ಮಂಗಳವಾರ, ಮೇ 18, 2021
22 °C
ವ್ಯಕ್ತಿ ಸ್ಮರಣೆ

ಮಹಿಳಾ ಒಳನೋಟಗಳ ಕಣ್ಣು

ಬಿ.ಎಂ.ಹನೀಫ್ . Updated:

ಅಕ್ಷರ ಗಾತ್ರ : | |

ಮಹಿಳಾ ಒಳನೋಟಗಳ ಕಣ್ಣು

`49 ಸಾಯುವ ವಯಸ್ಸಲ್ಲ' ಎಂದು ಹೇಳುವುದು ಸುಲಭ. ಹಾಗೆಂದು ಸಾಯುವ ವಯಸ್ಸು ಇಂತಹದ್ದೇ ಎಂದು ನಿಖರವಾಗಿ ಹೇಳುವವರು ಯಾರು? ಋತುಪರ್ಣೊ ಘೋಷ್‌ಗೆ ಇದು ಗೊತ್ತಿತ್ತೋ ಏನೋ? ಮಾಡಬೇಕಾದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಭಾರತೀಯ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪೊಂದನ್ನು ಮೂಡಿಸಿ ಹಾಗೆಯೇ ಅವಸರದಿಂದ ಹೊರಟೇ ಹೋಗಿದ್ದಾರೆ. ಕಳೆದ ವಾರ ಋತುಪರ್ಣೊ ಘೋಷ್ ನಿಧನರಾದ ಸುದ್ದಿ ಬಂದಾಗ ಅವರ ಜತೆಗೆ ಕೆಲಸ ಮಾಡಿದ ಚಿತ್ರರಂಗದ ಎಲ್ಲ ಗಣ್ಯರದ್ದೂ ಒಂದೇ ಮಾತು- ಇದು ಖಂಡಿತಾ ಸಾಯುವ ವಯಸ್ಸಲ್ಲ!ಕೆಲವು ವ್ಯಕ್ತಿಗಳ ವಿಷಯದಲ್ಲಿ ಹಾಗೆ ಆಗುವುದಿದೆ. ಎಳವೆಯಲ್ಲೇ ಅಪಾರ ಸಾಧನೆ ಮಾಡಿದ ಅಂತಹವರ ಮೇಲೆ ಸಮಾಜಕ್ಕೆ ಇನ್ನೆಷ್ಟೋ ನಿರೀಕ್ಷೆಗಳಿರುತ್ತವೆ. ಅವುಗಳ ನಡುವೆಯೇ ತಟ್ಟನೆ ಆ ವ್ಯಕ್ತಿ ಇನ್ನಿಲ್ಲವಾದರೆ ನಂಬುವುದೇ ಕಷ್ಟವಾಗುತ್ತದೆ. 2 ದಶಕಗಳ ಸಿನಿಮಾ ರಂಗದ ವೃತ್ತಿಜೀವನದಲ್ಲಿ 20 ಸಿನಿಮಾಗಳನ್ನು ನಿರ್ದೇಶಿಸಿ, 12 ರಾಷ್ಟ್ರಪ್ರಶಸ್ತಿಗಳನ್ನು ಗೆದ್ದುಕೊಂಡ ಋತುಪರ್ಣೊ ಘೋಷ್ ಹೀಗೆ ಅಚಾನಕ್ಕಾಗಿ ನಿರ್ಗಮಿಸಿರುವುದು ಸಿನಿಮಾವೊಂದರ ಅನಿರೀಕ್ಷಿತ ತಿರುವಿನಂತೆಯೇ ಕಾಣಿಸುತ್ತದೆ. ಸಾಯುವುದಕ್ಕೆ ಎರಡು ದಿನಗಳ ಹಿಂದೆಯಷ್ಟೇ ಪತ್ತೇದಾರಿ ಕಾದಂಬರಿ ಆಧಾರಿತ `ಸತ್ಯಾನ್ವೇಷಿ' ಎಂಬ ಸಿನಿಮಾದ ಶೂಟಿಂಗನ್ನು ಅವರು ಮುಗಿಸಿದ್ದರು.