ಬುಧವಾರ, ಜೂಲೈ 8, 2020
28 °C

ಮಾಹಿತಿ ಆಯೋಗ: ಐವರ ಪ್ರಮಾಣವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಎಂ.ನಾಯಕ್ ಮತ್ತು ಮಾಹಿತಿ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಡಿ.ತಂಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ಎಂ.ಆರ್.ಪೂಜಾರ್, ವಕೀಲ ರಾಮಾ ನಾಯಕ್ ಮತ್ತು ಶೇಖರ ಸಜ್ಜನರ್ ಬುಧವಾರ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು, ಮುಖ್ಯ ಮಾಹಿತಿ ಆಯುಕ್ತರು ಹಾಗೂ ನಾಲ್ವರು ಮಾಹಿತಿ ಆಯುಕ್ತರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ಬೋಧಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೆಲವೇ ಕ್ಷಣಗಳಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮುಕ್ತಾಯವಾಯಿತು.

ಮೌನವೇ ಎಲ್ಲ: ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೆ ಏರಿರುವ ಸಮಯದಲ್ಲೇ ನಡೆದ ಈ ಸಮಾರಂಭದಲ್ಲಿ ಇಬ್ಬರೂ ಪರಸ್ಪರ ಎದುರಾದರು. ಆದರೆ ಕೇವಲ ಶಿಷ್ಟಾಚಾರಕ್ಕಾಗಿ ಪಾಲ್ಗೊಂಡಿರುವಂತೆ ನಡೆದುಕೊಂಡ ಇಬ್ಬರೂ ಪರಸ್ಪರ ಮಾತನಾಡಲೇ ಇಲ್ಲ.

ಸಮಾರಂಭದ ಆರಂಭದಲ್ಲಿ ಭಾರದ್ವಾಜ್ ಮತ್ತು ಯಡಿಯೂರಪ್ಪ ಒಟ್ಟಾಗಿಯೇ ಸಭಾಂಗಣಕ್ಕೆ ಬಂದರು. ಆಗಲೂ ಮಾತನಾಡಲಿಲ್ಲ. ಎ.ಕೆ.ಎಂ.ನಾಯಕ್ ಪ್ರಮಾಣ ಸ್ವೀಕರಿಸಿ ವೇದಿಕೆಯಿಂದ ನಿರ್ಗಮಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಭಾರದ್ವಾಜ್, ‘ಅವರಿಗೆ (ಮುಖ್ಯಮಂತ್ರಿ) ಧನ್ಯವಾದ ಹೇಳಿ’ ಎಂದು ಸೂಚಿಸಿದರು. ಆಗ ನಾಯಕ್ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. ಮಧ್ಯದಲ್ಲಿ ಒಂದೆರಡು ಬಾರಿ ಮೆಲ್ಲಗೆ ಮಾತನಾಡಿ ಇಬ್ಬರೂ ನಕ್ಕರು.

ಕಾರ್ಯಕ್ರಮ ಮುಗಿದ ಬಳಿಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವೆ ಮಾತುಕತೆ ನಡೆಯಲಿಲ್ಲ. ತುರ್ತು ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ತಕ್ಷಣವೇ ರಾಜಭವನದಿಂದ ನಿರ್ಗಮಿಸಲು ಮುಂದಾದ ಯಡಿಯೂರಪ್ಪ ಅವರನ್ನು ಮಾತನಾಡಿಸಲು ಮಾಧ್ಯಮ ಪ್ರತಿನಿಧಿಗಳು ಪ್ರಯತ್ನಿಸಿದರು. ಆದರೆ ಮಾಧ್ಯಮದವರತ್ತ ಕೈಮುಗಿದ ಯಡಿಯೂರಪ್ಪ ಮೌನವಾಗಿಯೇ ಕಾರು ಏರಿ ಹೊರಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.