ಶನಿವಾರ, ಮೇ 8, 2021
23 °C

ಮಹೇಶ್ ಮನೆಯಲ್ಲಿ ದಾಖಲೆ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಬಂಧನದಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರ ಮೇಲೂ ಕಣ್ಣಿರಿಸಿರುವ ಸಿಬಿಐ,  ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರಿನಲ್ಲಿರುವ ಮೂವರ ಮನೆಗಳ ಮೇಲೆ ಸೋಮವಾರ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆಗೆ ಜನಾರ್ದನರೆಡ್ಡಿ ಪರ ಈ ಭಾಗದಲ್ಲಿ ಕೆಲಸ ಮಾಡಿದ ಆರೋಪ ಎದುರಿಸುತ್ತಿರುವ ಹೊಸಪೇಟೆಯ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಹಾಗೂ ಸಂಡೂರಿನ ಎಸ್‌ಟಿಡಿ ಮಂಜುನಾಥ ಅವರ ಮನೆಗಳ ಮೇಲೆ ಸೀತಾರಾಂ ನೇತೃತ್ವದ ಸಿಬಿಐ ತಂಡ ದಾಳಿ ನಡೆಸಿದಾಗ ಮೂವರೂ ಮನೆಯಲ್ಲಿರಲಿಲ್ಲ.ಬೆಳಿಗ್ಗೆ 6ರಿಂದ 10ರ ಅವಧಿಯೊಳಗೆ ಮೂರು ಕಡೆಗಳಲ್ಲಿ ಪ್ರತ್ಯೇಕವಾಗಿ ದಾಳಿ ನಡೆಸಲಾಗಿದ್ದು, ಸಂಜೆಯವರೆಗೂ ಮಹತ್ವದ ದಾಖಲೆಗಳನ್ನು ತಪಾಸಣೆ ಮಾಡಲಾಗಿದೆ.ಹೊಸಪೇಟೆಯ ರಾಜೀವನಗರದಲ್ಲಿರುವ ಸ್ವಸ್ತಿಕ್ ನಾಗರಾಜ್ ಅವರ ಬೃಹತ್ ಬಂಗಲೆಗೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದ ವೇಳೆ ಕೇವಲ ಆತನ ಸೋದರನ ಪತ್ನಿ ಮಾತ್ರ ಇ್ದ್ದದರು. ಅವರೇ ಕೆಲ ವಿವರಗಳನ್ನು ನೀಡಿ, ದಾಖಲೆ ಒದಗಿಸಿದರು ಎನ್ನಲಾಗಿದೆ.ಜೆ.ಪಿ. ನಗರದಲ್ಲಿರುವ ಖಾರದಪುಡಿ ಮಹೇಶ್ ಅವರ ಭವ್ಯ ಬಂಗಲೆಯಲ್ಲಿ ಇದ್ದ ತಾಯಿ, ಪತ್ನಿ, ಹಾಗೂ ಸಂಬಂಧಿಕರು ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಂಡೂರಿನ ಟೀಚರ್ಸ್ ಕಾಲೋನಿಯಲ್ಲಿರುವ ಎಸ್‌ಟಿಡಿ ಮಹೇಶ್ ಅವರ ಭಾರಿ ಮನೆಯ ಮೇಲೆ ದಾಳಿ ನಡೆದಾಗ ತಂದೆ- ತಾಯಿ, ಪತ್ನಿ ಇದ್ದರು.ಇವರೆಲ್ಲರಿಗೂ ನೋಟಿಸ್ ಜಾರಿ ಮಾಡಿರುವ ಸಿಬಿಐ ಅಧಿಕಾರಿಗಳು ಮಂಗಳವಾರ ಬಳ್ಳಾರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಲೋಕಾಯಕ್ತ ವರದಿಯಲ್ಲಿ: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ  ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಈ ಮೂವರ ಹೆಸರೂ ಪ್ರಸ್ತಾಪವಾಗಿದೆ. ರೇಸಿಂಗ್ ಕಾಂಟ್ರಾಕ್ಟ್, ಟ್ರಾನ್ಸ್‌ಪೋರ್ಟ್ ರಿಸ್ಕ್ ವ್ಯವಹಾರವನ್ನು ಇವರೇ ನಿರ್ವಹಿಸಿದ್ದಾಗಿ ತಿಳಿಸಲಾಗಿದೆ.ಬಂಧಿತ ಜನಾರ್ದನರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿ ಅವರ ಆಪ್ತರಾಗಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಗುರುಲಿಂಗನಗೌಡ, ಭಾಸ್ಕರರೆಡ್ಡಿ,  ಕುರುಗೋಡಿನ ಆನಂದ ಚೌಧರಿ ಅವರ ಮನೆ ಹಾಗೂ ರೈಸ್ ಮಿಲ್ ಮೇಲೆ ದಾಳಿ ನಡೆಸಿದ ಸಿಬಿಐ ಇದೀಗ ವ್ಯಾಪಕ ಗಣಿಗಾರಿಕೆ ನಡೆಯುತ್ತಿದ್ದ ಸಂಡೂರು ಮತ್ತು ಹೊಸಪೇಟೆ ಭಾಗದಲ್ಲಿ ಲಗ್ಗೆ ಇರಿಸಿದೆ.ರೆಡ್ಡಿದ್ವಯರ ಬಂಧನದ ನಂತರ ಬಳ್ಳಾರಿಯಲ್ಲೇ ಬೀಡುಬಿಟ್ಟಿದೆ ಎನ್ನಲಾದ ಸಿಬಿಐ ಅಧಿಕಾರಿಗಳ ತಂಡ, ಅವರ ಆಪ್ತರ ಚಲನವಲನವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸೂಕ್ತ ಮಾಹಿತಿ ಸಂಗ್ರಹಿಸಿದ್ದು, ಇನ್ನೂ ಕೆಲವರ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳೂ ದಟ್ಟವಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.