‘ಮಳೆ ಬಿಲ್ಲು’- ಅದೇನು?
ಭೂ ವಾತಾವರಣದ ‘ಹವಾಗೋಳ’ದಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಒಡಮೂಡುವ ದೃಶ್ಯ ವಿದ್ಯಮಾನಗಳು ಹಲವಾರಿವೆ: ಮಿಂಚು (ಚಿತ್ರ-1), ರಕ್ತರಂಜಿತ ಸೂರ್ಯೋದಯ-ಸೂರ್ಯಾಸ್ತ (ಚಿತ್ರ-4), ಪ್ರಭಾಮಂಡಲ (ಚಿತ್ರ-5), ಇರಿಡಿಸೆನ್ಸ್ (ಚಿತ್ರ-6), ಹೇಲೋ, ಸನ್ಡಾಗ್ ಇತ್ಯಾದಿ.

ಮಳೆಬಿಲ್ಲು ಕೂಡ ಇಂತಹದೇ ಒಂದು ದೃಶ್ಯ ವಿದ್ಯಮಾನ. ತುಂಬ ಅಪರೂಪವೇನಲ್ಲದ, ಅತಿ ಸುಂದರ ವರ್ಣವೈಭವದ ಕ್ಷಣ ಭಂಗುರದ ಈ ಪ್ರಕೃತಿ ಪ್ರದರ್ಶನದ ವೀಕ್ಷಣೆ-ಅದೊಂದು ಅದ್ಭುತದ ಅನುಭವ. ಕಾಮನ ಬಿಲ್ಲು, ಇಂದ್ರಚಾಪ ಎಂಬ ಹೆಸರುಗಳೂ ಮಳೆಬಿಲ್ಲಿನದೇ ಇತರ ಅಭಿದಾನಗಳು. ಕ್ಷಿತಿಜದಿಂದ ಮೇಲೆದ್ದ ಸಪ್ತವರ್ಣಗಳ ಬೃಹತ್ ಕಮಾನಿನಂತೆ-ಎಂದರೆ ಬಾಗಿದ ಬಿಲ್ಲಿನಂತೆ (ಚಿತ್ರ-8) ಮೈದಾನದ ಮಳೆಬಿಲ್ಲು ಸದಾ ಹಾಗೆ ಪೂರ್ಣವಾಗಿಯೇ ಪ್ರತ್ಯಕ್ಷವಾಗುವುದೇನಿಲ್ಲ; ಎಷ್ಟೋ ಬಾರಿ ಬೇರೆ ಬೇರೆ ಅಗಲದ ಬೇರೆ ಬೇರೆ ಉನ್ನತಿಯ ಬಿಲ್ಲಿನ ಭಾಗಗಳಷ್ಟೇ ಗೋಚರ (ಚಿತ್ರ 2, 3, 11). ಆಗಸದಲ್ಲಿ ಇದ್ದಕ್ಕಿದ್ದಂತೆ ಮೂಡಿ, ಎಲ್ಲರ ಗಮನ ಸೆಳೆದು ಗಾಢವರ್ಣಗಳನ್ನು ತಳೆದು, ಕ್ಷಿಪ್ರವಾಗಿ ಪೇಲವವಾಗಿ ಕ್ಷಣಗಳಲ್ಲೇ ಕರಗಿ ಮಾಯವಾಗುವ ಮಳೆಬಿಲ್ಲು-ಅದೊಂದು ಸೋಜಿಗದ ಪ್ರಾತ್ಯಕ್ಷಿಕೆ.

ಮಳೆಬಿಲ್ಲು ಮೂಡುವುದು ಹೇಗೆ?
ಮಳೆಬಿಲ್ಲೊಂದು ಒಡಮೂಡಲು ಎರಡು ಅಂಶಗಳು ಸಾಂಗತ್ಯಗೊಳ್ಳಲೇಬೇಕು: ತುಂತುರು ಮಳೆ ಬರುತ್ತಿರಬೇಕು; ಅದಕ್ಕೆ ಎದುರಿನಿಂದ ಸೂರ್ಯನ ಬೆಳಕು ಬೀಳುತ್ತಿರಬೇಕು. ಅಂಥ ಸಂದರ್ಭ ಒದಗಿದಾಗ ಮಿಲಿಯಾಂತರ ಸಂಖ್ಯೆಯಲ್ಲಿ ಉದುರುತ್ತಿರುವ ನೀರ ತುಂತುರು ಒಂದೊಂದರ ಮೇಲೂ ಬೀಳುವ ಸೂರ್ಯರಶ್ಮಿ ವಕ್ರೀಭವನಗೊಂಡು ಪಟ್ಟಕದಲ್ಲಾಗುವಂತೆ (ಚಿತ್ರ-7) ವಿಭಜನೆಗೊಳ್ಳುತ್ತದೆ. ವ್ಯತ್ಯಾಸ ಏನೆಂದರೆ ನೀರಹನಿಯ ಮುಂಭಾಗದಿಂದ ವಿಭಜನೆಗೊಂಡು ಮೂಡುವ ಸಪ್ತವರ್ಣಗಳ ಇಡೀ ರೋಹಿತ ಅದೇ ಹನಿಯ ಹಿಂಬದಿಯಿಂದ ಸಂಪೂರ್ಣವಾಗಿ ಪ್ರತಿಫಲನಗೊಂಡು ವಾಪಸ್ಸು ಹೊರಬರುತ್ತದೆ.

ಹಾಗೆ ಮತ್ತೆ ವಕ್ರೀಭವನಗೊಂಡು ಹೊರಬರುವ ವರ್ಣರಶ್ಮಿಗಳದು ಭಿನ್ನ ಭಿನ್ನ ತರಂಗಾಂತರ. ಆದ್ದರಿಂದ ಎಲ್ಲ ಏಳು ಬಣ್ಣಗಳೂ ಬೇರೆ ಬೇರೆ ಪ್ರಮಾಣದ ಬಾಗುವಿಕೆಗೆ ಒಳಗಾಗಿ ಹೊರಹರಿಯುತ್ತವೆ. ಕೋಟ್ಯಂತರ ಸಂಖ್ಯೆಯ ಮಳೆ ತುಂತುರುಗಳ ಮೂಲಕ ಏಕಕಾಲದಲ್ಲಿ ಹೊರ ಹಾಯುವ ಈ ಸಪ್ತವರ್ಣ ಪ್ರವಾಹಗಳು ಬಣ್ಣದ ಪಟ್ಟೆಗಳನ್ನೇ ರೂಪಿಸುತ್ತವೆ. ಪರಿಣಾಮವಾಗಿ ಮಳೆಬಿಲ್ಲೊಂದು ಮೈದಳೆಯುತ್ತದೆ. ಮಳೆಹನಿಗಳ ದಟ್ಟಣೆ ಅವಕ್ಕೆದುರಾದ ಸೂರ್ಯನ ಉನ್ನತಿ, ಕಾಂತಿ ಇವುಗಳನ್ನವಲಂಬಿಸಿ ವಿವಿಧ ಬಾಗು, ವಿಸ್ತಾರ ಮತ್ತು ವರ್ಣತೀವ್ರತೆಗಳ ಮಳೆಬಿಲ್ಲುಗಳು ಒಡಮೂಡುತ್ತವೆ.

‘ತುಂತುರು ಮಳೆಗೆದುರಾದ ಸೂರ್ಯ ದಿಗಂತಕ್ಕೆ ಸಮೀಪವಿದ್ದಷ್ಟೂ ಹೆಚ್ಚು ಎತ್ತರದಲ್ಲಿ ಮಳೆಬಿಲ್ಲು ಮೂಡುತ್ತದೆ. ಸೂರ್ಯ ಮೇಲೇರಿದಂತೆಲ್ಲ ಮಳೆಬಿಲ್ಲಿನ ಉನ್ನತಿ ಕಡಿಮೆ. ಸೂರ್ಯನ ಸ್ಥಾನ ದಿಗಂತದಿಂದ 42 ಡಿಗ್ರಿಗಿಂತ ಹೆಚ್ಚಿರುವಾಗ ಮಳೆಬಿಲ್ಲು ಮೂಡುವುದಿಲ್ಲ.

