ಸೋಮವಾರ, ಜೂನ್ 14, 2021
20 °C

ಮುಂಗಾರು; ಮರದ ನೆಲಹಾಸು ಹುಷಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿಯ ಮುಂಗಾರು ಕಾಲಿಟ್ಟು ದಿನಗಳೇ ಕಳೆದಿವೆ. ಮಳೆ ಬಿದ್ದ ಪ್ರದೇಶಗಳಲ್ಲಿ ಮನೆಯ ಗೋಡೆ, ನೆಲಕ್ಕೆಲ್ಲ ಶೀತವಾದಂತಿದೆ. ಕಾಂಕ್ರೀಟ್ ಗೋಡೆ ಮುಟ್ಟಿದರೆ ತಂಪು ತಂಪು. ನೆಲವಂತೂ, ಈಗಷ್ಟೇ ಮನೆಗೆಲಸದವಳು ಒದ್ದೆ ಒರೆಸಿಟ್ಟು ಹೋದಹಾಗಿದೆ...ಮಳೆಗಾಲವೇ ಹಾಗೆ. ಹೊರಗಷ್ಟೇ ಅಲ್ಲ, ಮನೆಯೊಳಗೂ ತಂಪಾದ ವಾತಾವರಣ. ಹಾಗಾಗಿಯೇ ಗೋಡೆಗಲ್ಲವಾದರೂ ನೆಲಕ್ಕಾದರೂ ಕೊಂಚ ಆರೈಕೆ ಅಗತ್ಯ.ಮರದ ನೆಲಹಾಸು (ವುಡನ್ ಫ್ಲೋರಿಂಗ್) ಇದ್ದರಂತೂ ಹೆಚ್ಚಿನ ಆರೈಕೆ ಮತ್ತು ಸೂಕ್ಷ್ಮವಾಗಿ ಗಮನ ಹರಿಸಬೇಕಾದ ಅಗತ್ಯ ಈ ಸಂದರ್ಭದಲ್ಲಿ ಇರುತ್ತದೆ.ಸಾಮಾನ್ಯವಾಗಿ ಈ `ವರ್ಷಋತು~ವಿನಲ್ಲಿ ಮನೆಗಳಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸೋರುವುದು, ತೇವ ಮತ್ತು ಮನೆ ತಗ್ಗಿನಲ್ಲಿದ್ದರೆ ಒಳಕ್ಕೆ ನೀರು ನುಗ್ಗುವುದು...

