ರಾಹುಲ್ ದ್ರಾವಿಡ್ ತಮ್ಮ ಬ್ಯಾಟನ್ನು ಕೆಳಗಿಡುವುದರೊಂದಿಗೆ ಭಾರತವಷ್ಟೇ ಅಲ್ಲ, ಇಡೀ ವಿಶ್ವ ಕ್ರಿಕೆಟ್ನ ಒಬ್ಬ ಸಭ್ಯ, ಪರಿಪೂರ್ಣ ಆಟಗಾರ ಆಟಕ್ಕೆ ವಿದಾಯ ಹೇಳಿದಂತಾಗಿದೆ. ಟೆಸ್ಟ್ ಹಾಗೂ ಇತರ ಪ್ರಥಮ ದರ್ಜೆ ಪಂದ್ಯಗಳಿಂದ ನಿವೃತ್ತರಾಗುವ ಅವರ ನಿರ್ಧಾರ ದಿಢೀರನೆ ಬಂದದ್ದಲ್ಲ. ಇನ್ನೂ ಒಂದೆರಡು ವರ್ಷ ಆಡುವ ಸಾಮರ್ಥ್ಯ ಅವರಲ್ಲಿದ್ದರೂ 16 ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ನಂತರ, 39ನೇ ವಯಸ್ಸಿನಲ್ಲಿ ಯುವ ಆಟಗಾರರಿಗೆ ದಾರಿ ಮಾಡಿಕೊಡುವ ಅವರ ಯೋಚನೆ ಸರಿಯಾಗಿಯೇ ಇದೆ. ಅವರನ್ನು ಕೇವಲ ಒಬ್ಬ ಕ್ರಿಕೆಟ್ ಆಟಗಾರನಾಗಿ ನೋಡಿದರೆ ಸಾಲದು. ಭಾರತದ ಹೆಮ್ಮೆಯ ಪುತ್ರ ಎನಿಸಿಕೊಳ್ಳುವ ಎಲ್ಲ ಗುಣಲಕ್ಷಣಗಳೂ ಅವರಲ್ಲಿವೆ. ಅವರ ನಡೆ ನುಡಿ, ಆಡಿದ ರೀತಿ, ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲ, ಎಲ್ಲ ಕ್ರೀಡಾಪಟುಗಳಿಗೆ ಮಾದರಿ. ಬ್ಯಾಟಿಂಗ್ ಸರದಿಯಲ್ಲಿ ಅವರು ಸಾಮಾನ್ಯವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೂ ಅಗತ್ಯ ಬಿದ್ದಾಗ, ಆರಂಭ ಆಟಗಾರನಾಗಿ, ವಿಕೆಟ್ ಕೀಪರ್ ಆಗಿ, ಆಗೊಮ್ಮೆ ಈಗೊಮ್ಮೆ ಬೌಲರ್ ಆಗಿ ಆಡಿದ್ದು ಹಾಗೂ ಸ್ಲಿಪ್ನಲ್ಲಿ ನಿಂತು ವಿಶ್ವ ದಾಖಲೆಯ ಕ್ಯಾಚುಗಳನ್ನು ಹಿಡಿದದ್ದು ಅದ್ಭುತ ಸಾಧನೆ. ಟೆಸ್ಟ್ ಆಗಿರಲಿ, ಒಂದು ದಿನದ ಪಂದ್ಯವಾಗಿರಲಿ ಅಥವಾ ರಣಜಿ ಟ್ರೋಫಿ ಪಂದ್ಯವಾಗಿರಲಿ, ಅದನ್ನವರು ಗಂಭೀರವಾಗಿಯೇ ಪರಿಗಣಿಸುತ್ತಿದ್ದರು. ಆಟದಲ್ಲಿ ನೂರಕ್ಕೆ ನೂರರಷ್ಟು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಅವರು ಯಾವತ್ತೂ ಹಿಂದೆ ಸರಿದವರಲ್ಲ. ಈ ಶಿಸ್ತೇ ಅವರನ್ನು ಒಬ್ಬ ಮಹಾನ್ ಆಟಗಾರನನ್ನಾಗಿ ಮಾಡಿದ್ದು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 24 ಸಾವಿರಕ್ಕೂ ಹೆಚ್ಚು ರನ್ನುಗಳು, 48 ಶತಕಗಳು ಹಾಗೂ 406 ಕ್ಯಾಚುಗಳು ಅವರ ಸಾಧನೆಯನ್ನು ಹೇಳುತ್ತವೆ. ಕ್ರಿಕೆಟ್ನಲ್ಲಿ ಇಂದು ತುಂಬಿರುವ ಹಣ ಹಾಗೂ ಖ್ಯಾತಿಗೆ ಮರುಳಾಗಿ ಮಕ್ಕಳನ್ನು ಕ್ರಿಕೆಟ್ಗೆ ನೂಕುವ ತಂದೆ ತಾಯಂದಿರು ತಮ್ಮ ಮಕ್ಕಳು ರಾಹುಲ್ ಅವರಂತೆ ಆಗಬೇಕು ಎಂದು ಯೋಚಿಸಬೇಕು.

