ಶನಿವಾರ, ಆಗಸ್ಟ್ 15, 2020
21 °C

ಮಳೆಯ ಅಬ್ಬರಕ್ಕೆ ತತ್ತರಿಸಿದ ಜನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸ್ಥಳೀಯ ಪುರಸಭೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಒಂದಿಲ್ಲ ಒಂದು ಸಮಸ್ಯೆಗಳು ಸದಾ ಪಟ್ಟಣದ ಜನತೆಯನ್ನು ಕಾಡುತ್ತಲೆ ಇರುತ್ತವೆ. ಸೋಮವಾರ ಮಧ್ಯರಾತ್ರಿಯಿಂದ ಸುರಿದ ಧಾರಾಕಾರ ಮಳೆಯ ಆರ್ಭಟದಿಂದ ರಸ್ತೆಗಳು ಜಲಾವೃತಗೊಂಡಿವೆ.

 

ಚರಂಡಿಗಳಲ್ಲಿ ಕಸಕಡ್ಡಿ ತುಂಬಿ ಸಮರ್ಪವಾಗಿ ನೀರು ಹರಿಯದೇ ಹೋಗಿದ್ದರಿಂದ ಮನೆ, ಅಂಗಡಿಗಳಿಗೆ ಕಲುಷಿತ ನೀರು ನುಗ್ಗಿದ್ದರಿಂದ ಜನತೆ ತತ್ತರಿಸಿ ಹೋಗಿರುವುದು ಕಂಡು ಬಂದಿತು.ಪಟ್ಟಣದ ಪ್ರಮುಖ ಬೀದಿಗಳು ಸೇರಿದಂತೆ ವಿವಿಧ ಬಡಾವಣೆಗಳಲ್ಲಿನ ಚರಂಡಿಗಳಲ್ಲಿ ನೀರು ಹರಿಯಲು ಸಾಧ್ಯವಾಗದೆ ಹೋಗಿದ್ದರಿಂದ ರಸ್ತೆ, ಮನೆ ಮುಗ್ಗಟ್ಟುಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಕಲುಷಿತ ನೀರು ಹೊರಹಾಕಲು ಕೆಲ ವ್ಯಾಪಾರಸ್ಥರು ಹಾಗೂ ಕುಟುಂಬದ ಸದಸ್ಯರು ಹರಸಾಹಸ ಪಡುತ್ತಿರುವುದು ಸಮಾನ್ಯವಾಗಿತ್ತು.ಪಟ್ಟಣದ ಹೃದಯ ಭಾಗವಾದ ಬಸ್‌ನಿಲ್ದಾಣ ಬಳಿಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ವಾಣಿಜ್ಯ ಮಳಿಗೆಗಳಿಗೆ ಮಂಗಳವಾರ ನೀರು ನುಗ್ಗಿದ್ದರಿಂದ ಅಂಗಡಿಗಳಲ್ಲಿನ ಸಾಮಗ್ರಿಗಳು ಜಲಾವೃತಗೊಂಡು ವ್ಯಾಪಾರಸ್ಥರನ್ನು ಕಂಗಾಲಾಗುವಂತೆ ಮಾಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಚರಂಡಿ ನೀರು ಸಹ ಮಳೆ ನೀರಿನಲ್ಲಿ ಕೂಡಿಕೊಂಡಿದ್ದರಿಂದ ದುರ್ವಾಸನೆ ಬೀರುತ್ತಿತ್ತು.ಪುರಸಭೆ ಆಡಳಿತ ಮಂಡಳಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿಯತ್ತ ಗಮನ ಹರಿಸದೆ ಹೋಗಿರುವುದು ಇಷ್ಟೆಲ್ಲಾ ಅವಘಡಗಳಿಗೆ ಕಾರಣವಾಗಿದೆ. ಮಳೆಗಾಲದಲ್ಲಿ ನಿಯಂತ್ರಣ ಮೀರಿ ನೀರು ಹರಿಯುವುದು ಸಾಮಾನ್ಯ. ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಪುರಸಭೆ ಮುಂಜಾಗ್ರತ ಕ್ರಮ ಕೈಕೊಳ್ಳದಿರುವ ಬಗ್ಗೆ ವ್ಯಾಪಾರಸ್ಥರು ಹಾಗೂ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೇಳಿಬಂದಿತು.ಆರು ಜಾನುವಾರು ಬಲಿ; ಐವರಿಗೆ ಗಾಯಲಿಂಗಸುಗೂರ: ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಗುಡುಗು-ಸಿಡಿಲು ಮಿಶ್ರಿತ ಭಾರಿ ಪ್ರಮಾಣದ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.  ಸಿಡಿಲಿಗೆ ಮೂರು ಜಾನುವಾರು ಬಲಿಯಾಗಿವೆ. ಅಲ್ಲದೇ ಸಿಡಿಲಿನ ಬೆಸುಗೆ ತಾಕಿ ಐವರು ತೀವ್ರಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸೋಮವಾರ ಮಧ್ಯರಾತ್ರಿ ಪಟ್ಟಣದ ಗೌಳಿಪುರದ ಅಮೀನ ಮೌಲಾಸಾಬ ಗೌಳಿ ಎಂಬುವವರ ಎಮ್ಮೆ, ಮಿಂಚೇರಿತಾಂಡಾ (2)ರ ಭೀಮಪ್ಪ ಆಲೆಪ್ಪ ರಾಠೋಡ ಎಂಬುವವರ ಆಕಳು.ತೊಂಡಿಹಾಳ ಗ್ರಾಮದ ಪವಾಡೆಪ್ಪ ಹುಲಗಪ್ಪ ಸಂಗಮದ ಎಂಬುವವರ ಎತ್ತು ಹಾಗೂ ತಿಪ್ಪಣ್ಣ ಹೊಳಿಯಪ್ಪ ಗುರುಗುಂಟಾ ಎಂಬುವವರ 3ಮೇಕೆ ಸೇರಿದಂತೆ ಒಟ್ಟು ಆರು ಜಾನುವಾರುಗಳು ಸಿಡಿಲಿನ ಬಡೆತಕ್ಕೆ ಸಾವನ್ನಪ್ಪಿವೆ ಎಂದು ಕಂದಾಯ ಇಲಾಖೆ ಮೂಲಗಳು ದೃಢಪಡಿಸಿವೆ.ಮಂಗಳವಾರ ಬೆಳಿಗ್ಗೆ ತಾಲ್ಲೂಕಿನ ಗೋನವಾಟ್ಲ ಗ್ರಾಮದಲ್ಲಿ ಮನೆಯಲ್ಲಿ ಊಟಕ್ಕೆ ಕುಳಿತಿದ್ದ ಮೌಲಿಂಬಿ ಹಸನ್‌ಸಾಬ ಬಂದಿಗಿ (55), ಜೈನಾಬಿ ಉಸೆಖಾನ್ (35), ಜುಬೇದಾಬೇಗಂ ಮಹಿಬೂಬ (36), ಮುಕ್ತುಂಸಾಬ ಅಮೀನಸಾಬ (45), ಅಮರೆಗೌಡ ರಾಮರೆಡ್ಡೆಪ್ಪಗೌಡ (40) ಎಂಬುವವರಿಗೆ ಸಿಡಿಲಿನ ಬೆಸುಗೆ ತಾಕಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಗಾಯಗೊಂಡವರನ್ನು ಆರೋಗ್ಯ ಕವಚ ವಾಹನದಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.