ಮನೆಯ ಹಜಾರ (ಹಾಲ್) ಅಂದವಾಗಿ ಹಾಗೂ ಭಿನ್ನವಾಗಿ ಕಾಣಿಸಲೆಂದು ನೀವು ಮುತುವರ್ಜಿ ವಹಿಸಿ ಮರದಿಂದ ಫ್ಲೋರಿಂಗ್ ಮಾಡಿಸಿರುತ್ತೀರಿ. ಆದರೆ, ಇಂತ ಫ್ಲೋರಿಂಗ್ ಇರುವೆಡೆಎ ಈ `ವರ್ಷಋತು~ವಿನುದ್ದಕ್ಕೂ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮತ್ತು ನಿರ್ವಹಣೆ ಕೈಗೊಳ್ಳುವುದು ಬಹಳ ಅಗತ್ಯ.ದೀರ್ಘ ಕಾಲದವರೆಗೆ ಮರದ ನೆಲಹಾಸಿನ ಗುಣಮಟ್ಟವನ್ನು ಉಳಿಸಿಕೊಳ್ಳಲು ನಿಗದಿತ ಅವಧಿಯಲ್ಲಿ ಆರೈಕೆ  ಮಾಡುವುದು ಮತ್ತು ಸಮಸ್ಯೆ ಬರುವ ಮುನ್ನವೇ ಅಗತ್ಯವಾದಷ್ಟೂ ಗಮನಹರಿಸಬೇಕಾದ್ದು ಮುಖ್ಯ ಹಾಗೂ ಮುನ್ನೆಚ್ಚರಿಕೆಯ ಕ್ರಮ.ಲ್ಯಾಮಿನೇಟ್ ಮಾಡಿದ ಫ್ಲೋರ್‌ಗಳನ್ನು ಶುದ್ಧ ಮಾಡುವುದು ಬಹಳ ಸುಲಭ. ಅದಕ್ಕೆ ಹಾಕಬೇಕಾದ ಶ್ರಮವೂ ಕಡಿಮೆ ಪ್ರಮಾಣದ್ದೇ ಆಗಿರುತ್ತದೆ.ಹಾರ್ಡ್‌ವುಡ್(ಗಟ್ಟಿಯಾದ ಮರದ) ಫ್ಲೋರ್‌ಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯ ಲ್ಯಾಮಿನೇಟ್ ಫ್ಲೋರ್‌ಗಳನ್ನು ಅಳವಡಿಸುವುದು ಸುಲಭವಷ್ಟೇ ಅಲ್ಲ ಅವುಗಳ ನಿರ್ವಹಣೆಯ ಕೆಲಸವೂ ಬಹಳ ಕಡಿಮೆಯದೇ ಆಗಿರುತ್ತದೆ.ಮರದ ಫ್ಲೋರಿಂಗ್ ಇರುವಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ತೊಂದರೆಗಳೆಂದರೆ, ಫ್ಲೋರಿಂಗ್ ಗಾತ್ರದಲ್ಲಿ ಹಿಗ್ಗಿಕೊಳ್ಳುವುದು, ಗೀರುಗಳಾಗುವುದು, ಸೀಳು ಕಂಡುಬರುವುದು, ಧೂಳು, ಕೊಳೆ ಸೇರಿಕೊಳ್ಳುವುದೇ ಆಗಿವೆ.ವಾತಾವರಣದಲ್ಲಿನ ತೇವದ ಕಾರಣದಿಂದಾಗಿ ಮರದ ಫ್ಲೋರಿಂಗ್ ಹಿಗ್ಗಲಾರಂಭಿಸುತ್ತದೆ. ಈ ಸಮಸ್ಯೆಗೆ  ಮುನ್ನೆಚ್ಚರಿಕೆ ಕ್ರಮ, ಸೂಕ್ತ ಪರಿಹಾರವೆಂದರೆ ಮರದ ಫ್ಲೋರಿಂಗ್‌ಗೆ ಸೂಕ್ತ ರೀತಿಯಲ್ಲಿ ವ್ಯಾಕ್ಸ್ ಹಾಕುವುದಾಗಿದೆ. ಜತೆಗೆ ಪಾಲಿಶ್ ಮಾಡಿಸಿ ತೇವ ತಾಗದಂತೆ ರಕ್ಷಿಸುವ ಕೆಲಸವನ್ನೂ ಮರೆಯದೇ ಮಾಡಬೇಕು.ನೆಲಹಾಸು ನಿರ್ವಹಣೆ

ಅತ್ಯಂತ ಮುಖ್ಯವಾದ ಮುನ್ನೆಚ್ಚರಿಕೆ ಕ್ರಮವೆಂದರೆ ಮನೆಯ ಎಲ್ಲ ಕಿಟಕಿಗಳನ್ನೂ ರಾತ್ರಿ ವೇಳೆ ಮರೆಯದೇ ಮುಚ್ಚಿಬಿಡಿ. ಏಕೆಂದರೆ ಸಂಜೆಯಾಗುತ್ತಿದ್ದಂತೆ ತಂಪು ಗಾಳಿ ಮನೆಯೊಳಕ್ಕೆ ನುಗ್ಗುವುದು ಹೆಚ್ಚು. ಮೊದಲೇ ಮನೆಯೊಳಗೆ ಶೀತ ವಾತಾವರಣಕ್ಕೆ ತಂಪು ಗಾಳಿಯೂ ಸೇರಿದರೆ ಮರದ ನೆಲಹಾಸಿಗೆ ತೊಂದರೆ ಹೆಚ್ಚು.ಜತೆಗೆ ರಾತ್ರಿ ನೀವು ಮಲಗಿ ನಿದ್ರೆ ಹೋದ ನಂತರ ಮಳೆ ಬಂದರೆ, ಆಗ ಕಿಟಕಿಗಳೆಲ್ಲ ತೆರೆದುಕೊಂಡಿದ್ದರೆ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಮಳೆಯ ನೀರೆಲ್ಲ  ಮನೆಯೊಳಕ್ಕೆ ಎರಚಿ ಮರದ ನೆಲಹಾಸನ್ನೆಲ್ಲ ಹಾಳುಗೆಡವುತ್ತದೆ.ಎರಡನೇ ಮುಖ್ಯ ಕ್ರಮವೆಂದರೆ, ಹಗಲು ವೇಳೆ ಒಂದೊಮ್ಮೆ ಕಿಟಕಿ ಅಂಚಿನಿಂದಲೂ, ಬಾಲ್ಕನಿಯಿಂದಲೂ ಸಾಮಾನ್ಯವಾಗಿ ಮಳೆಯ ಸಿಂಚನವಾಗುತ್ತದೆ. ಆಗ ತಕ್ಷಣವೇ ನೆಲಕ್ಕೆ ಬಿದ್ದ ನೀರನ್ನು ಒಣಗಿದ ಬಟ್ಟೆಯಿಂದ ಒರೆಸಿರಿ. ನೆಲಹಾಸಿನ ಮೇಲೆ ನೀರು ನಾಲ್ಕು ಗಂಟೆಗೂ ಹೆಚ್ಚಿನ ಕಾಲ ಇದ್ದರೆ ನಿಮ್ಮ ಮರದ ಫ್ಲೋರಿಂಗ್‌ಹಾಳಾಗುವುದು ನಿಶ್ಚಿತ.ಸಾಮಾನ್ಯ ನಿರ್ವಹಣೆ ಕ್ರಮ

