ಭಾನುವಾರ, ಮೇ 22, 2022
26 °C

ಮರದ ಪಟ್ಟಿ ಖರೀದಿಯ ಕಷ್ಟ-ಸುಖ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆ ಕಟ್ಟಲು ಅಗತ್ಯವಾದ ಮರ ಖರೀದಿಸಲು ಸಾಮಿಲ್ ಅಥವಾ ಕೊಯ್ದು ಸಿದ್ಧಪಡಿಸಿದ ಮರದ ಪಟ್ಟಿಗಳನ್ನು ಮಾರುವ ಅಂಗಡಿಗೆ ತೆರಳುವ ಮುನ್ನ ವಿವಿಧ ಜಾತಿಯ ಮರಗಳ ಬಗ್ಗೆ ತಿಳಿದುಕೊಂಡಿರುವುದು ಉತ್ತಮ. ಕನಿಷ್ಠ ನಿಮಗೆ ಅಗತ್ಯವಾಗಿರುವ ಮರಗಳ ಬಗೆಗಾದರೂ ಅರಿತುಕೊಂಡಿರಬೇಕು.ಉದಾಹರಣೆಗೆ ತೇಗದ ಮರ ಬೇಕಿದ್ದರೆ ಆ ಮರದ ಬಣ್ಣ ಹೇಗಿರುತ್ತದೆ, ಗೆರೆಗಳು ಯಾವ ಬಣ್ಣದವಾಗಿರುತ್ತವೆ. ಒಂದು ಘನ ಅಡಿ ತೇಗದ ಮರಕ್ಕೆ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ.. ಎಂಬುದನ್ನು ತಿಳಿದುಕೊಂಡಿದ್ದರೆ ಖರೀದಿಯಲ್ಲಿ ಮೋಸ ಹೋಗುವುದನ್ನು ತಪ್ಪಿಸಿಕೊಳ್ಳಬಹುದು.ಮರಗಳ ಬಗ್ಗೆ ನಿಮಗೆ ಸ್ವಲ್ಪವೂ ಅರಿವಿಲ್ಲ ಎನ್ನುವುದಾದರೆ ನಿಮ್ಮ ಪರಿಚಯದಲ್ಲಿ ಯಾರಿಗಾದರೂ ಆ ಬಗ್ಗೆ ಹೆಚ್ಚು ತಿಳಿವಳಿಕೆ ಇರುವವರ ನೆರವು ಪಡೆಯುವುದು ಒಳಿತು.  ಅಥವಾ  ನಿಮ್ಮ ನಂಬಿಕೆಯ ಮರಗೆಲಸದವರ ನೆರವನ್ನೂ ಪಡೆಯಬಹುದು. ಏಕೆಂದರೆ ಮರದ ಪಟ್ಟಿಗಳ ಅಳತೆ ಸೆಂಟಿಮೀಟರ್, ಇಂಚುಗಳ ಲೆಕ್ಕದಲ್ಲಿ ಇರುವುದರಿಂದ ಇಂಥ ಅವಲಂಬನೆ ಅನಿವಾರ್ಯ.ಕೆಲವು ಸಾಮಿಲ್ ಅಥವಾ ಸಿದ್ಧಮರದ ಪಟ್ಟಿ ಮಾರುವ ಅಂಗಡಿಗಳಲ್ಲಿ(ಎಲ್ಲೆಡೆಯೂ ಅಲ್ಲ) ಗ್ರಾಹಕರನ್ನು ಕರೆದು ತರುವವರಿಗೆ ಶೇ 10ರಿಂದ 15ರವರೆಗೂ ಕಮಿಷನ್ ನೀಡುವ ರೂಢಿ ಇರುತ್ತದೆ. ಅಂಥ ಅಂಗಡಿ ಅಥವಾ ಸಾಮಿಲ್‌ನವರು ಆ ಕಮಿಷನ್ ಹಣವನ್ನು ತಮ್ಮ ಜೇಬಿನಿಂದೇನೂ ಕೊಡುವುದಿಲ್ಲ.