ಬುಧವಾರ, ಜುಲೈ 28, 2021
29 °C

ಮಾಹಿತಿ ಚೋರರ ಉಪಟಳ!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

ಅಕ್ಷಯ ಪಾತ್ರೆ ಮಹಾಭಾರತದಲ್ಲಿ ಬರುವ ಒಂದು ಸೋಜಿಗದ ಪ್ರಸಂಗ. ಅದನ್ನು ಪಾಂಡವರು ಪಡೆದದ್ದೇ ಒಂದು ರೋಚಕ ಸನ್ನಿವೇಶವಾದರೆ, ಅದರಲ್ಲಿನ ಒಂದು ಅಗುಳನ್ನು ತಿಂದ ಕೃಷ್ಣ ನೂರಾರು ಋಷಿಗಳ `ಹೊಟ್ಟೆ ತುಂಬಿಸಿದ್ದು' ತಣಿಸಿದ್ದು ಮತ್ತೊಂದು ರಸಮಯ ಸನ್ನಿವೇಶ.ಹೌದು, ಕೋರಿದ್ದನ್ನೆಲ್ಲಾ ನೀಡುವುದೇ `ಅಕ್ಷಯಪಾತ್ರೆ'! ಸದ್ಯ ಮಾಹಿತಿ ಪಡೆಯುವುದಕ್ಕೆ ಸಂಬಂಧಿಸಿದಂತೆ ಅಂತಹುದೇ `ಪಾತ್ರೆ'ಯಂತೆ ಕೆಲಸ ನಿರ್ವಹಿಸುತ್ತಿದೆ ಅಂತರ್ಜಾಲ!ಅಂತರ್ಜಾಲ ಮಾಹಿತಿ, ಜ್ಞಾನಕ್ಕೆ ಸಂಬಂಧಿಸಿದಂತೆ ಅಕ್ಷಯ ಪಾತ್ರೆ ಎಂಬುದೇನೂ ಸರಿ. ಅದರೆ ಆ ಅಕ್ಷಯಪಾತ್ರೆಗೂ ಕನ್ನ ಹಾಕುವವರು ಇದ್ದಾರೆ, ಪಾತ್ರೆಯನ್ನೇ ಕದಿಯುವವರಿದ್ದಾರೆ. ಅಷ್ಟೇ ಅಲ್ಲ ಅಕ್ಷಯ ಪಾತ್ರೆಯನ್ನೇ ಒಡೆದು ಹಾಕುವ ದುರುಳರೂ ಇದ್ದಾರೆ.

