂ ಅಪ್ಪಂದಿರ ದಿನಾಚರಣೆ ಆಚರಣೆ ಮಾಡುತ್ತಿರಬಹುದು ಎನ್ನುತ್ತಾರೆ ಇಲ್ಲಿನ ವೃದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.