ಗುರುವಾರ , ಮೇ 13, 2021
22 °C

ಮೀಸೆ ಮೂಡಿಸಿಕೊಂಡ ನೆನಪು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಆಗಿನ್ನೂ ಎಳೆ ವಯಸ್ಸು. ಮುಖದಲ್ಲಿ ಮೀಸೆ ಮೂಡಿರಲಿಲ್ಲ. ಚಿತ್ರದಲ್ಲಿ ನಾಯಕನ ಪಾತ್ರ ಅರಸಿ ಬಂತು. ಚಿಗುರು ಮೀಸೆಯ ಕಾಲೇಜು ಯುವಕನ ಪಾತ್ರವದು. ಮೀಸೆ ಮೂಡುವ ಲಕ್ಷಣವೇ ಇಲ್ಲದ ಮುಖದಲ್ಲಿ ಚಿಗುರು ಮೀಸೆ ಎಲ್ಲಿಂದ. ಬೇರೆ ಪಾತ್ರಗಳಿಗೆ ಮಾಡುವಂತೆ ಕೃತಕ ಮೀಸೆ ಅಂಟಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲ ಚಿತ್ರದ ಉತ್ಸಾಹ ಬೇರೆ. ರೇಜರ್ ಹಿಡಿಯುವುದು ಸರಿಯಾಗಿ ತಿಳಿದಿರದಿದ್ದರೂ ಹೇಗೋ ದಿನಕ್ಕೆರಡು ಬಾರಿ ಇಲ್ಲದ ಮೀಸೆಯನ್ನೇ ತೆಗೆಯತೊಡಗಿದರು. ಅಂತೂ ಇಂತೂ ಚಿತ್ರೀಕರಣ ಶುರುವಾಗುವ ಹೊತ್ತಿಗೆ ಚಿಕ್ಕದಾಗಿ ಮೀಸೆಯೂ ಚಿಗುರಿತ್ತು.

ನಟ ಪ್ರಜ್ವಲ್ ದೇವರಾಜ್ ತಮ್ಮ ಮೊದಲ ಚಿತ್ರ `ಸಿಕ್ಸರ್~ಗಾಗಿ ಮುಖದಲ್ಲಿ ಮೀಸೆ ಮೂಡಿಸಿಕೊಳ್ಳಲು ಹರಸಾಹಸ ಪಟ್ಟಿದ್ದನ್ನು ನಗುನಗುತ್ತಾ ನೆನಪಿಸಿಕೊಂಡರು. ಬಣ್ಣಹಚ್ಚುವ ಸಂಭ್ರಮ ಸಡಗರದ ನಡುವೆ ಮಜ ನೀಡಿದ ಘಟನೆಯದು ಎಂದು ಆ ದಿನಗಳ ರಸಗಳಿಗೆಗಳನ್ನು ಮೆಲುಕು ಹಾಕಿದರು.

ಪ್ರಜ್ವಲ್ ಅಭಿನಯದ ಮೂರು ಚಿತ್ರಗಳು ಬಿಡುಗಡೆ ಹೊಸ್ತಿಲಲ್ಲಿ ನಿಂತಿವೆ. `ಸಾಗರ್~, `ಗೋಕುಲ ಕೃಷ್ಣ~ ಮತ್ತು ತೆಲುಗಿನ `ಸೀಮಾ ಶಾಸ್ತ್ರಿ~ ಚಿತ್ರದ ರೀಮೇಕ್ `ಸೂಪರ್ ಶಾಸ್ತ್ರಿ~. ಈ ಮೂರೂ ಚಿತ್ರಗಳ ಮೇಲೆ ಅವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೂರೂ ಚಿತ್ರಗಳೂ ವಿಭಿನ್ನ ಕಥಾ ಹಂದರ ಹೊಂದಿವೆ ಎನ್ನುವ ಅವರಿಗೆ `ಭದ್ರ~ ಚಿತ್ರದ ಗೆಲುವು ವಿಶ್ವಾಸ ಮೂಡಿಸಿದೆ. ಈ ಚಿತ್ರಗಳ ಬಿಡುಗಡೆಯಲ್ಲಿ ಅಂತರವಿರುತ್ತದೆ. ಹೀಗಾಗಿ ತಮ್ಮ ಚಿತ್ರಗಳ ನಡುವೆಯೇ ಪೈಪೋಟಿ ಏರ್ಪಡುವ ಭಯವಿಲ್ಲ ಎನ್ನುತ್ತಾರೆ.

