ಬುಧವಾರ, ಜನವರಿ 22, 2020
25 °C

ಮರೆತ ವಸ್ತುವನು ತರುವ ಸೈಕಲ್

–ರಮೇಶ ಕೆ. Updated:

ಅಕ್ಷರ ಗಾತ್ರ : | |

ಡಿಬಿಡಿಯಲ್ಲಿ ಕಚೇರಿಗೆ ಹೊರಡುವಾಗ ಎಷ್ಟೋ ಸಂದರ್ಭಗಳಲ್ಲಿ ಅಗತ್ಯ ವಸ್ತುಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿರುತ್ತೇವೆ. ಕಚೇರಿ ತಲುಪಿದ ಮೇಲೆ ಅಥವಾ ಮಾರ್ಗ ಮಧ್ಯೆ ನೆನಪಿಸಿಕೊಂಡು ಪರಿತಪಿಸಿದ ಪ್ರಸಂಗಗಳು ನಡೆದಿರುತ್ತವೆ. ಒಮ್ಮೊಮ್ಮೆ ಬಸ್‌, ರೈಲು ಹಾಗೂ  ವಿಮಾನ ಟಿಕೆಟ್‌ಗಳನ್ನು ಮರೆತು ಹೋಗಿ ಮಿಸ್‌ ಮಾಡಿಕೊಂಡಿರುತ್ತೇವೆ.

  ಬೆಂಗಳೂರಿನಂಥ ನಗರದಲ್ಲಿ ಮನೆಗೆ ವಾಪಸ್ ಹೋಗಿ ತರುವುದು ಕಷ್ಟಸಾಧ್ಯ. ಇಂಥ ಸಂದರ್ಭಗಳಲ್ಲಿ ನೆರವು ನೀಡಲಿಕ್ಕಾಗಿಯೇ ನಗರದಲ್ಲಿ ಒಂದು ತಂಡ ಆರಂಭವಾಗಿದೆ. ಅದರ ಹೆಸರು ‘ಸೈಕ್ಲರ್ ಸಿಟಿ’. ಆರ್‌.ಟಿ.ನಗರದಲ್ಲಿ ಇದೇ ತಿಂಗಳ 2ರಂದು ಆರಂಭವಾದ ಸೈಕ್ಲರ್ ಸಿಟಿ ಕಂಪೆನಿಯು ‘ಬೈಕ್‌ ಮೆಸೆಂಜರ್‌’ ಎಂಬ ವಿಶೇಷ ಸೇವೆ ಆರಂಭಿಸಿದೆ.

ಕಂಪೆನಿಯ ದೂರವಾಣಿ ಸಂಖ್ಯೆಗೆ ಕರೆಮಾಡಿ ಹೇಳಿದರೆ ಸಾಕು ಅವರ ವಿಳಾಸಕ್ಕೆ ಹೋಗಿ ಅವರ ಅಗತ್ಯದ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಕೆಲಸ ಮಾಡುತ್ತಾರೆ. ವಿದೇಶದ ರೇಸಿಂಗ್‌ ಸೈಕಲ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಸೈಕಲ್‌ಗಳನ್ನು ಉಪಯೋಗಿಸಲಾಗುತ್ತಿದೆ. ಎಂಟು ಕೆ.ಜಿ.ವರೆಗೂ ತೂಗುವ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಇದರಲ್ಲಿದೆ.

ಮನೆಯಲ್ಲಿ ಫೈಲ್‌, ಪ್ರಯಾಣ ಟಿಕೆಟ್‌ ಅಥವಾ ಅಗತ್ಯ ವಸ್ತುಗಳನ್ನು ಮರೆತು ಬಂದಿದ್ದರೆ ತಂದುಕೊಡುವ ಹಾಗೂ ತಲುಪಿಸುವ ಸೌಲಭ್ಯವಿದೆ. ಒಂದರಿಂದ ನಾಲ್ಕು ಗಂಟೆಯೊಳಗೆ ತಲುಪಿಸುತ್ತಾರೆ. ಇದೀಗ ಎಂ.ಜಿ.ರಸ್ತೆಯಿಂದ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಈ ಸೇವೆ ಆರಂಭಿಸಿದ್ದಾರೆ. ಅಂದರೆ ಇಂದಿರಾನಗರ, ಆರ್‌.ಟಿ.ನಗರ, ಸಿಲ್ಕ್‌ಬೋರ್ಡ್‌, ಮಾರತ್ತಹಳ್ಳಿ, ಕಮ್ಮನಹಳ್ಳಿ ಹಾಗೂ ಜಯನಗರದವರೆಗೂ ಬೈಕ್‌ ಮೆಸೆಂಜರ್‌ ಸೇವೆ ಲಭ್ಯ.ಗ್ರಾಹಕರು ಕೊಡುವ ವಸ್ತುಗಳನ್ನು ಟೆಂಪರ್‌ ಪ್ರೂಫ್‌ ಕವರ್‌ನಿಂದ ಪ್ಯಾಕ್‌ ಮಾಡಿ, ಸೀಲ್ ಮಾಡಲಾಗುತ್ತದೆ. ಆ ಪೊಟ್ಟಣವನ್ನು ಸುರಕ್ಷಿತವಾಗಿ ತಲುಪಿಸಲಾಗುತ್ತದೆ. ಗ್ರಾಹಕರ ವಸ್ತುಗಳ ಖಾತರಿ ಹಾಗೂ ಸುರಕ್ಷತೆ ದೃಷ್ಟಿಯಿಂದ ನಮ್ಮ ಉದ್ಯೋಗಿಗಳ ಸಂಪೂರ್ಣ ಮಾಹಿತಿ ಪಡೆಯುತ್ತೇವೆ. ಚಾಲನಾ ಪರವಾನಗಿ, ಪ್ಯಾನ್‌ ಕಾರ್ಡ್‌ ಪಡೆದುಕೊಂಡಿರುತ್ತೇವೆ. ಈಗಾಗಲೇ 12 ಮಂದಿ ಉದ್ಯೋಗಿಗಳಿದ್ದಾರೆ.

