ಸೋಮವಾರ, ಜೂನ್ 14, 2021
21 °C
ಸುಧಾಕರ್ ಬೆಂಬಲಿಗರಿಗೆ ಜೆಡಿಎಸ್‌ ಒಲವು

ಮುನಿಯಪ್ಪ ವಿರುದ್ಧ ನಿಂತ ಸುಧಾಕರ್ ಬಣ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಕೋಲಾರ ಲೋಕಸಭೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.



ಚುನಾವಣೆ ಹಿನ್ನೆಲೆಯಲ್ಲಿ ಈಗಾ­ಗಲೇ ಪ್ರಚಾರ ಕಾರ್ಯ ಆರಂಭ­ವಾಗಿದ್ದು, ಪ್ರಚಾರ ವೈಖರಿಯಲ್ಲೂ ಜಿದ್ದಾ­ಜಿದ್ದಿ ಏರ್ಪಟ್ಟಿದೆ.

ವಿವಿಧ ಪಕ್ಷಗಳ ಮುಖಂಡರು, ಹಿರಿಯ ಮತ್ತು ಕಿರಿಯ ನಾಯಕರು ನಾ ಮುಂದು–ತಾ ಮುಂದು ಎಂಬಂತೆ ಹೋಬಳಿ­ವಾರು ಪ್ರಚಾರ ಮತ್ತು ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳು­ತ್ತಿದ್ದಾರೆ.



ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಅಷ್ಟೇ ಅಲ್ಲ, ಡಾ.ಎಂ.ಸಿ.ಸುಧಾಕರ್‌ ಬೆಂಬ­ಲಿಗರ ಗುಂಪಿನಲ್ಲೂ ಅನಿರೀಕ್ಷಿತ ಬೆಳ­ವಣಿಗೆಗಳು ಆಗುತ್ತಿವೆ.

ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಬಲಾಬಲ ಪ್ರದರ್ಶಿಸುವ ಕಾರ್ಯದಲ್ಲಿ ನಿರತವಾಗಿವೆ. ಕಾಂಗ್ರೆಸ್‌ನಿಂದ ದೂರ­ವಾದರೇನಂತೆ ಎಂ.ಸಿ.ಸುಧಾಕರ್ ಅವರ ಪ್ರಭಾವ ಇನ್ನೂ ದಟ್ಟವಾಗಿದೆ ಎಂದು ಅವರ ಬೆಂಬಲಿಗರು ಹೇಳು­ತ್ತಿದ್ದಾರೆ.



ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿ­ಯಲ್ಲಿದ್ದರೂ ಚಿಂತಾಮಣಿ ಮತ್ತು ಶಿಡ್ಲಘಟ್ಟ ಎರಡೂ ವಿಧಾನಸಭಾ ಕ್ಷೇತ್ರಗಳು ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಎರಡರಲ್ಲೂ ಜೆಡಿಎಸ್‌ ಶಾಸಕ­ರಿದ್ದಾರೆ. ಶಾಸಕ ಎಂ.ಕೃಷ್ಣಾರೆಡ್ಡಿ ಚಿಂತಾ­ಮಣಿ­ಯಲ್ಲಿ ತಮ್ಮದೇ ಹಿಡಿತ ಎಂದು ಹೇಳಿಕೊಂಡರೆ, ಎಂ.ರಾಜಣ್ಣ ಶಿಡ್ಲಘಟ್ಟ­ದಲ್ಲಿ ತಮ್ಮ ದಟ್ಟ ಪ್ರಭಾವವಿದೆ ಎಂದು ಹೇಳಿಕೊಳ್ಳು­ತ್ತಾರೆ.



ಈ ಎಲ್ಲದರ ಮಧ್ಯೆ ಕೋಲಾರ ಲೋಕ­­ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಮತ್ತು ಎಂ.ಸಿ.ಸುಧಾಕರ್ ಮಧ್ಯೆ ಹಲವು ವರ್ಷ­ಗಳಿಂದ ಇರುವ ಶೀತಲ ಸಮರ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ನಿಂದ ದೂರವಾಗಿರುವ ಎಂ.ಸಿ.ಸುಧಾಕರ್‌ ಅವರು ಕೆ.ಎಚ್‌.­ಮುನಿ­ಯಪ್ಪ ಅವರನ್ನು ಸೋಲಿಸಲು ಪಣ­ತೊಟ್ಟಂತೆ ಕಂಡು ಬರುತ್ತಿದೆ.



ಕಾಂಗ್ರೆಸ್‌ನೊಂದಿಗೆ ಗುರುತಿಸಿ­ಕೊಂಡೇ ರಾಜಕೀಯ ಜೀವನ ನಡೆಸಿದ ಡಾ.ಎಂ.ಸಿ.ಸುಧಾಕರ್‌, ಈ ಬಾರಿ ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುವರು.  ಚುನಾವಣೆಯಲ್ಲಿ ತಟಸ್ಥರಾಗಿ ಉಳಿ­ಯು­ವುದಕ್ಕಿಂತ ಜೆಡಿಎಸ್ ಜೊತೆ ಗುರುತಿಸಿಕೊಂಡರೇ ಉತ್ತಮ ಎಂಬ ಭಾವನೆ ಅವರು ಹೊಂದಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.



ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್‌ ನಾಯ­­­ಕತ್ವದಲ್ಲಿ ಜೆಡಿಎಸ್‌ ಮುಖಂಡರು ಈಗಾಗಲೇ ತಾಲ್ಲೂಕಿನ ಬಟ್ಲಹಳ್ಳಿ, ಮುರುಗಮಲ್ಲ, ಮಾಡಿಕೆರೆ ಕ್ರಾಸ್, ಉಪ್ಪಾರಪೇಟೆ, ಕೈವಾರ ಮುಂತಾದ ಕಡೆ ರಾಜಕೀಯ ಸಮಾ­ವೇಶ ಮತ್ತು ಪ್ರಚಾರ ಸಭೆಗಳನ್ನು ನಡೆಸಿದ್ದಾರೆ. ಶಾಸಕರಾದ ಎಂ.ಕೃಷ್ಣಾ­ರೆಡ್ಡಿ, ಎಂ.ರಾಜಣ್ಣ, ಜೆಡಿಎಸ್ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಶ್ರೀನಿವಾಸಗೌಡ ಮುಂತಾದವರು ಸಭೆಯಲ್ಲಿ ಪಾಲ್ಗೊಂಡು ಮತ ಯಾಚಿಸಿದ್ದಾರೆ.



ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಎಂ.ಸಿ.ಸುಧಾಕರ್‌ ಇನ್ನೂ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. ಅದ­ಕ್ಕಾಗಿಯೇ ಹೋಬಳಿವಾರು ಸಭೆ ನಡೆಸಲಾಗುತ್ತಿದೆ. ನಾವು ಜೆಡಿಎಸ್‌ಗೆ ಬೆಂಬಲಿಸುವ ಸಾಧ್ಯತೆ ಹೆಚ್ಚಿದೆ ಎಂದು ಸುಧಾಕರ್‌ ಬೆಂಬಲಿಗರು ಹೇಳುತ್ತಾರೆ.



ಹೋಬಳಿಗಳ ಸಭೆ ನಂತರ ತಾಲ್ಲೂಕು ಮಟ್ಟದಲ್ಲಿ ಬೆಂಬಲಿಗರ ಸಭೆ ಕರೆದು, ತೀರ್ಮಾನಿಸಲಾಗುವುದು ಎಂದು ಸುಧಾಕರ್ ಹೇಳು­ತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.