ಎದೆ ಬಡಿತದ ಲೆಕ್ಕ ತಪ್ಪಿಸುವ ಕನ್ನೆಮಳೆ. ಹಾಲೂಡಿಸುವ ಅಮ್ಮನಂಥ ಮಳೆ. ಮುನಿಸಿಕೊಂಡ ಮಾರಿಯಂಥ ಮಳೆ.
ಈ ಮಳೆ ಬಹುರೂಪಿ. ಸ್ತ್ರೀರೂಪಿ- ಸೌಮ್ಯವೂ ರೌದ್ರವೂ.

ಮಳೆಯೆಂದರೆ ಕಣ್ಣೀರು. ಸುಖದಲ್ಲೂ ಕಣ್ಣು ಮಂಜು. ನೋವಿನಲ್ಲೂ ಸೂತಕದಲ್ಲೂ ಕಣ್ಣು ಒದ್ದೆಮುದ್ದೆ. ಮಳೆರಾಯ ಬಂದರೆ ಬರಿಗೈಲಿ ಬರಲಿಲ್ಲ...

ಇಂಥ, ಅಮೃತದಂಥ, ಅನಲದಂಥ ಮಳೆ ಈಗ ನಾಡಿನೆಲ್ಲೆಡೆ ಸಂಚಾರಿ. ರಾಜಧಾನಿ ಬೆಂಗಳೂರು, ಕಡಲತಡಿಯ ಊರು, ಮಲೆಕಾನುಗಳ ತವರು- ಎಲ್ಲೆಡೆ ಮಳೆಯ ಹಾಜರಿ. ಮಳೆಯಿಂದಾಗಿ ಕೆಲವೆಡೆ ಜೀವಸಂಚಾರ.

ಬಯಲು ಹೊಲಗಳಲ್ಲಿ ಹಸಿರ ಪ್ರವರ. ಜಲಧಾರೆಗಳಿಗೆ ಹೊಸ ಹರಯ. ಅಣೆಕಟ್ಟುಗಳಿಗೆ ಉಕ್ಕುಪ್ರಾಯ. ಈ ಜೀವನ್ಮುಖಿ ಮಳೆಯ ಇನ್ನೊಂದು ಮುಖ ನೋಡಿ: ರಸ್ತೆಗಳಿಗೆ ನದಿರೂಪು, ಸಂಚಾರಕ್ಕೆ ಸಂಚಕಾರ. ಸೋರುತಿದೆ ಮನೆಯ ಮಾಳಿಗೆ, ಜೀವ ಬಂದಿದೆ ಬಾಯಿಗೆ. ದಿಕ್ಕು ತಪ್ಪಿಹುದು ದೈನಿಕ.

ಅಂದಿನಂದಿನ ತುತ್ತಿನ ದುಡಿಮೆಗೆ ಬಂದಿದೆ ಕುತ್ತು. ಹಾಂ, ಮಳೆ ಮುಖ ಮರೆಸಿಕೊಂಡಿರುವ ಪ್ರಸಂಗಗಳೂ ಇವೆ. ಅಲ್ಲಿ, ಮಳೆ ಮಖೇಡಿಯಾಗಿರುವಲ್ಲಿ ಕಳೆಗುಂದಿದ್ದಾನೆ ಕೃಷಿಕ. ಇವಿಷ್ಟು ಮಳೆಪಥದ ಮುಖ್ಯಾಂಶಗಳು. ವಿವರಗಳನ್ನು ನೋಡೋಣ ಬನ್ನಿ.

