ಗುರುವಾರ , ಮೇ 6, 2021
22 °C

ಮುಖ್ಯಕಾರ್ಯದರ್ಶಿ V/s ಮುಖ್ಯಕಾರ್ಯ ನಿರ್ವಹಣಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

೧೯೮೩ರ ಕಾಯ್ದೆಯಲ್ಲಿ ರೂಪು­ಗೊಂಡ ಜಿಲ್ಲಾ ಪರಿಷತ್‌ನ ಮುಖ್ಯಾಧಿ­ಕಾರಿಗೆ ಮುಖ್ಯ­ಕಾರ್ಯದರ್ಶಿ ಎಂದು ಹೆಸರಿತ್ತು. ಇದಕ್ಕೆ ಒಂದು ಹಂತದಲ್ಲಿ ಅಧಿಕಾರಿ­ಗಳಿಂದ ತೀವ್ರ ಆಕ್ಷೇಪ ವ್ಯಕ್ತ­ವಾಯಿತಂತೆ. ಅಧಿಕಾರಿಗಳ ಪ್ರಕಾರ ಮುಖ್ಯ­ಕಾರ್ಯದರ್ಶಿ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳ ಮುಖ್ಯಸ್ಥ. ಅತ್ಯಂತ ಹಿರಿಯ ಐಎಎಸ್ ಅಧಿಕಾರಿಯನ್ನು ಈ ಹುದ್ದೆಗೆ ನೇಮಿಸಲಾಗುತ್ತದೆ. ಜಿಲ್ಲಾ ಮಟ್ಟದ ಹುದ್ದೆಯೊಂದಕ್ಕೆ ಇದೇ ಪದನಾಮವಿದ್ದರೆ ಅದು ರಾಜ್ಯಮಟ್ಟದ ಹುದ್ದೆಯ ಘನತೆ­ಯನ್ನು ಕುಗ್ಗಿಸುತ್ತದೆ ಎಂಬ ವಾದವನ್ನು ಕೆಲ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿ ಹೆಗಡೆ­ ಮುಂದಿರಿಸಿದರು. ಅದಕ್ಕೆ ಅವರು ‘‘ಸರಿ ಹಾಗಾದರೆ ಜಿಲ್ಲಾ ಪರಿಷತ್ ಅಧ್ಯಕ್ಷರನ್ನು ಜಿಲ್ಲಾ ಮುಖ್ಯ ಮಂತ್ರಿ­ಗಳೆಂದು ಪುನರ್ ನಾಮಕರಣ ಮಾಡೋಣ. ಜಿಲ್ಲಾ ಮಟ್ಟದಲ್ಲಿ ಒಬ್ಬ ಮುಖ್ಯಮಂತ್ರಿ ಇದ್ದಾರೆ ಎಂಬುದು ರಾಜ್ಯದ ಮುಖ್ಯಮಂತ್ರಿಯಾದ ನನ್ನನ್ನು ಬಾಧಿಸು­ವುದಿಲ್ಲ. ಅಂದ ಮೇಲೆ ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯ­ದರ್ಶಿ ಇದ್ದರೆ ನೀವದಕ್ಕೆ ತಲೆ ಕೆಡಿಸಿಕೊಳ್ಳ­ಬಾರದು’’ ಅಧಿಕಾರಿಗಳು ಮರುಮಾತ­ನಾಡಲಿಲ್ಲ.