ಇವರೇ `ಹ್ಯಾಕರ್ಸ್‌'. ಅಂತರ್ಜಾಲದ ವೆಬ್ ಜಾಲಗಳೊಳಗೆ ನುಸುಳಿ ಇಡೀ ತಾಣವನ್ನು ವಿರೂಪಗೊಳಿಸಬಹುದು, ಅಲ್ಲಿರುವ ಮಾಹಿತಿಯನ್ನು ಅನಾಮತ್ತಾಗಿ ಅಳಿಸಿ ಹಾಕಿ, ತಮ್ಮ ಉದ್ಘೋಷಗಳನ್ನು ಶೌಚಾಲಯದ ಗೋಡೆಗಳ ಮೇಲೆ ಸಲೀಸಾಗಿ ಬರೆದಂತೆ ಬರೆದು ಹೋಗಬಹುದು, ಮಾಹಿತಿಗೆ ಕನ್ನ ಹಾಕಬಹುದು, ಕಡೆಗೆ ಗೂಢಚರ್ಯೆಯನ್ನೂ ನಡೆಸಬಹುದು...ಇಷ್ಟೇ ಅಲ್ಲದೆ ನಿರ್ದಿಷ್ಟ ರಾಜಕೀಯ ದೃಷ್ಟಿಕೋನ ಮತ್ತು ಗುರಿಗಳನ್ನು ಇಟ್ಟುಕೊಂಡು ಹ್ಯಾಕ್ ಮಾಡುವವರು `ಹ್ಯಾಕ್ಟಿವಿಸಂ' ಎಂಬ ಪರಿಭಾಷೆಯಲ್ಲಿ ಗುರುತಿಸಿಕೊಳ್ಳುತ್ತಾರೆ.ಮಾಹಿತಿಯ ಕಣಜ ಎಂಬುದು ಎಲ್ಲರಿಗೂ ಉಚಿತವಾಗಿ ಲಭ್ಯವಿರಬೇಕೆಂದು ಆರಂಭವಾದ `ಮುಕ್ತ ತಂತ್ರಾಂಶ ಆಂದೋಲನ' ಕೂಡ `ಹ್ಯಾಕ್ಟಿವಿಸಂ'ನ ಪರಿಧಿಗೇ ಬರುತ್ತದೆ. ಸಕಾರಾತ್ಮಕ ಉದ್ದೇಶಗಳಿಗೆ ಇದನ್ನು ಬಳಸಿಕೊಂಡಲ್ಲಿ ತೊಂದರೆ ಇಲ್ಲ. ಆದರೆ ನಕಾರಾತ್ಮಕ ಕಾರಣಗಳಿಗೆ ಬಳಕೆಯಾದರೆ?ಗೂಢಚರ್ಯೆ, ದೇಶದ ರಹಸ್ಯ ಮಾಹಿತಿ ಕದಿಯುವುದು, ಪ್ರಮುಖ ವೆಬ್ ತಾಣಗಳನ್ನು ವಿರೂಪಗೊಳಿಸುವುದು... ಇವೆಲ್ಲವನ್ನೂ ಯಾವುದೇ ಕೋನದಿಂದ ನೋಡಿದರೂ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ.ಚೀನಾ ಹಾಗೂ ಅಮೆರಿಕ ಬೇರೆ ದೇಶಗಳ ವೆಬ್ ತಾಣಗಳನ್ನು, ಕಂಪ್ಯೂಟರ್‌ಗಳನ್ನು ಹ್ಯಾಕರ್ಸ್‌ ಬಳಸಿಕೊಂಡು ಗೂಢಚರ್ಯೆ ನಡೆಸುತ್ತಿರುವುದು ಬಹಿರಂಗ ಸತ್ಯ. ಅದಕ್ಕೆಂದೇ ಈ `ಹ್ಯಾಕರ್ಸ್‌ ಗೆರಿಲ್ಲಾ ಪಡೆ'ಹತ್ತಿಕ್ಕುವ ಸಲುವಾಗಿ ವಿವಿಧ ರಾಷ್ಟ್ರಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇವೆ. ಆದರೆ ನಾವು ಮಾತ್ರ `ಕುಂಭಕರ್ಣ' ನಿದ್ದೆಯಿಂದ ಎದ್ದೇ ಇಲ್ಲ ಎನಿಸುತ್ತದೆ!ಸದ್ಯ ಆಸ್ಟ್ರೇಲಿಯಾದಲ್ಲಿ ಸೈಬರ್ ಭದ್ರತೆ ಕುರಿತಂತೆ ವಿಜ್ಞಾನಿಗಳು ಮಹತ್ವದ ಪ್ರಗತಿ ಸಾಧಿಸಿದ್ದಾರೆ ಎನ್ನುವ ಸುದ್ದಿ ನೇತ್ಯಾತ್ಮಕ ಹ್ಯಾಕರ್ಸ್‌ಗಳ ನಿದ್ದೆಕೆಡಿಸಿದೆಯಂತೆ. ಹೌದು, ಕ್ವಾಂಟಂ ತತ್ವದ ಆಧಾರದ ಮೇಲೆ  ಸೈಬರ್‌ಗೆ ವಜ್ರಕವಚ ಹಾಕುವ ಪ್ರಯತ್ನದಲ್ಲಿ ಅಲ್ಲಿನ ವಿಜ್ಞಾನಿಗಳ ತಂಡ ಯಶಸ್ಸು ಕಂಡಿದ್ದಾರೆ.