ಭಾರತೀಯ ಹೊಸ ಅಲೆಯ ಸಿನಿಮಾಗಳ ಬಗ್ಗೆ ಮಾತನಾಡುವಾಗ ಬಂಗಾಳಿಗಳು ಬಹಳ ಮುಖ್ಯವಾಗಿ ಉಲ್ಲೇಖಿಸುವುದು ಸತ್ಯಜಿತ್ ರೇ ಮತ್ತು ಮೃಣಾಲ್ ಸೇನ್‌ರನ್ನು. ಒಂದು ಕಾಲದಲ್ಲಿ ಬಂಗಾಳಿ ಬಾಬುಗಳನ್ನು ಥಿಯೇಟರಿನತ್ತ ಸೂಜಿಗಲ್ಲಿನಂತೆ ಸೆಳೆದ ನಟ ಉತ್ತಮಕುಮಾರ್ ಕೂಡಾ ಅವರ ಆರಾಧ್ಯದೈವ. ಈ ಮೂವರೂ ಇಲ್ಲವಾದ ಬಳಿಕ ಸಿನಿಮಾಗಳಿಂದ ದೂರವಾದ ಬಂಗಾಳಿಗಳನ್ನು ಮತ್ತೆ ಬೆಳ್ಳಿತೆರೆಗೆ ಎಳೆದೊಯ್ದ ಖ್ಯಾತಿ ಋತುಪರ್ಣೊ ಅವರದ್ದು. 1992ರಲ್ಲಿ ಸತ್ಯಜಿತ್ ರೇ ಸತ್ತ ಬಳಿಕ, ಎರಡು ದಶಕಗಳ ಕಾಲ ಬಂಗಾಳಿ ಸಿನಿಮಾಗಳ ಬಗ್ಗೆ ಅಂತರರಾಷ್ಟ್ರೀಯ ವಿಮರ್ಶಕ ವಲಯ ಮಾತು ನಿಲ್ಲಿಸದಂತೆ ನೋಡಿಕೊಂಡವರು ಋತುಪರ್ಣೊ. ಅವರ ಕೆಲವು ಸಿನಿಮಾಗಳು ಸತ್ಯಜಿತ್ ರೇಯವರ ಸಿನಿಮಾಗಳ ಮುಂದುವರಿದ ಭಾಗದಂತೆಯೂ ಕಾಣಿಸಿದ್ದಿದೆ. ಬಂಗಾಳಿ ಮತ್ತು ಹಿಂದಿ ಭಾಷೆಗಳಲ್ಲಿ ಹೊಸ ಅಲೆಯ ಸಿನಿಮಾ ಚಳವಳಿಗೆ ಋತುಪರ್ಣೊ ಕೊಟ್ಟ ಕೊಡುಗೆ ಅಪಾರ.1994ರಲ್ಲಿ ಬಿಡುಗಡೆಯಾದ `ಉನಿಶ್ ಏಪ್ರಿಲ್' ಋತುಪರ್ಣೋಗೆ ಮೊದಲ ರಾಷ್ಟ್ರಪ್ರಶಸ್ತಿ ದೊರಕಿಸಿದ ಚಿತ್ರ. ಅದು ಇಂಗ್ಮರ್ ಬರ್ಗ್‌ಮನ್ ಅವರ `ಆಟಮ್ ಸೊನಾಟಾ' ಎಂಬ ಚಿತ್ರವನ್ನು ಸ್ವಲ್ಪ ಮಟ್ಟಿಗೆ ಆಧರಿಸಿದ ಚಿತ್ರ. 2003ರಲ್ಲಿ ತೆರೆ ಕಂಡ `ಶುಭೊ ಮುಹೂರತ್' ಬಂಗಾಳಿ ಸಿನಿಮಾ ಕೂಡಾ ಅಗಾಥಾ ಕ್ರಿಸ್ತಿಯ `ದಿ ಮಿರರ್ ಕ್ರಾಕ್ಡ್' ಸಿನಿಮಾದಿಂದ ಸ್ಫೂರ್ತಿ ಪಡೆದದ್ದು. ಹಿಂದಿ ಚಿತ್ರರಂಗದ ಇಬ್ಬರು ಮಹಾನ್ ನಟಿಯರಾದ ರಾಖಿ ಮತ್ತು ಶರ್ಮಿಳಾ ಠಾಗೋರ್ ಇಬ್ಬರನ್ನೂ ಅಭಿನಯದಲ್ಲಿ ಮುಖಾಮುಖಿ ಆಗಿಸಿದ ಸಿನಿಮಾವದು.