ಶಹರದಲ್ಲಿ ಸಂಚಾರ
ಸಂಜೆ ಐದರ ಮಳೆ, ರಾತ್ರಿಯ ಬಿರುಮಳೆ, ಬೆಳ್ಳಂಬೆಳಗ್ಗೆ ಹಾಯ್ ಎನ್ನುವ ಮಳೆ- ಮಕ್ಕಳ ಕಣ್ಣಾಮುಚ್ಚಾಲೆ ಆಟದಂತಹದ್ದು ಬೆಂಗಳೂರಿನ ಮಳೆ. ಮಳೆದಿನಗಳಲ್ಲಿ ಪ್ರತಿದಿನವೂ ನಗರದ ಒಂದಲ್ಲಾ ಒಂದು ಬಡಾವಣೆಯಲ್ಲಿ ಮಳೆ ಮುಖ ತೋರಿಸಿಯೇ ಸೈ.

ಮಹಾನಗರದ ನಾಗರಿಕರಿಗೆ ಮಳೆಯ ಕಣ್ಣಾಮುಚ್ಚಾಲೆ ಅಭ್ಯಾಸವಾಗಿದೆ. ಮಳೆ ಬರುವ ಹೊತ್ತು ರಸ್ತೆಗಳಲ್ಲಿ ಗಂಗಾವತರಣ. ಮೇಲುಸೇತುವೆಗಳ ಮೇಲೂ ನೀರು! ಮರಗಳು ಬುಡಮೇಲು. ಹಳೆಯ ನೆನಪುಗಳ ಹೊತ್ತೋ ಏನೋ, ಕೆರೆಗಳು ಬಡಾವಣೆಗಳಾಗಿರುವುದನ್ನು ಮರೆತಂತೆ ಮಳೆನೀರು ವಸತಿಗಳಿಗೆ ನುಗ್ಗುತ್ತದೆ. ನಗರದ ನಟ್ಟನಡುವೆ ಭಾರೀ ಮೋರಿಗಳು ನದಿರೂಪು ತಾಳುತ್ತವೆ. ಮಗುವೊಂದು ಕೊಚ್ಚಿಹೋಯಿತಂತೆ- ಸುದ್ದಿಯಿನ್ನೂ ನೆನಪುಗಳಿಂದ ಮಾಸಿಲ್ಲ.

ರಾಜಧಾನಿಯ ಮಳೆ ಋತು ಮೇಲ್ನೋಟಕ್ಕೆ ಭರ್ಜರಿ. ಆದರೆ, ತಿಪ್ಪಗೊಂಡನಹಳ್ಳಿಯಲ್ಲಿನ ನೀರಸುಗ್ಗಿ ಆಕರ್ಷಕವಾಗಿಲ್ಲ. ಜಲಾಶಯ ಅರ್ಧದಷ್ಟೂ ತುಂಬಿಲ್ಲ. ಹಾಗಾಗಿ, ಈ ಸಲವೂ ಬೆಂಗಳೂರಿಗರಿಗೆ ನೀರು ಪೂರೈಸಲು ಜಲಮಂಡಲಿ ಲೆಕ್ಕಾಚಾರ ಗುಣಾಕಾರ ಹಾಕುವುದು ತಪ್ಪುವುದಿಲ್ಲ.

ಹೊರಗೆ ಮಳೆ ಸುರಿಯುತ್ತಿದ್ದರೆ, `ಇಸ್ರೋ~ದ ಒಳಗೆ ಮಳೆಗೆ ಸಂಬಂಧಿಸಿದ ಬೇರೆಯದೇ ರೀತಿಯ ಮಾತು. ಮೋಡ ಮತ್ತು ಮಳೆ ಕುರಿತಾದ ಅಧ್ಯಯನಕ್ಕೆ ಮೀಸಲಾದ ಉಪಗ್ರಹವೊಂದನ್ನು ಹಾರಿಬಿಡಲು `ಇಸ್ರೋ~ ಎಲ್ಲ ತಯಾರಿ ನಡೆಸಿದೆ.

