ಶನಿವಾರ, ಮೇ 28, 2022
22 °C

ಮಹಾಭಾರತ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ ನಾಳೆಯಿಂದ ಮೂರು ದಿನ ಮಹಾಭಾರತ ನಾಟಕೋತ್ಸವ, ಯಕ್ಷಗಾನ ಮತ್ತು ‘ರಂಗಭೂಮಿಯ ಮೇಲೆ ಮಹಾಭಾರತದ ಪ್ರಭಾವ’ ಕುರಿತ ವಿಚಾರ ಮಂಥನ ಹಮ್ಮಿಕೊಂಡಿದೆ.ಇದು ಕಳೆದ 25 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಸಂಸ್ಥೆ. ಬೀದಿ ನಾಟಕ, ಮಕ್ಕಳ ರಂಗಮೇಳ, ವಿಚಾರ ಸಂಕಿರಣ, ಸಂವಾದ, ನಾಟಕ ವಾಚನ, ರಂಗ ಶಿಬಿರ, ಕವಿಗೋಷ್ಠಿಗಳನ್ನು ಆಯೋಜಿಸುತ್ತಿದೆ. ಯಯಾತಿ, ಸಿರಿಸಿಂಪಿಗೆ, ದೊಡ್ಡಪ್ಪ, ಆಮ್ರಪಾಲಿ, ಭಗವದಜ್ಜುಕೀಯ ನಾಟಕಗಳನ್ನು ರಂಗದ ಮೇಲೆ ತಂದಿದೆ.ಷೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್’ ನಾಟಕವನ್ನು ಕರ್ನಾಟಕದ ವಿಶಿಷ್ಟ ಜಾನಪದ ರಂಗಪ್ರಕಾರವಾದ ಮೂಡಲಪಾಯ ಯಕ್ಷಗಾನ ಶೈಲಿಯಲ್ಲಿ ರಂಗಕ್ಕೆ ತಂದು ಪಾಶ್ಚಾತ್ಯ ಮತ್ತು ಪೌರಾತ್ಯ ರಂಗಪ್ರಕಾರ, ರಂಗಶೈಲಿಗಳನ್ನು ಸಮನ್ವಯಗೊಳಿಸಿದೆ. ರಂಗಮಂಡಲದ ಈ ವರ್ಷದ ಮಹತ್ವದ ಯೋಜನೆಯೇ ಮಹಾಭಾರತ ನಾಟಕೋತ್ಸವ.ವ್ಯಾಸ ಮಹಾಕವಿಯ ಮಹಾಭಾರತ ಭಾರತದ ಜನಜೀವನ, ಸಂಸ್ಕೃತಿ, ಜನಪದದ ಮೇಲೆ ಯಾವ ಪ್ರಭಾವ ಬೀರಿದೆಯೊ ಅದೇ ರೀತಿ ಕನ್ನಡ ವೃತ್ತಿ ರಂಗಭೂಮಿ, ಕನ್ನಡ ಜನಪದ ರಂಗಭೂಮಿ ಹಾಗೂ ಆಧುನಿಕ ರಂಗಭೂಮಿಯ ಮೇಲೂ ಅಷ್ಟೇ ಪ್ರಭಾವ ಬೀರಿದೆ. ಮಹಾಭಾರತದ ಕಥೆ ಹಾಗೂ ಉಪಕಥೆಗಳ ಪ್ರಭಾವದಿಂದ ಅಸಂಖ್ಯ ನಾಟಕಗಳು ರಚನೆಯಾಗಿವೆ. ಕೃಷ್ಣ ಪಾರಿಜಾತದಂತಹ ರಂಗಪರಂಪರೆ ಜನಪದ ರಂಗಭೂಮಿಯಲ್ಲಿ ಜನ್ಮತಾಳಿದೆ. ಮಹಾಭಾರತ ಆಧರಿಸಿದ ಯಕ್ಷಗಾನ ಪ್ರಸಂಗ, ತೆಂಕುತಿಟ್ಟು, ಬಡಗತಿಟ್ಟು ಅಲ್ಲದೇ ಮೂಡಲಪಾಯ ಯಕ್ಷಗಾನ ಶೈಲಿಯಲ್ಲಿ, ದೊಡ್ಡಾಟದ ಪ್ರಕಾರಗಳಲ್ಲಿ ಜನಜನಿತವಾಗಿವೆ.