ಸೋಮವಾರ, ಮೇ 10, 2021
22 °C

`ಮಹಿಳಾ ವಿವಿಯಲ್ಲಿ ಸೌರ ವಿದ್ಯುತ್ ಘಟಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ರೂ.48 ಲಕ್ಷ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದನೆಯ ಮೂರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.ಈ ಮೂರು ಘಟಕಗಳು ಕಾರ್ಯನಿರ್ವಹಣೆ ಆರಂಭಿಸಿದರೆ ತಲಾ 15 ವಾಟ್‌ನ 100 ಸಿಎಫ್‌ಎಲ್ ಬಲ್ಬ್ ಹಾಗೂ 50 ಫ್ಯಾನ್‌ಗಳನ್ನು ನಿತ್ಯ ಏಳರಿಂದ ಎಂಟು ಗಂಟೆಗಳವರೆಗೆ ಬಳಸಬಹುದಾಗಿದೆ. ಕ್ಯಾಂಪಸ್‌ನಲ್ಲಿರುವ ಎಲ್ಲ ಹಾಸ್ಟೆಲ್‌ಗಳಿಗೆ ಸೌರ ವಿದ್ಯುತ್ ಪೂರೈಸುವುದರಿಂದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಈ ಯೋಜನೆಗೆ ಸರ್ಕಾರ ಶೇ.30ರಷ್ಟು ಸಹಾಯಧನ ನೀಡಿದೆ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವಿವಿಯ ದಶಮಾನೋತ್ಸವದ ಸಮಾರೋಪ ಸಮಾರಂಭ ಇದೇ 21ರಂದು ನಡೆಯಲಿದ್ದು, ಅದರ ಅಂಗವಾಗಿ ವಿಶ್ವವಿದ್ಯಾಲಯದ ಹತ್ತು ವರ್ಷಗಳ ಸಾಧನೆಗಳ ವಿವರಗಳನ್ನೊಳಗೊಂಡ ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ ಎಂದರು.ಬಜೆಟ್‌ನಲ್ಲಿ ಸರ್ಕಾರ ವಿವಿಗೆ ರೂ.10 ಕೋಟಿ ವಿಶೇಷ ಅನುದಾನ ಪ್ರಕಟಿಸಿದೆ. ಹೊಸದಾಗಿ ಮಂಡಲಿಸಲಿರುವ ಬಜೆಟ್‌ನಲ್ಲಿ ರೂ.25 ಕೋಟಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.ಚೆಕ್ ಡ್ಯಾಮ್:  ಜ್ಞಾನ ಶಕ್ತಿ ಆವರಣದಲ್ಲಿ ಮಳೆ ನೀರು ಸಂಗ್ರಹಣೆಗೆ ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗುವುದು. ಇದರಿಂದ ಜೈವಿಕ ಇಂಧನಕ್ಕೆ ಪೂರಕವಾದ ಹೊಂಗೆ ಗಿಡ ಬೆಳೆಸಲು ಅನುಕೂಲವಾಗಲಿದೆ. ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕೋಶದಿಂದ ಅಂಬ್ಯುಲೆನ್ಸ್ ಸೇರಿದಂತೆ ಸುಸಜ್ಜಿತ ಆರೋಗ್ಯ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.ಮಹಿಳಾ ವಿಶ್ವವಿದ್ಯಾಲಯಕ್ಕೆ ಆವರಣ ಗೋಡೆ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಹೈ ಮಾಸ್ಟ್ ವಿದ್ಯತ್‌ದೀಪ ಸೌಲಭ್ಯ ಕಲ್ಪಿಸಲು ರೂ. 9.5 ಕೋಟಿ ಮೊತ್ತದ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜ್ಞಾನ ಶಕ್ತಿ ಆವರಣದಲ್ಲಿ  ರೂ.4.91ಕೋಟಿ ವೆಚ್ಚದಲ್ಲಿ ಸಮಾಜ ವಿಜ್ಞಾನ, ಇಂಗ್ಲೀಷ್ ಹಾಗೂ ಗ್ರಂಥಾಲಯ ವಿಭಾಗದ ಕಟ್ಟಡಗಳ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಉದ್ಘಾಟನೆ ನಡೆಯಲಿದೆ ಎಂದು ಚಂದಾವರಕರ ಹೇಳಿದರು.ಕುಲಸಚಿವ ಪ್ರೊ.ಎಸ್.ಎ. ಖಾಜಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಎಂ. ಚಂದುನವರ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿಜಯಾ ಕೋರಿಶೆಟ್ಟಿ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಉಪಾಧ್ಯಾಯ ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.