ಕ್ವಾಂಟಂ ಕ್ರಿಪ್ಟೊಗ್ರಫಿ

`ಕ್ವಾಂಟಂ ಕ್ರಿಪ್ಟೊಗ್ರಫಿ' ಎಂದು ನಾಮಾಂಕಿತಗೊಂಡಿರುವ ತಂತ್ರಜ್ಞಾನವನ್ನು ಇದಕ್ಕಾಗಿ `ನ್ಯೂ ಸೌತ್ ವೇಲ್ಸ್' ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಬಳಸಿಕೊಂಡಿದ್ದಾರೆ.ಇದರಲ್ಲಿ ಬಳಕೆಯಾಗಿರುವುದು ಪ್ರಮುಖವಾಗಿ ಕ್ವಾಂಟಂ ಕಂಪ್ಯೂಟಿಂಗ್. ಇದರಲ್ಲಿ ಮೂರು ಪ್ರಮುಖ ಭಾಗಗಳಿವೆ

1. ರವಾನೆಗಾರ (ಸೆಂಡರ್)

2. ಪಡೆದುಕೊಳ್ಳುವವ

3. ಹ್ಯಾಕರ್

ಸದ್ಯ ಹ್ಯಾಕರ್ಸ್‌ಗಳು ರವಾನೆಗಾರನಿಗೂ ಹಾಗೂ ಪಡೆದುಕೊಳ್ಳುವಾತನಿಗೂ ತಿಳಿಯದಂತೆ ಗುಪ್ತವಾಗಿ  ಹ್ಯಾಕ್ ಮಾಡುತ್ತಾರೆ.

