ಶನಿವಾರ, ಮೇ 15, 2021
29 °C

ಮುದಗಲ್ಲ ಕೋಟೆ-ಅತಿಕ್ರಮಣಕಾರರ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿರುವ `ಮುದಗಲ್ಲ ಕೋಟೆ' ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹೀಗಾಗಿ ಕೋಟೆಯ ಬಹುಭಾಗದಲ್ಲಿ ಕಲ್ಲುಗಳು ಉರುಳಿ ನೆಲಸಮಗೊಳ್ಳುತ್ತಿದೆ. ವಿಶಾಲ ಮತ್ತು  ಆಳವಾದ ಕಂದಕ ಪ್ರದೇಶ ಅತಿಕ್ರಮಣಕ್ಕೆ ಒಳಗಾಗುತ್ತಿದೆ.ಶತಮಾನಗಳಷ್ಟು ಇತಿಹಾಸ ಹೊಂದಿರುವ ಕೋಟೆ ಸುತ್ತಳತೆ ಅಂದಾಜು 1919ಅಡಿ ಉದ್ದವಿದ್ದು, 24 ಅಡಿ ಎತ್ತರವಿದೆ. ಕೋಟೆಯ ಮಧ್ಯದಲ್ಲಿ ಅಲ್ಲಲ್ಲಿ 16 ದೊಡ್ಡ ಬುರುಜು (40 ಅಡಿ ಎತ್ತರ 160 ಅಡಿ ಅಗಲ) ಮತ್ತು ಸಣ್ಣ ಬುರುಜ 16 (33 ಅಡಿ ಎತ್ತರ 40 ಅಡಿ ಅಗಲ) ಒಳಗೊಂಡಿವೆ. ವಿವಿಧ ಧರ್ಮಿಯರ ದೇವಾಲಯ, ಮಸೀದಿ ಒಳಗೊಂಡಿದ್ದು 80ಕ್ಕೂ ಶಾಸನಗಳ ಪೈಕಿ ಕೇವಲ 30ಕ್ಕೂ ಹೆಚ್ಚು ಶಾಸನಗಳು ಪತ್ತೆಯಾಗಿವೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ.ಮುದಗಲ್ಲ ಕೋಟೆಯ ಒಳ ಮತ್ತು ಹೊರ ಭಾಗದ 200ಮೀಟರ್ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡುವಂತಿಲ್ಲ. ಆದರೆ, ಕೋಟೆಯ ಒಳಭಾಗದ ಬಹುತೇಕ ಐತಿಹಾಸಿಕ ಕಟ್ಟಡ ಹಾಗೂ ಕೋಟೆಯ ಕೆಲ ಪ್ರದೇಶದ ಕಲ್ಲು ಮಣ್ಣು ತೆಗೆದು ಮೇಲಂತಸ್ತಿನ ಕಟ್ಟಡಗಳು ತಲೆ ಎತ್ತಿ ನಿಂತಿವೆ.ಕಂದಕ ಪ್ರದೇಶ ಕೊಳಚೆ ನೀರು, ಘನತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿದೆ. ಪಟ್ಟಣ ಪಂಚಾಯಿತಿ ಕೂಡ ಕೋಟೆ ಮತ್ತು ಕಂದಕ ಸಂರಕ್ಷಣೆಗೆ ಕಿಂಚಿತ್ತು ಚಿಂತನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.ಕೋಟೆಯ ಸುತ್ತಲು 300 ಅಡಿ ವಿಶಾಲವಾದ ಮತ್ತು 15 ಅಡಿ ಆಳವಾದ ಕಂದಕ ನಿರ್ಮಿಸಲಾಗಿತ್ತು. ಕೋಟೆಯ ಒಳಭಾಗದ ಪುಷ್ಕರಣಿ ತುಂಬಿ ಕಂದಕಕ್ಕೆ ನೀರು ಸಂಗ್ರಹಗೊಳ್ಳುತ್ತಿತ್ತು. ವರ್ಷದ 12 ತಿಂಗಳು ನೀರು ಸಂಗ್ರಹಗೊಳ್ಳುವ ಪುಷ್ಕರಣಿ ಮತ್ತು ಕಂದಕ ಅತಿಕ್ರಮಣದಿಂದ ಬತ್ತಿ ಹೋಗಿವೆ. ಇತ್ತೀಚಿನ ವರ್ಷಗಳಲ್ಲಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯೆ ಸ್ವತಃ ಪಟ್ಟಣದ ವಿವಿಧ ವಾರ್ಡ್‌ಗಳ ಘನತ್ಯಾಜ್ಯ ತಂದು ಮುಚ್ಚುತ್ತ ಹೊರಟಿದೆ.ಕಲ್ಲುಕಟ್ಟಡದ ಸುಂದರ ಕೋಟೆ ಅಲ್ಲಲ್ಲಿ ನೆಲಸಮಗೊಳ್ಳುತ್ತಿದೆ. ಕೋಟೆಯ ಮೇಲ್ಭಾಗದಲ್ಲಿ ಗಿಡ ಮರಗಳು ಬೆಳೆದು ಅಪಾಯದ ಮುನ್ಸೂಚನೆ ನೀಡುತ್ತಿವೆ. ಘನತ್ಯಾಜ್ಯ ವಸ್ತು ತಂದು ಹಾಕುವ ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಂದಕ ಮುಚ್ಚಿ ಅತಿಕ್ರಮಣ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ ಕೋಟೆ, ಕೊತ್ತಲು ಸಂರಕ್ಷಣೆ ಮಾಡಿ ಕೋಟೆ ಉತ್ಸವಕ್ಕೆ ಸರ್ಕಾರ ಮುಂದಾಗಬೇಕು ಎಂದು ನಾಗರಿಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹನುಮೇಶ ಪಟವಾರಿ ಆಗ್ರಹ ಪಡಿಸಿದ್ದಾರೆ.`ಕೋಟೆಯ ಒಳಪ್ರದೇಶದಲ್ಲಿ ಒತ್ತುವರಿ ನಡೆದಿರುವುದು ಇಲಾಖೆ ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಣೆ ನಡೆದಿದೆ. ಆದರೆ, ಕಂದಕಕ್ಕೆ ಘನತ್ಯಾಜ್ಯ ತಂದು ಹಾಕುತ್ತಿರುವ ಕುರಿತು ಮಾಹಿತಿ ಇಲ್ಲ. ಪರಿಶೀಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು' ಎಂದು ವಸ್ತು ಸಂಗ್ರಹಾಲಯ ಅಧಿಕಾರಿ ಧನಲಕ್ಷ್ಮಿ ಕೋಟೆ ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.