ಸೋಮವಾರ, ಮೇ 23, 2022
20 °C

ಮೀಸಲಾತಿ ಹೋರಾಟಕ್ಕೆ ಎಸ್‌ವಿಆರ್ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಾಲ್ಮೀಕಿ ನಾಯಕ ಸಮುದಾಯ ಮೀಸಲಾತಿ ಹೆಚ್ಚಳಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರಪ್ಪ ತಿಳಿಸಿದರು.ತಾಲ್ಲೂಕಿನ ಐಗೂರು ಗ್ರಾಮದಲ್ಲಿ ವಾಲ್ಮೀಕಿ ಯುವಕರ ಸಂಘ ಆಯೋಜಿಸಲಾಗಿದ್ದ ಆದಿಕವಿ ವಾಲ್ಮೀಕಿ ಮಹರ್ಷಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.ಶತಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ನಾಯಕ ಸಮಾಜವನ್ನು ಮೇಲೇತ್ತಬೇಕಾದರೆ, ಶೇ. 7.05ರಷ್ಟು ಮೀಸಲಾತಿ ಅವಶ್ಯಕವಾಗಿ ಬೇಕಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲೂ ಒತ್ತಡ ತರುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮ ಆಯೋಜಿಸಿರುವ ಶ್ರಿವಾಲ್ಮೀಕಿ ಯುವಕರ ಸಂಘದ ಕಾರ್ಯಕರ್ತರು ಇನ್ನಷ್ಟು ಹೆಚ್ಚು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು, ದೀನ ದಲಿತರಿಗೆ ಹೆಚ್ಚಿನ ಸಹಾಯ ಮಾಡುವುದರ ಜತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.ರಾಜನಹಳ್ಳಿ ಶ್ರಿಮಠದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ನಿಮಗೆ ಮೀಸಲಾತಿಯನ್ನು ಪಡೆಯುವ ಹಕ್ಕು ಇದೆ. ಯಾರೇ ಏನ್ನಂದರೂ ನೀವು ನಿಮ್ಮ ನಿಲುವಿನಿಂದ ವಿಚಲಿತರಾಗದೆ, ಸಂಘಟಿತ ಹೋರಾಟ ಮಾಡುವ ಮೂಲಕ ನಿಮ್ಮ ಹಕ್ಕನ್ನು ಪಡೆಯಬೇಕು. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.ನಾಯಕ ಸಮಾಜದ ಮುಖಂಡ ಹಾಗೂ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಸಚಿವರೊಬ್ಬರು ನಾಯಕ ಸಮಾಜ ಮೀಸಲಾತಿಗೆ ಜೋತು ಬೀಳದೆ, ಪ್ರತಿಭೆಯ ಮೂಲಕ ಅವಕಾಶಗಳನ್ನು ಪಡೆಯುವ ಮೂಲಕ ಅಭಿವೃದ್ಧಿ ಆಗಬೇಕೆಂದು ಹೇಳುವ ಮೂಲಕ ಮೀಸಲಾತಿ ವಿರೋಧಿನೀತಿಯನ್ನು ಅನುಸರಿಸಿದ್ದಾರೆ. ಇದನ್ನು ನಾಯಕ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು.ಬಸವರಾಜ್ ನಾಯ್ಕ ವಿರುದ್ಧ ಅಸಮಾಧಾನ: ಕಾರ್ಯಕ್ರಮದ ಆಯೋಜಕರು ಹಾಗೂ ಸಂಘದ ಕಾರ್ಯದರ್ಶಿ ಪಿ.ಎಸ್. ಹನುಮಂತಪ್ಪ ಮಾತನಾಡಿ, ಶಾಸಕ ಹಾಗೂ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯ್ಕ ಅವರಿಗೆ ನಮ್ಮ ಸಮಾಜದ ಬಗ್ಗೆ ಕಾಳಜಿಯೇ ಇಲ್ಲ. ಅವರನ್ನು ಹಲವು ಬಾರಿ ಕಾರ್ಯಕ್ರಮಗಳಿಗೆ ಆಹ್ವಾನಿಸಿದ್ದರೂ ಹಾಜರಾಗದೇ, ಸಮಾಜವನ್ನು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ಜಿ.ಪಂ ಸದಸ್ಯ ಎಂ.ಕೆ. ಚಿದಾನಂದ್, ಪ್ರೇಮಾ ಸಿದ್ದೇಶ್, ಟಿ. ದಾಸಕರಿಯಪ್ಪ, ತಾ.ಪಂ. ಉಪಾಧ್ಯಕ್ಷ ಶಿವರುದ್ರಪ್ಪ, ಶ್ರಿನಿವಾಸ್, ಹುಚ್ಚವ್ವನಹಳ್ಳಿ ಮಂಜುನಾಥ್, ಗೋಪಾಲಪ್ಪ, ಅಂಜಿನಮ್ಮ, ವಿ. ಪುಷ್ಪಲತಾ, ಡಾ.ಜಗದೀಶ್, ಡಾ.ಎಚ್ ಗುಡದೇಶ್ವರಪ್ಪ, ಅಡೆವ್ಯಪ್ಪ, ಮಲ್ಲಾಪುರ ದೇವರಾಜ್ ಮತ್ತಿತರರು ಹಾಜರಿದ್ದರು.ಸಂಘದ ಅಧ್ಯಕ್ಷ ತಿಪ್ಪೇಶಿ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಎಸ್. ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು. ನಂದಿಬಸಪ್ಪ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.