ಭಾನುವಾರ, ಜನವರಿ 19, 2020
28 °C

ಮುಗ್ಧ ಮಲ್ಲೇಶನ ಸಿಹಿ–ಕಹಿ ಯಾನ

– ಅಮಿತ್ ಎಂ.ಎಸ್‌. Updated:

ಅಕ್ಷರ ಗಾತ್ರ : | |

ಮುಗ್ಧ ಮಲ್ಲೇಶನ ಸಿಹಿ–ಕಹಿ ಯಾನ

ತೆರೆ ಮೇಲೆ ಮುಗ್ಧನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ನಟ ನಿಜ ಜೀವನದಲ್ಲಿಯೂ ಅತಿ ಮುಗ್ಧ. ನಾಯಕನ ಗೆಳೆಯರ ಬಳಗ, ಭಿಕ್ಷುಕ ಹೀಗೆ ಸಣ್ಣಪುಟ್ಟ ಹಾಸ್ಯ ಪಾತ್ರಗಳಲ್ಲಿ ಅಮಾಯಕನ ಪ್ರತಿರೂಪದಲ್ಲಿ ಬಂದು ನಗಿಸುವ ಈ ನಟನ ಹೆಸರು ‘ವಠಾರ’ ಮಲ್ಲೇಶ್‌.‘ವಠಾರ’ ಮಲ್ಲೇಶ್‌ ಬನ್ನೇರುಘಟ್ಟದ ಜಂಗಲಪಾಳ್ಯದವರು. ಅವರ ಹೆಸರಿನೊಂದಿಗೆ ‘ವಠಾರ’ ತಳುಕುಹಾಕಿಕೊಂಡಿದ್ದು ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ವಠಾರ’ ಧಾರಾವಾಹಿಯಿಂದ. ಎಸ್‌ಎಸ್‌ಎಲ್‌ಸಿಯಲ್ಲೇ ಓದಿಗೆ ತಿಲಾಂಜಲಿಯಿಟ್ಟ ಕೃಷಿಕ ಕುಟುಂಬದ ಮಲ್ಲೇಶ್‌ ಬನ್ನೇರುಘಟ್ಟದಲ್ಲಿ ಟೆಲಿಫೋನ್‌ ಬೂತ್‌ ನಡೆಸುತ್ತಿದ್ದರು. ನಾಟಕ ಮತ್ತು ಸಿನಿಮಾಗಳ ಸಂಭಾಷಣೆಗಳನ್ನು ಅನುಕರಿಸಿ ಹೇಳುವ ಹವ್ಯಾಸ ರೂಢಿಸಿಕೊಂಡಿದ್ದರು. ಒಮ್ಮೆ ಅವರ ಟೆಲಿಫೋನ್ ಬೂತ್‌ಗೆ ಬಂದಿದ್ದ ‘ವಠಾರ’ ಧಾರಾವಾಹಿ ಮ್ಯಾನೇಜರ್‌ ಮಂಜುನಾಥ್, ಮಲ್ಲೇಶ್‌ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವಂತೆ ಕರೆದರು. ನಟಿಸಿದ ಮೊದಲ ಧಾರಾವಾಹಿಯ ಶೀರ್ಷಿಕೆಯನ್ನು ಹೆಸರಿನೊಂದಿಗೆ ಜೋಡಿಸಿಕೊಂಡರು ಮಲ್ಲೇಶ್‌.ಚಿಕ್ಕಂದಿನಿಂದಲೂ ನಾಟಕದ ಹುಚ್ಚು ಹೊತ್ತಿಸಿಕೊಂಡ ಮಲ್ಲೇಶ್‌ 250ಕ್ಕೂ ಅಧಿಕ ನಾಟಕಗಳಲ್ಲಿ ಬಣ್ಣಹಚ್ಚಿದ್ದಾರೆ.‘ದಾನಶೂರ ವೀರ ಕರ್ಣ’ ನಾಟಕದಲ್ಲಿ ಏಳು ಪಾತ್ರಗಳಲ್ಲಿ ನಟಿಸಿದ ಹೆಮ್ಮೆ ಅವರದು. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ನಟಿಸುತ್ತಾ ಊರೂರುಗಳನ್ನು ತಿರುಗಿ ನಟನೆಯ ಅನುಭವ ಪಡೆದುಕೊಂಡ ಮಲ್ಲೇಶ್‌ಗೆ ಕ್ಯಾಮೆರಾ ಮುಂದೆ ಅಭಿನಯಿಸಲು ಸಿಕ್ಕಿದ್ದು ಹಾಸ್ಯ ಪಾತ್ರಗಳು ಮಾತ್ರ. ‘ಪಾರ್ವತಿ ಪರಮೇಶ್ವರ’, ‘ಪ್ರಿಯದರ್ಶಿನಿ’, ‘ಪಾಂಡುರಂಗ ವಿಠಲ’, ‘ಅಮೃತವರ್ಷಿಣಿ’ ಸೇರಿದಂತೆ ಮಲ್ಲೇಶ್‌ ಸುಮಾರು 60ಕ್ಕೂ ಅಧಿಕ ಧಾರಾವಾಹಿಗಳಿಗೆ ಬಣ್ಣಹಚ್ಚಿದ್ದಾರೆ.