ಮಳೆಬಿಲ್ಲಿನದು ಬಿಲ್ಲಿನ ಆಕಾರವೇ ಏಕೆ?
ಮಳೆಬಿಲ್ಲುಗಳನ್ನು ರೂಪಿಸುವ ನೀರ ತುಂತುರುಗಳದು ಗೋಳಾಕಾರ; ವೃತ್ತೀಯ ಬಾಗಿನದೇ ಆಕಾರ. ಆದ್ದರಿಂದಲೇ ಮಳೆ ಬಿಲ್ಲುಗಳದು ಬಿಲ್ಲಿನ ಆಕಾರ.

ವಾಸ್ತವವಾಗಿ ಮಳೆಬಿಲ್ಲುಗಳು ವೃತ್ತಾಕಾರವಾಗಿಯೇ ಮೈದಳೆಯುತ್ತವೆ. ಆದರೆ ದಿಗಂತ ಅವಕ್ಕೆ ಅಡ್ಡಬರುವುದರಿಂದ, ಕತ್ತರಿಸಿದ ವರ್ತುಲಗಳಂತೆ ಎಂದರೆ ಬಿಲ್ಲಿನ ಆಕಾರ ಹೋಲುವಂತೆ ಅವು ಕಾಣುತ್ತವೆ. ಮಳೆಬಿಲ್ಲೊಂದು ರೂಪುಗೊಂಡಿರುವಾಗ ಸೂರ್ಯನಿರುವ ಉನ್ನತಿಗಿಂತ ಅಧಿಕ ಎತ್ತರದಿಂದ ವೀಕ್ಷಿಸಿದರೆ ಪೂರ್ಣ ವೃತ್ತಾಕಾರದ ಮಳೆಬಿಲ್ಲು ಗೋಚರಿಸುತ್ತದೆ; ವಿಮಾನಗಳಿಂದ ಉನ್ನತ ಪರ್ವತಗಳಿಂದ ಅಂತಹ ಸಪ್ತವರ್ಣವೃತ್ತದ ದರ್ಶನ ಸಾಧ್ಯ.

ಮಧ್ಯಾಹ್ನದ ವೇಳೆಯಲ್ಲಿ ಮತ್ತು ಉತ್ತರ-ದಕ್ಷಿಣಗಳಲ್ಲಿ ಮಳೆಬಿಲ್ಲು ಮೂಡುವುದಿಲ್ಲ -ಏಕೆ?
ದಿಗಂತದಿಂದ ನಲವತ್ತೆರಡು ಡಿಗ್ರಿಗಿಂತ ಕಡಿಮೆ ಉನ್ನತಿಯಲ್ಲಿ ಸೂರ್ಯ ಇರುವಾಗ ಮಾತ್ರ ನಮಗೆ ಗೋಚರಿಸುವಂತೆ ಎಂದರೆ ನೆಲದಿಂದ ಕಾಣುವಂತೆ ಮಳೆಬಿಲ್ಲು ರೂಪುಗೊಳ್ಳುತ್ತದೆ. ಆದ್ದರಿಂದ ಬೆಳಿಗ್ಗೆ ಮತ್ತು ಸಂಜೆಯ ವೇಳೆಗಳಲ್ಲಿ ಮಾತ್ರ ಮಳೆಬಿಲ್ಲು ಪ್ರತ್ಯಕ್ಷವಾಗುವುದು ಸಾಧ್ಯ.

ಮಳೆಬಿಲ್ಲು ಮೈದಳೆಯುವುದು ಸೂರ್ಯನಿಗೆ ಅಭಿಮುಖವಾಗುವ ದಿಕ್ಕುಗಳಲ್ಲಿ ತಾಗಿ ಹಾಗೆಂದರೆ ಬೆಳಗಿನ ವೇಳೆಯಾದರೆ ಪಶ್ಚಿಮದಲ್ಲಿ ಸಂಜೆಯಲ್ಲಾದರೆ ಪೂರ್ವದಲ್ಲಿ ಮಳೆಬಿಲ್ಲುಗಳು ಮೈದೋರುತ್ತವೆ ಅಷ್ಟೆ. ಆದ್ದರಿಂದ ಉತ್ತರ-ದಕ್ಷಿಣಗಳಲ್ಲಿ ಮಳೆ ಬಿಲ್ಲುಗಳು ಅಸಾಧ್ಯ.