ಉಗ್ರಪ್ರತಾಪಿ
ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳದ್ದು ಬೇರೆಯದ್ದೇ ಕಥೆ. ಕೃಷ್ಣೆ, ಮಲಪ್ರಭಾ, ಘಟಪ್ರಭಾ, ಭೀಮಾ- ಎಲ್ಲ ನದಿಗಳದೂ ಹುಚ್ಚುಖೋಡಿ ಮನಸು. ಆಲಮಟ್ಟಿಯನ್ನು ನೋಡಿದರೆ ಸಾಕು, ಮಳೆಯ ರೌದ್ರಾವತಾರದ ದರ್ಶನವಾಗುತ್ತದೆ. ಜಲಾಶಯದ ಇಪ್ಪತ್ತಾರೂ ಗೇಟ್ಗಳನ್ನು ತೆರೆದು ನದಿಗೆ ನೀರು ಬಿಟ್ಟಿದ್ದಾಗಿದೆ.

ಬೆಳಗಾವಿ ಬಳಿಯ ನವಿಲತೀರ್ಥದ ಬಳಿ ಮಲಪ್ರಭಾ ನದಿಗೆ ಜಲಾಶಯ ಕಟ್ಟಲಾಗಿದೆ. ಮಲಪ್ರಭೆ ಉಕ್ಕಿ ಜಲಾಶಯ ತುಂಬಿದೆ. ನದಿ ಸೊಕ್ಕಿ, ಊರುಗಳ ಮೇಲೂ ಹರಿದಿದೆ. ರಾಮದುರ್ಗ ಪಟ್ಟಣದ ತಗ್ಗಿನವರಿಗೆ ತಮ್ಮ ಮನೆಯನ್ನು ನದಿನೀರಿನಿಂದ ದೂರವಿಡುವುದೇ ಕೆಲಸ.

ಬಾದಾಮಿ ತಾಲ್ಲೂಕಿನ ವಿವರಗಳನ್ನು ನೋಡಿ. ಅಲ್ಲಿನ ಹತ್ತಾರು ಹಳ್ಳಿಗಳು ಜಲಾವೃತಗೊಂಡು ತೊಂದರೆ ಅನುಭವಿಸಿವೆ. ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಂಚಕಾರ, ನೀರಿನದೇ ಸಂಚಾರ.

ಬಾಗಲಕೋಟೆ ಜಿಲ್ಲೆಗೆ ಬಂದರೆ ಅಲ್ಲಿಯೂ ಮಳೆಯ ರೌದ್ರರೂಪದ್ದೇ ಮಾತು. ನಾಗಸಂಪಿಗೆ ಗ್ರಾಮದ ಪಾಪದ ಹೆಣ್ಣುಮಗಳೊಬ್ಬಳು ಕಾಲುಜಾರಿ ಕೃಷ್ಣೆಯ ಪಾಲಾದಳು.
ಕೃಷ್ಣೆಯ ರಭಸ ಎಷ್ಟಿದೆಯೆಂದರೆ, ನತದೃಷ್ಟಳ ದೇಹ ಪತ್ತೆಯಾಗಲೇ ಸಾಕಷ್ಟು ಸಮಯ ಬೇಕಾಯಿತು. ಜಮಖಂಡಿ ತಾಲ್ಲೂಕಿನ ಟಿಕ್ಕಳಕಿ ಗ್ರಾಮದ ಎಂಬತ್ತಕ್ಕೂ ಹೆಚ್ಚು ಕುಟುಂಬಗಳು ತೋಟದ ನಡುಗದ್ದೆಯಲ್ಲೇ ಹಲವು ಕಾಲ ಉಳಿಯುವಂತಾಗಿ, ಕೃಷ್ಣೆಯೊಂದಿಗೆ ಗುದ್ದಾಡುವಂತಾಯಿತು.

ಗುಲ್ಬರ್ಗಾ, ಯಾದಗಿರಿ ಜಿಲ್ಲೆಗಳಲ್ಲೂ ಈಗ ಮಳೆಯದ್ದೇ ಮಾತು. ಯಾದಗಿರಿ ಜಿಲ್ಲೆಯ ನಾರಾಯಣಪುರ ಅಣೆಕಟ್ಟೆ ಭರ್ತಿ. ಜನಕ್ಕೆ ಮಾತ್ರ ಸಂತೋಷವಿಲ್ಲ. ನದಿಗಳು ದಿಕ್ಕುತಪ್ಪಿ ಬೆಳೆಯನ್ನು ನುಂಗಿವೆ. ಮುಧೋಳ, ಹುನಗುಂದ ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ನೀರುಪಾಲಾಗಿದೆ.