ಗ್ರಾಹಕರಿಂದಲೇ ವಾಮ ಮಾರ್ಗದಲ್ಲಿ ಪಡೆದು ಆ ಕಮಿಷನ್ ಕೊಡುತ್ತಾರೆ. ಗ್ರಾಹಕರಿಗೆ ಹೆಚ್ಚಿನ ಬೆಲೆ ಹೇಳಿಯೋ, ಮರದ ಅಳತೆಯಲ್ಲಿ ಸುಳ್ಳು ಲೆಕ್ಕ ಹೇಳಿಯೊ, ಅಥವಾ ತೇಗ ಎಂದು ಬೇರೆ ಮರದ ಪಟ್ಟಿ ನೀಡುವ ಮೂಲಕವೋ ಈ ಹಣವನ್ನು ಸಂಗ್ರಹಿಸುವ ರೂಢಿ ಕೆಲವೆಡೆ ಇದೆ. ಇದು ಕೆಲವೊಮ್ಮೆ ಸಾವಿರ ರೂಪಾಯಿಗಳ ಮೊತ್ತವನ್ನೂ ದಾಟಿರುತ್ತದೆ.ಇಂಥ ಸಂದರ್ಭದಲ್ಲಿ ಮುಂಚಿತವಾಗಿ ನೀವೇ ಒಂದೆರಡು ಸಾಮಿಲ್ ಅಥವಾ ಮರದ ಪಟ್ಟಿಗಳ ಅಂಗಡಿಗೆ ಅಲೆದಾಡಿ ಯಾವ ಮರಕ್ಕೆ ಬೆಲೆ ಎಷ್ಟಿದೆ. ನಿಮಗೆ ಬೇಕಾದ ಮರದ ಪಟ್ಟಿಗಳಿವೆಯೇ ತಿಳಿದುಕೊಳ್ಳಿರಿ. ಮುಖ್ಯವಾಗಿ ಅಲ್ಲಿ ಚೌಕಾಷಿಗೆ ಅವಕಾಶವಿದೆಯೇ ತಿಳಿದುಕೊಳ್ಳಿರಿ.ಒಂದೊಮ್ಮೆ ಆ ಮಾಲೀಕ ಚೌಕಾಷಿ ವ್ಯಾಪಾರದ ಪದ್ಧತಿಯವನಾದರೆ ಅಲ್ಲಿ ಮರ ಖರೀದಿಸದೇ ಇರುವುದು ಉತ್ತಮ. ಏಕೆಂದರೆ ಯಾವುದೇ ವರ್ತಕ ನಷ್ಟ ಮಾಡಿಕೊಂಡು ವ್ಯಾಪಾರ ಮಾಡಲಾರ ಎಂಬುದು ಸರಳ ಸತ್ಯ. ನಿಮ್ಮಡನೆ ಆತ ಚೌಕಾಷಿಗೆ ಸಿದ್ಧ ಇದ್ದಾನೆ ಎಂದರೆ ಅದಕ್ಕೂ ಮೊದಲೇ ಆತ ಆ ಸರಕು/ವಸ್ತುವಿನ ಬೆಲೆಯನ್ನು ತುಸು ಹೆಚ್ಚಿಸಿಯೇ (ಬಟ್ಟೆ ಅಂಗಡಿಗಳಲ್ಲಿನ ರಿಯಾಯಿತಿ ಮಾರಾಟದ ದರದಂತೆ) ಹೇಳಿರುತ್ತಾನೆ ಎಂದೇ ಅರ್ಥ.ನೀವು ಮೊದಲೇ ಗುರುತಿಟ್ಟುಕೊಂಡ ಮರದ ಪಟ್ಟಿಗಳ ಅಂಗಡಿ ಅಥವಾ ಸಾಮಿಲ್ ವಿಚಾರವನ್ನು ಕಡೆ ಗಳಿಗೆವರೆಗೂ  ಇತರರಿಗೆ ಹೇಳದೇ ಇರುವುದು ಕ್ಷೇಮ. ಇಲ್ಲವಾದರೆ ಕಮಿಷನ್ ಆಸೆಗೆ ಅಪವಿತ್ರ ಮೈತ್ರಿ ಏರ್ಪಡುವ ಅಪಾಯವಿರುತ್ತದೆ. ಪರಿಣಾಮ ನಿಮಗೆ ನಷ್ಟ ಕಟ್ಟಿಟ್ಟಬುತ್ತಿ.ಮರದ ಜಾತಿ, ಬಣ್ಣ, ಗೆರೆ ತಿಳಿದುಕೊಳ್ಳಬೇಕು. ಬೀದಿ ಅಲೆದು ಮೊದಲೇ ಅಂಗಡಿ ಗುರುತಿಟ್ಟುಕೊಳ್ಳಬೇಕಂತೆ.. ಅಯ್ಯ್, ಯಾರಿಗಪ್ಪಾ ಬೇಕು ಇದೆಲ್ಲಾ... ಎಂದು ಬೇಸರವೆ?

