ಮಂಗಳವಾರ, ಮೇ 24, 2022
25 °C

ಮುಚ್ಚಿದ ಪಡಿತರ ಚೀಟಿ ನವೀಕರಣ ಕೇಂದ್ರ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಪಡಿತರ ಚೀಟಿ ನವೀಕರಣ ಕೇಂದ್ರ ಮುಚ್ಚಿದ ಹಿನ್ನೆಲೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ನಾಗರಿಕರು ಇಲ್ಲಿನ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲಾ ಆವರಣದಲ್ಲಿ ಇರುವ ಕೇಂದ್ರದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.ಮಸ್ಕಿಯ ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಧಾರ್ ಯೋಜನೆ ಹಾಗೂ ಪಡಿತರ ಚೀಟಿ ನವೀಕರಣ ಕೇಂದ್ರ ಆರಂಭಿಸಿದ್ದರಿಂದ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ದೂರಿನ ಹಿನ್ನಡೆಲೆಯಲ್ಲಿ  ಈ ಎರಡು ಕೇಂದ್ರಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳ ಸೂಕ್ತ ಮಾಹಿತಿ ನೀಡದೆ ಇದ್ದುದ್ದರಿಂದ ಬುಧವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಪಡಿತರ ಚೀಟಿಗಾಗಿ ಕೇಂದ್ರದ ಮುಂದೆ ಜಮಾಯಿಸಿದ್ದರು.ಮದ್ಯಾಹ್ನ 12 ಗಂಟೆಯಾದರೂ ಕೇಂದ್ರದ ಬಾಗಿಲು ತೆರೆಯದೆ ಇದ್ದುದ್ದರಿಂದ ರೊಚ್ಚಿಗೆದ್ದ ಮಹಿಳೆಯರು ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರೆ ಮತ್ತೆ ಕೆಲವರು ಪಂಚಾಯಿತಿಗೆ ಮುತ್ತಿಗೆ ಹಾಕಿದರು.25 ಸಾವಿರ ಜನ ಸಂಖ್ಯೆ ಹೊಂದಿರುವ ಮಸ್ಕಿ ಪಟ್ಟಣಲ್ಲಿ ಕನಿಷ್ಠ 5-6 ಕಡೆಯಾದರೂ ಪಡಿತರ ಚೀಟಿ ನವೀಕರಣ ಕೇಂದ್ರಗಳನ್ನು ಆರಂಭಿಸಬೇಕಾಗಿತ್ತು. ಆದರೆ, ಒಂದೇ ಕೇಂದ್ರ ಆರಂಭಿಸಿದ್ದರಿಂದ ಪಡಿತರ ಚೀಟಿ ನವೀಕರಿಸಲು ನೂಕು ನುಗ್ಗಲು ಉಂಟಾಗಿದೆ. ನೂರಾರು ಜನ ರಾತ್ರಿ ಕೇಂದ್ರದ ಮುಂದೆಯೇ ವಾಸ್ತವ್ಯಹೂಡಿ ಮರುದಿನ ಚೀಟಿ ಪಡೆಯಲು ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ಜನರು ತಿಳಿಸಿದ್ದಾರೆ.ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಮಸ್ಕಿ `ಪ್ರಜಾವಾಣಿ'ಗೆ ತಿಳಿಸಿದರು.

ಆಹಾರ ವಿತರಣೆ ಇಲ್ಲ:  ಕಳೆದ ಒಂದು ವಾರದಿಂದ ಪಡಿತರ ಚೀಟಿ ನವೀಕರಣ ಆರಂಭಗೊಂಡಿದೆ. ಆದರೆ, ನವೀಕರಣ ಆಗುವವರೆಗೆ ಪಡಿತರ ಸಾಮಗ್ರಿಗಳನ್ನು ಕೊಡುವುದಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ತಿಳಿಸುತ್ತಾರೆ ಇದರಿಂದಾಗಿ ಮನೆಯಲ್ಲಿ ಸೀಮೆ ಎಣ್ಣೆ ಇಲ್ಲ, ಅಕ್ಕಿ ಇಲ್ಲದಂತಾಗಿದೆ ಎಂದು ಅನೇಕ ಮಹಿಳೆಯರು ತಮ್ಮ ಗೋಳು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.