ಬುಧವಾರ, ಮೇ 25, 2022
31 °C

ಮಲೆನಾಡಿನಲ್ಲಿ ದಾಖಲೆ ಮಳೆ; ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ:  ಈಚೆಗೆ ಸುರಿದ ಮಳೆ ಆರ್ಭಟಕ್ಕೆ ಇಡೀ ಜಿಲ್ಲೆ ತತ್ತರಗೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.

ಜಿಲ್ಲೆಯ ಹಲವೆಡೆ ಅಡಿಕೆ, ಬಾಳೆ, ಶುಂಠಿ ಬೆಳೆಗಳಿಗೆ ನಷ್ಟವಾಗಿದ್ದು,  ಭತ್ತದ ಮಡಿಗಳು ನೀರಿನಲ್ಲಿ ಮುಳುಗಿವೆ. ಹೊಸನಗರ ತಾಲ್ಲೂಕಿನಲ್ಲಿ ಮಳೆಯಿಂದ 4 ಮನೆಗಳು ನೆಲಕ್ಕುರುಳಿವೆ. ಕೆಲವೆಡೆ ಕೆರೆ ಕೋಡಿ ಒಡೆದಿವೆ. ಕಿರು ಸೇತುವೆಗಳು ಮುರಿದು ಬಿದ್ದಿವೆ. ರಸ್ತೆಗಳಿಗೆ ಹಾನಿಯಾಗಿದೆ.ನಗರದಲ್ಲಿ ತುಂಗಾ ನದಿ ಉಕ್ಕಿ ಹರಿದ ಪರಿಣಾಮ ಮಲ್ಲೇಶ್ವರ ನಗರದ ಕುಟುಂಬ ಕಲ್ಯಾಣ ಯೋಜನೆಯ ಕಟ್ಟಡಕ್ಕೆ ನೀರು ನುಗ್ಗಿದೆ.

ಹೊಸನಗರದ ಯಡೂರು -305 ಮಿ.ಮೀ, ಹುಲಿಕಲ್ಲು -281 ಮಿಮೀ, ಮಾಸ್ತಿಕಟ್ಟೆ -260 ಮಿಮೀ, ತೀರ್ಥಹಳ್ಳಿಯ ಆಗುಂಬೆ -279 ಮಿಮೀ, ಶಿವಮೊಗ್ಗ -18.4 ಮಿಮೀ, ಭದ್ರಾವತಿ -37.5 ಮಿಮೀ, ತೀರ್ಥಹಳ್ಳಿ -165.8 ಮಿಮೀ, ಸಾಗರ -83.2 ಮಿಮೀ, ಶಿಕಾರಿಪುರ -58.4 ಮಿಮೀ, ಸೊರಬ -41.6 ಮಿಮೀ ಹಾಗೂ ಹೊಸನಗರ -122.4 ಮಿಮೀ ಮಳೆಯಾಗಿದೆ.ದಾಖಲೆ ಮಳೆ

