ಸೋಮವಾರ, ಮಾರ್ಚ್ 8, 2021
24 °C

ಮಾನಸ ಸರೋವರ

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

ಮಾನಸ ಸರೋವರ

ಈ ಬೆಡಗಿ ಓದಬಯಸಿದ್ದು ಇಂಗ್ಲಿಷ್ ಸಾಹಿತ್ಯವನ್ನು. ಆದರೆ ಬಣ್ಣದ ಲೋಕ ಕೈಬೀಸಿ ಕರೆಯಿತು. ಆಗ ಅಮ್ಮ ವ್ಯಕ್ತಪಡಿಸಿದ ಕಳವಳಕ್ಕೆ ಸ್ಪಂದಿಸಿ, ಒಂದು ವರ್ಷ ಸಿನಿಮಾ ಲೋಕಕ್ಕೆ ಹೋಗುವೆ; ಒಳ್ಳೆಯ ಅವಕಾಶ ಸಿಗದಿದ್ದರೆ ವಾಪಸ್ ಬರುವೆ ಎಂದು ಸಮಾಧಾನ ಮಾಡಿದ್ದಳು. ಈಗ ಆಕೆ ಎರಡು ಸಿನಿಮಾಗಳಿಗೆ ನಾಯಕಿ.ಪಕ್ಕದ ತೆಲುಗು ಚಿತ್ರರಂಗದಲ್ಲಿ ಪ್ರಿನ್ಸ್ ಜತೆ ‘ರೊಮಾನ್ಸ್’ ಮಾಡುವ ಮೂಲಕ ಯುವಪೀಳಿಗೆಯನ್ನು ಸೆಳೆದಿದ್ದ ಮಾನಸ ಹಿಮವರ್ಷ, ಸ್ಯಾಂಡಲ್‌ವುಡ್‌ಗೆ ಬರಲಿಕ್ಕೆಷ್ಟು ಹೊತ್ತು? ಪ್ರಜ್ವಲ್ ದೇವರಾಜ್ ಜತೆ ‘ಮೃಗಶಿರ’ದಲ್ಲಿ ಅಭಿನಯಿಸುತ್ತಿರುವ ಮಾನಸ, ಅದರಲ್ಲಿ ಬುಡಕಟ್ಟು ಹುಡುಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಚೆಗಷ್ಟೇ ಚಿತ್ರೀಕರಣ ಮುಗಿಸಿದ ಈ ಸಿನಿಮಾ ತಮಗೆ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶ ಕಲ್ಪಿಸಿಕೊಡಬಹುದು ಎಂಬ ಕನಸು ಅವರದು.ಮೂಲತಃ ವಿಜಯವಾಡ ಪಟ್ಟಣದ ಮಾನಸ, ಓದಿದ್ದೆಲ್ಲ ಚೆನ್ನೈನಲ್ಲಿ. ಅಪ್ಪ ಪ್ರೊಫೆಸರ್. ಅಮ್ಮ ಸಹ ಉದ್ಯೋಗಿ. ಚೆನ್ನೈನಲ್ಲಿ ಶಾಲೆ–ಕಾಲೇಜು ಮುಗಿಸಿದ ಬಳಿಕ ಔಷಧ ವಿಜ್ಞಾನ ಓದಲೆಂದು ಹೈದರಾಬಾದಿಗೆ ಬಂದರು. ಆದರೆ ಅದೇಕೋ ಹೊಂದಿಕೆಯಾಗಲಿಲ್ಲ. ಇಂಗ್ಲಿಷ್ ಸಾಹಿತ್ಯದ ಆಸಕ್ತಿ ಮತ್ತೆ ಮತ್ತೆ ಸೆಳೆಯಿತು. ಅಲ್ಲಿಗೇ ಅದನ್ನು ಬಿಟ್ಟು, ಇನ್ನೊಂದು ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಆಯ್ಕೆ ಮಾಡಿಕೊಂಡು ಪದವಿ ವಿದ್ಯಾಭ್ಯಾಸ ಮುಂದುವರಿಸಿದರು.ಸಿನಿಮಾಕ್ಕೆ ಬರುವ ಕಲ್ಪನೆ ಮಾನಸ ಅವರಲ್ಲಿ ಇರಲೇ ಇಲ್ಲ. ಇದಕ್ಕೆಲ್ಲ ನಂಟು ಬೆಸೆದಿದ್ದು ಟೀವಿ ಚಾನೆಲ್. ತೆಲುಗಿನ ‘ಮಾ’ ಚಾನೆಲ್‌ನ ‘ಚಲನ್ ಟ್ರೀ’ ಎಂಬ ರಿಯಾಲಿಟಿ ಷೋದಲ್ಲಿ ಮಾನಸ ನೀಡುತ್ತಿದ್ದ ನೃತ್ಯ ಪ್ರದರ್ಶನ ಗಮನಿಸಿ, ‘ಮಾರುತಿ ಮೀಡಿಯಾ ಹೌಸ್’ನ ಮಾರುತಿ ಆಡಿಷನ್‌ಗೆ ಕರೆದರು. ‘ರೊಮಾನ್ಸ್’ ಸಿನಿಮಾಕ್ಕೆ ಹೊಸ ಮುಖದ ಶೋಧನೆಯಲ್ಲಿದ್ದ ಮಾರುತಿ, ಆ ಅವಕಾಶವನ್ನು ಮಾನಸ ಅವರಿಗೆ ನೀಡಿದರು.