ಶನಿವಾರ, ಜೂನ್ 19, 2021
29 °C

ಮಾವೋವಾದಿಗಳ ಜತೆ ಸಂಧಾನ ಬೇಕೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾ ರ್ಚ್ 14ರಂದು ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಮಾವೋವಾದಿಗಳು ಅಪಹರಿಸಿದ್ದ ಇಬ್ಬರು ಇಟಲಿ  ಪ್ರವಾಸಿಗರು ಇನ್ನೂ ಬಂಧನದಲ್ಲಿಯೇ ಇದ್ದಾರೆ.

 ಅವರ ಬಿಡುಗಡೆ ಸಂಬಂಧ ಮಾತುಕತೆ ನಡೆಸಲು ಮಾವೋವಾದಿಗಳು ಕೆಲವು ಸಂಧಾನಕಾರರ ಹೆಸರುಗಳನ್ನು ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದರೂ ಸಂಧಾನಕಾರರು ಯಾರು ಎಂಬುದು ಇನ್ನೂ ತೀರ್ಮಾನವಾಗದೇ ಇರುವುದರಿಂದ ಇಟಲಿ ಪ್ರಜೆಗಳ ಬಿಡುಗಡೆ ಕಗ್ಗಂಟಾಗಿ ಉಳಿದಿದೆ. ಇಟಲಿ ಸರ್ಕಾರ ತನ್ನ ಪ್ರಜೆಗಳ ಬಿಡುಗಡೆಗಾಗಿ ಭಾರತದ ಮೇಲೆ ಒತ್ತಾಯ ಹೇರುತ್ತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಡಿಶಾದಲ್ಲಿ ಮಾವೋವಾದಿಗಳ ವಿರುದ್ಧ ನಡೆಸುತ್ತಿರುವ ಪೊಲೀಸ್ ಕಾರ್ಯಾಚರಣೆಗೆ ತಡೆ ನೀಡಿವೆ. ಈ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂಬ ಕುತೂಹಲ  ಸಾರ್ವಜನಿಕರಲ್ಲಿದೆ.ಒಡಿಶಾದ ಮಾವೋವಾದಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಜನರನ್ನು ಅಪಹರಣ ಮಾಡುವುದು ಇದೇ ಮೊದಲಲ್ಲ. 2011ರ ಫೆಬ್ರುವರಿ 16ರಂದು ಮಲಕಾನ್‌ಗಿರಿ ಜಿಲ್ಲೆಯ ಯುವ ಜಿಲ್ಲಾಧಿಕಾರಿ ಆರ್. ವಿನೀತ್‌ಕೃಷ್ಣ (ಅವರು ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರ ಅಳಿಯ) ಹಾಗೂ ಜೂನಿಯರ್ ಇಂಜಿನಿಯರ್ ಪವಿತ್ರಾ ಮಾಜಿ ಎನ್ನುವರನ್ನು ಅಪಹರಿಸಲಾಗಿತ್ತು.

ಅವರ ಬಿಡುಗಡೆ ಮಾಡಲು ಮಾವೋವಾದಿಗಳು ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಅದರಲ್ಲಿ ಮುಖ್ಯವಾದದ್ದು ಪೊಲೀಸರು ಬಂಧಿಸಿದ್ದ ಹಿರಿಯ ಮಾವೋವಾದಿ ನಾಯಕ ಘಂಟಿ ಪ್ರಸಾದ್ ಅವರ ಬಿಡುಗಡೆ. ಈ ಘಟನೆಯಿಂದ ಒಡಿಶಾ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಚಲಿತಗೊಂಡವು. ಯುವ ಐಎಎಸ್ ಅಧಿಕಾರಿ ಬಿಡುಗಡೆಗೆ ಜನರ ಒತ್ತಡ ಹೆಚ್ಚಾಗುತ್ತಿದ್ದಂತೆ ಮಾವೋವಾದಿಗಳ ಜೊತೆ ಸಂಧಾನ ನಡೆಸಲು ಒಡಿಶಾ ಸರ್ಕಾರ ಸಂಧಾನಕಾರರನ್ನು ನಿಯೋಜಿಸಿತು.ಮಾವೋವಾದಿಗಳ ವಿರುದ್ಧದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತು. ಜೈಲಿನಲ್ಲಿದ್ದ ಮಾವೋವಾದಿಗಳ ಬಿಡುಗಡೆಗೆ ಪ್ರಯತ್ನಿಸಿತು. ಮಾತುಕತೆ ನಂತರ ಮಾವೋವಾದಿಗಳು ಜಿಲ್ಲಾಧಿಕಾರಿ ಬಿಡುಗಡೆ ಮಾಡದೆ ಹೊಸ ಬೇಡಿಕೆ ಇಟ್ಟರು. ಹಲವು ದಿನ ಕಳೆದ ನಂತರವೇ ಜಿಲ್ಲಾಧಿಕಾರಿಯ ಬಿಡುಗಡೆ ನಾಟಕೀಯ ರೀತಿಯಲ್ಲಿ ನಡೆಯಿತು.ಉಗ್ರವಾದಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಮುಖ ವ್ಯಕ್ತಿಗಳ ಅಪಹರಣಕ್ಕೆ ಕೈಹಾಕುವುದು ಬಹಳ ಹಿಂದಿನಿಂದ ನಡೆಯುತ್ತಿದೆ. 1989ರಲ್ಲಿ ಅಂದಿನ ಕೇಂದ್ರ  ಗೃಹಸಚಿವ ಮುಫ್ತಿ ಮುಹಮ್ಮದ್ ಸಯೀದ್‌ರ ಪುತ್ರಿಯನ್ನು  ಕಾಶ್ಮೀರದ ಉಗ್ರವಾದಿಗಳು ಅಪಹರಿಸಿದ್ದರು.