ಇವರು ಗೇರ್‌ ಬೈಸಿಕಲ್‌ಗಳನ್ನು ಬಳಸಲಿದ್ದಾರೆ. ‘ಬೈಕ್‌ ಮೆಸೆಂಜರ್‌ ಕಲ್ಪನೆಯು ಅಮೆರಿಕ, ಜರ್ಮನಿ ಸೇರಿದಂತೆ ಯುರೋಪ್ ದೇಶಗಳಲ್ಲಿ ಪ್ರಚಲಿತದಲ್ಲಿದೆ. ನನ್ನ ಸ್ನೇಹಿತ ರಾಜೀವ್‌ ಸಿಂಗ್‌ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾಗ ಆ ಸೌಲಭ್ಯವನ್ನು ಹತ್ತಿರದಿಂದ ಕಂಡಿದ್ದರು. ನಂತರ ಬೆಂಗಳೂರಿಗೆ ಬಂದ ಅವರು ಸಂಚಾರದಟ್ಟಣೆ ಹೆಚ್ಚಿರುವ ಇಲ್ಲೂ ಈ ಸೇವೆ ಆರಂಭಿಸಿದರೆ ಬಹಳಷ್ಟು ಮಂದಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ಇಬ್ಬರೂ ಸೇರಿ ಆರಂಭಿಸಿದೆವು’ ಎಂದು ಕಂಪೆನಿ ಆರಂಭಿಸಿದ ಬಗೆಯನ್ನು ವಿವರಿಸುತ್ತಾರೆ ನಿರಂತ್‌ ಬೈಮನ.ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂನಲ್ಲಿ ಆರ್ಮಿ ಮೇಜರ್‌ ಆಗಿ ಕೆಲಸ ನಿರ್ವಹಿಸಿದ ನಿರಂತ್‌ ಅನಿವಾರ್ಯ ಕಾರಣಗಳಿಂದ ಕೆಲಸಕ್ಕೆ ಗುಡ್‌ಬೈ ಹೇಳಿದರು. ನಂತರ ಬೆಂಗಳೂರಿಗೆ ಬಂದು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸ್ನೇಹಿತ ರಾಜೀವ್ ಸಿಂಗ್‌ ಜೊತೆಗೂಡಿ ಬೈಕ್‌ ಮೆಸೆಂಜರ್‌ ಕಲ್ಪನೆಯನ್ನು ಹುಟ್ಟುಹಾಕಿದರು.ಸೈಕಲ್‌ ಸವಾರರಿಗೆ ತರಬೇತಿ

‘ಉನ್ನತಿ ಸ್ವಯಂ ಸೇವಾ ಸಂಸ್ಥೆಯ ಯುವಕರನ್ನು ಬೈಕ್‌ ಮೆಸೆಂಜರ್‌ ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗಿದೆ. ಆಯ್ಕೆ ಮಾಡಿದ ಯುವಕರಿಗೆ ಸೈಕಲ್‌ ಜೊತೆಗೆ ಕಿಟ್, ಹೆಲ್ಮೆಟ್‌, ಕನ್ನಡಕ ಕೊಡಲಾಗಿದೆ. ಇವರಿಗೆ ತಿಂಗಳಿಗೆ ₨ 9,500 ಸಂಬಳವನ್ನು ನಿಗದಿಮಾಡಲಾಗಿದೆ. ಜೊತೆಗೆ 20 ದಿನಗಳ ತರಬೇತಿ ಕೊಡಲಾಗುತ್ತದೆ. ಬೆಂಗಳೂರಿನ ನಗರಗಳ ಬಗ್ಗೆ ಮಾಹಿತಿ, ರಸ್ತೆ ಸುರಕ್ಷತೆ, ಯಾವ ಯಾವ ಸಂದರ್ಭಗಳಲ್ಲಿ ಗೇರ್‌ಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ಮಾಹಿತಿ ಹಾಗೂ ಸಂಚಾರ ನಿಯಮಗಳನ್ನು ಹೇಳಿಕೊಡಲಾಗುತ್ತದೆ’ ಎನ್ನುತ್ತಾರೆ ನಿರಂತ್‌.ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸಗಟು ಮಾರಾಟ ಉದ್ದಿಮೆಗಳು ಬೈಕ್ ಮೆಸೆಂಜರ್ ಸೇವೆಗಳನ್ನು ಬಳಸಿಕೊಳ್ಳಲು ಆಸಕ್ತಿ ತೋರಿವೆ.

