ಶುಕ್ರವಾರ, ಮೇ 7, 2021
26 °C

ಮುಂಗಾರು ಉತ್ತಮ: ರೈತರಲ್ಲಿ ಹರ್ಷ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ/ಬಿ.ಎಂ. ರವೀಶ್ Updated:

ಅಕ್ಷರ ಗಾತ್ರ : | |

ಬೇಲೂರು: ಕಳೆದ ವರ್ಷ ಭೀಕರ ಬರಗಾಲದಿಂದ ತತ್ತರಿಸಿದ ರೈತಾಪಿ ವರ್ಗಕ್ಕೆ ಈ ವರ್ಷ ಆರಂಭದ ಮುಂಗಾರು ಮಳೆ ರೈತರಿಗೆ ಹರ್ಷದಾಯಕವೆನಿಸಿದೆ. ಮೇ ಹಾಗೂ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದ್ದು, ಬಹುತೇಕ ಬೆಳೆಗಳ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ, ಹೆಬ್ಬಾಳು ಗ್ರಾಮದಲ್ಲಿ ಶುಂಠಿ ಬೆಳೆಗೆ ಮಹಾಕಾಳಿ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.ತಾಲ್ಲೂಕಿನ 6 ಮಳೆ ಮಾಪನ ಕೇಂದ್ರಗಳ ಸರಾಸರಿಯಂತೆ ಬೇಲೂರು ತಾಲ್ಲೂಕಿನಲ್ಲಿ ಜೂನ್ 18ರವರೆಗೆ 481.9 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ವರ್ಷ ಜೂನ್ ಅಂತ್ಯಕ್ಕೆ ಕೇವಲ 280.1 ಮಿ.ಮೀ. ಮಳೆ ಬಿದ್ದಿತ್ತು. ಈ ವರ್ಷ ಫೆಬ್ರವರಿಯಲ್ಲಿ 17.4 ಮಿ.ಮೀ. ಮಾರ್ಚ್‌ನಲ್ಲಿ 32.2 ಮಿ.ಮೀ. ಏಪ್ರಿಲ್‌ನಲ್ಲಿ 137.8, ಮೇ ತಿಂಗಳಿನಲ್ಲಿ 123.9 ಮತ್ತು ಜೂನ್ ತಿಂಗಳಿನಲ್ಲಿ 481.9 ಮಿ.ಮೀ. ಮಳೆ ಆಗಿದೆ.ಕಳೆದ ವರ್ಷ ಭೀಕರ ಬರಗಾಲದ ಪರಿಣಾಮ ಬಿತ್ತನೆ ಕಾರ್ಯದಲ್ಲಿ ಭಾರಿ ಹಿನ್ನಡೆಯಾದ ಕಾರಣ ಆಹಾರ ಧಾನ್ಯ ಉತ್ಪಾದನೆಯಲ್ಲಿಯೂ ಭಾರಿ ಪ್ರಮಾಣದಲ್ಲಿ ಕುಂಠಿತಗೊಂಡಿತ್ತು. ಈ ವರ್ಷ ಮುಂಗಾರು ಹಂಗಾಮಿನಲ್ಲಿ 27,275 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಜೂನ್ 15ರ ವೇಳೆಗೆ 12,540 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಮಾಡಲಾಗಿದೆ.14,500 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆ ಗುರಿ ಹೊಂದಲಾಗಿದೆ. ಹೈಬ್ರೀಡ್ ಜೋಳ, ತೊಗರಿ, ಉದ್ದು, ಅಲಸಂದೆ, ಅವರೆ, ಹುರುಳಿ, ಎಳ್ಳು, ಸೂರ್ಯಕಾಂತಿ, ನೆಲಗಡಲೆ, ಸಾಸುವೆ, ಹುಚ್ಚೆಳ್ಳು, ಹರಳು ಬೆಳೆಗಳನ್ನು 3,225 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 2,690 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ಕಾಳುಗಳು ಮತ್ತು ಸೂರ್ಯಕಾಂತಿ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಾಗೇಂದ್ರ ಪ್ರಸಾದ್ `ಪ್ರಜಾವಾಣಿ'ಗೆ ತಿಳಿಸಿದರು.ತೋಟಗಾರಿಕೆ ಬೆಳೆಗಳಾದ ಆಲೂಗೆಡ್ಡೆಯನ್ನು 700 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 1 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಕಳೆದ ವರ್ಷ 1200 ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲಾಗಿತ್ತು. ಆಲೂಗೆಡ್ಡೆಗೆ ಯಾವುದೇ ರೀತಿಯ ರೋಗ ಕಾಣಿಸಿಕೊಂಡಿಲ್ಲ. ಎಲ್ಲೆಡೆ ಹದ ಮಳೆಯಾಗಿರುವುದರಿಂದ ಆಲೂಗೆಡ್ಡೆ ಗಿಡಗಳು ನಳನಳಿಸುತ್ತಿವೆ.ಶುಂಠಿ ಬಿತ್ತನೆ ಪ್ರಮಾಣವೂ ಶೇಕಡ 55ಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯವರೆಗೆ 470 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತಾಲ್ಲೂಕಿನ ಕೆಲವೆಡೆ ಶುಂಠಿಗೆ ಮಹಾಕಾಳಿ ಎಂಬ ರೋಗ ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ. ದಿನವಿಡಿ ಸೋನೆ ಮಳೆ ಸುರಿದರೆ ಶುಂಠಿಗೆ ಈ ರೋಗ ತಗುಲಲಿದೆ. ಹೆಬ್ಬಾಳು ಗ್ರಾಮದ ಬಸವೇಗೌಡ ಎಂಬುವವರ ಜಮೀನಿನಲ್ಲಿ ಬಿತ್ತನೆಯಾಗಿದ್ದ ಶುಂಠಿಗೆ ಈ ರೋಗ ಕಾಣಿಸಿಕೊಂಡಿದೆ. ಒಟ್ಟಾರೆ ತಾಲ್ಲೂಕಿನೆಲ್ಲೆಡೆ ಮುಂಗಾರು ಮಳೆ ರೈತರಿಗೆ ಸಂತಸ ದಾಯಕವಾಗಿದ್ದರೂ ಕೆರೆ, ಕಟ್ಟೆ, ಜಲಾಶಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.