ಅವರ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿದ್ದ ಐದಾರು ಉಗ್ರರನ್ನು ಬಿಡಗಡೆ ಮಾಡಬೇಕೆಂದು ಆಗ್ರಹಿಸಿದ್ದರು. ಅವರ ಬೇಡಿಕೆ ಈಡೇರಿದ ನಂತರವೇ ಸಚಿವರ ಪುತ್ರಿಯನ್ನು ಬಿಡುಗಡೆ ಮಾಡಿದರು.1999ರ ಡಿ. 24 ರಂದು ಪಾಕಿಸ್ತಾನದ ಉಗ್ರರು ನೇಪಾಳದಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ ವಿಮಾನ ಅಪಹರಿಸಿ, ಅದರಲ್ಲಿದ್ದ 128 ಪ್ರಯಾಣಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅವರ ಬಿಡುಗಡೆಗೆ ಪ್ರತಿಯಾಗಿ ಭಾರತದ ಜೈಲಿನಲ್ಲಿದ್ದ ಮೂರು ಉಗ್ರರ ಬಿಡುಗಡೆಗೆ ಬೇಡಿಕೆ ಇಟ್ಟರು.

ಈ ಮೂವರಲ್ಲಿ ಮುಖ್ಯನಾದವನು ಜೈಷ್ ಏ-ಮೊಹಮ್ಮದ್ ಸಂಘಟನೆಯ ರೂವಾರಿ ಮೌಲನಾ ಮಸೂದ್ ಅಜರ್ (ಇವನು ಬಿಡುಗಡೆ ಆದ ನಂತರ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ). ಈ ಮೂವರು ಉಗ್ರವಾದಿಗಳನ್ನು ಬಿಡುಗಡೆ ಮಾಡಿದ ನಂತರವೇ ಇಂಡಿಯನ್ ಏರ್‌ಲೈನ್ಸ್ ಪ್ರಯಾಣಿಕರು ಬಿಡುಗಡೆಯಾದರು.2009ರ ಸೆಪ್ಟೆಂಬರ್ 30 ರಂದು ಮಾವೋವಾದಿಗಳು ಜಾರ್ಖಂಡ್‌ನ ಕುಂತಿ ಜಿಲ್ಲೆಯಿಂದ ಇನ್ಸ್‌ಪೆಕ್ಟರ್ ಫ್ರಾನ್ಸಿಸ್ ಇಂಧೂವಾರ್ ಅವರನ್ನು ಅಪಹರಿಸಿದರು. ಅವರ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿದ್ದ ಮಾವೋವಾದಿ ಮುಖಂಡರಾದ  ಕೋಬಡ್ ಗಾಂಧಿ, ಛತ್ರದರ್ ಮಹತೋ ಹಾಗೂ ಭೂಷಣ್ ಯಾದವ್ ಬಿಡುಗಡೆಗೆ ಬೇಡಿಕೆ ಇಟ್ಟರು.

ಸರ್ಕಾರ ಅವರ ಬೇಡಿಕೆಗೆ ಒಪ್ಪಲಿಲ್ಲ.  ಅ. 6 ರಂದು ಇಂಧೂವಾರ್ ಅವರನ್ನು ಭೀಕರವಾಗಿ ಕೊಲೆ ಮಾಡಿದರು. ಇಂಧೂವಾರ್ ಹತ್ಯೆ ಬಗ್ಗೆ ವ್ಯಾಪಕ ಅನುಕಂಪ ವ್ಯಕ್ತವಾದರೂ ಸರ್ಕಾರ ಮಾವೋವಾದಿಗಳ ಬೇಡಿಕೆಯನ್ನು ತಿರಸ್ಕರಿಸಿದ ಕ್ರಮ ಮೆಚ್ಚುಗೆಗೆ ಪಾತ್ರವಾಯಿತು.ಒತ್ತೆಯಾಳುಗಳ ಬಿಡುಗಡೆಗೆ ಸರ್ಕಾರಗಳು ಉಗ್ರವಾದಿಗಳ ಬೇಡಿಕೆಗಳಿಗೆ ಏಕೆ ಮಣಿಯಬೇಕು ಎನ್ನುವುದು ಇಲ್ಲಿನ ಮುಖ್ಯ ಪ್ರಶ್ನೆ. ಜಿಲ್ಲಾಧಿಕಾರಿ ಅಥವಾ ವಿದೇಶಿ ನಾಗರಿಕ ಅಥವಾ ಪ್ರಮುಖ ವ್ಯಕ್ತಿ ಅಪಹರಣಕ್ಕೆ ಒಳಗಾದರೆ ಅಂಥವರ  ಬಿಡುಗಡೆಗೆ ಒತ್ತಡ ಬರುವುದು ಸಹಜ. ಅದಕ್ಕಾಗಿಯೇ ಅವರು ಅಂಥವರ ಅಪಹರಣಕ್ಕೆ ಕೈ ಹಾಕುತ್ತಾರೆ.ಇಂತಹ ಕಾರ್ಯತಂತ್ರಕ್ಕೆ ಸರ್ಕಾರ ಮಣಿದರೆ ಅಪಹರಣಗಳು ಸಂಭವಿಸುತ್ತಲೇ ಇರುತ್ತವೆ.

