ಶುಕ್ರವಾರ, ಮೇ 27, 2022
23 °C

ಮುಂಬೈ ಡಾನ್ಸ್ ಬಾರ್‌ಗಳಿಗೆ ಮತ್ತೆ ಜೀವ...

ಪ್ರಜಾವಾಣಿ ವಾರ್ತೆ/ಪ್ರಭಾತ್ ಶರಣ್ Updated:

ಅಕ್ಷರ ಗಾತ್ರ : | |

ಮುಂಬೈ:  ಡ್ಯಾನ್ಸ್ ಬಾರ್‌ಗಳು ಮುಚ್ಚಿದ ನಂತರ ಹಲವು ವರ್ಷಗಳಿಂದ ಮಂಕಾಗಿದ್ದ ವಾಣಿಜ್ಯ ನಗರಿ ಮುಂಬೈಗೆ ಮತ್ತೆ ಮೊದಲಿನ `ರಂಗೀನ್' ರಾತ್ರಿಗಳ ವೈಭವ ಮರುಕಳಿಸಲಿದೆ. ಸುಪ್ರೀಂಕೋರ್ಟ್ ಈಚೆಗೆ ಡ್ಯಾನ್ಸ್ ಬಾರ್‌ಗಳ ಮೇಲಿನ ನಿಷೇಧ ತೆಗೆದು ಹಾಕುತ್ತಿದ್ದಂತೆಯೇ ಮುಂಬೈ ಮೋಜುಗಾರರ ಹುಮ್ಮಸ್ಸು ಇಮ್ಮಡಿಸಿದೆ.  ರಾತ್ರಿಯಾಗುತ್ತಲೇ ಮನೆ ಸೇರಿ ಟಿ.ವಿ ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಿದ್ದ ಮುಂಬೈಯಿಗರು ಕಳೆದು ಹೋದ ರಂಗು, ರಂಗಿನ ರಾತ್ರಿಗಳನ್ನು ಮತ್ತೆ ಕಂಡುಕೊಳ್ಳುವ ಹವಣಿಕೆಯಲ್ಲಿದ್ದಾರೆ. ಈ ಕ್ಷಣಕ್ಕಾಗಿ ಅವರು ಏಳು ಈ ಕ್ಷಣಕ್ಕಾಗಿ ಅವರು ಏಳು ವರ್ಷ ಕಾಯಬೇಕಾಯಿತು. ಮುಂಬೈನಲ್ಲಿ ಹಗಲಾಗುವುದೇ ರಾತ್ರಿ 12ರ ನಂತರ ಎನ್ನುವ ಮಾತು ಹೊಸದೇನಲ್ಲ. 80 ಮತ್ತು 90ರ ದಶಕದ ಮಾತು. ಮುಂಬೈನ ಗಲ್ಲಿ, ಗಲ್ಲಿಗಳಲ್ಲಿ ಡ್ಯಾನ್ಸ್ ಬಾರ್‌ಗಳು ನಾಯಿಕೊಡೆ ಗಳಂತೆ ಹುಟ್ಟಿಕೊಂಡಿದ್ದ ದಿನಗಳವು. ಸೂರ್ಯ ನಿಧಾನವಾಗಿ ತೆರೆಗೆ ಸರಿದು ಮಬ್ಬುಗತ್ತಲು ಆವರಿಸುತ್ತಲೇ ವಾಣಿಜ್ಯ ನಗರಿಯ ನಿಯಾನ್ ಬೆಳಕಿನ ಬಣ್ಣದ, ಬಣ್ಣದ ದೀಪಗಳು ಝಗಮಗಿಸ ತೊಡಗುತ್ತಿದ್ದವು.