ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಕಲೆಯ ಹೊಸ ಬಗೆ

Last Updated 9 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಕಲೆಯ ಸಹಜ ಆಕರ್ಷಣೆಗೆ ತಂತ್ರಜ್ಞಾನದ ನೆರವು ಬೆರೆತರೆ ಅದರ ಸೌಂದರ್ಯ ಇಮ್ಮಡಿಯಾಗುತ್ತದೆ. ಅದುವೇ ನನ್ನ ಕಲಾಪ್ರಕಾರ, ನನ್ನ ಕಲೆಯ ಸೊಬಗಿನ ಒಳಗುಟ್ಟು~ ಹೀಗೆ ಮಾತಿಗೆ ತೆರೆದುಕೊಂಡವರು ರಾಘವೇಂದ್ರ ಹೆಗಡೆ.

ಒಂದೆಡೆ ರಾಮಕಥಾ ಪಠಣ ನಡೆಯುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ಪೂರಕವಾಗಿ ಮರಳ ಮೇಲೆ ಸೊಗಸಾಗಿ ಚಿತ್ರ ಬಿಡಿಸುತ್ತಿದ್ದವು ರಾಘವೇಂದ್ರ ಅವರ ಕೈಗಳು. ಪಠಣ ಬದಲಾಗುತ್ತಿದ್ದಂತೆ, ರೆಪ್ಪೆ ಅಲುಗಿಸುವಷ್ಟು ಅಂತರದಲ್ಲಿ ಮರಳಿನ ಚಿತ್ರವೂ ಬದಲಾಗುತ್ತಿದ್ದದ್ದು ನೋಡುಗರ ಕಣ್ಣಲ್ಲಿ ಇದು ಸಾಧ್ಯವೇ ಎಂಬ ಬೆರಗು ಮೂಡಿಸಿತ್ತು.

ಕಲೆ ಮತ್ತು ಪಠನ ಒಂದಕ್ಕೊಂದು ತಳಕು ಹಾಕಿಕೊಂಡ ರೀತಿ ಅಲ್ಲಿದ್ದವರನ್ನು ಅಚ್ಚರಿಯಲ್ಲಿ ಮುಳುಗುವಂತೆ ಮಾಡಿತ್ತು. ಮನುಷ್ಯನ ಕ್ರಿಯಾಶೀಲತೆ ಎಷ್ಟು ವೇಗವಾಗಿರಲು ಸಾಧ್ಯ ಎಂಬುದು ಅಲ್ಲಿ ನಿರೂಪಿತಗೊಂಡಿತ್ತು. ಈ ವಾತಾವರಣ ಕಂಡುಬಂದಿದ್ದು ನಗರದ ಅರಮನೆ ಮೈದಾನದಲ್ಲಿ.

ಸಂಜೆ ಅಧ್ಯಾತ್ಮ ಗಂಧದ ಗಾಳಿಯಲ್ಲಿ ರಾಮಕಥಾ ಪಠಣಕ್ಕೆ ತಲೆದೂಗುತ್ತಿದ್ದ ಜನರಿಗೆ ಈ ಅಚ್ಚರಿ ಇನ್ನೂ ಅದ್ಭುತವೆನಿಸಿತ್ತು. ತಮ್ಮ ಐದು ಬೆರಳುಗಳಲ್ಲಿ ಮರಳಿಗೂ ಮೂರ್ತ ರೂಪ ನೀಡುತ್ತಿದ್ದರು ಕಲಾಕಾರ ರಾಘವೇಂದ್ರ ಹೆಗಡೆ.

ತಮ್ಮ ನೂರನೇ ಪ್ರದರ್ಶನ ಇದಾಗಿದ್ದು, ಸ್ವಲ್ಪ ಹೆಚ್ಚೇ ಸಂತಸದಲ್ಲಿದ್ದ ರಾಘವೇಂದ್ರ ಅವರು ತಮ್ಮ ಕಲೆಯ ಬಗ್ಗೆ ಹೆಮ್ಮೆಯಿಂದ ಮಾತು ಹಂಚಿಕೊಂಡರು.`ಮರಳಿನ ಶಿಲ್ಪಗಳು ಎಂದರೆ ಜನರಿಗೆ ಸಾಮಾನ್ಯವಾಗಿ ಕಣ್ಣೆದುರಿಗೆ ಮೂಡುವುದು ಸಮುದ್ರದ ದಡದ ಮೇಲೋ ಅಥವಾ ಪ್ರತ್ಯೇಕ ಸ್ಥಳದಲ್ಲೋ ರಾಶಿ ಮರಳನ್ನು ಬಳಸಿಕೊಂಡು ರೂಪಿಸುವ ಕಲಾಕೃತಿ.
 