ಬಿಜಾಪುರ ಜಿಲ್ಲೆಯಲ್ಲಿ ಸಕಾಲಕ್ಕೆ ಬಾರದ ಮಳೆಯಿಂದ ಬಿತ್ತನೆ ಕುಂಠಿತಗೊಂಡಿದೆ. ಬಿಜಾಪುರ ಮತ್ತು ಇಂಡಿ ತಾಲ್ಲೂಕುಗಳ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿರುವ ವಿಪರ್ಯಾಸವೂ ಅಲ್ಲಿದೆ.

ಸಕಾಲಕ್ಕೆ ಮಳೆ ಆಗದ ಕಾರಣ ಜುಲೈ ಅಂತ್ಯದವರೆಗೆ ಕೇವಲ ಶೇ.13ರಷ್ಟು ಕ್ಷೇತ್ರದಲ್ಲಿ ಮಾತ್ರ ಬಿತ್ತನೆ ನಡೆದಿತ್ತು. ಸೆಪ್ಟೆಂಬರ್ನಲ್ಲಿ 166 ಮಿ.ಮೀ. ಮಳೆಯಾಗಬೇಕಿತ್ತು. ಆಗಿರುವುದು 6.4 ಮಿ.ಮೀ. ಮಾತ್ರ. ಈ ವರ್ಷ ಬರ ಗ್ಯಾರಂಟಿ ಎಂದು ರೈತರು ಹೇಳುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಭೀಮಾ ಮತ್ತು ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಲ್ಲಿ ಹುಲುಸಾಗಿ ಬೆಳೆದಿದ್ದ ಬಾಳೆ, ಕಬ್ಬು, ಗೋವಿನ ಜೋಳ, ಸಜ್ಜೆ ಮತ್ತಿತರ ಬೆಳೆಗೆ ನೀರು ನುಗ್ಗಿ ಹಾನಿಯನ್ನುಂಟು ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ದೂಧಗಂಗಾ ನದಿ ದಂಡೆಯ ಮೇಲಿದ್ದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಗೋವಿನಜೋಳ, ಸೊಯಾಬಿನ್, ಜೋಳ, ಉಳ್ಳಾಗಡ್ಡಿ, ಬೆಳ್ಳುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ಬೆಳೆಗಳು ಹಾಳಾಗಿ ಹೋಗಿವೆ.

ಮಳೆನಾಡು ಮಲೆನಾಡು
ಲಿಂಗನಮಕ್ಕಿಯಲ್ಲೆಗ ನವೋಲ್ಲಾಸ. ಒಳಹರಿವು ದಿಢೀರ್ ಹೆಚ್ಚಾಗಿ, ಅಣೆಕಟ್ಟೆ ಮಟ್ಟದಲ್ಲಿ ದಿನಕ್ಕೊಂದು ಅಡಿಯಂತೆ ಈ ವಾರದಲ್ಲಿ ನೀರಿನಮಟ್ಟ 8 ಅಡಿ ಏರಿಕೆಯಾಗಿದ್ದು ದಾಖಲೆ. ಇಡೀ ಮಳೆಗಾಲದಲ್ಲಿ ತುಂಬದಿದ್ದ ಕೆರೆ-ಕಟ್ಟೆಗಳು, ಹೊಳೆ-ನದಿಗಳು ಒಂದೇ ವಾರದ ಮಳೆಗೆ ಉಕ್ಕಿ ಹರಿದಿವೆ. ಧಗೆ ದಿನಗಳಲ್ಲಿ ಸೊರಗಿದ್ದ ಜೋಗ ಜಲಪಾತ ಈಗ ಮದುವಣಗಿತ್ತಿ.

