ಸೋಮವಾರ, ಮೇ 23, 2022
20 °C

ಮಿಂಚಿನ ಸಂಚಲನಕ್ಕೆ ಕಾರಣರಾದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅದೆಷ್ಟೊಂದು ಅದ್ಭುತ ಕ್ಷಣಗಳು. ಮರೆಯುವುದಕ್ಕೆ ಸಾಧ್ಯವಿಲ್ಲ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಕ್ರಿಕೆಟಿಗರು ತಮ್ಮ ಬಲದಿಂದ ಹಾಗೂ ಛಲದಿಂದ ಸಾಧನೆಯ ಎತ್ತರಕ್ಕೆ ಏರಿದ್ದು ಈಗಲೂ ಕ್ರಿಕೆಟ್ ಪ್ರಿಯರ ನೆನಪಿನ ಪುಟಗಳಲ್ಲಿ ಗಟ್ಟಿ. ದಿಟ್ಟ ಆಟವಾಡಿ ಇತಿಹಾಸದ ಪುಟದಲ್ಲಿ ಗಟ್ಟಿಯಾದ ಆಟಗಾರರ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ಕಲೆಹಾಕಿ ಇಡುವ ಪ್ರಯತ್ನ ಮಾಡಲಾಗಿದೆ.* ವಿಶ್ವಕಪ್‌ನಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ಶ್ರೇಯ ಹೊಂದಿರುವುದು ಸಚಿನ್ ತೆಂಡೂಲ್ಕರ್. 1992ರಿಂದ 2007ರ ಅವಧಿಯಲ್ಲಿ ಆಡಿದ 36 ವಿಶ್ವಕಪ್ ಪಂದ್ಯಗಳ 35 ಇನಿಂಗ್ಸ್‌ನಲ್ಲಿ 57.93ರ ಸರಾಸರಿಯಲ್ಲಿ 1796 ರನ್ ಗಳಿಸಿದ್ದಾರೆ. ನಾಲ್ಕು ಶತಕ ಹಾಗೂ 13 ಅರ್ಧ ಶತಕ ಗಳಿಸಿದ್ದು ವಿಶೇಷ. ಅತಿ ಹೆಚ್ಚು ಅರ್ಧ ಶತಕದ ಶ್ರೇಯವೂ ಇವರಿಗೇ ಸಂದಿದೆ. ಒಟ್ಟಾರೆ ಸಾವಿರ ಹಾಗೂ ಅದಕ್ಕೂ ಅಧಿಕ ರನ್‌ಗಳನ್ನು ವಿಶ್ವಕಪ್‌ನಲ್ಲಿ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (1537), ವೆಸ್ಟ್ ಇಂಡೀಸ್‌ನ ಬ್ರಯನ್ ಲಾರಾ (1225), ಶ್ರೀಲಂಕಾದ ಸನತ್ ಜಯಸೂರ್ಯ (1165), ಆಸ್ಟ್ರೇಲಿಯಾದ ಆ್ಯಡಮ್ ಗಿಲ್‌ಕ್ರಿಸ್ಟ್ (1085), ಪಾಕಿಸ್ತಾನದ ಜಾವೇದ್ ಮಿಯಾಂದಾದ್ (1083), ನ್ಯೂಜಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ (1075), ದಕ್ಷಿಣ ಅಫ್ರಿಕಾದ ಹರ್ಷೆಲ್ ಗಿಬ್ಸ್ (1067), ಶ್ರೀಲಂಕಾದ ಅರವಿಂದ್ ಡಿಸಿಲ್ವಾ (1064), ವಿಂಡೀಸ್‌ನ ವಿವಿಯನ್ ರಿಚರ್ಡ್ಸ್ (1013), ಭಾರತದ ಸೌರವ್ ಗಂಗೂಲಿ (1006), ಆಸ್ಟ್ರೇಲಿಯಾದ ಮಾರ್ಕ್ ವಾ (1004) ಇದ್ದಾರೆ.* ಆಸ್ಟ್ರೇಲಿಯಾದ ಗ್ಲೆನ್ ಮೆಕ್‌ಗ್ರಾ ಹಾಗೂ ರಿಕಿ ಪಾಂಟಿಂಗ್ ಅವರು ಅತಿ ಹೆಚ್ಚು ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ತಲಾ 39 ಪಂದ್ಯಗಳನ್ನು ಆಡಿರುವ ಅವರು ಸಮನಾಗಿ ನಿಂತಿದ್ದಾರೆ. ಪಾಂಟಿಂಗ್ ಈ ಬಾರಿ ಇನ್ನಷ್ಟು ಮುಂದೆ ಸಾಗುವ ಅವಕಾಶ ಹೊಂದಿದ್ದಾರೆ. 