ಬುಧವಾರ, ಮೇ 12, 2021
18 °C

ಮರಳು ದಂಧೆಗೆ ಕಡಿವಾಣ ಬಲು ಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಒಂದೆಡೆ ಅಧಿಕಾರಿಗಳು ಮರಳು ದಂಧೆಯನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿದ್ದರೆ ಇನ್ನೊಂದೆಡೆ ಅಕ್ರಮ ಮರಳು ಸಾಗಣೆದಾರರು ಕಾನೂನಿನ ತೂತುಕಿಂಡಿಯಿಂದ ನುಣುಚಿಕೊಂಡು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ.ತಾಲ್ಲೂಕಿನಲ್ಲಿ ಎಲ್ಲಿಯೂ ಮರಳು ಗಣಿಗಾರಿಕೆಗೆ ಅನುಮತಿ ಇಲ್ಲ. ಆದರೂ ಮಾಯಸಂದ್ರ ಹೋಬಳಿ ವ್ಯಾಪ್ತಿಗೆ ಸೇರಿದ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಣೆ ನಿರಂತರವಾಗಿ ನಡೆಯುತ್ತಿದೆ.ಕಳೆದ 3 ವರ್ಷಗಳಲ್ಲಿ ತಹಶೀಲ್ದಾರ್ 37 ಪ್ರಕರಣ ದಾಖಲಿಸಿ, 8.97 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಪೊಲೀಸರು ಪ್ರತ್ಯೇಕವಾಗಿ 37 ಪ್ರಕರಣ ದಾಖಲಿಸಿದ್ದಾರೆ. ಈ ಎಲ್ಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನ್ನು ಬಿಟ್ಟರೆ ಬೇರೆ ಪ್ರಕರಣಗಳಲ್ಲಿ ಯಾರಿಗೂ ಶಿಕ್ಷೆಯಾದ ಉದಾಹರಣೆ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ತಾಲ್ಲೂಕಿನಲ್ಲಿ ಈವರೆಗೆ 1 ಟಿಪ್ಪರ್, 16 ಲಾರಿ, 54 ಟ್ರ್ಯಾಕ್ಟರ್, 4 ಹಿಟ್ಯಾಚಿ, 2 ಜೆಸಿಬಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಈಚೆಗೆ ವಶಕ್ಕೆ ಪಡೆಯಲಾದ 10-12 ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ಮಾಲೀಕರು ಬಿಡಿಸಿಕೊಂಡಿದ್ದಾರೆ. ಎಂಎಂಡಿಆರ್ ಕಾನೂನಿನಡಿ ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ಅಥವಾ 25 ಸಾವಿರ ರೂಪಾಯಿ ದಂಡ ಇಲ್ಲವೇ ಎರಡನ್ನೂ ವಿಧಿಸಬಹುದಾಗಿದೆ. ನ್ಯಾಯಾಲಯ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಬಹುದಾಗಿದೆ. ಈವರೆಗೆ ಸಾಗಿಸಿರುವ ಮರಳಿನ ಮೌಲ್ಯವನ್ನೂ ವಸೂಲು ಮಾಡಲು ಅವಕಾಶವಿದೆ.ಅಕ್ರಮ ಮರಳು ಸಾಗಣೆ ಮಾಡುವ ವ್ಯಕ್ತಿಯನ್ನು ಎರಡು ರೀತಿಯಲ್ಲಿ ದಂಡನೆಗೆ ಒಳಪಡಿಸಬಹುದಾಗಿದೆ. ಕಂದಾಯ ಇಲಾಖೆ ಅಕ್ರಮ ಮರಳು ಸಾಗಣೆ ವಾಹನವನ್ನು ಪತ್ತೆ ಮಾಡಿದರೆ ತಹಶೀಲ್ದಾರ್ ಆ ವಾಹನ ವಶಪಡಿಸಿಕೊಂಡು ಎಂಎಂಡಿಆರ್ ಕಾಯಿದೆಯಡಿ 25 ಸಾವಿರದವರೆಗೆ ದಂಡ ವಿಧಿಸಬಹುದಾಗಿದೆ. ದಂಡ ವಿಧಿಸಿದ ನಂತರ ಮರಳನ್ನು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ನೀಡಿ ವಾಹನವನ್ನು ಬಿಡುಗಡೆ ಮಾಡಲಾಗುತ್ತದೆ.ಬಹುತೇಕ ಸಂದರ್ಭಗಳಲ್ಲಿ ಪೊಲೀಸ್ ಕೇಸ್ ಆಗುವುದಿಲ್ಲ. ದಂಡ ಕಟ್ಟಲು ಒಪ್ಪದಿದ್ದರೆ ಮಾತ್ರ ದಂಡಾಧಿಕಾರಿಗಳು ಪೋಲೀಸರಿಗೆ ಹೇಳಿ ಪ್ರಕರಣ ದಾಖಲಿಸುತ್ತಾರೆ. ಪೊಲೀಸರೇ ನೇರ ಅಕ್ರಮ ಮರಳು ಸಾಗಣೆಯನ್ನು ಪತ್ತೆ ಮಾಡಿದರೆ ಅದೇ ಎಂಎಂಆರ್‌ಡಿ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿ ವಾಹನವನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆದರೆ ಆರೋಪಿಗಳು ಷರತ್ತಿನ ಆಧಾರದ ಮೇಲೆ ನ್ಯಾಯಾಲಯದಿಂದ ವಾಹನವನ್ನು ಬಿಡಿಸಿಕೊಳ್ಳುತ್ತಾರೆ. ಹೀಗಾಗಿ ಮತ್ತೆ ಎರಡೂ ರೀತಿಯಲ್ಲಿ ಅಕ್ರಮ ಮರಳು ಸಾಗಣೆಗೆ ಸುಲಭವಾಗಿ ರಹದಾರಿ ಸಿಕ್ಕಂತಾಗುತ್ತದೆ.ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ವಹಿವಾಟಿಗೆ ಹೋಲಿಸಿದರೆ ಎಂದೋ ಒಮ್ಮೆ ನೀಡಬೇಕಾದ 25 ಸಾವಿರ ದಂಡ ಯಾವ ಲೆಕ್ಕಕ್ಕೂ ಅಲ್ಲ. ಬಹುತೇಕರು ದಂಡಾಧಿಕಾರಿ ಕಚೇರಿಯಲ್ಲಿ ದಂಡ ಕಟ್ಟಿ ನ್ಯಾಯಾಲಯದ ಕಕ್ಷೆ, ಶಿಕ್ಷೆಯಿಂದ ಪಾರಾಗುತ್ತಾರೆ.