ಆಗ ತೆರೆದುಕೊಳ್ಳುತ್ತಿದ್ದ ಡ್ಯಾನ್ಸ್‌ಬಾರ್‌ಗಳ ಬಾಗಿಲು ಬೆಳಗಿನ ಜಾವದವರೆಗೂ ಮುಚ್ಚುತ್ತಿರಲಿಲ್ಲ. ಮುಂಬೈ ಗಲ್ಲಿಗಳಲ್ಲಿ ಹೊಸ ಲೋಕವೊಂದು ತೆರೆದುಕೊಳ್ಳುತ್ತಿತ್ತು. ಕಿರಿದಾದ ಸಂದಿ, ಗೊಂದಿಗಳಲ್ಲಿ ಸಾಗಿ ಚಿಕ್ಕದಾದ ಬಾಗಿಲಿನ ಸಂದಿಯ ಮೂಲಕ ಒಳ ಹೊಕ್ಕರೆ, ಅಲ್ಲಿ ಇಂದ್ರನ ಲೋಕ! ಕಿವಿಗಡಚಿಕ್ಕುವ ಸಂಗೀತದ ಅಬ್ಬರ, ಬಣ್ಣ, ಬಣ್ಣದ ಫ್ಲೋರೊ ಸೆಂಟ್ ಮಬ್ಬು ಬೆಳಕು, ಘಮ್ಮೆಂದು ಹರಡಿದ ಸುಗಂಧ ಪರಿಮಳದ ಜೊತೆ ಸುರುಳಿ, ಸುರುಳಿಯಾಗಿ ಮುಖ, ಮೂಗಿಗೆ ರಾಚುವ ಸಿಗರೇಟು ಹೊಗೆಯ ಘಾಟು ವಾಸನೆ.ಅವನ್ನೆಲ್ಲ ದಾಟಿಕೊಂಡು ಮುಂದೆ ಸಾಗಿ ಕಣ್ಣಾಡಿಸಿದರೆ ಮೋಡಗಳಂತೆ ಹರಡಿಕೊಂಡ ಹೊಗೆಯ ಮರೆಯಲ್ಲಿ ಅಪ್ಸರೆ ಯರಂತಹ ಯುವತಿಯರ ದಂಡು. ಮದ್ಯದ ನಿಶೆಯನ್ನು ಏರಿಸುವ ಈ ಯುವತಿಯರ ಮಾದಕ ನೋಟ, ಥಳಕು, ಬಳಕು, ವನಪು, ವಯ್ಯಾರಗಳು ಎಂಥವನನ್ನಾದರೂ ಪದೇ ಪದೇ ಡ್ಯಾನ್ಸ್‌ಬಾರ್‌ಗಳನ್ನು ಹುಡುಕಿಕೊಂಡು ಬರುವಂತೆ ಮಾಡುತ್ತಿದ್ದವು. ಸಾಗರದ ಕಡಲಾಚೆಗಿಂದ ಸೂರ್ಯನ ಕಿರಣಗಳು ಹರಡಿ, ಗೂಡು ಬಿಟ್ಟು ಹೊರ ಹಾರಿದ ಹಕ್ಕಿಗಳ ಚಿಲಿಪಿಲಿ ಕಲರವ ಆರಂಭವಾಗುವ ವೇಳೆಗೆ ರಾತ್ರಿ ಡ್ಯಾನ್ಸ್ ಬಾರ್‌ಗಳ ದೀಪಗಳು ಆರುತ್ತಿದ್ದವು. ಇಡೀ ರಾತ್ರಿ ನಿಶಾಚರ ರಂತೆ ಜಾಗರಣೆ ಮಾಡಿದವರು ಮನೆ ಸೇರಿಕೊಳ್ಳುತ್ತಿದ್ದರು. ಯಾವಾಗ ಮಹಾರಾಷ್ಟ್ರ ಸರ್ಕಾರ 2005ರಲ್ಲಿ ಡ್ಯಾನ್ಸ್ ಬಾರ್‌ಗಳನ್ನು ಮುಚ್ಚಿಸಿತೋ ಆನಂತರ ಮಹಾನಗರದ ರಸ್ತೆ, ಗಲ್ಲಿಗಳು ಕಳೆಗುಂದಿದ್ದವು. ಬಣ್ಣ ಕಳೆದುಕೊಂಡ ರಾತ್ರಿಗಳು ನಿಸ್ತೇಜವಾಗಿದ್ದವು. ಸುಪ್ರೀಂಕೋರ್ಟ್ ಕಳೆದ ವಾರ ಹಸಿರು ನಿಶಾನೆ ನಿಡಿದ ನಂತರ ಡ್ಯಾನ್ಸ್‌ಬಾರ್‌ಗಳೆಲ್ಲ ಧೂಳು ಕೊಡವಿಕೊಂಡು ಮತ್ತೆ ಮುಂಬೈ ನಗರದ ರಾತ್ರಿಗಳಿಗೆ ರಂಗು ತುಂಬಲು ಸಜ್ಜಾಗತೊಡಗಿವೆ. ಜೊತೆಗೆ ಹಲವು ಅಪಸ್ವರಗಳು ಕೇಳಿಬಂದಿವೆ. ಮತ್ತೆ ಡ್ಯಾನ್ಸ್‌ಬಾರ್‌ಗಳನ್ನು ಆರಂಭಿಸಬೇಕೆ ಅಥವಾ ಬೇಡವೇ ಎಂಬ ಕುರಿತು ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ.ಡ್ಯಾನ್ಸ್‌ಬಾರ್ ಪರವಾಗಿರುವವರು ಬದುಕುವ ಹಕ್ಕು ಮತ್ತು ಆರ್ಥಿಕ ಮಟ್ಟ ಸುಧಾರಣೆಯ ವಾದವನ್ನು ಮಂಡಿಸಿದರೆ, ಮಹಿಳೆಯರ ಶೋಷಣೆ ಮತ್ತು ನೈತಿಕತೆಯ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮೇಲ್ನೋಟಕ್ಕೆ ಕಾಣುವಂತೆ ಈ ಸಮಸ್ಯೆ ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ. ಇದಕ್ಕೆ ಹಲವಾರು ಮುಖ ಮತ್ತು ವಿಭಿನ್ನ ಆಯಾಮಗಳಿವೆ.ಈ ಬಂದರು ನಗರಿಗೆ ಡ್ಯಾನ್ಸ್‌ಬಾರ್‌ಗಳು ಹೊಸವೇನಲ್ಲ. ಬ್ರಿಟಿಷರ ಕಾಲಕ್ಕೆ ಈ ಸಂಸ್ಕೃತಿ ನೆಲಕ್ಕೆ ಕಾಲಿಟ್ಟಾಗಿದೆ. ಈ ಸಂಸ್ಕೃತಿ ಕಾಲಿಡುವ ಮೊದಲು ಮುಂಬೈನ ಕುಖ್ಯಾತ ವೇಶ್ಯಾವಾಟಿಕೆಯ ಕೇಂದ್ರ `ಕಾಮಾಟಿಪುರಂ' ವಿಲಾಸಿ ತಾಣವಾಗಿತ್ತು. ಸಂಜೆ ಯಾಗು ತ್ತಿದ್ದಂತೆಯೇ ಇತ್ತ ಸುಳಿ ಯುವುದು ಹಲವರ ವಾಡಿಕೆಯಾಗಿತ್ತು. ಜೋಪಡ ಪಟ್ಟಿಗಳಂತೆ `ರೆಡ್‌ಲೈಟ್ ಏರಿಯಾ' ಕೂಡಾ ಮುಂಬೈ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿತ್ತು.