ಸೋಮನಾಥ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಶೀಘ್ರವೇ ಅವರು ಬಣ್ಣಹಚ್ಚಲಿದ್ದಾರೆ. ಕಥೆ ಬಯಸಿದರೆ ಸಿಕ್ಸ್‌ಪ್ಯಾಕ್‌ಗಾಗಿ ದೇಹವನ್ನು ದಂಡಿಸಿಕೊಳ್ಳಲು ಸಿದ್ಧರಾಗಿದ್ದಾರಂತೆ.

ವಿವಾದದಿಂದ ಸದಾ ದೂರವಿರುವ ಪ್ರಜ್ವಲ್ ಇತ್ತೀಚೆಗೆ ನಿರ್ಮಾಪಕ ಮುನಿರತ್ನ ನಾಯಕರ ಬಗ್ಗೆ ಮಾಡಿರುವ ಆರೋಪದ ಬಗ್ಗೆ ಕೇಳಿದರೆ ಹೇಳುವುದಿಷ್ಟು: `ಸುಮಾರು 17 ಚಿತ್ರಗಳಲ್ಲಿ ನಟಿಸಿದ್ದೇನೆ. ಇದುವರೆಗೆ ನನ್ನ ವಿರುದ್ಧ ಯಾರೂ ಆರೋಪ ಮಾಡಿಲ್ಲ. ಯಾರ ಬಗ್ಗೆ ಯಾರಾದರೂ ಮಾತನಾಡಲಿ, ಪ್ರಜ್ವಲ್ ಬಗ್ಗೆ ಯಾರೂ ಕೆಟ್ಟದಾಗಿ ಮಾತನಾಡಬಾರದು. ಯಾರಿಗೂ ತೊಂದರೆ ಕೊಡಬಾರದು, ಅನಗತ್ಯ ವಿವಾದದಲ್ಲಿ ಸಿಕ್ಕಿಕೊಳ್ಳಬಾರದು. ತಂದೆಯಿಂದ ಕಲಿತ ಪಾಠವಿದು. ಅದನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ~.

ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪನೆ ಉದ್ದೇಶವಿದೆ. ಆದರೆ ಅದಕ್ಕೆ ಸಿದ್ಧತೆ ಬೇಕು, ಹಣವೂ ಬೇಕು ಎನ್ನುತ್ತಾರೆ ಪ್ರಜ್ವಲ್. ಬಿಬಿಎಂ ಓದುತ್ತಿರುವ ಅವರ ಕಿರಿಯ ಸಹೋದರ ಸಹ ಸಿನಿಮಾ ರಂಗಕ್ಕಿಳಿಯುವ ಕನಸು ಕಾಣುತ್ತಿದ್ದಾರೆ. ಹೋಂ ಬ್ಯಾನರ್ ಮೂಲಕವೇ ಅವರ ಸಿನಿಮಾ ಪ್ರವೇಶವಾಗುವ ಸಾಧ್ಯತೆಯಿದೆ. ಓದು ಮುಗಿಯದ ಹೊರತು ಅವರು ಬಣ್ಣಹಚ್ಚುವಂತಿಲ್ಲ. ತಂದೆ ದೇವರಾಜ್ ಓದಿನ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. `ನಾನು ಓದುವಾಗಲೇ ಅವಕಾಶ ಬಂದಿದ್ದು. ಹೀಗಾಗಿ ಸಿನಿಮಾ ಪ್ರವೇಶಿಸಿದ ಬಳಿಕ ಸರ್ಕಸ್ ಮಾಡಿ ಗೆಳೆಯರ ಸಹಾಯದಿಂದ ಓದು ಮುಗಿಸಿದ್ದೆ~ ಎನ್ನುವ ಪ್ರಜ್ವಲ್‌ಗೆ ಈಗ ಓದಿನ ಕಾಟವಿಲ್ಲ. ಗೆಲುವಿನ ಓಟದಲ್ಲಷ್ಟೇ ಗಮನ ಹರಿಸಿರುವ ಅವರು ಈ ವರ್ಷ ಹ್ಯಾಟ್ರಿಕ್ ಗೆಲುವಿನ ಭರವಸೆ ಇಟ್ಟುಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.