ಮಂಗಳವಾರ, ಮೇ 24, 2022
30 °C

ಮಹಿಳೆಯರಿಗೆ ಉಡಿ ತುಂಬಿ, ಹೋಳಿಗೆ ಊಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಗುರುವಾರ, ಕೃಷ್ಣೆಯ ದಂಡೆಯ ಮೇಲೆ ಜನವೋ ಜನ. ಎಲ್ಲಿ ನೋಡಿದರೂ ಭಕ್ತರ ಪರಾಕಾಷ್ಟೆ. ವಿಜಾಪುರ, ಬಾಗಲಕೋಟೆ ಜಿಲ್ಲೆಯ ನಾನಾ ಗ್ರಾಮಗಳಿಂದ ಆಗಮಿಸಿದ ಭಕ್ತರ ದಂಡು ಎಲ್ಲೆಡೆಯೂ ಕಂಡು ಬಂತು.ಇದೆಲ್ಲವೂ ಆಲಮಟ್ಟಿಯ ಸನಿಹದಲ್ಲಿಯೇ ಇರುವ ಕೃಷ್ಣಾ ತೀರದ ಚಂದ್ರಮ್ಮೋ ದೇವಿ ದೇವಸ್ಥಾನದ ಸಮೀಪ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದ ಚಕ್ರವರ್ತಿ ದಾನೇಶ್ವರಿ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಅಧಿಕ ಮಾಸದ ಅಂಗವಾಗಿ ಇಲ್ಲಿಯ ಚಂದ್ರಗಿರಿ ಮಠದಲ್ಲಿ ಗುರುವಾರ 2000ಕ್ಕೂ ಅಧಿಕ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ದೇವಿಗೆ ನೈವೇದ್ಯೆ ಅರ್ಪಿಸುವ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಬಬಲಾದಿ ಶಿವಶರಣ ಪಂಕ್ತಿಯ ಮಠವಾಗಿರುವ ಬಸವಗೋಪಾಲ ನೀಲಮಾಣಿಕ ಮಠ ಆಲಮಟ್ಟಿಯಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.ಆದಿಶಕ್ತಿ ಚಂದ್ರಮ್ಮೋ ದೇವಿಯ ಸನ್ನಿಧಾನದಲ್ಲಿ ಈ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳಳಾಗುತ್ತಿದೆ. ಅದರ ಅಂಗವಾಗಿ ಭೂಮಾತೆಯನ್ನು ಶಾಂತಗೊಳಿಸುವ ಸಲುವಾಗಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿ ತುಂಬಿ, ಸುಮಾರು 3000 ಕ್ಕೂ ಅಧಿಕ ಭಕ್ತಾದಿಗಳಿಗೆ ಹೋಳಿಗೆ ಊಟ ಮಾಡಿಸಿದ್ದು ವಿಶೇಷವಾಗಿತ್ತು.ಸಾನಿಧ್ಯ ವಹಿಸಿದ್ದ ಮಠದ ಸ್ವಾಮೀಜಿ, ದಾಸೋಹ ರತ್ನ ಚಕ್ರವರ್ತಿ ದಾನೇಶ್ವರರು, ಹಲವಾರು ಧಾರ್ಮಿಕ ಕಾರ್ಯಕ್ರಮ ಮೂಲಕ ಜನತೆಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮನೋಭಾವನೆ ತುಂಬಲು ಮಠ ಕಾರ್ಯ ನಿರ್ವಹಿಸುತ್ತಿದ್ದು, ಅದರ ಅಂಗವಾಗಿ ಉಡಿ ತುಂಬುವ ಕಾರ್ಯಕ್ರಮ ಹಾಗೂ  ಅಖಂಡ ಭಜನೆ, ಅಖಂಡ ಧಾರ್ಮಿಕ ಪಾರಾಯಣವನ್ನು ಏರ್ಪಡಿಸಲಾಗಿದೆ ಎಂದರು. ಚಂದ್ರಮ್ಮೋ ದೇವಿಯ ಆಶೀರ್ವಾದದ ಫಲವಾಗಿ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಚಂದ್ರಗಿರಿ ಮಠದಲ್ಲಿಯೂ ನಡೆಸಲಾಗುತ್ತಿದೆ ಎಂದರು.ದಾಸೋಹ ಹಾಗೂ ಧಾರ್ಮಿಕ ಮಾಸಾಚರಣೆ ಅಂಗವಾಗಿ ಜಮಖಂಡಿ ತಾಲ್ಲೂಕಿನ ನಾನಾ ಗ್ರಾಮಗಳು, ಗೋಕಾಕ ತಾಲ್ಲೂಕು ಹಾಗೂ ಕೊಲ್ಹಾಪುರದಲ್ಲಿಯೂ ಪಾರಮಾರ್ಥಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಚಂದ್ರಗಿರಿಯ ಧರ್ಮಾಧಿಕಾರಿ ಚಂದ್ರಕಾಂತ ದೇಸಾಯಿ, ನಂದಪ್ರಿಯ ದೇಸಾಯಿ, ಪರಪ್ಪಾ ಪಾಲಬಾವಿ, ರವಿ ಕೋತಿನ, ಕಸ್ತೂರಿ ಸಂತರು, ಅನಿಲಕ ಕ್ಷೀರಸಾಗರ, ಮಡಿವಾಳಪ್ಪ ಮಡಿವಾಳರ, ಗದ್ದೆಪ್ಪ ತಳವಾರ, ಬಸಪ್ಪ ಈರಗಾರ, ಎಸ್.ಎಸ್. ಘೋರ್ಪಡೆ ಸೇರಿದಂತೆ ಮೊದಲಾದವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.