ತುಮರಿ:
ಕಳೆದ 8 ವರ್ಷಗಳಲ್ಲೇ ದಾಖಲೆಯ 28 ಸೆಂಮೀ. ಮಳೆ ಆಗಿದ್ದು, ಮಳೆಯ ಆರ್ಭಟಕ್ಕೆ ಭಾರಿ ಗಾತ್ರದ ಮರವೊಂದು ಮುಖ್ಯ ರಸ್ತೆ ಮೇಲೆ ಬಿದ್ದಿದೆ. ಇಲ್ಲಿಗೆ ಸಮೀಪದ ನೆಲುಗೋಡಿ ಬಳಿ ರಸ್ತೆಯ ಸೇತುವೆ ಕೊಚ್ಚಿ ಹೋಗಿದ್ದು, ಇದರಿಂದ ಭೂ ಸಂಪರ್ಕ ಕಳೆದುಕೊಂಡಿರುವ ತುಮರಿ ಹೋಬಳಿ ಈಗ  ಅಕ್ಷರಶಃ ದ್ವೀಪವಾಗಿದೆ. ಸೇತುವೆ ಕುಸಿದಿರುವ ಕಾರಣ ಸಿಗಂದೂರು -ಭಟ್ಕಳ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತಾಲ್ಲೂಕು ಪಂಚಾಯ್ತಿ ಸದಸ್ಯ ಹರೀಶ್ ಘಂಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದಲಿ ರಸ್ತೆ ಮಾರ್ಗಕ್ಕೆ ವ್ಯವಸ್ಥೆ ಮಾಡಲು ಜೆಸಿಬಿ ಮೂಲಕ ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ.ಶರಾವತಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ರಸ್ತೆ ಮಾರ್ಗದ ಮೂಲಕ ಇದ್ದ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ರೋಗಿಗಳು, ಗರ್ಭಿಣಿಯರು ತೀವ್ರ ಸಂಕಟ ಪಡುವಂತಾಗಿದೆ.ಇಲ್ಲಿಗೆ ಸಮೀಪದ ಚುಕ್ಕಿಕೆರೆಯಲ್ಲಿ ತಿಮ್ಮಪ್ಪ (60) ಹೃದಯಾಘಾತದಿಂದ  ಮೃತಪಟ್ಟಿದ್ದಾರೆ. ತಿಮ್ಮಪ್ಪ ಅವರಿಗೆ ಬುಧವಾರ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ರಸ್ತೆ ಸಂಪರ್ಕ ಇಲ್ಲದೆ, ರಾತ್ರಿಯಾದ ಕಾರಣ ಲಾಂಚ್ ವ್ಯವಸ್ಥೆಯೂ ಇಲ್ಲದೆ ಮೃತಪಟ್ಟಿದ್ದಾರೆ.ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದೇ ಸಾವಿಗೆ ಕಾರಣವಾಗಿದ್ದು, ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡುವಂತೆ ಆಗ್ರಹಿಸಿ ಕುಟುಂಬದವರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಾ.ಪಂ. ಸದಸ್ಯ ಹರೀಶ್ ಘಂಟೆ, ಗ್ರಾ.ಪಂ ಸದಸ್ಯರಾದ ನಾಗರತ್ನಾ, ಸತ್ಯನಾರಾಯಣ ಪಟೇಲ್, ಹುರಳಿ ಹೂವಣ್ಣ ಭೇಟಿ ನೀಡಿದ್ದರು.ತಗ್ಗದ ಪ್ರವಾಹ