ಇಂದಿಗೂ ಪ್ರಸಿದ್ಧ `ಬಚ್ಚುಬಾಯಿ ವಾಡೆ'ಯಲ್ಲಿ ಸಾಂಪ್ರ ದಾಯಿಕ ನೃತ್ಯ, ಮುಜ್ರಾಗಳು ನಡೆಯುತ್ತಿವೆ. ಡ್ಯಾನ್ಸ್‌ಬಾರ್ ಮೇಲಿನ ನಿಷೇಧ ತೆಗೆದು ಹಾಕುತ್ತಿದ್ದಂತೆಯೇ ಮುಂಬೈ ಮೋಜುಗಾರರ ಹುಮ್ಮಸ್ಸು ಇಮ್ಮಡಿಸಿದೆ.  ರಾತ್ರಿಯಾಗುತ್ತಲೇ ಮನೆ ಸೇರಿ ಟಿ.ವಿ ಮುಂದೆ ಪ್ರತಿಷ್ಠಾಪನೆಗೊಳ್ಳುತ್ತಿದ್ದ ಮುಂಬೈಯಿಗರು ಕಳೆದು ಹೋದ ರಂಗು, ರಂಗಿನ ರಾತ್ರಿಗಳನ್ನು ಮತ್ತೆ ಕಂಡುಕೊಳ್ಳುವ ಹವಣಿಕೆಯಲ್ಲಿದ್ದಾರೆ. ಈ ಕ್ಷಣಕ್ಕಾಗಿ ಅವರು ಏಳು ವರ್ಷ ಕಾಯಬೇಕಾಯಿತು.ಈ ಬಿಯರ್ ಬಾರ್‌ಗಳ ಮಾಲೀಕರು ಡಿಸ್ಕೋಥೆಕ್‌ಗಳನ್ನು  ಡ್ಯಾನ್ಸ್‌ಬಾರ್‌ಗಳನ್ನಾಗಿ ಪರಿವರ್ತಿಸಿದರು. ದೇಶದ ಮೂಲೆ, ಮೂಲೆಗಳಿಂದ ಯುವತಿಯರನ್ನು ಕರೆತಂದು ಕುಣಿಸಿ ಹಣವನ್ನು ಬಾಚಿಕೊಂಡರು. ಮೇಲು ಮಧ್ಯಮ ವರ್ಗದ ಹೊಸ ತಲೆಮಾರಿನ ಯುವಕರು ಮತ್ತು ಮಧ್ಯಮ ವಯಸ್ಕರ ಮೋಜಿನ ಅಡ್ಡಾಗಳಾದವು.  ಪೊಲೀಸರ ದಾಳಿಯ ಹೊರತಾಗಿಯೂ `ನೈಟ್ ಕ್ವೀನ್'ನಂತಹ ಡ್ಯಾನ್ಸ್‌ಬಾರ್‌ಗಳಿಗೆ ತೆರಳುತ್ತಿದ್ದವರ ಸಂಖ್ಯೆ ಕಡಿಮೆಯಾಗಿರಲಿಲ್ಲ.ಬಚ್ಚುಬಾಯಿ ವಾಡೆ, ಡಿಸ್ಕೋಥೆಕ್ ಹಾಗೂ ಇತ್ತೀಚಿನ ಡ್ಯಾನ್ಸ್‌ಬಾರ್‌ಗಳಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದರೂ ಅಲ್ಲಿ ನರ್ತಿಸುವ, ಮದ್ಯ ಸರಬರಾಜು ಮಾಡುವ, ಹಾಡು ಹೇಳುವ ಯುವತಿಯರ ಬಾಳು ಮಾತ್ರ ಹಸನಾಗಿಲ್ಲ. ಬಹುತೇಕ ಜನರಿಗೆ ಈ ಯುವತಿಯರು ಕೈತುಂಬಾ ಹಣ ಗಳಿಸಬಹುದು ಎಂಬ ಭ್ರಮೆ ಇದೆ. ಆದರೆ, ವಾಸ್ತವವೇ ಬೇರೆ. ಒಮ್ಮೆ ಈ ಕೂಪಕ್ಕೆ ಬಂದು ಬೀಳುವ ಯುವತಿಯರು ಹಿಂದಿರುಗುವುದು ಕಡಿಮೆ. ಸದಾ ಭೂಗತ ಪಾತಕಿಗಳ ಭಯದ ನೆರಳಿನಲ್ಲಿ ಬದಕು