ಬುಧವಾರ, ಮೇ 25, 2022
24 °C

ಮುಖೇಶ್ ಅಂಬಾನಿ ಶ್ರೀಮಂತರಲ್ಲೇ ಶ್ರೀಮಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್(ಐಎಎನ್‌ಎಸ್): ಫೋಬ್ಸ್ ಇಂಡಿಯಾ ವಾರ್ಷಿಕ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಸತತ ನಾಲ್ಕನೆಯ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾಲೀಕ ಮುಖೇಶ್ ಅಂಬಾನಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.ಹೊಸ 14 ಶ್ರೀಮಂತರ ಪಟ್ಟಿಯಲ್ಲಿ ಮುತ್ತೂಟ್ ಫೈನಾನ್ಸ್‌ನ  ಎಂ.ಜಿ ಜಾರ್ಜ್, `ಕಫೆ ಕಾಫಿ ಡೇ~ನ ವಿ.ಜಿ ಸಿದ್ಧಾರ್ಥ, ಇಂಡಿಗೊ ಏರ್‌ಲೈನ್ಸ್‌ನ ಕಪಿಲ್ ಮತ್ತು ರಾಹುಲ್ ಭಾಟಿಯಾ ಅವರ ಹೆಸರುಗಳೂ ಇವೆ.

 ಪ್ರಮುಖ ಸಂಗತಿಯೆಂದರೆ, ಆರ್ಥಿಕ ವೃದ್ಧಿ ದರ (ಜಿಡಿಪಿ) ಗಣನೀಯವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಅಗ್ರ 100 ಜನ ಶ್ರೀಮಂತರ ಸಂಪತ್ತು ಶೇ20ರಷ್ಟು  ಇಳಿಕೆಯಾಗಿದೆ ಎನ್ನುವುದು. ಕಳೆದ ವರ್ಷ 300 ಶತಕೋಟಿ ಡಾಲರ್ ಇದ್ದ  ಭಾರತೀಯ ಅಗ್ರ 100 ಜನ ಶ್ರೀಮಂತರ ಸಂಪತ್ತು, ಸದ್ಯ 241 ಶತಕೋಟಿ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು  `ಫೋಬ್ಸ್~ ನಿಯತಕಾಲಿಕದ ವಾರ್ಷಿಕ ವರದಿ ಹೇಳಿದೆ.ಮುಖೇಶ್  ಶ್ರೀಮಂತ: ಸತತ ನಾಲ್ಕನೆಯ ವರ್ಷವೂ ಮುಖೇಶ್ ಅಂಬಾನಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ಮುಖೇಶ್ ಒಡೆತನದ ಸಂಸ್ಥೆಗಳು ಈ ಅವಧಿಯಲ್ಲಿ 4.4 ಶತಕೋಟಿ ಡಾಲರ್‌ಗಳಷ್ಟು ನಷ್ಟ ಅನುಭವಿಸಿದರೂ, ಸದ್ಯ ಅವರ ಒಟ್ಟು ಸಂಪತ್ತು 22.6 ಶತಕೋಟಿ ಡಾಲರ್‌ಗಳಷ್ಟಿದೆ ಎಂದು ಫೋಬ್ಸ್ ಹೇಳಿದೆ.ಎರಡನೆಯ ಸ್ಥಾನದಲ್ಲಿ ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಇದ್ದಾರೆ. ಅವರ ಒಟ್ಟು ಸಂಪತ್ತಿನ ಮೌಲ್ಯ 19.2 ಶತಕೋಟಿ ಡಾಲರ್. ಮಿತ್ತಲ್ ಈ ಅವಧಿಯಲ್ಲಿ 6.9 ಶತಕೋಟಿ ಡಾಲರ್‌ಗಳಷ್ಟು ನಷ್ಟ ಅನುಭವಿಸಿದ್ದಾರೆ. ದೇಶದ ಮೂರನೆಯ ಅತಿ ದೊಡ್ಡ ಐಟಿ ಕಂಪೆನಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದಾರೆ. ಪ್ರೇಮ್‌ಜಿ ಇತ್ತೀಚೆಗೆ  2 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ತಮ್ಮದೇ ಸಮಾಜ ಕಲ್ಯಾಣ ಟ್ರಸ್ಟ್‌ಗೆ ದಾನ ಮಾಡಿದ್ದರು. ಏಷ್ಯಾದ ಮಹಾ ದಾನಿಗಳ ಪಟ್ಟಿಯಲ್ಲೂ ಪ್ರೇಮ್‌ಜಿ ಹೆಸರು ಮೊದಲ ಸ್ಥಾನದಲ್ಲಿದೆ.ಕಳೆದ ವರ್ಷ ಭಾರತೀಯ 10 ಆಗರ್ಭ ಶ್ರೀಮಂತರ ಒಟ್ಟು ಸಂಪತ್ತು 150 ಶತಕೋಟಿ ಡಾಲರ್‌ಗಳಷ್ಟಿತ್ತು. ಸದ್ಯ ಇದು 113 ಶತಕೋಟಿ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು `ಫೋ   ಬ್ಸ್~ ಹೇಳಿದೆ. ಅತಿ ಹೆಚ್ಚು  ನಷ್ಟಕ್ಕೆ ಒಳಗಾಗಿರುವ ಉದ್ಯಮಿ ಅನಿಲ್ ಅಂಬಾನಿ. ಅನಿಲ್ 7.4 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.2004ರಿಂದ ಇದೇ ಮೊದಲ ಬಾರಿಗೆ ಅವರು ದೇಶದ 10 ಶ್ರೀಮಂತರ ಪಟ್ಟಿಯಿಂದ ಹೊರಗೆ ಬಿದ್ದಿದ್ದಾರೆ. ಹಣದುಬ್ಬರ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಷೇರುಪೇಟೆಗಳ ಏರಿಳಿತ ಸೇರಿದಂತೆ ಹಲವು ಸಂಗತಿಗಳು ಶ್ರೀಮಂತರ ಸಂಪತ್ತನ್ನು ಕರಗಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.