ಆದರೆ ಸದ್ಯ ಅಭಿವೃದ್ಧಿಪಡಿಸಲಾದ `ಕ್ವಾಂಟಂ ಕ್ರಿಪ್ಟ್ರೊಗ್ರಾಫಿ' ತಂತ್ರಜ್ಞಾನವು ಹ್ಯಾಕರ್ ಜಾಲದ ಒಳಗೆ ನುಸುಳಿದ ತಕ್ಷಣವೇ ಎಚ್ಚರಿಕೆಯ ಸಂದೇಶವನ್ನು ರವಾನೆಗಾರರಿಗೂ ಹಾಗೂ ಪಡೆದುಕೊಳ್ಳುವವರಿಗೆ ಕಳುಹಿಸುತ್ತದೆ.ಅಡಿಗೆ ಮನೆಯೊಳಗೆ ಕಳ್ಳ ಹೆಜ್ಜೆ ಇಟ್ಟು ಹಾಲು ಕುಡಿಯುವ ಮಾರ್ಜಾಲನಂತೆ, ಹ್ಯಾಕರ್ ಹೊಂಚು ಹಾಕಿ ಮಾಹಿತಿ ಕದಿಯುತ್ತ್ದ್ದಿದರೂ ಕ್ವಾಂಟಂ ಕ್ರಿಪ್ಟ್ರೊಗ್ರಾಫಿ ತಂತ್ರಜ್ಞಾನ ತನ್ನ ಹದ್ದಿನ ಕಣ್ಣಿನಿಂದ ಅದನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚುತ್ತದೆ. ಕದ್ದ ಮಾಹಿತಿಯನ್ನು ಮಾರ್ಗಮಧ್ಯೆದಲ್ಲೇ ನಾಶಪಡಿಸಿ ಅದು ಹ್ಯಾಕರ್‌ಗಳ ಪಾಲಾಗುವುದನ್ನು ತಪ್ಪಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಸದ್ಯ ಈ ತಂತ್ರಜ್ಞಾನವನ್ನು ಆಸ್ಟ್ರೇಲಿಯಾ ಸರ್ಕಾರಕ್ಕಾಗಿ ವಿಜ್ಞಾನಿಗಳು ರೂಪಿಸಿದ್ದಾರೆ.ಕಾರಣ ಇಷ್ಟೆ, ಕಳೆದ ಮಾಸಾಂತ್ಯದಲ್ಲಿ ಆಸ್ಟ್ರೇಲಿಯಾದ ಮಿಲಿಟರಿ, ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಚೀನಾ ಅನಾಮತ್ ಕಳವು ಮಾಡಿತ್ತು. `ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಸೈಬರ್ ದಾಳಿ' ಇದು ಎಂದೂ ಅಲ್ಲಿನ ಮಾಧ್ಯಮಗಳು ಬಣ್ಣಿಸಿದ್ದವು.ಇದರಿಂದ ಎಚ್ಚೆತ್ತುಕೊಂಡ ಅಲ್ಲಿನ ವಿಜ್ಞಾನಿಗಳು ಸೈಬರ್ ಭದ್ರತೆಗಾಗಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದಕ್ಕೂ ಮುನ್ನ, ಅಂದರೆ ಮಾರ್ಚ್ ಮಾಸಾಂತ್ಯಕ್ಕೆ ಅಂತರ್ಜಾಲದ ಇತಿಹಾಸದಲ್ಲೇ ಅತಿ ದೊಡ್ಡ ಸೈಬರ್ ದಾಳಿನಡೆಯಿತು. ಯಾರೋ ಮತಿಗೆಟ್ಟವ ಸೃಷ್ಟಿಸಿದ ಕೋಟಿಗಟ್ಟಳೆ `ಸ್ಪ್ಯಾಮ್' ಫೈಲ್‌ಗಳು ಜಾಲದಲ್ಲಿ ಹರಿದಾಡತೊಡಗಿದವು. ಇದರಿಂದಾಗಿ ಪ್ರಪಂಚದ ಬಹುತೇಕ ಕಡೆ ಇಂಟರ್‌ನೆಟ್(ಅಂತರ್ಜಾಲ) ಆಮೆಯಂತೆ ಬಹಳ ನಿಧಾನವಾಯಿತು. ಈ ಸಮಸ್ಯೆ ಬಗೆಹರಿಸಲು ವಿಜ್ಞಾನಿಗಳು ಪಟ್ಟಪಾಡು ಅಷ್ಟಿಷ್ಟಲ್ಲ.ಕಡೆಗೆ ಡಚ್ ನಾಗರಿಕನೊಬ್ಬನನ್ನು ಈಶಾನ್ಯ ಸ್ಪೇನ್‌ನಲ್ಲಿ ಈ ದಾಳಿಗೆ ಸಂಬಂಧಿಸಿದಂತೆ ಸಂಶಯದ ಆಧಾರದ ಮೇಲೆ ಬಂಧಿಸಲಾಗಿದೆ.ಭಾರತದಲ್ಲಿ ಪರಿಸ್ಥಿತಿಯೂ ಇದಕ್ಕಿಂತೇನೂ ಕಡಿಮೆ ಇಲ್ಲ. 2011ರಲ್ಲಿ  ಸೈಬರ್ ಭದ್ರತೆ ಉಲ್ಲಂಘನೆ ಮಾಡಿದ 13,301 ಪ್ರಕರಣಗಳು ನಡೆದಿವೆ. ನಂತರ 2012ರ ಜುಲೈ 12ರಂದು ಮಾತ್ರ ಭಾರತೀಯ ಸೈಬರ್ ಜಗತ್ತಿಗೆ ಕರಾಳ ದಿನವಾಗಿತ್ತು. ಅಂದು ಒಂದೇ ದಿನದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಭಾರತ-ಟಿಬೆಟಿಯನ್ ಗಡಿ ಭದ್ರತಾ ಪಡೆ, ಗೃಹ ಸಚಿವಾಲಯ ಹಾಗೂ ವಿದೇಶಾಂಗ ಇಲಾಖೆಯ ಸಚಿವಾಲಯದ ಉನ್ನತ ಅಧಿಕಾರಿಗಳ ಇ-ಮೇಲ್ ಖಾತೆಗಳಿಗೆ ಕನ್ನ ಹಾಕಲಾಯಿತು.ಒಂದು ಮೂಲದ ಪ್ರಕಾರ ಬರೋಬ್ಬರಿ 12 ಸಾವಿರ ಮಂದಿಯ ಇ-ಮೇಲ್ ಖಾತೆಗಳು ದಾಳಿಗೆ ತುತ್ತಾದವು. ಸರಿ ಸುಮಾರು ಇದೇ ಅವಧಿಯಲ್ಲಿ 4.5 ಲಕ್ಷ ಯಾಹೂ ಮೇಲ್‌ಗಳ ಮಾಹಿತಿಗೆ ಕನ್ನ ಹಾಕಲಾಯಿತೆಂದು ಸ್ವತಃ ಯಾಹೂ ಸಂಸ್ಥೆಯೇ ತನ್ನ ತಂತ್ರಜ್ಞಾನ ಬ್ಲಾಗ್ `ಟೆಕ್‌ಕ್ರಂಚ್'ನಲ್ಲಿ ಪ್ರಕಟಿಸಿತು.