‘ಇದಕ್ಕೆ ಕೆಲವು ವಾರಗಳ ಹಿಂದಷ್ಟೇ ಪುರಿ ಜಗನ್ನಾಥ ಅವರ ‘ದೇವುಡು ಚೇಸಿನ ಮನುಷ್ಯಲು’ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದನ್ನು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಆದರೆ ಸಿಕ್ಕ ಅವಕಾಶ ಬಿಡಬಾರದು ಎಂದು ಒಪ್ಪಿಕೊಂಡೆ’ ಎಂದು ನೆನಪಿಸಿಕೊಳ್ಳುತ್ತಾರೆ ಮಾನಸಿ.‘ರೊಮಾನ್ಸ್’ ಬಿಡುಗಡೆ ಬಳಿಕ ತೆಲುಗು ಚಿತ್ರರಂಗದಲ್ಲಿ ಕೆಲವು ಅವಕಾಶಗಳು ಮಾನಸಗೆ ಸಿಕ್ಕವು. ಆದರೆ ಪಾತ್ರ ಒಪ್ಪಿಗೆಯಾಗದೇ ನಿರಾಕರಿಸಿದರು. ಇದೇ ಸಮಯದಲ್ಲಿ ಕನ್ನಡದಲ್ಲಿ ನಿರ್ಮಾಣವಾಗುತ್ತಿದ್ದ ‘ಮೃಗಶಿರ’ ಚಿತ್ರಕ್ಕಾಗಿ ನಿರ್ಮಾಪಕ ಚೆನ್ನಪ್ಪ ಹೊಸ ಮುಖದ ಶೋಧನೆಗೆಂದು ಹೈದರಾಬಾದಿಗೆ ಬಂದಿದ್ದರು. ಚೆನ್ನಪ್ಪ ಸ್ನೇಹಿತರಾದ ಮುರುಳಿ, ಮಾನಸ ಅವರಿಗೂ ಪರಿಚಿತರು. ಮಾನಸ ಅವರನ್ನು ಕಂಡ ಚೆನ್ನಪ್ಪ, ‘ಮೃಗಶಿರ’ದ ನಾಯಕಿ ಪಾತ್ರಕ್ಕೆ ಆಹ್ವಾನ ನೀಡಿದರು. ಕನ್ನಡ ಚಿತ್ರರಂಗ ಪ್ರವೇಶಿಸಲು ಹಾದಿ ಸಿಕ್ಕಿತು.‘ಒಂದೇ ವರ್ಷದಲ್ಲಿ ನನಗೆ ಸಿಕ್ಕ ಎರಡನೇ ಸಿನಿಮಾ. ಅದೂ ನನಗೆ ಅಷ್ಟಾಗಿ ಗೊತ್ತಿಲ್ಲದ ಭಾಷೆಯ ಚಿತ್ರ. ಹೀಗಾಗಿ ಸಹಜವಾಗಿಯೇ ಹೆದರಿಕೆ ಇತ್ತು. ಆದರೆ ಚಿತ್ರತಂಡದ ಸಹಕಾರದಿಂದ ನನಗೆ ಯಾವುದೇ ಸಮಸ್ಯೆ ಎದುರಾಗಿಲ್ಲ’ ಎಂದು ನೆನೆಯುತ್ತಾರೆ ಮಾನಸ.‘ಮೃಗಶಿರ’ಕ್ಕೆಂದು ಕುಂದಾಪುರದ ಕಾಡು, ಮಡಿಕೇರಿ ಹಾಗೂ ಬೆಂಗಳೂರಿನ ಹೊರವಲಯದಲ್ಲಿ ಚಿತ್ರೀಕರಣ ನಡೆದಿದೆ. ಮಲೆನಾಡಿನ ದಟ್ಟ ಕಾಡಿನಲ್ಲಿ ಮಾಡಿದ ಶೂಟಿಂಗ್ ತಮಗೆ ಅದ್ಭುತ ಅನುಭವ ಕೊಟ್ಟಿದೆ ಎನ್ನುವ ಮಾನಸ, ‘ಬೆಳಿಗ್ಗೆ ಬೇಗ ಎದ್ದು ಎರಡು ತಾಸು ಪ್ರಯಾಣಿಸಿ ಶೂಟಿಂಗ್ ಸ್ಥಳಕ್ಕೆ ತಲುಪಬೇಕಿತ್ತು.ಎಲ್ಲ ಸಿದ್ಧವಾದರೂ ಕೆಲವೊಮ್ಮೆ ಹವಾಮಾನ ಕೈಕೊಡುತ್ತಿತ್ತು. ಒಮ್ಮೊಮ್ಮೆ ಸುರಿಯುತ್ತಿದ್ದ ಭಾರಿ ಮಳೆಯಂತೂ ನಡುಗಿಸುವಂತಿತ್ತು’ ಎಂದು ಕಾಡಿನ ಅನುಭವ ಮೆಲುಕು ಹಾಕುತ್ತಾರೆ. ಕನ್ನಡದ ಸಂಭಾಷಣೆಯನ್ನು ಇಂಗ್ಲಿಷ್‌ನಲ್ಲಿ ಬರೆದುಕೊಂಡು ಕಂಠಪಾಠ ಮಾಡಿ ಸಹ ನಿರ್ದೇಶಕರಿಗೆ ಒಪ್ಪಿಸುತ್ತಿದ್ದರಂತೆ. ಅವರು ‘ಓಕೆ’ ಎಂದ ಬಳಿಕವೇ ಶೂಟಿಂಗ್. ‘ಈಗಲೂ ನನಗೆ ಎಷ್ಟೋ ಸಂಭಾಷಣೆಗಳು ನೆನಪಿನಲ್ಲಿವೆ. ಕನ್ನಡ ಚೆನ್ನಾಗಿ ಅರ್ಥವಾಗುತ್ತದೆ. ಸ್ವಲ್ಪ ಮಾತಾಡಲೂ ಬರುತ್ತದೆ’ ಎಂದು ಹೇಳುತ್ತಾರೆ.

