ಶುಕ್ರವಾರ, ಫೆಬ್ರವರಿ 26, 2021
27 °C
ಕಲಾಪ

ಮಿರಾಂಡಾ ರೇಖೆಗಳಲ್ಲಿ ಕರ್ನಾಟಕದ ಪ್ರತಿಬಿಂಬ

ಸುಬ್ರಮಣ್ಯ ಎಚ್.ಎಂ Updated:

ಅಕ್ಷರ ಗಾತ್ರ : | |

ಮಿರಾಂಡಾ ರೇಖೆಗಳಲ್ಲಿ ಕರ್ನಾಟಕದ ಪ್ರತಿಬಿಂಬ

ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (1976) ಕರ್ನಾಟಕದ  ಪ್ರಮುಖ ಸಾಧನೆಗಳನ್ನು ಖ್ಯಾತ ಇಂಗ್ಲಿಷ್ ಲೇಖಕ ಡಾಮ್ ಮೋರಿಸ್‌ ಅವರು ‘ದಿ ಓಪನ್ ಐಸ್’ ಕೃತಿಯಲ್ಲಿ ಸಮಗ್ರವಾಗಿ ದಾಖಲಿಸಿದ್ದರು.ಈ ಕೃತಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಮಾರಿಯೋ ಡಿ ಮಿರಾಂಡಾ ಅವರು ಚಿತ್ರಗಳನ್ನು ಬರೆದಿದ್ದಾರೆ. ಈ ಪುಸ್ತಕ ಹೊರಬರಲು ಪ್ರಮುಖ ರೂವಾರಿ ಅಂದಿನ ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕರಾಗಿದ್ದ ಚಿರಂಜೀವಿ ಸಿಂಗ್.ಜಾಹೀರಾತು ಬದಲು ಪುಸ್ತಕ

70ರ ದಶಕದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದ  ಅವಧಿಯಲ್ಲಿ ಪತ್ರಿಕೆಗಳಲ್ಲಿ ಪೂರ್ಣ ಪುಟಗಳ ಜಾಹೀರಾತುಗಳ ಪ್ರವಾಹವೇ ಹರಿದಿತ್ತು. ಯಾರೂ ಓದದಿರುವ ಜಾಹೀರಾತುಗಳಿಗಾಗಿ ಹಣ ಸುರಿಯುವುದಕ್ಕಿಂತ ಕರ್ನಾಟಕದ ಸಾಧನೆ ಬಿಂಬಿಸುವ ಪುಸ್ತಕ ಯಾಕೆ ಬರೆಸಬಾರದು ಎಂಬ ಸೃಜನಶೀಲ ಯೋಚನೆ ಚಿರಂಜೀವಿಸಿಂಗ್ ಅವರಿಗೆ ಹೊಳೆಯಿತು.ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಜಿ.ವಿ.ಕೆ. ರಾವ್ ಅವರು  ಡಾಮ್ ಮೋರಿಸ್ ಅವರಿಂದ ಕರ್ನಾಟಕ ಕುರಿತು ಪುಸ್ತಕ ಬರೆಸಲು ಚಿರಜೀವಿಸಿಂಗ್ ಅವರಿಗೆ ಸಲಹೆ ನೀಡಿದರು. ಪುಸ್ತಕ ಬರೆಯಲು ಒಪ್ಪಿದ ಮೋರಿಸ್ ಪುಸ್ತಕಕ್ಕೆ ಮಾರಿಯೋ ಮಿರಾಂಡಾ ಅವರಿಂದ ಚಿತ್ರ ಬರೆಸುವಂತೆ ಸೂಚಿಸಿದರು. ಮಾರಿಯೋ ಸಹ ಈ ಪ್ರಸ್ತಾವಕ್ಕೆ ಒಪ್ಪಿದರು.ಮೋರಿಸ್‌ ಕರ್ನಾಟಕದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿದರು. ಇದೇ ಸಂದರ್ಭ ಮಾರಿಯೋ ತಮಗೆ ಮುಖ್ಯವೆನಿಸಿದ ಸಂದರ್ಭಗಳನ್ನು ಚಿತ್ರಿಸಿದರು. ಅವರೆಷ್ಟು ಚುರುಕಾಗಿ ಚಿತ್ರ ಬರೆದರು ಎಂದರೆ ಪುಸ್ತಕ ಪೂರ್ಣಗೊಳ್ಳುವ ಮೊದಲೇ  ಚಿತ್ರಗಳು ಸಿದ್ಧಗೊಂಡಿದ್ದವು!ಅವರು ಬರೆದ ಚಿತ್ರಗಳು ಪುಸ್ತಕದಲ್ಲಿ ದಾಖಲಿಸಿದ ಸನ್ನಿವೇಶಗಳಿಗೆ ಸರಿ ಹೊಂದುವುದರ ಜೊತೆಗೆ ಸ್ವತಂತ್ರ ಕೃತಿಯ ಮೌಲ್ಯವನ್ನೂ ಪಡೆದಿದ್ದವು.ಕರ್ನಾಟಕದ ಪ್ರತಿಬಿಂಬ