ತೀರ್ಥಹಳ್ಳಿ
: ತಾಲ್ಲೂಕಿನಾದ್ಯಂತ ಮಳೆಯ ಪ್ರಮಾಣ ಗುರುವಾರ ತಗ್ಗಿದ್ದರೂ ಪ್ರಮುಖ ನದಿಗಳಾದ ತುಂಗಾ, ಮಾಲತಿ ನದಿಯಲ್ಲಿನ ನೀರಿನ ಮಟ್ಟ ಕುಗ್ಗಿಲ್ಲ. ಶಿವಮೊಗ್ಗ, ತೀರ್ಥಹಳ್ಳಿ ಮಾರ್ಗದ ಮಂಡಗದ್ದೆಯಲ್ಲಿ ತುಂಗಾ ನದಿ ನೀರು ರಾಷ್ಟ್ರೀಯ ಹೆದ್ದಾರಿ 13ರಲ್ಲಿ ರಸ್ತೆ ಮೇಲೆ ನಿಂತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.ಹಾರೋಗೊಳಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಣಿಮಕ್ಕಿ ಗ್ರಾಮದ ಕಲ್ಗುಡ್ಡದ ಸುಮಾರು ಒಂದು ಎಕರೆ ಪ್ರದೇಶ ಜರಿದಿರುವುದರಿಂದ ನೆಂಪೆ ಶ್ರೀನಿವಾಸ್ ಹಾಗೂ ಸುರೇಂದ್ರ ಅವರಿಗೆ ಸೇರಿದ ಅಡಿಕೆ ತೋಟಕ್ಕೆ ಹಾನಿಯಾಗಿದೆ.  ಗುಡ್ಡ ಕುಸಿದ ಪರಿಣಾಮ ಬಗನ್‌ಕೊಡಿಗೆ ಹಳ್ಳದ ದಂಡೆ ಒಡೆದಿದ್ದು ಜಮೀನಿನ ಮೇಲೆ ನೀರು ಹರಿದು ಸುಮಾರು 10 ಎಕರೆ ಪ್ರದೇಶದ ಭತ್ತದ ಗದ್ದೆಗಳಲ್ಲಿ ಮಣ್ಣು ತುಂಬಿಕೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಸ್ಥಳಕ್ಕೆ ತಹಸೀಲ್ದಾರ್ ಗಣೇಶ ಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಹಾರೋಗೊಳಿಗೆ ಪದ್ಮನಾಭ್, ಟಿ.ಎಲ್.ಸುಂದರೇಶ್ ಹಾಜರಿದ್ದು, ಹಾನಿಯ ಕುರಿತು ವಿವರಣೆ ನೀಡಿದರು.ಆಗುಂಬೆ, ತೀರ್ಥಹಳ್ಳಿಯ ಸಂಚಾರ ಕೂಡ ಸ್ಥಗಿತಗೊಂಡಿದೆ. ಮಂಡಗದ್ದೆ ಪಕ್ಷಿಧಾಮ ತುಂಗಾನದಿ ನೀರು ಹೆಚ್ಚಿದ್ದರಿಂದ ಅಪಾಯಕ್ಕೆ ಸಿಲುಕಿದೆ. ಇಲ್ಲಿ ಗೂಡು ಕಟ್ಟಿ ಮಟ್ಟೆ ಇಟ್ಟ ಗೂಡುಗಳು ನೀರಿನಲ್ಲಿ ಮುಳುಗಿವೆ, ಕೆಲವು ಗೂಡುಗಳು ತೇಲಿಕೊಂಡು ಹೋಗಿವೆ. ಬೇಸಿಗೆಯಲ್ಲಿ ಹೊಳೆಲಕ್ಕಿ ಗಿಡಗಳನ್ನು ನೆಟ್ಟು, ಪಕ್ಷಿಧಾಮವನ್ನು ಎತ್ತರಿಸಿ ಸುತ್ತಲೂ ಕಲ್ಲುಕಟ್ಟಿದ್ದರೆ ಪಕ್ಷಿಧಾಮವನ್ನು ಉಳಿಸಿಕೊಳ್ಳಬಹುದಿತ್ತು. 15 ವರ್ಷಗಳಿಗೆ ಹೋಲಿಸಿದರೆ ಈಗ ಈ ಪಕ್ಷಿಧಾಮಕ್ಕೆ ಬರುವ ಪಕ್ಷಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ನೇಮಿರಾಜ್ ತಿಳಿಸಿದ್ದಾರೆ.ತುಂಗಾ ಹಾಗೂ ಮಾಲತಿ ನದಿ ಪ್ರವಾಹದಿಂದಾಗಿ ಬಸ್ ಸಂಚಾರ ವಿರಳವಾಗಿದೆ. ಸರ್ಕಾರಿ ಶಾಲಾ, ಕಾಲೇಜಿಗೆ ರಜೆ ನೀಡಲಾಗಿದೆ. ತಾಲ್ಲೂಕಿನಾದ್ಯಂತ ಹೆಚ್ಚು ಮಳೆ ಸುರಿದಿರುವುದರಿಂದ ವಿದ್ಯುತ್ ತಂತಿಗಳ ಮೇಲೆ ಮರ, ಬಿದಿರು ಮೆಳೆಗಳು ಬಿದ್ದಿರುವುದರಿಂದ ಮೂರ‌್ನಾಲ್ಕು ದಿನಗಳಿಂದ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ.ತೀರ್ಥಹಳ್ಳಿಯಲ್ಲಿ ಗುರುವಾರ 168.5 ಮಿ.ಮೀ. ಹಾಗೂ ಆಗುಂಬೆಯಲ್ಲಿ 279.0ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.ಕೃಷಿ ಚಟುವಟಿಕೆ ಬಿರುಸು