ಮಲ್ಲೇಶ್‌ ಅವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳನ್ನು ಕೊಡಿಸಿದ್ದು ಮತ್ತೊಬ್ಬ ಹಾಸ್ಯನಟ ಮೋಹನ್‌ ಜುನೇಜಾ. ‘ಸುಂಟರಗಾಳಿ’, ‘ದತ್ತ’, ‘ಅಭಯ್‌’, ‘ಅಜಯ್‌’, ‘ಚಾರ್‌ಮಿನಾರ್‌’, ‘ಚಡ್ಡಿದೋಸ್ತ್’ ಮುಂತಾದ ಸುಮಾರು 95 ಸಿನಿಮಾಗಳಲ್ಲಿ ನಟಿಸಿರುವ ಮಲ್ಲೇಶ್‌ ಶತಕದ ಸನಿಹದಲ್ಲಿದ್ದಾರೆ. ಚಿಕ್ಕಂದಿನಿಂದಲೂ ಮಲ್ಲೇಶ್‌ ಅವರಿಗೆ ಮರೆವಿನ ಸಮಸ್ಯೆ. ಚೆನ್ನಾಗಿ ಓದಿಕೊಂಡಿದ್ದರೂ ಪರೀಕ್ಷೆ ಕೊಠಡಿಗೆ ಹೋದಾಗ ಎಲ್ಲವನ್ನೂ ಮರೆತಿರುತ್ತಿದ್ದೆ. ಹೀಗಾಗಿಯೇ ಎಸ್‌ಎಸ್ಎಲ್‌ಸಿಯಲ್ಲಿ ಅನುತ್ತೀರ್ಣನಾಗಿದ್ದು ಎನ್ನುವ ಮಲ್ಲೇಶ್‌ಗೆ ತಾವು ನಟಿಸಿದ ಸಿನಿಮಾಗಳ ಹೆಸರುಗಳೂ ತಕ್ಷಣಕ್ಕೆ ನೆನಪಿಗೆ ಬರುವುದಿಲ್ಲವಂತೆ. ಆದರೆ ಕ್ಯಾಮೆರಾ ಮುಂದೆ ನಿಂತಾಗ ಉದ್ದುದ್ದುದ ಸಂಭಾಷಣೆಗಳಿದ್ದರೂ ಅವು ತಾವಾಗಿಯೇ ಹೊರಬರುತ್ತವೆ ಎನ್ನುತ್ತಾರೆ ಅವರು. ಮಲ್ಲೇಶ್‌ ಅವರ ಮುಗ್ಧತೆಯನ್ನು ಅನೇಕರು ದುರ್ಬಳಕೆ ಮಾಡಿಕೊಂಡಿದ್ದೂ ಇದೆ.ನಟಿಸಿದ ಪಾತ್ರಕ್ಕೆ ಕೆಲವೊಮ್ಮೆ ಸಂಭಾವನೆ ನೀಡದೆ ಸತಾಯಿಸಿದ್ದನ್ನು ನೋವಿನಿಂದಲೇ ನೆನಪಿಸಿಕೊಳ್ಳುತ್ತಾರೆ. ‘ಈಗ ಮುಂಚಿನಂತಲ್ಲ. ಸಂಭಾವನೆಯನ್ನು ಕೇಳಿ ಪಡೆಯುವಷ್ಟು ಸಾಮರ್ಥ್ಯ ಬೆಳೆಸಿಕೊಂಡಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮಲ್ಲೇಶ್‌.ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಏಕಪ್ರಕಾರದ ಪಾತ್ರಗಳೇ ಸಿಗುತ್ತಿರುವುದು ಅವರಿಗೆ ಬೇಸರವನ್ನೇನೂ ಮೂಡಿಸಿಲ್ಲ. ಕಲಾವಿದನಿಗೆ ಯಾವ ಪಾತ್ರವಾದರೇನು? ಮನಸಿಗೆ ನೆಮ್ಮದಿ ನೀಡುವ, ಜೀವನ ಸಾಗಿಸಲು ಸಾಕಾಗುವಷ್ಟು ಅವಕಾಶಗಳು ಸಿಕ್ಕರೆ ಸಾಕು’ ಎಂದು ಅದೇ ಮುಗ್ಧತೆಯಿಂದ ನುಡಿಯುತ್ತಾರೆ ಅವರು.

 

ಪ್ರತಿಕ್ರಿಯಿಸಿ (+)