33 ಮರಳು ಲಾರಿ ವಶ

ತುಮಕೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದೂರಿನ ಹಿನ್ನಲೆಯಲ್ಲಿ ಮರಳು ಸಾಗಟದ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಜಿಲ್ಲೆಯ ವಿವಿಧೆಡೆ 33 ಮರಳು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸ್ತೂರು ಕ್ರಾಸ್ ಬಳಿ 14 ಲಾರಿ, ಕ್ಯಾತ್ಸಂದ್ರ ಪೊಲೀಸ್ ಠಾಣೆ ಸರಹದ್ದಿನಲ್ಲಿ 7, ಹರಳೂರಿನಲ್ಲಿ 3 ಟ್ರ್ಯಾಕ್ಟರ್, ಒಂದು ಜೆಸಿಬಿ, ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಮರಳಪ್ಪನ ಹಳ್ಳಿ ವೃತ್ತದ ಬಳಿ 7 ಲಾರಿ, ತಾವರೆಕೆರೆಯಲ್ಲಿ ಒಂದು ಲಾರಿ, ಜೆಸಿಬಿ ವಶಪಡಿಸಿಕೊಳ್ಳಲಾಗಿದೆ. ಕಳೆದ ರಾತ್ರಿಯಿಂದ ಈಚೆಗೆ ದಾಳಿ ನಡೆದಿದೆ. ಲಾರಿ ಚಾಲಕರು, ಮಾಲೀಕರ ಮೇಲೆ ಆಯಾಯ ಠಾಣೆಯಲ್ಲಿ ದೂರು ದಾಖಲಾಗಿದೆ.ಕುಣಿಗಲ್‌ನಲ್ಲಿ ನಿರಂತರ ಮರಳು ಸಾಗಣೆ

ಕುಣಿಗಲ್: ತಾಲ್ಲೂಕಿನಲ್ಲಿ ನಿರಂತರ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ನಡೆಯುತ್ತಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾನವಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ಎನ್.ಕೆ.ಸತೀಶ್ ಆಪಾದಿಸಿದ್ದಾರೆ. ಅಕ್ರಮ ಸಾಗಣೆಗೆ ಕೇವಲ ದಂಡ ವಿಧಿಸಲಾಗುತ್ತಿದೆ. ಅಕ್ರಮ ತಡೆಯಲು ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ. ಕೆಲವು ಕಡೆ ಪೊಲೀಸ್ ಸಿಬ್ಬಂದಿಯೇ ಅಕ್ರಮಕ್ಕೆ ಸಹಕಾರಿಯಾಗಿದ್ದಾರೆ.ಈ ಬಗ್ಗೆ ಕ್ರಮಕೈಗೊಳ್ಳಬೇಕು. ಅಲ್ಲದೆ ರೈತರು ಸರ್ಕಾರಿ ಕಚೇರಿಗಳ ಕೆಲಸಕ್ಕೆ ದಿನಗಟ್ಟಲೆ ಅಲೆಯುವಂತಾಗಿದ್ದು, ಅವ್ಯವಸ್ಥೆ ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.