(ಪಂಚಾಯತ್ ರಾಜ್ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಜಾರ್ಜ್ ಮಾಥ್ಯೂ ತಮ್ಮ ಪುಸ್ತಕಗಳಲ್ಲಿ ಈ ಕುರಿತು ಬರೆದಿದ್ದಾರೆ)ಜಿಲ್ಲಾ ಮಟ್ಟದಲ್ಲಿ ಮುಖ್ಯಕಾರ್ಯ­ದರ್ಶಿಯ ಹುದ್ದೆ ಹಲವು ತಮಾಷೆಯ ಪ್ರಸಂಗಗಳಿಗೆ ಕಾರಣವಾಯಿತು.ನಿವೃತ್ತ ಐಎಎಸ್ ಅಧಿಕಾರಿ ಬಿ. ಪಾರ್ಥಸಾರಥಿ ತಮ್ಮ ಪುಸ್ತಕ (ಆಡಳಿತದ ನೆನಪುಗಳು)ದಲ್ಲಿ ಅವರು ಹಾಸನದ ಜಿಲ್ಲಾಪರಿಷತ್ ಮುಖ್ಯ ಕಾರ್ಯದರ್ಶಿ­ಯಾಗಿದ್ದಾಗ ನಡೆದ ಒಂದು ಘಟನೆಯನ್ನು ಹೀಗೆ ಮೆಲುಕು ಹಾಕುತ್ತಾರೆ (ಪುಟ ೧೨೬).“ನಾನು ಬೆಂಗಳೂರಿನಲ್ಲಿ ಸಚಿವಾಲಯಕ್ಕೆ ಒಮ್ಮೆ ಹೋದಾಗ ಬಹುಮಹಡಿ ಕಟ್ಟಡದಲ್ಲಿ ದ್ವಾರಪಾಲಕ ತಡೆದು ನನ್ನ ಮತ್ತು ನನ್ನ ಜತೆಗಿದ್ದ ಮಿತ್ರರ ಗುರುತನ್ನು ಕೇಳಿದ. ಅದಕ್ಕೆ ನಾವು ಮುಖ್ಯಕಾರ್ಯದರ್ಶಿ­ಗಳು ಎಂದು ಹೇಳಿದಾಗ ಅವನ ಪ್ರತಿಕ್ರಿಯೆ ಸ್ವಾಭಾವಿಕವಾಗಿತ್ತು. ಮುಖ್ಯ­ಕಾರ್ಯದರ್ಶಿಗಳು ವಿಧಾನಸೌಧದಲ್ಲಿ ಇರುತ್ತಾರೆ. ಆದ್ದರಿಂದ ನಿಮ್ಮನ್ನು ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಸಚಿವಾಲಯ­ದ ಅಧಿಕಾರಿಗಳು ನಿಜಸ್ಥಿತಿ ಹೇಳಿ ನಾವು ಒಳಗೆ ಹೋಗಲು ಅನುಮತಿ ನೀಡಿದರು”.ಆಂಧ್ರಪ್ರದೇಶದ ನಿವೃತ್ತ ವಿಶೇಷ ಮುಖ್ಯಕಾರ್ಯದರ್ಶಿ ಎಸ್. ಭಲೇರಾವ್ ತಮ್ಮ ಗಮನಕ್ಕೆ ಬಂದಿದ್ದ ಇನ್ನೊಂದು ಪ್ರಸಂಗದ ಬಗ್ಗೆ ಹೇಳಿದರು. ಒಮ್ಮೆ ಕರ್ನಾಟಕದ ಜಿಲ್ಲಾ ಪರಿಷತ್ ಮುಖ್ಯ­ಕಾರ್ಯದರ್ಶಿಯೊಬ್ಬರು ತಮಿಳು­ನಾಡಿಗೆ ಕೆಲಸದ ನಿಮಿತ್ತ ಹೋಗುವವರಿದ್ದರು. ತಮಿಳುನಾಡಿ­ನಲ್ಲಿ ತಮಗೆ ಸೂಕ್ತವಾದ ಅನುಕೂಲ­ಗಳನ್ನು ಒದಗಿಸಬೇಕು ಎಂದು ಅಲ್ಲಿನ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದರು. ಆ ಪತ್ರವನ್ನು ಓದಿದದವರು ಜಿಲ್ಲಾಪರಿಷತ್ ಎಂದು ಬರೆದದ್ದನ್ನು ಗಮನಿಸದೆ ಕೇವಲ ಮುಖ್ಯ­ಕಾರ್ಯ­ದರ್ಶಿ ಎನ್ನುವುದಷ್ಟನ್ನೇ ಓದಿ­ಕೊಂಡು ಕರ್ನಾಟಕದ ಮುಖ್ಯ­ಕಾರ್ಯದರ್ಶಿ­ಯವರು ಬರುತ್ತಾರೆ; ಸೂಕ್ತ ಏರ್ಪಾಡು ಮಾಡತಕ್ಕದ್ದು ಎಂದು ನಮೂದಿಸಿ ಸಂಬಂಧಿಸಿದವರಿಗೆ ಕಳುಹಿಸಿದರು.ಮುಖ್ಯಕಾರ್ಯದರ್ಶಿ ಯವರನ್ನು ಪ್ರೋಟೋ­ಕಾಲ್ ಪ್ರಕಾರ ಸ್ವಾಗತಿಸಲು ಎಲ್ಲಾ ಸಿದ್ದತೆ ಮಾಡಿ­ಕೊಂಡು ಕಾಯುತಿದ್ದ ಅಲ್ಲಿನ ಅಧಿಕಾರಿ­ಗಳಿಗೆ ಕರ್ನಾಟಕದ ಅಧಿಕಾರಿ ಅಲ್ಲಿ ತಲುಪುತ್ತಲೇ ಇದೇನು ಇಷ್ಟು ಎಳೆಯ ಪ್ರಾಯದ ಅಧಿಕಾರಿ ಕರ್ನಾಟಕದಲ್ಲಿ ಮುಖ್ಯಕಾರ್ಯದರ್ಶಿ­ಯಾಗಿದ್ದಾರೆ ಎನ್ನುವ ಸಂದೇಹ ಕಾಡಿತು. ಮತ್ತೆ ವಿಚಾರಿಸಿದಾಗ ವಿಷಯ ತಿಳಿದು ಎರಡೂ ಕಡೆಯವರು ಪೆಚ್ಚಾದರಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.