ರಾಹುಲ್ ಜೊತೆ ಎರಡು ದಶಕಗಳ ಕಾಲ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ ಆಡಿರುವ ವಿ.ವಿ.ಎಸ್. ಲಕ್ಷ್ಮಣ್ ಹೇಳುವಂತೆ, ಭಾರತದ ಕ್ರಿಕೆಟ್ ಒಬ್ಬ ರಾಷ್ಟ್ರದ ಹಿರಿಮೆಗಾಗಿ ಆಡುವ ಆಟಗಾರನನ್ನು ಕಳೆದುಕೊಳ್ಳುತ್ತಿದೆ. ವ್ಯಕ್ತಿಗಿಂತ ಆಟ ದೊಡ್ಡದು ಎಂಬುದನ್ನು ಬಲವಾಗಿ ನಂಬಿದ್ದ ರಾಹುಲ್ ಎಂಥ ಸಂದರ್ಭದಲ್ಲೂ ಆಟಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡವರಲ್ಲ. ಪಕ್ಕಾ ವೃತ್ತಿಪರ ಮನೋಭಾವದಲ್ಲೂ ಸಜ್ಜನಿಕೆ ಇದ್ದೇ ಇರುತ್ತಿತ್ತು. ಇದರಿಂದಾಗಿಯೇ ಅವರು ಬೇರೆ ಎಲ್ಲರಿಗಿಂತ ಭಿನ್ನರಾಗಿ ಕಂಡರು. ಒಬ್ಬ ಕ್ರೀಡಾಪಟು ರಾಷ್ಟ್ರದ ಆಸ್ತಿ ಎನಿಸಿಕೊಳ್ಳಲು ರೂಪಿಸಿಕೊಳ್ಳಬೇಕಾದ ವ್ಯಕ್ತಿತ್ವವನ್ನು ರಾಹುಲ್ ಅವರಲ್ಲಿ ಕಾಣಬಹುದು. ರಾಹುಲ್ ಐಪಿಎಲ್ನಲ್ಲಿ ತಮ್ಮ ಖುಷಿಗಾಗಿ ಆಡುವುದನ್ನು ಮುಂದುವರಿಸಲಿದ್ದಾರೆ. ಇವರ ನಿವೃತ್ತಿಯಿಂದ ಕ್ರಿಕೆಟ್ ರಂಗ ಬಡವಾದರೂ ಅವರಿಂದ ಮುಂದೆ ಬೇರೆ ರೀತಿಯ ಉಪಯುಕ್ತ ಕಾಣಿಕೆ ಬರುವುದರಲ್ಲಿ ಅನುಮಾನವಿಲ್ಲ. ರಾಹುಲ್ ದ್ರಾವಿಡ್ ನಿಮಗೆ ಶುಭವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.