ಶನಿವಾರ, ಮೇ 8, 2021
27 °C

ಮಳೆ ನೀರು ಸಂಗ್ರಹಕ್ಕೆ ಹೆಚ್ಚಿದ ಅನಿವಾರ್ಯತೆ

ಪ್ರಜಾವಾಣಿ ವಾರ್ತೆ/ಸತೀಶ ಬಿ Updated:

ಅಕ್ಷರ ಗಾತ್ರ : | |

ಮಳೆ ನೀರು ಸಂಗ್ರಹಕ್ಕೆ ಹೆಚ್ಚಿದ ಅನಿವಾರ್ಯತೆ

ಬೆಂಗಳೂರು: ನಗರದಲ್ಲಿ ಬೀಳುವ ವಾರ್ಷಿಕ ಸರಾಸರಿ ಒಂದು ಸಾವಿರ ಮಿ.ಮೀ ಮಳೆಯನ್ನು ಸಂಗ್ರಹಿಸಿದರೆ 23 ಟಿಎಂಸಿ ನೀರು ಸಂಗ್ರಹಿಸಬಹುದು! ಇದು ಪ್ರತಿ ವರ್ಷ ಕಾವೇರಿ ನದಿಯಿಂದ ನಗರವೂ ಪಡೆಯುವ ನೀರಿನ ಪ್ರಮಾಣಕ್ಕಿಂತಲೂ ಹೆಚ್ಚು.ಇದೀಗ ಕಾವೇರಿ ನದಿಯಿಂದ ನಗರಕ್ಕೆ ವಾರ್ಷಿಕ ಸರಾಸರಿ 19 ಟಿಎಂಸಿ ನೀರನ್ನು ಪಡೆಯಲಾಗುತ್ತಿದೆ. ಮಳೆ ನೀರನ್ನು ವ್ಯರ್ಥವಾಗದಂತೆ ಸಮರ್ಪಕವಾಗಿ ಸಂಗ್ರಹಿಸಿದರೆ ನಗರದ ನೀರಿನ ಕೊರತೆಯನ್ನು ಸಂಪೂರ್ಣವಾಗಿ ನೀಗಲು ಸಾಧ್ಯವಿದೆ ಎನ್ನುತ್ತಾರೆ ಜಲತಜ್ಞರು.ಆದರೆ, ಮಳೆ ನೀರು ಸಂಗ್ರಹಿಸದ ಕಾರಣ ಇಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಚರಂಡಿ ಮೂಲಕ ಸಮುದ್ರ ಸೇರುತ್ತಿದೆ. ಪ್ರತಿಯೊಂದು ಮನೆ ಹಾಗೂ ಕಚೇರಿಯಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಿದರೆ ಮುಂದಿನ ದಿನಗಳಲ್ಲಿ ನೀರಿಗೆ ಪರದಾಡುವ ಸ್ಥಿತಿಯನ್ನು ತಪ್ಪಿಸಲು ಸಾಧ್ಯವಿದೆ.`ನಗರದಲ್ಲಿನ ಪ್ರತಿ ಮನೆ, ಕಚೇರಿ, ಖಾಲಿ ಸ್ಥಳ, ಉದ್ಯಾನಗಳು, ರಸ್ತೆ ಬದಿ ಹೀಗೆ ಹಲವು ಕಡೆಗಳಲ್ಲಿ ಮಳೆ ನೀರನ್ನು ಸಂಗ್ರಹಿಸಬಹುದು. ಅಮೂಲ್ಯವಾದ ನೀರನ್ನು ನೇರವಾಗಿ ಕುಡಿಯುವುದಕ್ಕೆ ಹೊರತುಪಡಿಸಿ ಇತರೆ ಉಪಯೋಗಗಳಿಗೆ ಬಳಸಬಹುದು. ಚಾವಣಿಯಿಂದ ಸಂಗ್ರಹವಾದ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಿ ಕುಡಿಯಲೂ ಬಳಸಬಹುದು' ಎಂಬುದು ಮಳೆ ನೀರು ಸಂಗ್ರಹ ತಜ್ಞ ಎ.ಆರ್.ಶಿವಕುಮಾರ್ ಅವರ ಅಭಿಪ್ರಾಯ.ಮನೆಯ ಮೇಲ್ಚಾವಣಿಗೆ ಪೈಪ್‌ಗಳನ್ನು ಅಳವಡಿಸಿ ನೀರನ್ನು ತೊಟ್ಟಿಯಲ್ಲಿ ಸಂಗ್ರಹಿಸಬೇಕು. ನೀರು ಸಂಗ್ರಹಣಾ ತೊಟ್ಟಿಗೆ ಫಿಲ್ಟರ್ ಅಳವಡಿಸುವ ಮೂಲಕ ಆ ನೀರನ್ನು ಮರು ಉಪಯೋಗಿಸಬಹುದು. ನೀರು ಹರಿಸುವ ಮೊದಲು ಮೇಲ್ಚಾವಣಿಯನ್ನು ಸ್ವಚ್ಛಗೊಳಿಸಬೇಕು. ತೊಟ್ಟಿಯ ಒಳಗೆ ಗಾಳಿ, ಬೆಳಕು ಹೋಗದಂತೆ ಮುಂಜಾಗ್ರತೆ ವಹಿಸಿದರೆ ಹಲವು ದಿನಗಳವರೆಗೂ ನೀರನ್ನು ಸುರಕ್ಷಿತವಾಗಿಡಬಹುದು ಎನ್ನುತ್ತಾರೆ ಅವರು.ತೊಟ್ಟಿಯ ಪಕ್ಕದಲ್ಲೇ 3 ಅಡಿ ಅಗಲ ಮತ್ತು ಕನಿಷ್ಠ 10 ಅಡಿ ಆಳದ ತೆರೆದ ಕೊಳವೆ ಬಾವಿಯನ್ನು ನಿರ್ಮಿಸಿ ಹೆಚ್ಚುವರಿ ನೀರನ್ನು ಅಲ್ಲಿಗೆ ಹರಿಸಿ ಭೂಮಿಯೊಳಗೆ ಇಂಗಿಸಬಹುದು. ಉದ್ಯಾನಗಳು, ರಸ್ತೆ ಬದಿಯ ಖಾಲಿ ಸ್ಥಳಗಳಲ್ಲಿ ಇದೇ ಮಾದರಿಯನ್ನು ಅನುಸರಿಸಬಹುದು. ಬತ್ತಿದ ಕೊಳವೆ ಬಾವಿ ಪಕ್ಕದಲ್ಲಿ ತೆರೆದ ಬಾವಿಯನ್ನು ನಿರ್ಮಿಸಿ ನೀರು ಇಂಗಿಸಿದರೆ ಅಂತರ್ಜಲದ ಪ್ರಮಾಣ ಕೂಡಾ ಹೆಚ್ಚುತ್ತದೆ.