ಆದರೆ ನಾನು ಬಿಡಿಸುವ ಮರಳಿನ ಶಿಲ್ಪ ಬೇರೆಯದ್ದು. ನನ್ನ ಈ ಕಲಾಪ್ರಕಾರಕ್ಕೆ ಅವಶ್ಯಕವಿರುವುದು ಕೇವಲ ಹಿಡಿ ಮರಳಷ್ಟೇ. ಪರದೆಯ ಮೇಲೆ ಒಂದು ಕ್ಷಣ ಜೀವ ತಳೆದು ಮರು ಕ್ಷಣ ಶೂನ್ಯವಾಗಿ ಮತ್ತೆ ಅದರಲ್ಲೇ ಇನ್ನೊಂದು ಹುಟ್ಟು ಕಾಣುವ ಕಲೆ ನನ್ನದು. ಇದು ಎಲ್ಲೂ ದಾಖಲೆಯಾಗಿ ಉಳಿಯುವುದಿಲ್ಲ. ವಿಡಿಯೊ ಮೂಲಕ ಮಾತ್ರವೇ ಈ ಚಿತ್ರವನ್ನು ನೋಡಲು ಸಾಧ್ಯ~ ಎಂದು ತಮ್ಮ ಕಲೆಯ ಬಗ್ಗೆ ವ್ಯಾಖ್ಯಾನ ನೀಡುತ್ತಿದ್ದರು.

`ರಾಮಕಥಾ~ದಲ್ಲೇ 60ಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಇವರು ಯಾವುದೇ ವಿಷಯಕ್ಕೆ ಸಂಬಂಧಿಸಿದ ಸನ್ನಿವೇಶವನ್ನು ಮರಳಿನಲ್ಲಿ ಒಂದೇ ಕ್ಷಣದಲ್ಲಿ ಕಟ್ಟಿಕೊಡುತ್ತಿದ್ದರು. `ಈ ತರಹದ ಕಲೆಯ ಅಭಿರುಚಿ ಹಚ್ಚಿಸಿಕೊಂಡವರು ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ.

ಯಾರೂ ತುಳಿಯದ ಹಾದಿಯನ್ನು ನಾನು ತುಳಿಯಬೇಕೆಂಬ ತುಡಿತ ನನ್ನನ್ನು ಹಿಂಬಾಲಿಸಿತ್ತು. ತಿಳಿವಳಿಕೆ ಬಂದಾಗಿನಿಂದಲೂ ಕಲೆಯ ಬಗ್ಗೆ ಅಗಾಧ ಪ್ರೀತಿ, ಆಸಕ್ತಿ, ಕುತೂಹಲ ಹುಟ್ಟಿಕೊಂಡಿತು. ಹೊಸತನ್ನು ಕಲಿಯಬೇಕೆಂಬ ಹಂಬಲ ತುಂಬಿಕೊಂಡಿತು. ಹಾಗಾಗಿಯೇ ಈ ಗೀಳು ಹಚ್ಚಿಕೊಂಡು ಅದರಲ್ಲೇ ಅಧ್ಯಯನ ಮುಂದುವರೆಸಿದೆ~ ಎನ್ನುವ ಹೆಗಡೆ ಚಿತ್ರಕಲಾ ಪರಿಷತ್ತಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