‘ಮೃಗಶಿರ’ದ ಚಿತ್ರೀಕರಣ ಮುಕ್ತಾಯಗೊಂಡ ಸಂದರ್ಭದಲ್ಲಿ ಬಂದಿದ್ದ ಒಂದಿಬ್ಬರು ನಿರ್ದೇಶಕರು ಮುಂದಿನ ಸಿನಿಮಾಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದಾರಂತೆ. ‘ರೊಮ್ಯಾಂಟಿಕ್ ಕಥೆ ಹಾಗೂ ನನ್ನ ಪಾತ್ರ ಗಟ್ಟಿಯಾಗಿದ್ದರೆ ಅಭಿನಯಿಸಲು ಸಿದ್ಧ. ನಾನು ಮೂಲತಃ ಕೂಚಿಪುಡಿ ನೃತ್ಯಗಾತಿ. ಹಲವೆಡೆ ಪ್ರದರ್ಶನ ನೀಡಿದ್ದೇನೆ. ನೃತ್ಯಕ್ಕೆ ಅವಕಾಶ ಸಿಗುವ ಪಾತ್ರ ಸಿಕ್ಕರಂತೂ ಇನ್ನಷ್ಟು ಖುಷಿ’ ಎನ್ನುವ ಮಾನಸ, ಅಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.ಶಾಲೆಯ ದಿನಗಳಲ್ಲಿ ಯಾರೊಂದಿಗೂ ಹೆಚ್ಚು ಮಾತಾಡದ ಮೌನಿಯಾಗಿದ್ದೆ ಎಂದು ತಮ್ಮನ್ನು ಬಣ್ಣಿಸಿಕೊಳ್ಳುವ ಮಾನಸ ಅವರಿಗೆ, ಸಿನಿಮಾ ಲೋಕ ಪ್ರವೇಶಿಸುವ ಆಸೆ ಇರಲಿಲ್ಲವಂತೆ. ಸಮಯ ಸಿಕ್ಕಾಗ ಸಿನಿಮಾ ನೋಡುವುದು ಹಾಗೂ ಇಂಗ್ಲಿಷ್ ಸಾಹಿತ್ಯ ಕೃತಿ ಓದುವುದು ಅವರ ಮೆಚ್ಚಿನ ಹವ್ಯಾಸ. ಈಗ ಪದವಿಯಲ್ಲಿ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡುತ್ತಿರುವ ಅವರಿಗೆ, ಮುಂದೆ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಕನಸು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.