* ಮರದ ನೆಲಹಾಸು ಧೂಳು ಮತ್ತು ಕಸ ನಿರೋಧಕವಾಗಿದ್ದರೂ ಫ್ಲೋರ್ ಬ್ರಷ್‌ಗಳು ಮತ್ತು ಫ್ಲೋರ್ ಮ್ಯಾಟ್‌ಗಳಲ್ಲಿ ಸಿಲುಕಿಕೊಂಡಿರುವ ಧೂಳು ಮತ್ತು ಮಣ್ಣು ಮತ್ತು ಕಲ್ಲಿನ ಸಣ್ಣ ಕಣಗಳಿಂದ ನೆಲಹಾಸಿನಲ್ಲಿ ಗೀರು ಉಂಟಾಗಬಹುದು. ಆದ್ದರಿಂದ ವ್ಯಾಕ್ಯೂಮಿಂಗ್ ಮತ್ತು ಮಾಪಿಂಗ್ (ಗುಡಿಸುವುದು ಮತ್ತು ಒರೆಸುವುದು) ಮೂಲಕ ನೆಲವನ್ನು ಆಗಾಗ್ಗೆ ಶುದ್ಧೀಕರಿಸುವುದು ಬಹಳ ಅಗತ್ಯ. ಇಲ್ಲವಾದರೆ ನಡೆದಾಡುವಾಗ, ಕುರ್ಚಿ-ಮೇಜುಗಳನ್ನು ಆಚೀಚೆ ಎಳೆದಾಡಿದಾಗ ಕಾಲಿನಡಿಗೆ ಸಿಲುಕಿಕೊಳ್ಳುವ ಮಣ್ಣು-ಧೂಳಿನ ಕಣ ಮರದ ನೆಲಹಾಸಿನ ಮೇಲೆ ಗೀರುಗಳನ್ನುಂಟು ಮಾಡುತ್ತದೆ.ಎರಡನೆಯ ಕ್ರಮ

ನೆಲಹಾಸು ಶುದ್ಧೀಕರಿಸಲು, ಕೊಳೆ ತೆಗೆಯಲು  ಬಹಳ ತೀಕ್ಷ್ಣವಾದ ರಾಸಾಯನಿಕಗಳಿರುವ ಡಿಟರ್ಜೆಂಟ್‌ಗಳನ್ನು ಬಳಸಬಾರದು. ಮರದ ನೆಲಹಾಸು ಸುಂದರವಾಗಿಡಲು ಅತ್ಯುತ್ತಮ ಮಾರ್ಗ ಎಂದರೆ ಶುಚಿಗೆ ಅಗತ್ಯವಾದ ದ್ರಾವಣವನ್ನು ಮನೆಯಲ್ಲಿಯೇ ಸಿದ್ಧಪಡಿಸಿಕೊಳ್ಳುವುದು.

