ಶನಿವಾರ, ಮೇ 15, 2021
22 °C
ಮೆಸ್ಕಾಂ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಮಳಲಿ: ವಿದ್ಯುತ್ ಆಘಾತ-ಕಾರ್ಮಿಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಜ್ಪೆ: ಇಲ್ಲಿಗೆ ಸಮೀಪದ ಮಳಲಿ ಆಚಾರಿಗುಡ್ಡೆ ಎಂಬಲ್ಲಿ ಶುಕ್ರವಾರ ವಿದ್ಯುತ್ ಕಂಬದ ಸ್ಟೇ ತಂತಿಯಲ್ಲಿ ವಿದ್ಯುತ್ ಹರಿದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.ಮೃತ ಹೊನ್ನಯ್ಯ ಮೂಲ್ಯ (50) ಅವರು ಆಚಾರಿಗುಡ್ಡೆ ನಿವಾಸಿ. ಅವರು ಕೂಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಊಟ ಮುಗಿಸಿದ ಬಳಿಕ ಮೂತ್ರ ವಿಸರ್ಜನೆಗೆಂದು ರಸ್ತೆ ಪಕ್ಕದ ಓಣಿಗೆ ತೆರಳಿದ್ದರು. ಅಲ್ಲಿದ್ದ ತಂತಿ ಕಂಬದ ಸ್ಟೇ ತಂತಿಯನ್ನು ಸ್ಪರ್ಶಿಸಿದ ಸಂದರ್ಭ ವಿದ್ಯುತ್ ಆಘಾತಕ್ಕೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂತಿಕಂಬದ ಮೇಲ್ಭಾಗದಲ್ಲಿ ಸ್ಟೇ ತಂತಿ ವಿದ್ಯುತ್ ಸರ್ವಿಸ್ ತಂತಿಗೆ ತಾಗಿಕೊಂಡಿದ್ದುದೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.ಹೊನ್ನಯ್ಯ ಮೂಲ್ಯ ಅವರದು ಬಡ ಕುಟುಂಬವಾಗಿದ್ದು, ಪತ್ನಿ ಹಾಗೂ ಪುತ್ರಿ ಇದ್ದಾರೆ. ವಿದ್ಯುತ್ ಕಂಬದಲ್ಲಿ ಸರ್ವಿಸ್ ವೈರ್ ಹಾಗೂ ಸ್ಟೇ ವೈರ್ ಪರಸ್ಪರ ತಾಗಿಕೊಂಡಿದ್ದರೂ `ಮೆಸ್ಕಾಂ' ನಿರ್ಲಕ್ಷ್ಯ ವಹಿಸಿದ್ದೇ ಘಟನೆಗೆ ಕಾರಣವೆಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳಾದ ಜಗದೀಶ್ ಮೂರ್ತಿ ಮತ್ತು ತಿಮ್ಮಪ್ಪ ಗೌಡ ಅವರನ್ನು ಜನರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಳಲಿಯಲ್ಲಿ ಹಲವಾರು ದಿನಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ತಂತಿ ತುಂಡಾಗಿ ಬಿದ್ದರೂ ಯಾರೂ ಕೇಳೋದಿಲ್ಲ ಎಂದು ಆಕ್ರೋಶ ಜನರಿಂದ ಕೇಳಿಬಂದಿದೆ. ಈ ಪ್ರದೇಶದ ತಂತಿಕಂಬದಲ್ಲಿರುವ ತಂತಿಗಳು ತುಂಡಾಗುವ ಸ್ಥಿತಿಯಲ್ಲಿದ್ದರೂ, ಯಾರೂ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಎರಡನೇ ದುರಂತ: ಮಳಲಿ ಬೆರ್ಮಜಲು ಎಂಬಲ್ಲಿ ಕೆಲವು ವರ್ಷಗಳ ಹಿಂದೆ ಹೈಟೆನ್ಷನ್ ತಂತಿ ತುಂಡಾಗಿ ಅದರಡಿಯಲ್ಲಿ ತರಕಾರಿ ಕೊಯ್ಯುತ್ತಿದ್ದ ಶಾಂಭ  ಮೃತಪಟ್ಟಿದ್ದರು. ತಂತಿ ಶಿಥಿಲಗೊಂಡಿದ್ದುದೇ ಇದಕ್ಕೆ ಕಾರಣವಾಗಿತ್ತು.ಬದಲಿ ಲೈನ್‌ಮನ್ ಇಲ್ಲ: ಮಳಲಿಗೆ ಒಬ್ಬ ಲೈನ್‌ಮೆನ್ ಇದ್ದು, ಅವರಿಗೆ ವಿದ್ಯುತ್ ಆಘಾತವಾಗಿ ಗಾಯಗೊಂಡಿದ್ದಾರೆ. ಅವರಿಗೆ ಕೆಲಸಕ್ಕೆ ಹೋಗಲಾಗುತ್ತಿಲ್ಲ. ಆದರೆ ಬದಲಿ ಲೈನ್‌ಮೆನ್‌ಅನ್ನು ನಿಯೋಜಿಸಿಲ್ಲ. ಇದರಿಂದಲೇ ಇಂತಹ ದುರಂತ ಸಂಭವಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.