ಶುಕ್ರವಾರ, ಫೆಬ್ರವರಿ 26, 2021
30 °C
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯ

ಮುಖ್ಯಮಂತ್ರಿ ಅವರಿಂದಾಗುವುದು ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಅವರಿಂದಾಗುವುದು ಬೇಡ

ಮಂಡ್ಯ: ‘ಪಕ್ಷದಲ್ಲಿ ಅವರಿಗೆ ಏನು ಕಷ್ಟ ಆಗಿತ್ತು ಗೊತ್ತಿಲ್ಲ. ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅಷ್ಟದಿಕ್ಪಾಲಕರು ಚೆನ್ನಾಗಿದ್ದಾರೆ. ಅವರು ಅಲ್ಲಿಯೇ ಚೆನ್ನಾಗಿರಲಿ. ವಾಪಸ್‌ ಬರುವ ಮಾತು ಬೇಡ. ನನ್ನನ್ನು ಮುಖ್ಯಮಂತ್ರಿ ಮಾಡುವುದೂ ಬೇಡ’ ಹೀಗೆಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಗಿ ಹೇಳಿದರು.ಬಂಡಾಯ ಶಾಸಕರು ಇತ್ತೀಚೆಗೆ ಶಾಸಕ ಡಿ.ಸಿ. ತಮ್ಮಣ್ಣ ವಿರುದ್ಧ ಸಭೆ ಕರೆದಿದ್ದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಪಕ್ಷದ ನಿಷ್ಠಾವಂತರಲ್ಲಿ ಒಡಕು ತರುವ ಕೆಲಸ ಮಾಡುವುದನ್ನು ನಿಲ್ಲಿಸಲಿ ಎಂದರು.‘ಒಂದು ದಿನ ಕುಮಾರಸ್ವಾಮಿ ಅವರನ್ನು, ಮತ್ತೊಂದು ದಿನ ಎಚ್‌.ಡಿ. ದೇವೇಗೌಡರನ್ನು ಬೈಯ್ಯುತ್ತಾರೆ. ಇದನ್ನು ನಿಲ್ಲಿಸಿ. ನಾವೂ ಅವರ ಬಗ್ಗೆ ಮಾತನಾಡುವುದಿಲ್ಲ. ಅವರೂ ನಮ್ಮ ಬಗ್ಗೆ ಮಾತನಾಡುವುದು ಬೇಡ. ಪಕ್ಷ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಿಲ್ಲ. ಉತ್ತರ ನೀಡಿದ ಮೇಲೆ ಅವರ ವಿರುದ್ಧ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.ಎಲ್ಲೋ ಕುಳಿತುಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಶತ್ರುಗಳಿಲ್ಲ. ಹಾಗೆಂದು  ಎದುರಾಳಿಗಳನ್ನು ತಬ್ಬಿಕೊಳ್ಳಲು ಆಗುವುದಿಲ್ಲ. ರಾಜಕೀಯ ಒಂದು ಯುದ್ಧವಾಗಿದೆ ಎಂದರು.ಡಾಲರ್ಸ್ ಕಾಲೊನಿ ಕೆರೆ ಮುಚ್ಚಿ ನಿರ್ಮಾಣ ಮಾಡಿರುವ ಬಡಾವಣೆಯಾಗಿದೆ. ಅದನ್ನು ಒಡೆಯಲಿ ಎಂದು ಸವಾಲು ಹಾಕಿದ ಅವರು, ರಾಜಕಾಲುವೆ ಒತ್ತುವರಿಗೆ ಅನುಮತಿ, ದಾಖಲೆ ಸೃಷ್ಟಿಸಿಕೊಟ್ಟ ಅಧಿಕಾರಿಗಳ ಆಸ್ತಿ ಜಪ್ತಿ ಮಾಡಿ. ಸಂತ್ರಸ್ತರಾಗಿರುವವರಿಗೆ ನೆರವು ನೀಡಲಿ. ಆ ಮೇಲೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ್ದು ನೀರಗಂಟಿಯ ಕೆಲಸ ಆಗಿದೆ. ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸಿ ನ್ಯಾಯಮಂಡಳಿ ಹೇಳಿದ ಪಕ್ಕದ ರಾಜ್ಯಗಳವರಿಗೆ ನೀರು ಬಿಡುವುದು ಆಗಿದೆ. ರಾಜ್ಯಕ್ಕೆ ನ್ಯಾಯ ಒದಗಿಸಬೇಕಾದ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪದಲ್ಲಿ ತೊಡಗಿಕೊಂಡಿವೆ ಎಂದು ಟೀಕಿಸಿದರು.ರಾಜ್ಯದಲ್ಲಿ ಆಡಳಿತ ಕುಸಿದಿದೆ. ಹಣ ಲೂಟಿಯತ್ತ ಆಡಳಿತ ನಡೆಸುವವರ ಚಿತ್ತ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ತಪ್ಪಿದ ಆಡಳಿತದ ಹಿಡಿತ ಇಂದಿಗೂ ಸರಿ ಹೋಗಿಲ್ಲ ಎಂದರು.ಜಾಗ್ವಾರ್ ಬಿಡುಗಡೆಯ ನಂತರ ನವೆಂಬರ್‌ನಿಂದ ರಾಜ್ಯದಲ್ಲಿ ರಾಜಕೀಯ ಜಾಗ್ವಾರ್‌ ಆರಂಭವಾಗುತ್ತದೆ. ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಕಟ್ಟುತ್ತೇನೆ. ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಎನ್ನುತ್ತಾರೆ. ಕಾಂಗ್ರೆಸ್‌ನವರು ಬಿಜೆಪಿ ಮುಕ್ತ ರಾಜ್ಯ ಎನ್ನುತ್ತಾರೆ. ನಾವು ರೈತರನ್ನು ಸಾಲ ಮುಕ್ತವಾಗಿ ಮಾಡುತ್ತೇನೆ ಎಂದರು.ಸಂಸದ ಸಿ.ಎಸ್‌. ಪುಟ್ಟರಾಜು, ಶಾಸಕ ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಎಂ. ಶ್ರೀನಿವಾಸ್, ಮೈಷುಗರ್‌ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ಜಿ.ಪಂ. ಸದಸ್ಯ ಯೋಗೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್‌ ಇದ್ದರು.2ರಂದು ಜಾಗ್ವಾರ್ ಧ್ವನಿ ಸುರುಳಿ ಬಿಡುಗಡೆ