1970ರ ನಂತರದ ಎರಡನೇ ಅತಿದೊಡ್ಡ ಮಳೆ ಇದೇ ಆಗಸ್ಟ್ 28ರಿಂದ ಸೆಪ್ಟೆಂಬರ್ 4ರವರೆಗೆ ಸುರಿದಿದೆ. ಸರಾಸರಿ 176.5 ಮಿ.ಮೀ. ಮಳೆ. ಈ ಮಳೆಗೆ ಜನಜೀವನ ಅಸ್ತವ್ಯಸ್ತ, ಹಬ್ಬದ ಸಡಗರಕ್ಕೆ ಮಂಜು.

1995ರಲ್ಲಿ ಇದೇ ವಾರದಲ್ಲಿ ಸರಾಸರಿ 229 ಮಿ.ಮೀ. ಮಳೆಯಾಗಿತ್ತು. ಇದು ಈ ವರ್ಷ ಬಿದ್ದ ಮಳೆಗಿಂತ ಶೇ.25ರಷ್ಟು ಹೆಚ್ಚಾಗಿತ್ತು. ಮಲೆನಾಡಿನಲ್ಲಿ ಈ ವರ್ಷ ಈ ಕಾಲಾವಧಿಯಲ್ಲಿ ವಾಡಿಕೆ ಮಳೆ 37.2 ಮಿ.ಮೀ. ಆಗಬೇಕಿತ್ತು. ಆದರೆ, ಸುರಿದಿರುವುದು 176.5 ಮಿ.ಮೀ.

ಮಲೆನಾಡು ಮತ್ತು ಬಯಲು ಸೀಮೆ ಎರಡನ್ನೂ ಹೊಂದಿರುವ ಚಿಕ್ಕಮಗಳೂರು ಜಿಲ್ಲೆಗೆ ಈ ಬಾರಿ ವರುಣ ಒಳಿತು-ಕೆಡುಕು ಎರಡನ್ನೂ ಮಾಡಿದ್ದಾನೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ.

ಮಳೆಯುಬ್ಬರದಿಂದಾಗಿ ಅಡಿಕೆ ಶುಂಠಿಗೆ ಕೊಳೆ ರೋಗ. ಕಾಳು ಮೆಣಸಿಗೆ ಸೊರಗು ರೋಗ. ನದಿಗಳು ಅಪಾಯಮಟ್ಟ ತಲುಪಿದ್ದರಿಂದ ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ಸೇತುವೆಗಳಿಗೆ ಹಾನಿಯಾಗಿದೆ. ಇನ್ನೊಂದು ಕಡೆ ನೋಡಿ: ಕಡೂರಿನ ಐದು ಹೋಬಳಿಗಳು ಮತ್ತು ಚಿಕ್ಕಮಗಳೂರು, ತರೀಕೆರೆ ತಾಲ್ಲೂಕಿನ ತಲಾ ಒಂದು ಹೋಬಳಿಗಳಲ್ಲಿ ಮಳೆ ನಾಪತ್ತೆ; ಬರದ ಕರಿನೆರಳು.

ಎಲ್ಲೆಲ್ಲೂ ವರ್ಷಧಾರೆಯೇ...
ಮಂಡ್ಯದ ಕೃಷ್ಣರಾಜಸಾಗರ, ಮೈಸೂರಿನ ಕಬಿನಿ, ಕೊಡಗಿನ ಹಾರಂಗಿ, ಚಿಕ್ಲಿಹೊಳೆ, ಹಾಸನದ ಹೇಮಾವತಿ, ವಾಟೆಹೊಳೆ, ಎಗಚಿ ಜಲಾಶಯಗಳು ತುಂಬಿ ತುಳುಕುತ್ತಿವೆ. ನಾಲೆಗಳಲ್ಲಿ ಭರ್ತಿ ನೀರು. ಹೊಲಗಳಲ್ಲಿ ಹಬ್ಬದ ರಂಗು.