ಭಾರತದ ವಿವಿಧ ಭಾಷೆಗಳಲ್ಲಿ ಮಹಾಭಾರತದ ಕುರಿತಾಗಿ ಇರುವ ನಾಟಕಗಳು, ಉಪಕಥೆಗಳು ಕನ್ನಡಕ್ಕೆ ಅನುವಾದಗೊಂಡಿವೆ. ಸಂಸ್ಕೃತ ಕವಿ ಭಾಸ ಮಹಾಭಾರತ ಆಧರಿಸಿ ಬರೆದ ‘ಸ್ವಪ್ನವಾಸವದತ್ತ’ ಒಂದು ಮನೋಜ್ಞ ನಾಟಕ. ನಾಟಕೋತ್ಸವದಲ್ಲಿ ಈ ನಾಟಕವೂ ಪ್ರದರ್ಶನಗೊಳ್ಳಲಿದೆ.‘ಸ್ವಪ್ನ ವಾಸವದತ್ತ’ ಕೌರಾಂಬಿಯ ರಾಜ ಉದಯನ ಮತ್ತು ಆತನ ರಾಣಿ ವಾಸವದತ್ತೆಯರ ಕಥೆ ಹೊಂದಿದೆ. ರಾಜ್ಯದ ಅಭ್ಯುದಯಕ್ಕಾಗಿ ಮಂತ್ರಿ ಯೌಗಂಧರಾಯಣ ಉದಯನನಿಗೆ ಮಗಧದ ರಾಜಕುಮಾರಿ ಪದ್ಮಾವತಿಯನ್ನು ಮದುವೆ ಮಾಡಿಸಲು ಯೋಜಿಸುತ್ತಾನೆ. ಎಷ್ಟೇ ಸಂಕಟವಾದರೂ ವಾಸವದತ್ತೆ ಈ ಯೋಜನೆಗೆ ಸಮ್ಮತಿಸುತ್ತಾಳೆ.ಯೌಗಂಧರಾಯಣ, ಉದಯನ ಬೇಟೆಗೆ ಹೋದ ಸಮಯದಲ್ಲಿ ವಾಸವದತ್ತೆ ಬೆಂಕಿಯಲ್ಲಿ ಬಿದ್ದು ಸತ್ತಳೆಂಬ ವದಂತಿ ಹಬ್ಬಿಸುತ್ತಾನೆ. ವಾಸವದತ್ತೆ ತನ್ನ ತಂಗಿಯೆಂದು, ಆಕೆಯ ಗಂಡ ದೂರ ದೇಶಕ್ಕೆ ಹೋಗಿದ್ದಾನೆ ಎಂದು ಪದ್ಮಾವತಿಯ ಬಳಿ ವಾಸವದತ್ತೆಯನ್ನು ಇಡುತ್ತಾನೆ. ಉದಯನ, ಪದ್ಮಾವತಿಯರ ಮದುವೆ ನಡೆಯುತ್ತದೆ. ಆದರೆ, ವಾಸವದತ್ತೆಯ ನೆನಪು ಉದಯನನಲ್ಲಿ ಹಸಿರಾಗಿರುತ್ತದೆ. ಒಮ್ಮೆ ಆತ ಒಬ್ಬನೇ ಮಲಗಿದ್ದಾಗ ಪದ್ಮಾವತಿ ಎಂದು ತಿಳಿದು ವಾಸವದತ್ತೆ ಅಲ್ಲಿಗೆ ಹೋಗುತ್ತಾಳೆ. ಆಗ ಆತ ವಾಸವದತ್ತೆ ಎಂದು ಕನವರಿಸುತ್ತಾನೆ. ಆಕೆ, ಗಲಿಬಿಲಿಗೊಳ್ಳುತ್ತಾಳೆ. ಅಂತ್ಯದಲ್ಲಿ ಯೌಗಂಧರಾಯಣ ತನ್ನ ತಂತ್ರ ವಿವರಿಸುತ್ತಾನೆ.ಬುಧವಾರ ಪ್ರೊ. ಸಿ. ವೀರಣ್ಣ ಅವರಿಂದ ‘ಮಹಾಭಾರತ ನಾಟಕೋತ್ಸವ’ ಉದ್ಘಾಟನೆ. ರಂಗನುಡಿ: ಬಿ.ಟಿ. ಮುನಿರಾಜಯ್ಯ, ಪ್ರೊ. ವಡ್ಡಗೆರೆ ನಾಗರಾಜಯ್ಯ. ಅಧ್ಯಕ್ಷತೆ: ಶಾಸಕ ಡಿ.ಎಸ್ ವೀರಯ್ಯ.ನಂತರ ದೃಶ್ಯ ತಂಡದಿಂದ ಭಾಸ ಮಹಾಕವಿಯ ‘ಸ್ವಪ್ನ ವಾಸವದತ್ತ’ (ನಿ: ದಾಕ್ಷಾಯಿಣಿ ಭಟ್) ಪ್ರದರ್ಶನ.   ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ ಮಲ್ಲೇಶ್ವರಂ, ಸಂಜೆ 6.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.