‘ದಿ ಓಪನ್ ಐಸ್’ ಪುಸ್ತಕದಲ್ಲಿ ಮೊರೀಸ್ ಅವರು ದಾಖಲಿಸಿದ ವಿಷಯಗಳಿಗೆ ಅನುಗುಣವಾಗಿ ಮಾರಿಯೋ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಸರ್ಕಾರದ ಶಕ್ತಿ ಕೇಂದ್ರ ವಿಧಾನಸೌಧದಿಂದ ಆರಂಭಗೊಂಡು, ಮೈಸೂರಿನಲ್ಲಿ ಕುವೆಂಪು,  ನಾಗರಹೊಳೆ ಅಭಯಾರಣ್ಯ, ಕೊಡಗಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಕಾಫಿ ಎಸ್ಟೇಟ್, ಅಲ್ಲಿನ ಜನಜೀವನ ಮತ್ತು ಸಂಸ್ಕೃತಿ ಬಗ್ಗೆ  ಮನೋಜ್ಞವಾಗಿ ಚಿತ್ರಿಸಿದ್ದಾರೆ.ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ಚಿತ್ರಗಳು, ಮಂಗಳೂರಿನ ಕಡಲ ಕಿನಾರೆ,  ಶಿವರಾಮಕಾರಂತ, ಯಕ್ಷಗಾನ, ಕರಾವಳಿ ತೀರ ಪ್ರದೇಶದ ಮೊಗವೀರರ ಬದುಕಿನ  ಮಾಹಿತಿಯೂ  ಮಾರಿಯೋ ಅವರ ಚಿತ್ರಗಳಲ್ಲಿ ದಾಖಲಾಗಿದೆ.ದಾಂಡೇಲಿ, ಕಾಳಿ ನದಿ ಯೋಜನೆ, ಹಾಲಕ್ಕಿ ಒಕ್ಕಲಿಗರ ಜೀವನ ಪದ್ಧತಿ, ಧಾರವಾಡದಲ್ಲಿ ಬೇಂದ್ರೆ, ಹಿಂದೂಸ್ತಾನಿ ಗಾಯಕ  ಮಲ್ಲಿಕಾರ್ಜುನ ಮನ್ಸೂರ ಅವರ ಕುರಿತ ಮಾಹಿತಿ ಬಗ್ಗೆಯೂ ರೇಖೆಗಳನ್ನು ಪಡಿ ಮೂಡಿಸಿದ್ದಾರೆ.ಕಿತ್ತೂರಿನ ಕೋಟೆ, ಆಲಮಟ್ಟಿ ಯೋಜನೆ, ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಜೋಗತಿ ನೃತ್ಯ, ಗೋಲ್ ಗುಂಬಜ್ ಹೀಗೆ ರಾಜ್ಯದ ಪ್ರಮುಖ ತಾಣಗಳು, ವ್ಯಕ್ತಿಗಳು ಮತ್ತು ಸಂಸ್ಕೃತಿ ಮುಖಾಮುಖಿಯನ್ನು ಮಾರಿಯೋ ತಮ್ಮ ರೇಖೆಗಳ ಮೂಲಕ ಮಾಹಿತಿ ಹೂರಣವನ್ನು  ಉಣಬಡಿಸಿದ್ದಾರೆ.ಚಿತ್ರಗಳ ಪ್ರದರ್ಶನ

ಕರ್ನಾಟಕದ ಬಗ್ಗೆ ಅಪರೂಪದ ಮಾಹಿತಿ ನೀಡುವ ‘ದಿ ಓಪನ್ ಐಸ್’ ಕೃತಿಯಲ್ಲಿ ಗೋವಾದ ಖ್ಯಾತ ವ್ಯಂಗ್ಯಚಿತ್ರಗಾರ ಮಾರಿಯೋ ಮಿರಾಂಡ ಅವರು  ರಚಿಸಿರುವ ರೇಖಾಚಿತ್ರಗಳ ಪ್ರದರ್ಶನ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದೆ.ನಾಳೆ (ಆ.6) ಬೆಳಿಗ್ಗೆ 11ಕ್ಕೆ ಪ್ರದರ್ಶನ ಆರಂಭವಾಗುವ ಪ್ರದರ್ಶನ ಆ.27ರವರೆಗೆ ನಡೆಯಲಿದೆ. ಬೆಳಿಗ್ಗೆ10ರಿಂದ ಸಂಜೆ 6ರವರಗೆ (ಭಾನುವಾರ ಹೊರತುಪಡಿಸಿ) ಸಾರ್ವಜನಿಕರಿಗೆ ಮುಕ್ತವಾಗಿದೆ.***

ಸಂತೋಷದ ಸಂಗತಿ

ಮಾರಿಯೋ ಮಿರಾಂಡ ಅವರು ‘ದಿ ಓಪನ್ ಐಸ್’ ಪುಸ್ತಕಕ್ಕಾಗಿ ಬರೆದಿರುವ ಅಪರೂಪ ರೇಖಾ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದು ಸಂತೋಷದ ಸಂಗತಿ. ದೇವರಾಜ ಅರಸು ಅವರೊಂದಿಗೆ ನನ್ನನ್ನೂ ಸೇರಿಸಿ ಚಿತ್ರ ರಚಿಸಿಲಾಗಿದೆ. ಪುಸ್ತಕ ಅಚ್ಚಾದ ಮೇಲೆ ಈ ಸಂಗತಿ ಗೊತ್ತಾಯಿತು. ‘ನೀವು ಇಲ್ಲದ ಮೇಲೆ ಈ ಪುಸ್ತಕ ಅಪೂರ್ಣ’ ಎಂದು ಮೊರೀಸ್ ಆಗ ಉದ್ಗರಿಸಿದ್ದರು.

–ಚಿರಂಜೀವಿಸಿಂಗ್, ನಿವೃತ್ತ ಐಎಎಸ್‌ ಅಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.