ಕೆಲ ಆಸ್ಪತ್ರೆಗಳು ಈ ಸೌಲಭ್ಯವನ್ನು ಬಳಸಿಕೊಳ್ಳಲು ಬೈಕ್ ಮೆಸೆಂಜರ್ ಕಂಪೆನಿಯೊಂದಿಗೆ ಕೈಜೊಡಿಸಲು ಮುಂದೆ ಬಂದಿವೆಯಂತೆ. ‘ಮೊದಲ ಕರೆ ಬಂದದ್ದು ಸಿಬಿಐ ಬಸ್‌ ನಿಲ್ದಾಣದ ಮನೆಯೊಂದರಿಂದ. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ವ್ಯಕ್ತಿಯೊಬ್ಬ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ತಮ್ಮ ಮನೆಗೆ ಡಾಕ್ಟರ್‌ ವರದಿ ತಂದುಕೊಡುವಂತೆ ಕೇಳಿಕೊಂಡರು. ಅವರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಿದೆವು.ಐದು ಕಿ.ಮೀ. ವ್ಯಾಪ್ತಿಯಲ್ಲಿ 100 ಗ್ರಾಂ ತೂಕದ ವಸ್ತುಗಳನ್ನು ತರಿಸಿಕೊಂಡರೆ 70 ರೂಪಾಯಿ ಚಾರ್ಜ್‌ ಮಾಡುತ್ತೇವೆ. ಎರಡು ಕೆ.ಜಿ.ಯ ಒಂದು ಪೊಟ್ಟಣವನ್ನು ಕೊಂಡೊಯ್ಯಲಾಗುತ್ತದೆ. ಇಂಥ ನಾಲ್ಕು ಪೊಟ್ಟಣಗಳನ್ನು ಮಾತ್ರ ಒಂದು ಬಾರಿ ಸಾಗಿಸಲಾಗುತ್ತದೆ. ದೂರ ಹೆಚ್ಚಾದಂತೆ  ಶುಲ್ಕವೂ ಕೊಂಚ ಹೆಚ್ಚಳವಾಗುತ್ತದೆ. ಜಯನಗರದಿಂದ ಇಂದಿರಾನಗರದ ಒಂದು ಪ್ರದೇಶಕ್ಕೆ ವಸ್ತುವನ್ನು ಕಳುಹಿಸಬೇಕೆಂದಿದ್ದರೆ ಜಯನಗರದ ಒಬ್ಬ ಮೆಸೆಂಜರ್‌ ಶಾಂತಿನಗರದ ಡಬಲ್‌ ರೋಡ್‌ಗೆ ಬಂದು, ಅಲ್ಲಿಂದ ಮತ್ತೊಬ್ಬ ಮೆಸೆಂಜರ್‌ಗೆ ತಲುಪಿಸುತ್ತಾನೆ. ಆತ ಅದನ್ನು ಇಂದಿರಾನಗರಕ್ಕೆ ತಲುಪಿಸುತ್ತಾನೆ. ಒಬ್ಬರಿಗೆ ಹೆಚ್ಚು ಶ್ರಮವಾಗಬಾರದೆಂಬ ಕಾರಣಕ್ಕೆ ಹೀಗೆ ವ್ಯವಸ್ಥೆ ಮಾಡಿದ್ದೇವೆ’ ಎನ್ನುತ್ತಾರೆ ಅವರು.ಒಂದೂವರೆ ಗಂಟೆಗೆ 30 ಕಿ.ಮೀ. ಕ್ರಮಿಸಬಲ್ಲ ಇವರು ಆರ್‌.ಟಿ ನಗರದಿಂದ ಎಂ.ಜಿ.ರಸ್ತೆ ತಲುಪಲು 20 ನಿಮಿಷ ಸಾಕಂತೆ. ಹಗುರ ಸೈಕಲ್‌ಗಳಾದ್ದರಿಂದ ಎತ್ತಿಕೊಂಡೇ ಕೆಲವು ಕಡೆ ಮುಂದೆ ಸಾಗಬಹುದಂತೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಾದ್ಯಂತ ಈ ಯೋಜನೆ ವಿಸ್ತರಿಸುವ ಯೋಚನೆಯಲ್ಲಿದೆ ಕಂಪೆನಿ. ನಿಮಗೂ ಇಂಥ ಸಮಸ್ಯೆಗಳಾದರೆ ಕರೆ ಮಾಡಬಹುದು.

ಮಾಹಿತಿ ಹಾಗೂ ಸೌಕರ್ಯ ಬಳಕೆಗೆ: 080-–69999880/www.cyclercity.com

ಪ್ರತಿಕ್ರಿಯಿಸಿ (+)