ಈಗ ಅಪಹರಣಗೊಂಡಿರುವ ಇಟಲಿ ಪ್ರವಾಸಿಗರನ್ನು ಬಿಡುಗಡೆ ಮಾಡಿ ಒಡಿಶಾ ಸರ್ಕಾರ ಮಾವೋವಾದಿಗಳ ಕಪಿಮುಷ್ಠಿಯಲ್ಲಿ ಮತ್ತೆ ಏಕೆ ಸಿಲಿಕಿಹಾಕಿಕೊಳ್ಳಬೇಕು ಎಂಬ ಪ್ರಶ್ನೆ ಪ್ರಜ್ಞಾವಂತರದು.

ಉಗ್ರವಾದಿಗಳು ಯಾವುದೇ ವ್ಯಕ್ತಿಯನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಂಡರೆ ಅಂಥವರ ವಿರುದ್ಧ ಹೋರಾಟ ನಡೆಸಬೇಕೇ ಹೊರತು ಅವರ ಜತೆ ಮಾತುಕತೆ ನಡೆಸಬೇಕಿಲ್ಲ ಎಂಬ ನಿಯಮ ಇರಬೇಕು ಎಂದು ಈ ಹಿಂದೆ ಕೇಂದ್ರ ಸರ್ಕಾರ ಹೇಳಿತ್ತು.ಆದರೆ ಮಲಕಾನ್‌ಗಿರಿ ಜಿಲ್ಲಾಧಿಕಾರಿಯ ಪ್ರಕರಣದಲ್ಲಿ ಅಥವಾ ಈಗಿನ ಪ್ರಕರಣದಲ್ಲಿ ಈ ನಿಯಮ ಅನುಸರಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.ಇಂದೂವಾರ್ ಅಪಹರಣ ಆದಾಗ ಉಗ್ರವಾದಿಗಳ ಜತೆ ಮಾತುಕತೆ ನಡೆಸದ ಸರ್ಕಾರ ಉನ್ನತ ವ್ಯಕ್ತಿಗಳು ಅಥವಾ ವಿದೇಶಿಯರ ಅಪಹರಣ ಆದಾಗ ಏನು ಬೇಕಾದರೂ ಮಾಡಲು ಸಿದ್ಧವಾಗುತ್ತದೆ ಎಂಬ ಭಾವನೆಗೆ ಆಸ್ಪದ ನೀಡಿದರೆ ಮುಂದೆ ಪ್ರತಿಷ್ಠಿತರ ಅಪಹರಣ ಹೆಚ್ಚುತ್ತ ಹೋಗುತ್ತವೆ.ಅಮೆರಿಕಾದಲ್ಲಿ ಆದೇಶದ ಅಧ್ಯಕ್ಷರನ್ನೇ ಅಪಹರಿಸಿದರೂ ಅಪಹರಣಕಾರರ ಜತೆ ಸಂಧಾನ ಮಾಡುವಂತಿಲ್ಲ ಎಂಬ ನೀತಿ ರೂಪಿಸಲಾಗಿದೆ. ಇಂತಹ ದೃಢ ನೀತಿಯಿಂದಾಗಿ ಆ ದೇಶದಲ್ಲಿ ತಮ್ಮ ಬೇಡಿಕೆಗಳಿಗಾಗಿ ಉಗ್ರವಾದಿಗಳು ಯಾರನ್ನೂ ಅಪಹರಣ  ಮಾಡುವುದಿಲ್ಲ.

ಬೇರೆ ದೇಶಗಳಲ್ಲೂ ಅಪಹರಣಕಾರರ ಜೊತೆ ಸರ್ಕಾರಗಳು ಸಂಧಾನ ನಡೆಸುವುದಿಲ್ಲ. ನಮ್ಮ ದೇಶದಲ್ಲೂ ಇಂತಹ ಬಿಗಿ ನಿಯಮ ರೂಪುಗೊಂಡರೆ ಅಪಹರಣಗಳು ನಿಲ್ಲಬಹುದು.

            

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.