ಮಂಗಳವಾರ, ಮಾರ್ಚ್ 9, 2021
23 °C
ಮುಂಜಾನೆ–ಸಂಜೆ ದೇವಿಯ ಪಾದ ಸ್ಪರ್ಶಿಸುವ ಸೂರ್ಯ ರಶ್ಮಿ; ಇಷ್ಟಾರ್ಥ ಪೂರೈಸುವ ನಂಬಿಕೆ

ಮಹಾಲಕ್ಷ್ಮಿ ಮಂದಿರಕ್ಕೆ ಶತಮಾನೋತ್ಸವ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಕ್ಷ್ಮಿ ಮಂದಿರಕ್ಕೆ ಶತಮಾನೋತ್ಸವ ಸಂಭ್ರಮ

ವಿಜಯಪುರ: ಭಕ್ತ ಸಮೂಹದ ಇಷ್ಟಾರ್ಥ ನೆರವೇರಿಸುವ ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿನ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ಮಂದಿರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ.ತಾಯಿಯ ಅಭಿಲಾಶೆಯಂತೆ ಶತಮಾನದ ಹಿಂದೆ ನಿರ್ಮಿಸಿದ ದೇಗುಲವಿದು. ಆರಂಭದಿಂದಲೂ ಭಕ್ತರ ಇಷ್ಟಾರ್ಥ ನೆರವೇರಿಸುವ ದೇವಿ ಎಂದೇ ಹೆಸರಾಗಿದೆ. ಕೊಲ್ಹಾಪುರದ ಮಹಾಲಕ್ಷ್ಮೀ ದರ್ಶನ ಸಾಧ್ಯವಾಗದ ಬಹುತೇಕರು ಈ ದೇಗುಲಕ್ಕೆ ಭೇಟಿ ನೀಡುವುದು ವಿಶೇಷ.ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ವಕೀಲ ಪಾಂಡುರಂಗರಾವ ಅನಂತರಾವ ದೇಸಾಯಿ ತಮ್ಮ ತಾಯಿಯ ಇಚ್ಛೆಯಂತೆ 1915ರಲ್ಲಿ ಭಕ್ತಿಯಿಂದ ನಿರ್ಮಿಸಿದ ಮಂದಿರವಿದು. ಈ ಮಂದಿರದಲ್ಲಿ ಜೋಧಪುರದ ಕಲಾ ವಿದರಿಂದ ತಯಾರಿಸಲಾದ ದೇವಿಯ ಶಿಲಾ ಮೂರ್ತಿಯನ್ನು ದಕ್ಷಿಣಾಭಿಮುಖವಾಗಿ ಪ್ರತಿಷ್ಠಾಪಿಸಲಾಗಿದೆ. ಕೈಯಲ್ಲಿ ಗದೆ, ಢಾಲು ಹಿಡಿದು ಅಲಂಕೃತಳಾದ ದೇವಿಯ ಎಡ–ಬಲ ಭಾಗದಲ್ಲಿ ಅಮೃತ ಶಿಲೆಯ ಗಜ–ಸಿಂಹ ನೋಡಬಹುದು.ದೇಗುಲದ ಮೇಲ್ಭಾಗದ ಕಿಟಕಿಗಳಿಂದ ಮುಂಜಾನೆ–ಮುಸ್ಸಂಜೆ ಸೂರ್ಯ ರಶ್ಮಿಯ ಕಿರಣಗಳು ದೇವಿಯ ಚರಣಗಳನ್ನು ಸ್ಪರ್ಶಿಸುವುದು ಇಲ್ಲಿನ ಮತ್ತೊಂದು ವಿಶೇಷ. ಮಂದಿರದ ಹೊರಭಾಗದಲ್ಲಿ ಉಮಾ ಮಹೇಶ್ವರ, ಬಲಸೊಂಡಿಯ ಗಣಪ, ಸೂರ್ಯ, ನಾರಾಯಣ ಮೂರ್ತಿ ಸ್ಥಾಪಿಸಲಾಗಿದೆ.

ಈ ದೇವಾಲಯ 100 ವರ್ಷ ಗತಿಸಿದರೂ ನೈಸರ್ಗಿಕ ವಿಕೋಪಕ್ಕೆ ಹಾನಿಯಾಗದೆ ಸುರಕ್ಷಿತವಾಗಿದೆ ಎನ್ನುತ್ತಾರೆ ದೇಸಾಯಿ ಮನೆತನದ ಯುವಕ ಜಯದೀಪ ದೇಸಾಯಿ.ಈ ದೇಗುಲದ ಇನ್ನೊಂದು ವೈಶಿಷ್ಟ್ಯ ಬೇಸಿಗೆಯಲ್ಲಿ ತಂಪು, ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣ ಇರುವುದು. ನಾಲ್ಕು ಕಂಬದ ಮೇಲೆ ಮೂರು ಕಮಾನುಗಳನ್ನು ಹೊತ್ತು ನಿಂತ ಅಪ್ರತಿಮ ವಿನ್ಯಾಸ, ಹಾಸುಗಲ್ಲಿನ ಸಭಾಮಂಟಪದ ಈ ದೇವಾಲಯ ಕಲಾವಿದನ ನೈಪುಣ್ಯತೆ, ಶಿಸ್ತು ಬದ್ಧ ಕೆಲಸ, ತಾಂತ್ರಿಕತೆಗೆ ಹಿಡಿದ ಕೈಗನ್ನಡಿಯಂತಿದೆ ಎನ್ನುತ್ತಾರೆ ಅರ್ಚಕ ಲಕ್ಷ್ಮಣ ಭಟ್‌ ಉಪಾಧ್ಯೆ.ಸಂಕ್ರಮಣ, ಯುಗಾದಿ, ದೀಪಾವಳಿ, ಹಬ್ಬ, ಹುಣ್ಣಿಮೆಯ ಸಂದರ್ಭ, ಪ್ರತಿ ಮಂಗಳವಾರ–ಶುಕ್ರವಾರ ಹೆಚ್ಚಿನ ಸಂಖ್ಯೆಯ ಭಕ್ತರು ದರ್ಶನಕ್ಕೆ ಬರುತ್ತಾರೆ. ನವರಾತ್ರಿ ಸಂದರ್ಭದಲ್ಲಿ ಮಾತ್ರ ಈ ದೇವಾಲಯಕ್ಕೆ ಅಪಾರ ಭಕ್ತರು ಬರುವುದರಿಂದ ಜಾತ್ರೆ ಸ್ವರೂಪ ಪಡೆಯುತ್ತದೆ. ಇದೇ 26ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.24ರಂದು ದೇವತಾ ಸ್ಥಾಪನೆ, ನವಗ್ರಹ ಹೋಮ, ಪವಮಾನ ಹೋಮ ಶ್ರದ್ಧಾ ಭಕ್ತಿಯಿಂದ ನಡೆದವು. 25ರಂದು ಕುಂಕುಮಾರ್ಚನೆ, ರುದ್ರ ಹೋಮ, ಚಂಡಿ ಹೋಮ, ಕುಮಾರಿಕಾ ಪೂಜೆ ನಡೆಯಲಿದೆ. 26ರಂದು ಸೌರ ಹೋಮ, ಸೂಕ್ತ ಹೋಮ, ಪೂರ್ಣಾ ಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.