35 ಹಾಗೂ ಅದಕ್ಕೂ ಹೆಚ್ಚು ಪಂದ್ಯ ಆಡಿದವರ ಪಟ್ಟಿಯಲ್ಲಿ ಲಂಕಾದ ಸನತ್ ಜಯಸೂರ್ಯ (38), ಪಾಕಿಸ್ತಾನದ ವಾಸೀಮ್ ಅಕ್ರಮ್ (38), ಭಾರತದ ಸಚಿನ್ ತೆಂಡೂಲ್ಕರ್ (36), ಲಂಕಾದ ಅರವಿಂದ್ ಡಿಸಿಲ್ವಾ (35) ಹಾಗೂ ಪಾಕ್‌ನ ಇಂಜಮಾಮ್ ಉಲ್ ಹಕ್ (35) ಇದ್ದಾರೆ.* ವಿಶ್ವಕಪ್‌ನಲ್ಲಿ ವಿವಿಧ ದೇಶಗಳ ಪರವಾಗಿ ಬ್ಯಾಟ್ಸ್‌ಮನ್‌ಗಳು ಒಟ್ಟಾರೆ 103 ಶತಕಗಳನ್ನು ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ತಂಡದವರು ಹೆಚ್ಚು (21) ಶತಕ ಗಳಿಸಿದ್ದು ವಿಶೇಷ. ನಂತರದ ಸ್ಥಾನದಲ್ಲಿ ಭಾರತ (15), ವೆಸ್ಟ್ ಇಂಡೀಸ್ (13), ಪಾಕಿಸ್ತಾನ (13) ಹಾಗೂ ನ್ಯೂಜಿಲೆಂಡ್ (11) ತಂಡದವರಿದ್ದಾರೆ. ಮೊಟ್ಟ ಮೊದಲ ಶತಕ ಗಳಿಸಿದ್ದು ಇಂಗ್ಲೆಂಡ್‌ನ ಡೆನ್ನಿಸ್ ಲೆಸಿಲ್ ಆ್ಯಮಿಸ್ (137). 1975ರ ಜೂನ್ 7ರಂದು ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತದ ವಿರುದ್ಧ ಶತಕ ಸಾಧನೆ ಮಾಡಿದ್ದರು. ಅದೇ ವಿಶ್ವಕಪ್‌ನಲ್ಲಿ ಮತ್ತೆ ಐದು ಶತಕ ವೀರರನ್ನು ನೋಡುವ ಅವಕಾಶ ಸಿಕ್ಕಿತ್ತು. ನ್ಯೂಜಿಲೆಂಡ್‌ನ ಗ್ಲೆನ್ ಟರ್ನರ್ (171* ಮತ್ತು 114*), ಇಂಗ್ಲೆಂಡ್‌ನ ಕೇಥ್ ಫ್ಲೆಚರ್ (131), ಆಸ್ಟ್ರೇಲಿಯಾದ ಆ್ಯಲನ್ ಟರ್ನರ್ (101) ಹಾಗೂ ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ (102) ಅವರು ನೂರರ ಗಡಿ ದಾಟಿ ಸಂಭ್ರಮಿಸಿದ್ದರು.* ಬಲಗೈ ಬ್ಯಾಟ್ಸ್‌ಮನ್‌ಗಳು ಶತಕ ಗಳಿಕೆಯಲ್ಲಿ ಮುಂದಿದ್ದಾರೆ. ವಿಶ್ವಕಪ್‌ನಲ್ಲಿ ಕಾಣಿಸಿದ 103 ಶತಕಗಳಲ್ಲಿ 72 ಬಾರಿ ಬಲಗೈ ಬ್ಯಾಟ್ಸ್‌ಮನ್‌ಗಳು ನೂರು ರನ್ ಗಳಿಸಿದ್ದಾರೆ. 31 ಬಾರಿ ಎಡಗೈ ಬ್ಯಾಟ್ಸ್‌ಮನ್ ಈ ಮಟ್ಟದ ಸಾಧನೆ ಮಾಡಿದ್ದಾರೆ. ದಕ್ಷಿಣ ಅಫ್ರಿಕಾದ ಗ್ಯಾರಿ ಕರ್ಸ್ಟನ್ ಅವರು ರಾವಲ್ಪಿಂಡಿಯಲ್ಲಿ ಯುಎಇ ವಿರುದ್ಧ (16ನೇ ಫೆಬ್ರುವರಿ 1996) ಗಳಿಸಿದ್ದ ಅಜೇಯ 188 ರನ್ ಈವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.* ವಿಶ್ವಕಪ್‌ನಲ್ಲಿ ತಂಡದ ನಾಯಕರಾಗಿದ್ದುಕೊಂಡು ವಿವಿಧ ಆಟಗಾರರು ಶತಕದ ಶ್ರೇಯ ಪಡೆದ ಘಟನೆ ನಡೆದಿದ್ದು 18 ಬಾರಿ ಮಾತ್ರ. ನಾಯಕನೊಬ್ಬ ವಿಶ್ವದ ದೊಡ್ಡ ಏಕದಿನ ಕ್ರಿಕೆಟ್ ಉತ್ಸವದಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದ್ದು 13ನೇ ಅಕ್ಟೋಬರ್ 1987ರಲ್ಲಿ. ವೆಸ್ಟ್ ಇಂಡೀಸ್ ತಂಡದ ನೇತೃತ್ವ ವಹಿಸಿದ್ದ ವಿವಿಯನ್ ರಿಚರ್ಡ್ಸ್ ಅವರು ಶ್ರೀಲಂಕಾ ವಿರದ್ಧ ಕರಾಚಿಯಲ್ಲಿ 181 ರನ್ ಗಳಿಸಿ ಗಮನ ಸೆಳೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.