ಮಂಡ್ಯ: ‘ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ‘ಸೆ. 2ರಂದು ನನ್ನ ಪುತ್ರ ನಿಖಿಲ್‌ಕುಮಾರ್ ನಟಿಸಿರುವ ‘ಜಾಗ್ವಾರ್‌’ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ನಿರ್ಮಾಪಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಲು ಇದೇ ಸಂದರ್ಭದಲ್ಲಿ ಮೃತರಾದ ರೈತ ಕುಟುಂಬದ ಸದಸ್ಯರಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಚಲನಚಿತ್ರ ಕಲಾವಿದರಿಗೆ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಧನ ಸಹಾಯ ಮಾಡಲಾಗುವುದು’ ಎಂದರು.ಜಿಲ್ಲೆಗೆ ಕೊಡುಗೆ ನೀಡಿದ ಹಿರಿಯರನ್ನು ಸನ್ಮಾನಿಸಲಾಗುವುದು. ಆತ್ಮಹತ್ಯೆ ಮಾಡಿಕೊಂಡ 65ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಉಳಿದ ಕುಟುಂಬಗಳಿಗೆ ಈ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು.ಪೈಪೋಟಿ ದೃಷ್ಟಿಯಿಂದ ಧ್ವನಿ ಸುರುಳಿ ಇಲ್ಲಿ ಬಿಡುಗಡೆ ಮಾಡುತ್ತಿಲ್ಲ. ಮೊದಲೇ ಅಂದುಕೊಂಡಿದ್ದೆ. ಜತೆಗೆ ಜಿಲ್ಲೆಯ ಜನತೆ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ಇಲ್ಲಿನ ಜನರೊಂದಿಗೆ ಇರುವ ಬಾಂಧವ್ಯ ಕಾರಣಕ್ಕೆ ಮಾಡಲಾಗುತ್ತಿದೆ ಎಂದರು.‘ಜಾಗ್ವಾರ್‌’ ಚಿತ್ರದ ಕನ್ನಡ ಧ್ವನಿ ಸುರುಳಿ ಬಿಡುಗಡೆ ಮಂಡ್ಯದಲ್ಲಿ ನಡೆಯಲಿದ್ದರೆ, ಸೆ. 18ರಂದು ಹೈದರಾಬಾದ್‌, ಸೆ. 22ರಂದು ವೈಜಾಕ್‌ನಲ್ಲಿ ತೆಲುಗು ಧ್ವನಿ ಸುರುಳಿ ಬಿಡುಗಡೆ ಮಾಡಲಾಗುವುದು. ತಮಿಳು, ಮಲೆಯಾಳಂ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ ಎಂದು ಹೇಳಿದರು.‘ಚಿತ್ರರಂಗದಲ್ಲಿ ಈ ಚಿತ್ರ ಮೈಲಿಗಲ್ಲು ಸೃಷ್ಟಿಸಲಿದೆ. ಬಾಲಿವುಡ್‌ಗೆ ಸರಿ ಸಮನಾಗಿ ನಿಲ್ಲುವಂತಹ ಚಿತ್ರ ಇದಾಗಿದೆ. ನಿಖಿಲ್‌ ಕಲಾವಿದನಾಗಿ ಚಿತ್ರರಂಗದಲ್ಲಿ ಮುಂದುವರೆಯ ಲಿದ್ದಾನೆ. ರಾಜಕೀಯ ಪ್ರವೇಶ ಮಾಡುವುದಿಲ್ಲ. ಅವನಿಂದಾಗಿ ನಾನು ಮತ ಪಡೆಯಬೇಕಾಗಿಲ್ಲ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.