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಶೇ.32-35 ರಷ್ಟು ಅಧಿಕ ಮಳೆಯಾಗಿದೆ. ಕಳೆದ ವರ್ಷ 1700 ಮಿ.ಮೀ. ಮಳೆ ದಾಖಲಾಗಿತ್ತು. ಈ ವರ್ಷ 2300 ಮಿ.ಮೀ. ಮಳೆ ಬಿದ್ದಿದೆ. ಇಲ್ಲಿ ಉತ್ತಮ ಮಳೆಯಾದ ಕಾರಣ ಮಂಡ್ಯದ ಕೃಷ್ಣರಾಜಸಾಗರ ಜಲಾಶಯ 25 ದಿನ ಮೊದಲೇ ಭರ್ತಿಯಾಗಿದೆ (ಮೈಸೂರು ಜಿಲ್ಲೆಯ ಕಬಿನಿ ಕೂಡ ತುಂಬಿದೆ). ಹೆಚ್ಚು ಮನೆಗಳು ನೆಲಕಚ್ಚಿವೆ. ಗುಡ್ಡ ಕುಸಿದು ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಹಾಸನ ಜಿಲ್ಲೆಯ್ಲ್ಲಲೂ ಮಳೆ ಕೈಕೊಟ್ಟಿಲ್ಲ. ಆದರೆ ಸಕಾಲದಲ್ಲಿ ಮಳೆ ಬಿದ್ದಿಲ್ಲ. ಹಾಗಾಗಿ, ಅರಸೀಕೆರೆ, ಬಾಣಾವರ, ಜಾವಗಲ್ ಪ್ರದೇಶದಲ್ಲಿ ಕೃಷಿಕರ ಮೊಗದಲ್ಲಿ ಕಳೆಯಿಲ್ಲ. ಚಾಮರಾಜನಗರ ಜಿಲ್ಲೆಯದು ಬೇರೆ ಸಂಗತಿ. ಅಲ್ಲಿ ವಾಡಿಕೆಗಿಂತ ಕಡಿಮೆ ಮಳೆ.

ಸೂರ್ಯ ರಥ ಕೆಟ್ಟು ನಿಂತಲ್ಲಿ...
ಬಿಸಿಲಿನ ತಾಪ ವರ್ಷದಿಂದ ವರ್ಷಕ್ಕೆ ಏರುವ ಗುಲ್ಬರ್ಗ ಜಿಲ್ಲೆಯಲ್ಲಿ ವರ್ಷದ ಒಟ್ಟು ಸರಾಸರಿ ಮಳೆ ಸುಮಾರು 750 ಮಿ.ಮೀ. ಜೂನ್ನಲ್ಲಿ ಆರಂಭವಾಗುವ ಮುಂಗಾರು ಅಕ್ಟೋಬರ್ವರೆಗೆ ಚುರುಕಾಗಿರುತ್ತದೆ.

ಈ ಐದು ತಿಂಗಳ ಅವಧಿಯ ಮಳೆ ದಿನಗಳಲ್ಲಿ ಒಮ್ಮಮ್ಮೆ ಒಂದೇ ತಿಂಗಳು ಮಳೆ ಸುರಿದು, ಉಳಿದ ನಾಲ್ಕು ತಿಂಗಳು ಒಂದೇ ಒಂದು ಹನಿ ಬರುವುದಿಲ್ಲ. ಈವರೆಗೆ ಆಗಬೇಕಿದ್ದ ಸರಾಸರಿ 720 ಮಿ.ಮೀ ಪೈಕಿ 550 ಮಿ.ಮೀ. ಮಾತ್ರ ಸುರಿದಿದೆ. ಅಕ್ಟೋಬರ್ ಹೊತ್ತಿಗೆ ಅಗತ್ಯ ಪ್ರಮಾಣದ ಮಳೆಯಾಗಬಹುದು ಎಂಬ ನಿರೀಕ್ಷೆಯಿದೆ.