ಮೋಸ ಹೋಗಬಾರದು; ಇದೆಲ್ಲ ಕಷ್ಟ ಬೇಡ ಎನ್ನುವವರಾದರೆ ಇನ್ನೊಂದು ಮಾರ್ಗವಿದೆ. ಅರಣ್ಯ ಇಲಾಖೆ ತನ್ನ ಬಳಿ ಇರುವ ಅಥವಾ ಮರ ಕಳ್ಳ ಸಾಗಣೆ ವೇಳೆ ವಶವಾದ ಮರದ ದಿಮ್ಮಿ, ಪಟ್ಟಿಗಳನ್ನು ಪ್ರತಿ ವರ್ಷ ಕೆಲವು ಸಂದರ್ಭಗಳಲ್ಲಿ ನೇರ ಹರಾಜು ಹಾಕುತ್ತದೆ.

 

ವಾರ ಮುಂಚಿತವಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತದೆ. ಇದನ್ನು ಗಮನಿಸುತ್ತಿದ್ದು ಹರಾಜಿನಲ್ಲಿ ಭಾಗವಹಿಸಿದರೆ ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಬಹಳ ಕಡಿಮೆ ಬೆಲೆಗೆ ಉತ್ತಮ ಜಾತಿಯ ಮರದ ದಿಮ್ಮಿಗಳನ್ನೊ, ಪಟ್ಟಿಗಳನ್ನೊ ಪಡೆಯಬಹುದು.ಆದರೆ, ಇಲ್ಲಿಯೂ ಮರದ ಜಾತಿ, ಮಾರುಕಟ್ಟೆಯಲ್ಲಿ ಅದಕ್ಕಿರುವ ಬೆಲೆ, ಹರಾಜಿಗೆ ಇಟ್ಟಿರುವ ಮರದ ದಿಮ್ಮಿ ಅಥವಾ ಪಟ್ಟಿಗಳ ಘನ ಅಡಿ ಅಳತೆ ಮೊದಲಾದವನ್ನು ಮೊದಲೇ ಅಂದಾಜು ಮಾಡಿಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿಯೂ ಅನುಭವಿಗಳ ಅಥವಾ  ನೀವು ಆಯ್ಕೆ ಮಾಡಿಕೊಂಡ ಮರಗೆಲಸದವರ ನೆರವನ್ನು ಪಡೆಯಬಹುದು. ಆದರೆ, ನಿಮಗೆ ಬೇಕಾದ ತಕ್ಷಣವೇ ಮರ ದೊರೆಯುವ ಮಾರ್ಗವಲ್ಲ. ವರ್ಷ-ತಿಂಗಳು ಮುಂಚಿತವಾಗಿಯೇ ಮಾಡಿಕೊಳ್ಳಬೇಕಾದ ಸಿದ್ಧತೆಯ ಕೆಲಸ ಅಷ್ಟೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.