ಉದಾಹರಣೆಗೆ 40/ 30 ಅಡಿ ಅಳತೆಯ ನಿವೇಶನದಲ್ಲಿ ಕಟ್ಟಿರುವ ಮನೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸಲು ಸುಮಾರು 5-20 ಸಾವಿರ ರೂಪಾಯಿ ಖರ್ಚಾಗುತ್ತದೆ. ಒಮ್ಮೆ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ 25 ವರ್ಷಗಳವರೆಗೆ ಬಾಳಿಕೆ ಬರುತ್ತದೆ.ಒಂದು ಚದರ ಅಡಿಗೆ ಎರಡು ಲೀಟರ್ ನೀರು ಸಂಗ್ರಹವಾಗುವ ಸಂಪ್ ಇರಬೇಕು. ನಗರದಲ್ಲಿ ಬೀಳುವ ಸರಾಸರಿ ವಾರ್ಷಿಕ ಮಳೆಯಿಂದ 40/60 ಅಡಿ ನಿವೇಶನದಲ್ಲಿ ಕಟ್ಟಿರುವ ಮನೆಯಿಂದ 2,30,000 ಸಾವಿರ ಲೀಟರ್ ಮತ್ತು 30/40 ಅಡಿ ನಿವೇಶನದಲ್ಲಿ ನಿರ್ಮಿಸಿರುವ ಮನೆಯಲ್ಲಿ 1,10,000 ಸಾವಿರ ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ.ಮಳೆ ನೀರು ಸಂಗ್ರಹ ವಿಧಾನದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಮಳೆ ನೀರಿನ ಮಹತ್ವದ ಕುರಿತು ತಿಳಿಸಲು ನಗರದ ಎರಡು ಕಡೆ ಮಾಹಿತಿ ಕೇಂದ್ರಗಳಿವೆ. ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಲಿಯು ಮಳೆ ನೀರು ಸಂಗ್ರಹ ವ್ಯವಸ್ಥೆಯ ಮಾಹಿತಿ ಕೇಂದ್ರವನ್ನು ಆರಂಭಿಸಿದೆ. ಬೆಂಗಳೂರು ಜಲಮಂಡಳಿಯು ಜಯನಗರ ಐದನೇ ಹಂತದಲ್ಲಿ `ವಿಶ್ವೇಶ್ವರಯ್ಯ ಮಳೆ ನೀರು ಸಂಗ್ರಹದ ಥೀಮ್ ಪಾರ್ಕ್'ನಲ್ಲಿ ಮಾಹಿತಿ ಕೇಂದ್ರವನ್ನು ತೆರೆದಿದೆ. ಸಾರ್ವಜನಿಕರು ಈ ಮಾಹಿತಿ ಕೇಂದ್ರಗಳಿಂದ ತಮ್ಮ ಮನೆಯ ವಿನ್ಯಾಸ, ಸ್ಥಳಾವಕಾಶಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದಾದ ಮಳೆ ನೀರು ಸಂಗ್ರಹಣಾ ವಿಧಾನ ಮತ್ತು ತಗುಲುವ ವೆಚ್ಚದ ಕುರಿತು ಮಾಹಿತಿ ಪಡೆಯಬಹುದು.ಸಾರ್ವಜನಿಕರಿಗೆ ಅವರ ವಾರ್ಡ್‌ನಲ್ಲಿಯೇ ಮಾಹಿತಿ ನೀಡಲು ಮಂಡಲಿಯ ವತಿಯಿಂದ ಗುತ್ತಿಗೆದಾರರು, ಕೊಳಾಯಿ ದುರಸ್ತಿ ಮಾಡುವವರು ಮತ್ತು ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 1500 ಮಂದಿಗೆ ತರಬೇತಿ ನೀಡಿದೆ. ಅಲ್ಲದೆ ಇಲಾಖೆಯ ಡಿಡಿಡಿ.ಠ್ಚಠಿ.ಟ್ಟಜ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ಲಂಬರ್‌ಗಳು, ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ಮಾಹಿತಿ ಪಡೆಯಬಹುದು.ಮಳೆ ನೀರು ಸಂಗ್ರಹಣೆಗೆ ಕಾನೂನು