2004ರಲ್ಲಿ ಓ. ಹೆನ್ರಿಯ `ದಿ ಗಿಫ್ಟ್ ಆಫ್ ದಿ ಮ್ಯಾಗಿ' ಎಂಬ ಸಣ್ಣ ಕಥೆ ಆಧರಿತ `ರೈನ್‌ಕೋಟ್' ಎಂಬ ಹಿಂದಿ ಸಿನಿಮಾವಂತೂ ಅಜಯ್ ದೇವಗನ್ ಮತ್ತು ಐಶ್ವರ್ಯ ರೈಯವರ ನಟನಾ ಪ್ರತಿಭೆಗೆ ಹೊನ್ನಕಲಶ ಇಟ್ಟಿತು. 2007ರಲ್ಲಿ `ದಿ ಲಾಸ್ಟ್ ಲಿಯರ್' ತೆರೆಗೆ ಬಂದಾಗ ಅಮಿತಾಭ್ ಬಚ್ಚನ್ ಇಂತಹ ಕಲಾತ್ಮಕ ಪಾತ್ರ ಒಪ್ಪಿಕೊಂಡರೇ.. ಎಂದು ಬಾಲಿವುಡ್ ಮೂಗಿನ ಮೇಲೆ ಬೆರಳಿಟ್ಟಿತ್ತು. ಹಳೇಕಾಲದ ಶೇಕ್ಸ್‌ಪಿಯರ್ ನಾಟಕಗಳ ಹೀರೊ ಆಗಿ (ಉತ್ಪಲ್‌ದತ್‌ರ ನಾಟಕ ಆಧರಿಸಿದ್ದು) ಅಮಿತಾಭ್ ಈ ಚಿತ್ರದಲ್ಲಿ ನೀಡಿದ ಅಭಿನಯ ಇವತ್ತಿಗೂ ಸ್ಮರಣೀಯವಾದದ್ದು.ಈ ಮಧ್ಯೆ ದಹನ್ (1997), ಬರಿವಾಲಿ, ಅಸುಖ್ (1999), ಚೋಕರ್ ಬಾಲಿ (2003), ದೋಸಾರ್ (2006), ಚಿತ್ರಾಂಗದಾ (2012) ಮುಂತಾದ ಅತ್ಯುತ್ತಮ ಸಿನಿಮಾಗಳನ್ನೂ ಋತುಪರ್ಣೊ ನಿರ್ದೇಶಿಸಿದರು. ರವೀಂದ್ರನಾಥ ಟ್ಯಾಗೋರ್‌ರ ಕಾದಂಬರಿ ಆಧರಿತ `ಚೋಕರ್ ಬಾಲಿ'ಯಲ್ಲಿ ಐಶ್ವರ್ಯ ರೈ ನಿರ್ವಹಿಸಿದ ವಿಧವೆಯ ಪಾತ್ರವನ್ನು ನೋಡಿದರೆ ಆಕೆಯ ಅದ್ಭುತ ನಟನಾ ಸಾಮರ್ಥ್ಯದ ಅರಿವಾಗುತ್ತದೆ. ಲೋಕರ್ನೊ ಚಿತ್ರೋತ್ಸವದಲ್ಲಿ ಈ ಸಿನಿಮಾಕ್ಕೆ `ಗೋಲ್ಡನ್ ಲೆಪರ್ಡ್' ಪ್ರಶಸ್ತಿ ಸಿಕ್ಕಿತು.