ಕರಾವಳಿಯಲ್ಲಿ ವರ್ಷ ಸಂಭ್ರಮ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿಯಿಂದ ಸೆಪ್ಟೆಂಬರ್ 12ರವರೆಗೆ 3204.6 ಮಿ.ಮೀ. ಮಳೆ ಸುರಿದಿತ್ತು. ಈ ವರ್ಷ ಈವರೆಗೆ 3446.1 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಮಳೆ ಸಂಬಂಧಿಸಿದ ಅನಾಹುತಗಳಲ್ಲಿ 9 ಮಂದಿ ಸತ್ತಿದ್ದರು, 1035 ಮನೆಗಳಿಗೆ ಹಾನಿಯಾಗಿತ್ತು (ರೂ 95.73 ಲಕ್ಷ ಹಾನಿ). ರಸ್ತೆ ಸಹಿತ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 35.97 ಕೋಟಿ ರೂಪಾಯಿ ಹಾನಿಯಾಗಿತ್ತು.

ಈ ವರ್ಷ 8 ಮಂದಿ ಸತ್ತಿದ್ದು, 490 ಮನೆಗಳಿಗೆ ಹಾನಿಯಾಗಿದೆ (ರೂ 47.82 ಲಕ್ಷ ಹಾನಿ). ಜನರ ಆಸ್ತಿಪಾಸ್ತಿಗಳಿಗೆ 36.83 ಕೋಟಿ ರೂ. ಹಾನಿಯಾಗಿದೆ. ಆನೆಕಲ್ ಹೊಳೆಗೆ ನಿರ್ಮಿಸಿದ್ದ ಕಿರು ಅಣೆಕಟ್ಟೆ ಕೊಚ್ಚಿ ಹೋಗಿದೆ. ವಿಟ್ಲ ಬಳಿಯ ಕರೋಪಾಡಿಯಲ್ಲಿ 75 ಸೆಂಟ್ಸ್ ಅಡಿಕೆ ತೋಟ ನೀರುಪಾಲಾಗಿದೆ.

ಹುಸಿಯಾಯಿತು ಮಳೆ...
ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿನ ಆರಂಭ ಚೆನ್ನಾಗಿಯೇ ಇತ್ತು. ರೈತರು ಭರದಿಂದಲೇ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದರು. ಆದರೆ, ಅವರ ಉತ್ಸಾಹಕ್ಕೆ ಮಳೆ ಕೃಪೆ ತೋರಲಿಲ್ಲ.

ಏಪ್ರಿಲ್ನಲ್ಲಿ ವಾಡಿಕೆಯಂತೆ 38.8 ಮಿ.ಮೀ. ಆಗಬೇಕಿತ್ತು, ಆದದ್ದು 48.3 ಮಿ.ಮೀ. ಮಳೆ. ಮೇನಲ್ಲಿ 73.8 ಮಿ.ಮೀ (84.2ಮಿ.ಮೀ ವಾಡಿಕೆ), ಜೂನ್ನಲ್ಲಿ 82.4 (68 ಮಿ.ಮೀ. ವಾಡಿಕೆ) ಮಿ.ಮೀ. ಮಳೆಯಾಗಿತ್ತು.

ಜುಲೈನಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿತು. ಬಿತ್ತನೆ ಮಾಡಿದ ಅರ್ಧದಷ್ಟು ಬೆಳೆಗಳು ಸೊರಗಿದವು. ಈವರೆಗೆ ಸಮರ್ಪಕವಾಗಿ ಮಳೆಯಾಗದೇ ತಡವಾಗಿ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ 100 ವರ್ಷಗಳಲ್ಲಿ 59 ಬಾರಿ ಬರ ಎದುರಿಸಿರುವ ಚಿತ್ರದುರ್ಗ ಜ್ಲ್ಲಿಲೆಯಲ್ಲಿ ಈ ಬಾರಿಯೂ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ನಾಲ್ಕು ವರ್ಷಕ್ಕೊಮ್ಮೆ ಚಿತ್ರದುರ್ಗ ಜಿಲ್ಲೆ ಈ ರೀತಿ ಬರ ಎದುರಿಸುವುದು ಸಾಮಾನ್ಯ. ಸಕಾಲಿಕವಾಗಿ ಮತ್ತು ಸಮರ್ಪಕವಾಗಿ ಮಳೆಯಾಗುವುದು ಅಪರೂಪ.

ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗದ ಉತ್ತರ ಭಾಗದ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆಯನ್ನು ರೈತರು ಬೆಳೆಯುತ್ತಾರೆ. ರಾಜ್ಯದಲ್ಲಿ ಮೊಳಕಾಲ್ಮುರು ತಾಲ್ಲೂಕು ಅತಿ ಕಡಿಮೆ ಮಳೆ ಬೀಳುವ ಪ್ರದೇಶ. ಈ ಬಾರಿ ಹಿರಿಯೂರು ತಾಲ್ಲೂಕು ಕೂಡ ಭೀಕರ ಬರ ಪರಿಸ್ಥಿತಿಗೆ ಸಿಲುಕಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 490 ಮಿ.ಮೀ. ಇದುವರೆಗೆ 234.3 ಮಿ.ಮೀ. ಮಳೆಯಾಗಿದೆ.

ಕೋಲಾರ ಜಿಲ್ಲೆಯಲ್ಲಿ ಇದುವರೆಗೆ ಶೇ.84ರಷ್ಟು ಬಿತ್ತನೆಯಾಗಿದೆ. ಅಸಮರ್ಪಕ ಮುಂಗಾರು ರೈತರಿಗೆ ಸಂಭ್ರಮ ತಂದಿಲ್ಲ. ಪ್ರಧಾನ ಬೆಳೆಯಾದ ರಾಗಿ ಬೆಳೆಯುವ ರೈತರು, ಸೂಕ್ತ ವಾತಾವರಣಕ್ಕಾಗಿ ಕಾದು ತಡವಾಗಿ ಬಿತ್ತನೆ ಮಾಡಿರುವ ರೈತರಿಗೆ ಅದೃಷ್ಟ ಪರೀಕ್ಷೆಯ ಕಾಲವಿದು. ಬಿತ್ತನೆಯಾಗಿರುವ ಬೆಳೆಗಳು ಮತ್ತೆ ಮಳೆಯ ನಿರೀಕ್ಷೆಯಲ್ಲಿವೆ.

ಕಳೆದ ವರ್ಷ ಸೆಪ್ಟೆಂಬರ್ ಮೊದಲ ವಾರದ ಹೊತ್ತಿಗೆ 100 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ 4.4 ಮಿ.ಮೀ. ಮಳೆ ಮಾತ್ರ ಸುರಿದಿದೆ. ಕಳೆದ ಆಗಸ್ಟ್ನಲ್ಲಿ 580 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ 412 ಮಿ.ಮೀ. ಸುರಿದಿದೆ. ಬರಗಾಲದ ನೆರಳಿಲ್ಲದಿದ್ದರೂ ರೈತರಿಗೆ ಚಿಂತೆ ಶುರುವಾಗಿದೆ. ಜಿಲ್ಲೆಯ ಬಹುತೇಕ ಕೆರೆಗಳಿಗೆ ನೀರು ಬಂದಿಲ್ಲ. ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬದಲು ರಾಗಿ ಬೆಳೆಯಲಾಗುತ್ತಿದೆ.

ಮಳೆ ಸುರಿಯುತ್ತಿದೆ. ಒಂದೇ ಸಮನೆ.
ಮಳೆ ಕಾಣೆಯಾಗಿದೆ. ಹಾಗೇ ಸುಮ್ಮನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.