`ಕಲೆ ತಕ್ಷಣವೇ ಉದ್ಭವಿಸಿದರೆ ಅದಕ್ಕೆ ಮಾನ್ಯತೆ ಹೆಚ್ಚು. ಅದನ್ನು ಕಂಡವರೂ ಬೆರಗಾಗುತ್ತಾರೆ. ಎಂದೋ ಬಿಡಿಸಿದ ಚಿತ್ರದ ಪ್ರದರ್ಶನಕ್ಕಿಂತ ಈ ಕಲೆಯಲ್ಲಿ ಪ್ರಭಾವ ಹೆಚ್ಚು. ನೋಡುಗರ ಸ್ಮೃತಿಪಟಲದಲ್ಲಿ ಅಚ್ಚಳಿಯದೇ ನನ್ನ ಈ ಕಲಾಕೃತಿ ಉಳಿಯಬೇಕೆಂಬುದು ನನ್ನ ಉದ್ದೇಶ~ ಎಂದು ಅಭಿಮಾನದಿಂದ ಹೇಳಿಕೊಂಡರು ಅವರು.

ಮರಳಿನ ಕಲೆಯೊಂದಿಗೆ ಪಾರದರ್ಶಕ ವಸ್ತುಗಳ ಕಲಾಕೃತಿ, ಶಿಲ್ಪಕಲೆ, ಕ್ಲೇ ಮಾಡೆಲಿಂಗ್, ಕೊಲಾಜ್ ,ಸ್ಥಳ ಚಿತ್ರ ರಚನೆ ಹೀಗೆ ಕಲೆಯ ವಿವಿಧ ಆಯಾಮಗಳಲ್ಲೂ ಪರಿಣತಿ ಹೊಂದಿರುವ ಹೆಗಡೆ ಅವರ ಕಲೆಯಲ್ಲಿ ಪುರಾಣ ಪ್ರಜ್ಞೆ, ದಾರ್ಶನಿಕ ಹಿನ್ನಲೆ, ತತ್ವ ಜಿಜ್ಞಾಸೆ, ಸಂಸ್ಕೃತಿ ಪ್ರೀತಿ ಎದ್ದು ಕಾಣುತ್ತವೆ.

ಪ್ರತಿ ಕಲಾಕೃತಿ ರಚನೆಯಲ್ಲೂ ಅವರು ತುಳಿಯುವ ಹಾದಿ ಭಿನ್ನ. ಎರಡು ವರ್ಷಗಳಲ್ಲಿ ನೂರನೇ ಪ್ರದರ್ಶನ ನೀಡಿದ ಹೆಗಡೆ ಪ್ರತಿ ಪ್ರದರ್ಶನದ ಯಶಸ್ಸು ಮತ್ತೊಂದರ ದಾರಿ ತೋರಿಸುತ್ತಾ ಹೋಗುತ್ತದೆ. ಮದುವೆ, ನಿಶ್ಚಿತಾರ್ಥ, ಹರಿಕತೆ, ಉತ್ಪನ್ನ ಬಿಡುಗಡೆ, ಜಾಹೀರಾತು, ವಿಜ್ಞಾನ ಹೀಗೆ ವಿವಿಧ ಕಾರ್ಯಕ್ರಮಗಳಲ್ಲಿ ನನ್ನ ಮರಳು ಕಲೆಗೆ ಆಮಂತ್ರಣ ಇದ್ದೇ ಇರುತ್ತದೆ ಎಂದು ನುಡಿಯುತ್ತಾರೆ.

ಇದುವರೆಗೂ ದೆಹಲಿ, ಪೂನಾ, ಮುಂಬೈ, ಲಖನೌ ಹಾಗೂ ರಾಜ್ಯದ ವಿವಿಧೆಡೆ ತಮ್ಮ ಕಲಾ ನೈಪುಣ್ಯ ಪ್ರದರ್ಶಿಸಿರುವ ಇವರು ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

 `ಕಲೆ ಹರಿವ ನೀರು. ಎಲ್ಲರೂ ಇದರ ಗಂಧ ಗಾಳಿಯನ್ನು ಸವಿಯಬೇಕು~ ಎನ್ನುವುದಷ್ಟೇ ನನ್ನ ಅಭಿಲಾಷೆ ಎಂದು ಸರಳವಾಗಿ ನುಡಿದು ಪರದೆಯ ಮೇಲೆ ಮತ್ತೆ ಕೈಯಾಡಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT