ಶನಿವಾರ, ಮೇ 8, 2021
20 °C

ಮಲ್ಲಯ್ಯನಪುರದಲ್ಲಿ ಸಮಸ್ಯೆಗಳ ಆಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಎಲ್ಲೆಡೆ ಕಸ ತುಂಬಿದ ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪದ ಸಮಸ್ಯೆ, ಹೊಸ ಅಂಕಣದ ಬೀದಿಯಲ್ಲಿ ಚರಂಡಿ ಇಲ್ಲದಿರುವುದು, ರಾತ್ರಿ ವೇಳೆ ಸೊಳ್ಳೆಗಳ ಕಾಟ, ನೀರಿನ ತೊಂಬೆಗಳ ನಿರ್ವಹಣೆ ಕೊರತೆ, ರಸ್ತೆಯ ಮಧ್ಯ ಭಾಗದಲ್ಲಿಯೇ ಹರಿಯುವ ಚರಂಡಿ ನೀರಿನ ಸಮಸ್ಯೆ.. ಇವು ಮಲ್ಲಯ್ಯನಪುರ ಗ್ರಾಮದ ದುಃಸ್ಥಿತಿ.ತಾಲ್ಲೂಕಿನ ಕೇರಳ ರಸ್ತೆಯಲ್ಲಿರುವ ಭೀಮನಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಲ್ಲಯ್ಯನಪುರ ಗ್ರಾಮದಲ್ಲಿ 600 ಕುಟುಂಬಗಳು ವಾಸಿಸುತ್ತಿದ್ದು, 2,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ~ ಎಂದು ದೂರುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಹಾದೇವೇಗೌಡ.ಪ್ರಸ್ತುತ ಸನ್ನಿವೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದ್ದು, ಮಹಿಳೆಯರು ಕುಡಿಯುವ ನೀರು ತರಲು ಸಮೀಪದ ಖಾಸಗಿ ಜಮೀನುಗಳನ್ನು ಅವಲಂಬಿಸ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕವಾಗಿ ನೀರು ಬಿಡದಿದ್ದರೂ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಮನೆಗಳ ನಲ್ಲಿ ಸಂಪರ್ಕವನ್ನು ಗ್ರಾಮ ಪಂಚಾಯಿತಿ ಕಡಿದು ಹಾಕಿದೆ. ಗ್ರಾಮದಲ್ಲಿರುವ ನೀರಿನ ತೊಂಬೆಗೂ ಸರಿಯಾಗಿ ನೀರು ತುಂಬುವುದಿಲ್ಲ.

 

ಇದರಿಂದ ಗ್ರಾಮದ ಜನರು ಕೂಲಿ ಕೆಲಸಕ್ಕೆ ಹೋಗುವುದನ್ನು ಬಿಟ್ಟು ನೀರು ಹಿಡಿಯುವ ಕೆಲಸವೇ ಪ್ರಮುಖವಾಗಿದೆ. ಜೀವನ ನಡೆಸುವುದೇ ದುಸ್ತರವಾಗಿರುವ ಈ ಸಂದರ್ಭದಲ್ಲಿ ನೀರಿನ ಸಂಪರ್ಕ ಕಡಿತ ಗೊಳಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.`ಈ ಗ್ರಾಮದಲ್ಲಿ ವಾಸಿಸುವ ಬಹುತೇಕ ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ. ಅರಿಶಿಣ, ಈರುಳ್ಳಿ, ಕಬ್ಬು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಬೆಲೆ ಕುಸಿತದಿಂದ ರೈತರಿಗೆ ಕಷ್ಟದ ಪರಿಸ್ಥಿತಿ ಎದುರಾಗಿದೆ. ಸಮೀಪದ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

 

ಗ್ರಾಮ ಪಂಚಾಯಿತಿಯವರು ಗ್ರಾಮದ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ, ಕುಡಿಯುವ ನೀರಿನ ಸಮಸ್ಯೆ ಇದ್ದರೂ ಹಲವು ವೇಳೆ ಸರಿಯಾಗಿ ಸ್ಪಂದಿಸುವುದಿಲ್ಲ. ಕಾರ್ಯದರ್ಶಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ~ ಎನ್ನುತ್ತಾರೆ ಗ್ರಾಮದ ನಿವಾಸಿ ರಾಜು.ವೋಲ್ಟೆಜ್ ಕೊರತೆಯಿಂದ ರೈತರು ಬಳಲುವಂತಾಗಿದೆ. ಬೇಸಿಗೆ ಸಮಯದಲ್ಲಿ ಸರಿಯಾಗಿ ವಿದ್ಯುತ್ ನೀಡದ ಕಾರಣ ಬೆಳೆಗಳು ಒಣಗುತ್ತಿವೆ. ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಹೋಗಲು ಸುಮಾರು 3 ಕಿ.ಮೀ. ದೂರವಾಗುತ್ತದೆ. ಆದ ಕಾರಣ ಸಮೀಪದ ಖಾಸಗಿ ಜಮೀನಿನ ಮೇಲೆ ಓಡಾಡುವ ಸ್ಥಿತಿ ಇದೆ. ಕೂಡಲೇ ಈ ಕಾಲುದಾರಿಯನ್ನು ಪ್ರಮುಖ ರಸ್ತೆಯನ್ನಾಗಿ ಮಾಡಿ ಡಾಂಬರೀಕರಣ ಮಾಡಬೇಕೆನ್ನುವುದು ಹಲವರ ಅಭಿಪ್ರಾಯವಾಗಿದೆ.ಈ ಗ್ರಾಮದಲ್ಲಿರುವ ಕೆರೆಯ ಅಭಿವೃದ್ಧಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಒಬ್ಬ ನರ್ಸನ್ನು ಈ ಗ್ರಾಮದಲ್ಲಿಯೇ ಉಳಿದುಕೊಳ್ಳಲು ವಸತಿಗೃಹ ನೀಡಿದ್ದರೂ ಅವರು ಇಲ್ಲಿ ಉಳಿಯುತ್ತಿಲ್ಲ, ರಾತ್ರಿ ವೇಳೆ ಏನಾದರೂ ತೊಂದರೆಯಾದರೆ ಗುಂಡ್ಲುಪೇಟೆಗೆ ಹೋಗಬೇಕಾದ ಅನಿವಾರ್ಯತೆ ಇದೆ ಎನ್ನುವುದು ಗ್ರಾಮಸ್ಥರ ದೂರು.

ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ಗ್ರಾಮಸ್ಥರ ಒಕ್ಕೊರಲಿನ ಆಗ್ರಹವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.