ಅರ್ಧ ಕಪ್ ವೆನಿಗರ್ ಮತ್ತು ಒಂದು ಗ್ಯಾಲನ್ ನೀರು ಬಳಸಿ ಕೊಳೆ ತೆಗೆಯಲು ಕ್ಲೀನ್ಸಿಂಗ್ ಏಜೆಂಟ್(ದ್ರಾವಣ) ಅನ್ನು ನೀವೇ ಸಿದ್ಧಪಡಿಸಿಕೊಳ್ಳಿರಿ.ನೆನಪಿನಲ್ಲಿಡಬೇಕಾದ ಮೂರನೆಯ ಮುಖ್ಯ ಸುರಕ್ಷತಾ ಅಂಶವೆಂದರೆ ಪೀಠೋಪಕರಣಗಳ ತಳಭಾಗದಲ್ಲಿ ರಬ್ಬರ್ ಬುಷ್ ಅಥವಾ ಚಕ್ರಗಳು ಅಥವಾ ಪ್ರೊಟೆಕ್ಟರ್ ಪ್ಯಾಡ್‌ಗಳನ್ನು ಅಳವಡಿಸುವುದು. ಹೀಗೆ ಮಾಡುವುದರಿಂದ ಪೀಠೋಪಕರಣಗಳನ್ನು ಆಚೀಚೆ ಎಳೆದಾಡಿದಾಗ ನೆಲಕ್ಕೆ ಯಾವುದೇ ಗೀರುಉಂಟಾಗುವುದನ್ನು ತಡೆಯಬಹುದು.ಡ್ರೈ ಮಾಪಿಂಗ್(ಒಣ ಬಟ್ಟೆಯಿಂದ ನೆಲ ಒರೆಸುವುದು) ಅಥವಾ ಡ್ಯಾಂಪ್ ಮಾಪಿಂಗ್ ಕ್ರಮವನ್ನೇ ಯಾವಾಗಲೂ ಬಳಸಿ. ಮರದ ನೆಲಹಾಸಿನ ಮೇಲೆ ಹೆಚ್ಚಿನ ನೀರು ಬಳಸುವುದರಿಂದ ಫ್ಲೋರಿಂಗ್ ಬೇಗ ಹಾಳಾಗುತ್ತದೆ, ಅದರ ಅಂದ ಮಸುಕಾಗುತ್ತದೆ.ಲ್ಯಾಮಿನೇಟೆಡ್ ಫ್ಲೋರ್ ಅಥವಾ ಮರದ ಫ್ಲೋರಿಂಗ್ ಅನ್ನು ವ್ಯಾಕ್ಸಿಂಗ್ ಅಥವ ಪಾಲಿಶಿಂಗ್ ಮಾಡಲು ಯಾವಾಗಲೂ ಅವುಗಳ ಉತ್ಪಾದಕರ ಅಥವಾ ವಿತರಕರ ಸಲಹೆ ಪಡೆಯಿರಿ. ಅವರ ಶಿಫಾರಸಿನಂತೆಯೇ ಫ್ಲೋರಿಂಗ್ ಸಿದ್ಧಪಡಿಸುವುದು, ಅಂದಗೊಳಿಸುವುದು ಉತ್ತಮ.ಮತ್ತೊಂದು ಪ್ರಮುಖ ಅಂಶವೆಂದರೆ ವಾತಾನುಕೂಲ ವ್ಯವಸ್ಥೆ. ಮುಂಗಾರಿನ ಸಮಯದಲ್ಲಿ ಮನೆಯೊಳಗಿನ ಹವೆ ವ್ಯತ್ಯಯವಾಗುತ್ತದೆ. ಅಂದರೆ ತಂಪು ಹೆಚ್ಚುತ್ತದೆ. ಹಾಗಾಗಿ ಮನೆಯೊಳಗೆ ಗಾಳಿ-ಬೆಳಕು ಮುಕ್ತವಾಗಿ ಬರುವಂತೆ ನೋಡಿಕೊಳ್ಳಿ.ತಾಜಾ ಗಾಳಿ ಮನೆಯೊಳಗೆ ಬರುವಂತೆ ಕ್ರಮ ವಹಿಸಿ. ಇಲ್ಲವಾದರೆ ಮನೆಯೊಳಗೆ ತೇವಾಂಶದ ಮಟ್ಟ ಹೆಚ್ಚಾಗುತ್ತದೆ. ಆಗ ಮರದ ನೆಲಹಾಸು ಮಾತ್ರವೇ ಅಲ್ಲ, ಮರ-ಚರ್ಮದಿಂದ ತಯಾರಿಸಿದ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳ ತೇವವನ್ನು ಹೀರಿಕೊಂಡು ಬೇಗ ಹಾನಿಗೀಡಾಗುತ್ತವೆ. ನಿಮ್ಮ ಮನೆಯ ಅಂದ, ಮರದ ನೆಲಹಾಸು-ಪೀಠೋಪಕರಣಗಳ ಸುರಕ್ಷೆ ನಿಮ್ಮ ಕೈಯಲ್ಲಿಯೇ ಇದೆ. ನೀವು ಅದೆಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಿರೋ ಅಷ್ಟೂ ಉತ್ತಮ.             

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.