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ 2009ರ ಮಳೆ ನೀರು ಸಂಗ್ರಹ ಕಾನೂನು ಅನ್ವಯ 40/60 ಅಡಿ ನಿವೇಶನದಲ್ಲಿ ಕಟ್ಟಿರುವ ಹಳೆಯ ಮನೆಗಳು ಮತ್ತು ಹೊಸದಾಗಿ 30/40 ನಿವೇಶನದಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಮಳೆ ನೀರು ಸಂಗ್ರಹಣೆ ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕಿದೆ.ಕಾನೂನು ಅನ್ವಯ ಮಳೆ ನೀರು ಸಂಗ್ರಹಣೆ ವಿಧಾನವನ್ನು ಅಳವಡಿಸಿಕೊಳ್ಳದಿರುವ ಹೊಸ ಮನೆಗಳಿಗೆ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದಿಲ್ಲ. ಮಳೆ ನೀರು ಸಂಗ್ರಹಕ್ಕೆ 55 ಸಾವಿರ ಮನೆಗಳನ್ನು ಗುರುತಿಸಲಾಗಿತ್ತು. ನಗರದಲ್ಲಿ 46,057 ಸಾವಿರ ಮನೆಗಳಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಆಳವಡಿಸಿಕೊಳ್ಳಲಾಗಿದೆ. ಇನ್ನೂ ಸುಮಾರು ಒಂಬತ್ತು ಸಾವಿರ ಮನೆಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಕೊಳ್ಳಬೇಕಿದೆ.

-ಿ.ವೆಂಕಟರಾಜು,

ಜಲಮಂಡಲಿಯ ಮುಖ್ಯ ಎಂಜಿನಿಯರ್
ನಗರದಲ್ಲಿ ವಾರ್ಷಿಕ 40 ಇಂಚು (1 ಸಾವಿರ ಮಿ.ಮೀ) ಮಳೆ ಬೀಳುತ್ತದೆ. ಮಳೆ ನೀರು ಸಂಗ್ರಹಣೆ ವಿಧಾನದ ಮೂಲಕ ಸಂಗ್ರಹಿಸಲಾದ ನೀರಿನಲ್ಲಿ ಶೇ 25ರಷ್ಟನ್ನು ಬಳಸಿದರೂ ನಗರದಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಬಹುದು.

- ಎ.ಆರ್.ಶಿವಕುಮಾರ್, ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಲಿಯ ಪ್ರಧಾನ ಸಂಶೋಧಕ (ಮಳೆ ನೀರು ಸಂಗ್ರಹ)

ಅಂತರ್ಜಲದ ಕೊರತೆಯಿಂದಾಗಿ ಮನೆಯಲ್ಲಿದ್ದ ಬೋರ್‌ವೆಲ್ ಬತ್ತಿಹೋಗಿತ್ತು. ಕೊಳವೆಬಾವಿ ಪಕ್ಕದಲ್ಲಿ ಬಾವಿ ತೆಗೆಸಿ ಮಳೆ ನೀರು ಸಂಗ್ರಹ ವಿಧಾನದ ಮೂಲಕ ನೀರು ಹರಿಸಲಾಗುತ್ತಿದೆ. ಹಾಗಾಗಿ ಬೋರ್‌ವೆಲ್‌ನಲ್ಲಿ ಸಮರ್ಪಕವಾಗಿ ನೀರು ದೊರೆಯುತ್ತಿದೆ. ಮೂರು ವರ್ಷಗಳಿಂದ ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಮಳೆ ನೀರು ವ್ಯರ್ಥವಾಗಿ ಚರಂಡಿ ಸೇರುವುದನ್ನು ತಪ್ಪಿಸಿದ ಸಂತೃಪ್ತಿ ಇದೆ.

-ಪ್ರತಿಭಾ, ವಿಜಯನಗರ 2ನೇ ಹಂತ

ಏಳು ವರ್ಷಗಳಿಂದ ಮನೆಯಲ್ಲಿ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇದರಿಂದಾಗಿ 5 ಸಾವಿರ ಲೀಟರ್‌ಗೂ ಅಧಿಕ ನೀರು ಸಂಗ್ರಹವಾಗುತ್ತಿದೆ. ನಮಗೆ ನೀರಿನ ಕೊರತೆ ಎದುರಾಗಿಲ್ಲ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಿ ತೆರೆದ ಬಾವಿಗಳಿಗೆ ಹರಿಸಿ, ಇಂಗು ಗುಂಡಿಗಳ ಮೂಲಕ ಇಂಗಿಸುವುದರಿಂದ ಅಂತರ್ಜಲದ ಮಟ್ಟವೂ ಹೆಚ್ಚುತ್ತದೆ.

-ಶ್ರೀಧರ್,

ಸಿವಿಲ್ ಎಂಜಿನಿಯರ್, ನಾಗರಬಾವಿ ಒಂದನೇ ಹಂತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.