ರಿಪ್ಪನ್‌ಪೇಟೆ:
ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಗುರುವಾರ ಬೆಳಿಗ್ಗೆಯಿಂದಲೇ ಬಿಡುವು ನೀಡಿದ್ದು ಹಳ್ಳ ಕೊಳ್ಳ ಕೆರೆಕಟ್ಟೆ  ತುಂಬಿವೆ.ಕೃಷಿಕರು ಹರ್ಷ ಚಿತ್ತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಮುಂಜಾಗ್ರತೆಯಾಗಿ ಗುರುವಾರ ಸಹ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು.ಮಳೆಗೆ ಅಲ್ಪ ವಿರಾಮ

ಹೊಸನಗರ
: ಕಳೆದ 4 ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಆರಿದ್ರಾ ಮಳೆಗೆ ಗುರುವಾರ ಅಲ್ಪ ವಿರಾಮ ಬಿದ್ದಿದೆ.

ನಗರ ಹೋಬಳಿಯಲ್ಲಿ 4 ದಿನಗಳಲ್ಲಿ ಸರಾಸರಿ 100 ಸೆಂ.ಮೀ ಮಳೆಯಾದ ಕಾರಣ ಕಳೆದ ವಾರವಷ್ಟೆ ಬಿತ್ತಿದ ಭತ್ತದ ಸಸಿ ಮಡುಗಳು ಜಲಾವೃತವಾಗಿದ್ದು, ಕೊಚ್ಚಿ ಹೋಗಿದೆ. ಅಡಿಕೆಗೆ ಕೊಳೆ ರೋಗದ ಕಾಟ ಹೆಚ್ಚಾಗಿದೆ ಹಾಗೂ ಗಾಳಿ, ಮಳೆಯ ಹೊಡೆತೆಕ್ಕೆ ಅಡಿಕೆ ಮರಗಳು ನೆಲಕಚ್ಚಿವೆ.ಅನಾಹುತ ಸಂಭವಿಸಿದರೂ ಕಂದಾಯ ಇಲಾಖೆ ಮಳೆ ಹಾನಿ ಸಮೀಕ್ಷೆಗೆ ಇನ್ನೂ ಆಗಮಿಸಿಲ್ಲ ಎಂಬುದು ಕೃಷಿಕರ ದೂರು. ಕೂಡಲೇ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಯನ್ನು ತಾ.ಪಂ. ಸದಸ್ಯ ಬಿ.ಇ.ಮಂಜುನಾಥ್ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರತ್ನಾಕರ ಗೌಡ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಶರಾವತಿ, ವಾರಾಹಿ, ಚಕ್ರಾ, ಸಾವೆಹಕ್ಕಲು ನದಿಗಳ ನೆರೆ ನೀರಿನ ಪ್ರಮಾಣ ಕಡಿಮೆ ಆಗಿದೆ. ವಾರಾಹಿ ಜಲಾನಯನ ಪ್ರದೇಶ ಯಡೂರಿನಲ್ಲಿ  305 ಮಿ.ಮೀ ಮಳೆಯಾಗಿದೆ.ವಾರಾಹಿ ಜಲಾನಯನದ ಮಾಣಿ ಅಣೆಕಟ್ಟಿನ ಇಂದಿನ ಮಟ್ಟ 579.30 ಮೀಟರ್ ಇದ್ದು ಕಳೆದ ವರ್ಷ ಇದೇ ಸಮಯಕ್ಕೆ 574.48 ಮೀಟರ್ ಆಗಿತ್ತು. ಜಲಾಶಯದ ಗರಿಷ್ಠ ಒಳಹರಿವು 13 ಸಾವಿರ ಕ್ಯೂಸೆಕ್ ಇದೆ ಎಂದು ವಿದ್ಯುತ್ ನಿಗಮ ತಿಳಿಸಿದೆ.ಗುರುವಾರ ಬೆಳಿಗ್ಗೆ 8.30 ಮಳೆಮಾಪನದಂತೆ ವಾರಾಹಿ ಜಲಾನಯನ ಪ್ರದೇಶವಾದ ಹುಲಿಕಲ್ 281 ಮಿ.ಮೀ,  ಮಾಸ್ತಿಕಟ್ಟೆ 260 ಮಿ.ಮೀ, ಮಾಣಿ ಡ್ಯಾಂ 278ಮಿ.ಮೀ. ಹೊಸನಗರ 122 ಮಿ.ಮೀ, ನಗರ 183 ಮಿ.ಮೀ ಮಳೆಯಾಗಿದೆ.ವರುಣನ ಆರ್ಭಟ