ಮಳೆ ಮತ್ತು ಸೂರ್ಯನ ಬೆಳಕು ಇವಿಲ್ಲದೆ ಮಳೆ ಬಿಲ್ಲು ಮೂಡುವುದು ಸಾಧ್ಯವಿಲ್ಲವೇ?
ನೈಸರ್ಗಿಕವಾಗಿ ಆಕಾಶದಲ್ಲಿ ಮಳೆಬಿಲ್ಲು ಮೂಡಲು ತುಂತುರು ಮಳೆ ಮತ್ತು ಸೂರ್ಯರಶ್ಮಿ ಬೇಕೇ ಬೇಕು. ಆದರೆ ಇತರ ನೆಲೆಗಳಲ್ಲಿ ಇತರ ನೆಲೆಗಳಲ್ಲಿ ಇತರ ಕೆಲ ಸಂದರ್ಭಗಳಲ್ಲೂ ಮಳೆಬಿಲ್ಲು ಪ್ರತ್ಯಕ್ಷವಾಗಬಲ್ಲದು. ಉದಾಹರಣೆಗೆ ಭಾರೀ ಜಲಪಾತಗಳ ಸನಿಹ ಹರಡುವ ತುಂತುರು ಹನಿಗಳಿಗೆದುರಾಗಿ ಸೂರ್ಯರಶ್ಮಿ ಒದಗಿದರೂ ಮಳೆಬಿಲ್ಲು ಕಾಣುತ್ತದೆ (ಚಿತ್ರ-10). ತುಂತುರಿಗೆದುರಾಗಿ ಕೃತಕ ಉಜ್ವಲ ಬಿಳಿ ಬೆಳಕನ್ನು ತೋರಿದರೂ ಕಾಮನ ಬಿಲ್ಲಿನ ದರ್ಶನವಾಗುತ್ತದೆ.

ಇನ್ನೊಂದು ಮುಖ್ಯ ವಿಷಯ: ಕೆಲ ಅತ್ಯಪರೂಪದ ಸಂದರ್ಭಗಳಲ್ಲಿ ಒಂದು ಉಜ್ವಲ ಕಾಮನಬಿಲ್ಲಿನ ಜೊತೆಗೆ ಅದರ ಮೇಲೆ ಕೊಂಚ ದೂರದಲ್ಲಿ ಸಮಾನಾಂತರವಾಗಿ ಇನ್ನೊಂದು ಉಪ ಮಳೆಬಿಲ್ಲು (ಚಿತ್ರ-9) ಅವತರಿಸುತ್ತದೆ. ಮೂಲ ಉಜ್ವಲ ಬಿಲ್ಲಿನ ಕಾಂತಿಗಿಂತ ಕ್ಷೀಣ ಕಾಂತಿ-ವರ್ಣಗಳ ಅಂಥ ಉಪಮಳೆ ಬಿಲ್ಲಿನ ಬಣ್ಣಪಟ್ಟೆಗಳು ಮೂಲ ಮಳೆಬಿಲ್ಲಿನ ವರ್ಣಪಟ್ಟೆಗಳ ಕ್ರಮಕ್ಕೆ ವ್ಯತಿರಿಕ್ತವಾಗಿ ಜೋಡಣೆಗೊಂಡಿರುತ್ತವೆ. ಇಂಥ ‘ಅವಳಿ’ ಅಥವಾ ಮತ್ತೂ ಅಪರೂಪವಾಗಿ ‘ತ್ರಿವಳಿ’ ಮಳೆಬಿಲ್ಲುಗಳದು ಅನಿರ್ವಚನೀಯ ಸೊಗಸು-ಸೋಜಿಗಗಳ ದಿವ್ಯ ದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.