ಸಂರಕ್ಷಣಾ ಘಟಕ

ಸಂದಿಗ್ಧ ಕಾಲದ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಘಟಕ (National Critical Information Infrastructure Protection CentreNCIIPC) ವನ್ನು ಇದಕ್ಕಾಗಿಯೇ ಕಳೆದ ವರ್ಷಾಂತ್ಯದಲ್ಲಿ ಅಸ್ತಿತ್ವಕ್ಕೆ ತರಲು ಯೋಜಿಸಲಾಯಿತು.

ರಕ್ಷಣೆ, ವಾಯುಯಾನ, ಇಂಧನ, ಸೇನೆ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಬಹಳ ಮಹತ್ವದ 17 ಇಲಾಖೆಗಳ ದತ್ತಾಂಶಗಳನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಈ ಸಂಸ್ಥೆಗೆ ವಹಿಸಬೇಕು. ಇದು ಟೆಕ್ನಿಕಲ್ ಇಂಟಲಿಜೆನ್ಸ್ ಏಜೆನ್ಸಿ ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸಬೇಕು. ಇದಕ್ಕೆ ರಾಷ್ಟ್ರೀಯ ಸೈಬರ್ ಸಂಯೋಜಕರೊಬ್ಬರು ಮುಖ್ಯಸ್ಥರಾಗಿರಬೇಕು ಎಂದು ಪ್ರಸ್ತಾವನೆ ಸಿದ್ಧಪಡಿಸಿ ಶಿಫಾರಸು ಮಾಡಲಾಗಿದ್ದಿತು. ಆದರೆ ಈವರೆಗೂ ಇದರ ಅಸ್ತಿತ್ವದ ಕುರಿತಂತೆಯೇ ಪ್ರಶ್ನೆಗಳು ಏಳಲಾರಂಭಿಸಿವೆ.ಅಲ್ಲದೆ ಕಂಪ್ಯೂಟರ್ ರಕ್ಷಣೆ ತುರ್ತು ಕಾರ್ಯಪಡೆ ಇದ್ದು, ಅದೂ ಕೂಡ ಸೈಬರ್ ಭದ್ರತೆಗೆ ಸಹಕರಿಸಲಿದೆ.ಇವೆಲ್ಲವೂ ಬಹುಶಃ ಕಾಗದದ ಮೇಲಿನ ಹುಲಿಗಳಂತಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತೀಚೆಗಷ್ಟೇ `ಡಿಆರ್‌ಡಿಒ'ದ ಕೆಲವು ಕಡತಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಸುದ್ದಿಯೂ ಕೇಳಿ ಬಂದಿದೆ.  ಹಾಗಾಗಿ, ಭಾರತದ ಸೈಬರ್ ವ್ಯವಸ್ಥೆಯ ಭದ್ರತೆ ವಿಶ್ವದಲ್ಲೇ ಅತ್ಯಂತ ಕಳಪೆ ಎನಿಸುವಂತದ್ದು ಎಂಬುದು ತಜ್ಞರ ಅಭಿಪ್ರಾಯ.ಸೈಬರ್ ಭದ್ರತಾ ಸಮಿತಿ, ಸೈಬರ್ ಭದ್ರತಾ ನೀತಿಗಳನ್ನು ಪರಿಣಾಮಕಾರಿಯಾಗಿ ರೂಪಿಸಬೇಕಾದ ಜರೂರು ಹಿಂದೆಂದಿಗಿಂತಲೂ ಇಂದು ಬಹಳ ಮುಖ್ಯವಾಗಿದೆ.ಸೈಬರ್ ದಾಳಿ-ಕಲಾಂ ಕಳವಳ