ಸೊರಬ
: ತಾಲ್ಲೂಕಿನಾದ್ಯಂತ ಆರಿದ್ರ ಮಳೆಯ ಅರ್ಭಟ ಜನತೆಯನ್ನು ಕಂಗೆಡಿಸಿದ್ದು, ಅನೇಕ ಕೆರೆ ಕಟ್ಟೆಗಳು ಹೊಡೆದು ಕೆರೆಯ ಪಕ್ಕದ ಜಮೀನು ನಾಶಗೊಂಡ ಘಟನೆ ಈಚೆಗೆ ಸೊರಬದ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದಿದೆ.ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಬಸವರಾಜ ಎಂಬುವವರ ದನದ ಕೊಟ್ಟಿಗೆ ಗಾಳಿ ಮಳೆಗೆ ಕುಸಿದು ಎರಡು ಎಮ್ಮೆ ಹಾಗೂ ಒಂದು ಹಸು ಮೃತಪಟ್ಟ ಘಟನೆ ಈಚೆಗೆ ನಡೆದಿದೆ.ಮಳೆಯಿಂದ ಶಿವಪುರದ ಕೆರೆ  ವಡ್ಡು ಒಡೆದು ಊರಿಗೆ ನೀರು ನುಗ್ಗಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಹಿಂಬದಿಯ ಕಾಂಪೌಂಡ್ ಸಂಪೂರ್ಣ ಕುಸಿದು ಬ್ದ್ದಿದಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಚಂದ್ರಗುತ್ತಿ ಹೋಬಳಿಯ ಕತವಾಯಿಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದು, ಚೆನ್ನಪಟ್ಟಣ ಸೇತುವೆ ಮೇಲೆ ನೀರು ಹರಿದ ಕಾರಣ ಚಂದ್ರಗುತ್ತಿ ಹರೀಶಿ ರಸ್ತೆ ಕೆಲಕಾಲ ಸಂಪರ್ಕ ಕಡಿದು ಹೋಗಿತ್ತು.ಕುಪಗಡ್ಡೆ ಹೋಬಳಿ ಜಡ್ಡಿಹಳ್ಳಿಯಲ್ಲಿ 30 ಎಕರೆ ಶುಂಠಿ ಬೆಳೆ ಜಲಾವೃತಗೊಂಡಿದೆ. ತೆಕ್ಕೂರು ಗ್ರಾಮದಲ್ಲಿನ ಕೆರೆ ಏರಿ ಒಡೆದು 35 ಎಕರೆ ಬಾಳೆ ಮತ್ತು ಅಡಿಕೆ ಹಾನಿಗೊಳಗಾಗಿದೆ.ಜಡೆ ಹೋಬಳಿಯ ಬಂಕಸಾಣದಲ್ಲಿ ವರದಾ ನದಿ ಅಪಾಯದ ಮಟ್ಟ ಮೀರಿದ್ದು ಗ್ರಾಮದಲ್ಲಿ ಒಂದು ಮನೆ ಕುಸಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.