ಸವೆಸುತ್ತಾರೆ. ಅವರು ಅವರ ಹಾಡು, ನೃತ್ಯ ಮೆಚ್ಚಿ ಖುಷಿಯಾಗಿ ಅಮಲಿನಲ್ಲಿ ಗಿರಾಕಿಗಳು ಸುರಿಸುವ ಹಣ ಮಾಲೀಕರು, ಭೂಗತ ಪಾತಕಿಗಳ ಕೈ ಸೇರುತ್ತದೆಯೇ ಹೊರತು ಯುವತಿಯರನ್ನಲ್ಲ. ನಕಲಿ ನೋಟುಗಳನ್ನು ಯುವತಿಯರ ಮೇಲೆ ತೂರುವ ನಿದರ್ಶನಗಳು ಇವೆ. ಈ ಯುವತಿಯರ ಜೀವನ ಆಧರಿಸಿದ `ಚಾಂದನಿ ಬಾರ್' ಎಂಬ ಹಿಂದಿ ಸಿನಿಮಾ ವಾಸ್ತವ ಅಂಶಗಳನ್ನು ತೋರಿಸುವಲ್ಲಿ ವಿಫಲವಾಗಿತ್ತು. ಮಾಧ್ಯಮಗಳು ಕೂಡ ಡ್ಯಾನ್ಸ್‌ಬಾರ್‌ಗಳನ್ನು ಅನೈತಿಕ ಚಟುವಟಿಕೆಗಳ ತಾಣ ಎಂಬಂತೆಯೇ ಬಿಂಬಿಸಿವೆ. ಇದೇ ಕಾಲ್ಪನಿಕ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರವೂ ಇವುಗಳನ್ನು ಮುಚ್ಚಿಬಿಟ್ಟಿತು. ಡ್ಯಾನ್ಸ್ ಮಾಡಿ ಜೀವನ ಸಾಗಿಸುತ್ತಿದ್ದ, ಕುಟುಂಬಗಳನ್ನು ಸಾಕುತ್ತಿದ್ದ ಯುವತಿಯರು ಬೀದಿಗೆ ಬಿದ್ದರು. ಮಹಿಳಾ ಪರ ಸಂಘಟನೆಗಳು ಮತ್ತು ಮಾನವ ಹಕ್ಕು ಕಾರ್ಯಕರ್ತರು ಸರ್ಕಾರದ ಕ್ರಮದ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದರು. ಈ ಸಮಸ್ಯೆ ನಾವು ಅಂದುಕೊಂಡಷ್ಟು ಸುಲಭವಾಗಿಲ್ಲ. ಇದಕ್ಕೆ ಹಲವಾರು ಮುಖ ಮತ್ತು ವಿಭಿನ್ನ ಆಯಾಮಗಳಿವೆ.ಈ ನಡುವೆ ಮಹಿಳೆಯರ ಪರ ಹೋರಾಟ ನಡೆಸುವ ಸಂಘಟನೆಗಳು ನಡೆಸಿದ ಅಧ್ಯಯನ ವರದಿಯಲ್ಲಿ ಡ್ಯಾನ್ಸ್‌ಬಾರ್ ಯುವತಿಯರ ಜೀವನ ಕುರಿತಂತಂತೆ ವಾಸ್ತವ ಅಂಶಗಳನ್ನು ಎಳೆ, ಎಳೆಯಾಗಿ ಬಿಚ್ಚಿಡಲಾಗಿದೆ. ಯುವತಿಯರಲ್ಲಿ ಬಹುತೇಕರು ಅರ್ಧದಲ್ಲಿಯೇ ಶಾಲೆ ಬಿಟ್ಟವರು ಹಾಗೂ ತೀರಾ ಬಡ ಕುಟುಂಬಕ್ಕೆ ಸೇರಿದವರು. ಇನ್ನೂ ಕೆಲವರು ಸಭೆ, ಸಮಾರಂಭ, ಮದುವೆಗಳಲ್ಲಿ ನೃತ್ಯ ಮಾಡುವ ಕುಟುಂಬದ ಹಿನ್ನೆಲೆಯಿಂದ ಬಂದವರು. ಅವರೆಲ್ಲರೂ ತಮ್ಮ ತಂದೆ, ತಾಯಿ, ಅಣ್ಣ, ತಮ್ಮಂದಿರ ಹೊಟ್ಟೆ ತುಂಬಿಸಬೇಕಾದ ಅನಿರ್ವಾತೆಗೆ ಸಿಲುಕಿದವರು.ಮುಂಬೈನಂಥ ನಗರದ ಡ್ಯಾನ್ಸ್‌ಬಾರ್‌ಗಳಲ್ಲಿ ನೃತ್ಯ ಮಾಡುವ ಒಬ್ಬ ಯುವತಿ ತಿಂಗಳಿಗೆ ಅಬ್ಬಾಬ್ಬ ಎಂದರೆ 30 ಸಾವಿರ ರೂಪಾಯಿ ಗಳಿಸುತ್ತಾಳೆ. ಅದನ್ನು ತನ್ನ ಮನೆಗೆ ನೀಡುತ್ತಾಳೆ. ಆ ಹಣವನ್ನು ಅವರು ತಮಗಾಗಿ ಬಳಸುವುದು ಕಡಿಮೆ. ಹೀಗೆ ಬಂದವರಲ್ಲಿ ಪರಿಸ್ಥಿತಿ, ಸಂದರ್ಭದ ಒತ್ತಡಕ್ಕೆ ಕಟ್ಟುಬಿದ್ದು, ಬೆದರಿಕೆಗೆ ಮಣಿದು ವೇಶ್ಯಾವಾಟಿಕೆಗೆ ತೆಕ್ಕೆಗೆ ಬಿದ್ದವರ ಸಂಖ್ಯೆಯೂ ದೊಡ್ಡದಿದೆ. ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಈ ಪಾಪಕೂಪಕ್ಕೆ ಬಿದ್ದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಎಂಬ ಸತ್ಯವನ್ನು ಈ ವರದಿ ತೆರೆದಿಟ್ಟಿದೆ.ಸೌಂದರ್ಯ ಸ್ಪರ್ಧೆ, ಪ್ರಚಾರ ರಾಯಭಾರಿ, ಮಾಡೆಲಿಂಗ್, ಟಿ.ವಿ ಮತ್ತು ಸಿನಿಮಾ ಕ್ಷೇತ್ರಗಳು ಕೇವಲ ಮೇಲ್ವರ್ಗದ ಉಚ್ಚ ಜಾತಿಯ ಯುವತಿಯರಿಗೆ ಮಾತ್ರ ಮೀಸಲು. ಕೆಳ ವರ್ಗ, ಜಾತಿ ಮತ್ತು ಬಡ ಕುಟುಂಬದ  ಯುವತಿಯರು ಏನಿದ್ದರೂ ಡ್ಯಾನ್ಸ್‌ಬಾರ್‌ಗಳಲ್ಲಿ ನೃತ್ಯ ಮಾಡಲು ಮಾತ್ರ ಮೀಸಲು ಎಂಬ ಭಾವನೆ ಈ ಕ್ಷೇತ್ರದಲ್ಲೂ ಮನೆ ಮಾಡಿದೆ ಎಂಬ ವಾಸ್ತವವನ್ನು ಅಧ್ಯಯನ ವರದಿ ಬಿಚ್ಚಿಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.