1999ರಲ್ಲೇ `ಅಸುಖ್' ಚಿತ್ರದ ಮೂಲಕ ಏಡ್ಸ್ ಪೀಡಿತರ ಮಾನಸಿಕ ತುಮುಲಕ್ಕೆ ಧ್ವನಿ ಕೊಟ್ಟವರು ಋತುಪರ್ಣೊ. `ಬರಿವಾಲಿ' ಸಿನಿಮಾ ಕಿರಣ್ ಖೇರ್‌ಗೆ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟಿತು. `ಚಿತ್ರಾಂಗದಾ' ಎಂಬ ಬಂಗಾಳಿ ಸಿನಿಮಾದಲ್ಲಿ ಲಿಂಗ ಬದಲಾವಣೆ ಮಾಡಿಕೊಂಡ ಕೊರಿಯೊಗ್ರಾಫರ್‌ನ ಪಾತ್ರದಲ್ಲಿ ಸ್ವತಃ ಋತುಪರ್ಣೊ ಮಿಂಚಿದ್ದು ಆತನೊಳಗೆ ಒಬ್ಬ ಶ್ರೇಷ್ಠ ನಟನೂ ಅಡಗಿದ್ದಾನೆ ಎನ್ನುವುದನ್ನು ಜಗತ್ತಿಗೇ ತೋರಿಸಿಕೊಟ್ಟಿತು.ಕಲಾತ್ಮಕ ಚಿತ್ರಗಳ ಈ ನಿರ್ದೇಶಕನ ಜತೆಗೆ ಬಾಲಿವುಡ್‌ನ ಕಮರ್ಷಿಯಲ್ ಸಿನಿಮಾಗಳ ಬಹುತೇಕ ಖ್ಯಾತನಾಮರು ಇಮೇಜ್‌ನ ಹಂಗು ತೊರೆದು ನಟಿಸಿದ್ದು ವಿಶೇಷವೇ. ಹಾಗೆ ನಟಿಸಿದ ರಾಖಿ, ಶರ್ಮಿಳಾ ಠಾಗೋರ್, ಅಮಿತಾಭ್, ಐಶ್ವರ್ಯ ರೈ, ಕೊಂಕಣಾ, ರೀಮಾ, ಪ್ರಶೊನ್‌ಜಿತ್ ಮುಂತಾಗಿ ಎಲ್ಲರೂ ಹೇಳಿದ್ದು: `ಋತುಪರ್ಣೊ ನಮ್ಮಳಗಿನ ನಟನನ್ನು ನಾವೇ ಗುರುತಿಸುವಂತೆ ಮಾಡುತ್ತಾರೆ.'ಋತುಪರ್ಣೊರ ಮೇಲೆ ಸತ್ಯಜಿತ್ ರೇ, ಕುರೊಸಾವಾ, ಫೆಲಿನಿ, ಬರ್ಗ್‌ಮನ್ ಮುಂತಾದ ವಿಶ್ವಶ್ರೇಷ್ಠ ನಿರ್ದೇಶಕರ ಪ್ರಭಾವ ಇತ್ತು. ಇದರ ಹೊರತಾಗಿಯೂ ತಮ್ಮದೇ ಆದ ವಿಶಿಷ್ಟ ಛಾಪೊಂದನ್ನು ಅವರ ಚಿತ್ರಗಳಲ್ಲಿ ಕಾಣಬಹುದು. ಮುಖ್ಯವಾಗಿ ನೆರಳು-ಬೆಳಕಿನ ಖಚಿತ ಬಳಕೆ ಮತ್ತು ಅಭಿನಯದ ಉತ್ಕಟತೆ ಹೊಮ್ಮಿಸುವ ಪಾತ್ರಗಳು ಋತುಪರ್ಣೊರ ಸಿನಿಮಾಗಳಲ್ಲಿ ಗಮನ ಸೆಳೆಯುತ್ತವೆ. ಅವರ ನಿಧನದಿಂದ ಬಂಗಾಳಿ ಸಾಂಸ್ಕೃತಿಕ ವಲಯದಲ್ಲಿ ದೊಡ್ಡದೊಂದು ಶೂನ್ಯ ಸೃಷ್ಟಿಯಾಗಿದೆ ಎನ್ನುವುದಂತೂ ನಿಜ. ಅವರು ಸತ್ತ ದಿನ ಬಹುತೇಕ ಚಿತ್ರರಂಗದ ಎಲ್ಲ ಗಣ್ಯರೂ ಕಣ್ಣಂಚಿನಲ್ಲಿ ಹನಿ ನೀರು ಇಟ್ಟುಕೊಂಡೇ ಉದ್ವೇಗಕ್ಕೆ ಒಳಗಾಗಿ ಮಾತನಾಡಿದ್ದು ಅದನ್ನೇ ತೋರುತ್ತದೆ.ಋತುಪರ್ಣೊ ಕೇವಲ ಚಿತ್ರ ನಿರ್ದೇಶಕರಷ್ಟೇ ಆಗಿರಲಿಲ್ಲ. ಸಿನಿಮಾ ಮ್ಯಾಗಸಿನ್‌ಗಳ ಸಂಪಾದನೆ, ಸೆಲೆಬ್ರಿಟಿಗಳ ಸಂದರ್ಶನ, ಟೀವಿ ಚಾನೆಲ್‌ಗಳಲ್ಲಿ ಸೃಜನಶೀಲ ನಿರ್ದೇಶನ- ಹೀಗೆ ನಿರಂತರ ಚಟುವಟಿಕೆಗಳಲ್ಲಿ ತೊಡಗಿದ್ದರು. ಸ್ವತಂತ್ರ ವ್ಯಕ್ತಿತ್ವದ, ವೃತ್ತಿಪರ ಮತ್ತು ಸೈದ್ಧಾಂತಿಕ ಭಿನ್ನಮತವನ್ನು ಯಾವತ್ತೂ ಮುಚ್ಚಿಟ್ಟುಕೊಳ್ಳದ ಋತುಪರ್ಣೊ ತಮಗೆ ಇಷ್ಟ ಬಂದಂತೆ ಬದುಕಿದವರು. ಸಲಿಂಗಿ ಎಂದು ಗೊತ್ತಿದ್ದರೂ ಚಿತ್ರರಂಗದ ಎಲ್ಲರೂ ಗೌರವದಿಂದ ಕಾಣುವಂತಹ ವ್ಯಕ್ತಿತ್ವ ಬೆಳೆಸಿಕೊಂಡಿದ್ದ ಋತುಪರ್ಣೊ ಎಷ್ಟೋ ಸಲ ಸಲ್ವಾರ್ ಕಮೀಜ್ ಧರಿಸಿ ಶೂಟಿಂಗ್ ಸ್ಥಳಕ್ಕೆ ಧಾವಿಸುತ್ತಿದ್ದರು. ಅವರ ವ್ಯಕ್ತಿತ್ವದಲ್ಲಿದ್ದ ಹೆಣ್ಣಿನ ಅಂಶಗಳೇ, ಅವರ ಸಿನಿಮಾಗಳಲ್ಲೂ ಹೆಣ್ಣಿನ ಒಳತೋಟಿಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಲು ನೆರವಾಗಿದ್ದು ಸುಳ್ಳಲ್ಲ.

-ಬಿ.ಎಂ.ಹನೀಫ್ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.