ಸದ್ಯ ನಡೆಯುತ್ತಿರುವ ಆತಂಕಕಾರಿ ಸೈಬರ್ ದಾಳಿಗಳು ಹಾಗೂ ಹ್ಯಾಕರ್ಸ್‌ಗಳ ಕುಚೇಷ್ಟೆಗಳಿಂದ ಎಚ್ಚೆತ್ತುಕೊಂಡಿರುವ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೈದರಾಬಾದ್‌ನಲ್ಲಿನ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್‌ನ ಸೇನಾ ಕಾಲೇಜಿನ(ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್) ಘಟಿಕೋತ್ಸವದಲ್ಲಿ ಸೈಬರ್ ದಾಳಿ ಕುರಿತಂತೆ ಕಳವಳ ವ್ಯಕ್ತಪಡಿಸಿದರು.ಭವಿಷ್ಯದಲ್ಲಿ ಇದು ಅತ್ಯಂತ ಮಾರಕವಾಗಿ ಪರಿಣಮಿಸಬಹುದಾಗಿದೆ. ಸದ್ಯ ನಮ್ಮನ್ನು ಭೂಸೇನೆಯಿಂದಾಗಲಿ, ವಾಯು ಮಾರ್ಗದಿಂದಾಗಲಿ, ಸಮುದ್ರದ ಮೂಲಕವಾಗಲಿ ಮಣಿಸಲು ಸಾಧ್ಯವಿಲ್ಲ. ಪರಮಾಣು ಅಸ್ತ್ರಗಳಿಂದ ದೇಶದ ಸುರಕ್ಷತೆಗೆ ಯಾವುದೇ ಗಂಡಾಂತರಕಾರಿ ಅಪಾಯವಿಲ್ಲದಿರಬಹುದು. ಆದರೆ ಸೈಬರ್ ಯುದ್ಧವನ್ನು ಎದುರಿಸುವುದಕ್ಕೆ ಭಾರತ ಇನ್ನಷ್ಟು ಉತ್ತಮ ರೀತಿಯಲ್ಲಿ ಸನ್ನದ್ದವಾಗಬೇಕಿದೆ ಎಂದು ಗಮನ ಸೆಳೆದರು.ಸೈಬರ್ ಮೂಲಕ ಬೆಳಕಿನ ವೇಗದಲ್ಲಿ ರಕ್ಷಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ನಾಶಪಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಪರಮಾಣು ಅಸ್ತ್ರಗಳೂ ನಿಷ್ಪ್ರಯೋಜಕವಾಗಬಹುದು. ಹಾಗಾಗಿ ದೇಶಕ್ಕೆ ಸೈಬರ್ ಸುರಕ್ಷತೆ ಎಂಬುದು ಆದ್ಯತೆಯ ವಿಷಯವಾಗಬೇಕಿದೆ ಎಂದು ಒತ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.