ಶನಿವಾರ, ಜೂಲೈ 4, 2020
22 °C

ಮುರಳಿ ಗೆಳೆಯನ ಮನದಾಳದ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುರಳಿ ಗೆಳೆಯನ ಮನದಾಳದ ಮಾತು

ಕೊಲಂಬೊ: ಅಂಗಳದಲ್ಲಿ ಎದುರಾದಾಗ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಮಹಾ ವೈರಿಯಾಗಿ ಕಾಣಿಸಿಕೊಳ್ಳುವ ಶ್ರೀಲಂಕಾದ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಕಣ್ಣರಳಿಸಿಕೊಂಡು ನುಗ್ಗಿಬಂದು ಚೆಂಡನ್ನು ಎಸೆದಾಗ ಭಯವಾಗುವುದು ಸಹಜ. ಆದರೆ ಅಂಗಳದಿಂದ ಹೊರಗೆ ಇದ್ದಾಗ ಸಿಂಹಳೀಯರ ನಾಡಿನ ನೆಚ್ಚಿನ ‘ಮುರಳಿ’ ಎಲ್ಲರಿಗೂ ಅಚ್ಚುಮೆಚ್ಚಿನ ಸ್ನೇಹಿತ.

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಶ್ರೇಯ ಹೊಂದಿರುವ ಮುರಳಿಯನ್ನು ಇದೇ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಪಾಲ್ ಕಾಲಿಂಗ್‌ವುಡ್ ಅವರು ‘ನನ್ನ ಗೆಳೆಯ’ ಎಂದು ಕರೆದಿದ್ದು. ಸದಾ ನಗುನಗುತ್ತಾ ಉತ್ಸಾಹದಿಂದ ಎದುರಾಳಿ ತಂಡದ ಆಟಗಾರರನ್ನು ಕೂಡ ಹೆಗಲ ಮೇಲೆ ಕೈಹಾಕಿ ಮಾತನಾಡಿಸುವ ಲಂಕಾದ ಬೌಲರ್ ಎಂದರೆ ಪಾಲ್‌ಗೆ ಭಾರಿ ಗೌರವ.

ಭಾರತ ತಂಡದ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಲ್ಲಿ ಮಾಡಿದಂಥ ಅದ್ಭುತ ಸಾಧನೆಯನ್ನು ಶ್ರೀಲಂಕಾ ಸ್ಪಿನ್ನರ್ ಮುರಳಿ ಬೌಲಿಂಗ್ ವಿಭಾಗದಲ್ಲಿ ಮಾಡಿದ್ದಾರೆ ಎನ್ನುವುದು 34 ವರ್ಷ ವಯಸ್ಸಿನ ಕಾಲಿಂಗ್‌ವುಡ್ ಅಭಿಪ್ರಾಯ.

ವಿಶ್ವಕಪ್ ಕ್ರಿಕೆಟ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಎದುರಿಸಲಿರುವ ಇಂಗ್ಲೆಂಡ್ ತಂಡದವರು ಗುರುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಒಬ್ಬೊಬ್ಬ ಆಟಗಾರನನ್ನು ಮಾತನಾಡಿಸುವುದಕ್ಕೆ ಅವಕಾಶ ಸಿಗುವಂತೆ ಮಾಡಿದ್ದ ‘ಮುಕ್ತ ಮಾಧ್ಯಮ ಗೋಷ್ಠಿ’ಯಲ್ಲಿ ಹಾಜರಿದ್ದ ಕಾಲಿಂಗ್‌ವುಡ್ ಮುಂದೆ ಹೋಗಿ ಕುಳಿತಾಗ ಹರ್ಷಚಿತ್ತದಿಂದಲೇ ಅವರು ಮಾತಿಗಿಳಿದರು. ಪಾಲ್ ತಮ್ಮ ತಂಡದ ಕುರಿತು ಆಡಿದ ಮಾತುಗಳಿಗಿಂತ ಆತಿಥೇಯ ದೇಶದ ಹಿರಿಯ ಸ್ಪಿನ್ನರ್ ಬಗ್ಗೆ ಆಡಿದ ಮಾತುಗಳೇ ಹೆಚ್ಚು.

ಮುರಳಿ ಸಾಧನೆಯ ಎತ್ತರಕ್ಕೆ ಏರಿದ್ದರೂ ಅವರತ್ತ ನೋಡುವ ರೀತಿ ಬದಲಾಗಿಲ್ಲ ಎನ್ನುವ ಕಡೆಗೆ ಅವರ ಗಮನ ಸೆಳೆದಾಗ ‘ವಿಶ್ವ ಶ್ರೇಷ್ಠ ಸ್ಪಿನ್ನರ್ ಸಾಧನೆ ದೊಡ್ಡದು. ಅದನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಹಾಗೆ ಮಾಡುವುದು ಸೂಕ್ತವೂ ಅಲ್ಲ. ಏಕೆಂದರೆ ಸ್ವತಃ ಮುರಳಿ ತಮ್ಮ ಶೈಲಿಯಲ್ಲಿ ಯಾವುದೇ ಅನುಮಾನಾಸ್ಪದ ಅಂಶವಿಲ್ಲ ಎನ್ನುವುದನ್ನು ತಜ್ಞರಮುಂದೆಯೇ ಸಾಬೀತುಪಡಿಸಿದ್ದಾರೆ’ ಎಂದು ವಿವರಿಸಿದರು.

ಶ್ರೀಲಂಕಾ ವಿರುದ್ಧ ಆಡಿದ ಹೆಚ್ಚಿನ ಪಂದ್ಯಗಳಲ್ಲಿ ನಮಗೆ ಭಯವಾಗಿ ಕಾಡಿದ್ದು ಮುರಳಿ. ಆದ್ದರಿಂದಲೇ ಅವರ ಬಗ್ಗೆ ಗೌರವವೂ ಇದೆ. ಕ್ರೀಸ್‌ನಲ್ಲಿ ಇದ್ದಾಗ ವೈರಿಯಂತೆ ಕಾಣುವ ಈ ಬೌಲರ್ ಹೋಟೆಲ್ ಪ್ರಾಂಗಣದಲ್ಲಿ ಸಿಕ್ಕರೆ ಹೃದಯಕ್ಕೆ ಹತ್ತಿರವಾದ ಗೆಳೆಯ ಎನಿಸುವುದು ವಿಶೇಷ. ಅಷ್ಟೊಂದು ಹೃದಯವಂತ ಆಟಗಾರರು ಹೆಚ್ಚಿಲ್ಲ ಎಂದು ಕೂಡ ಅವರು ಹೇಳಿದರು.

‘ಎಷ್ಟೆಲ್ಲಾ ಪರೀಕ್ಷೆಗಳನ್ನು ಮಾಡಿ, ತಪ್ಪಿಲ್ಲ ಎನ್ನುವ ಪ್ರಮಾಣ ಪತ್ರವನ್ನು ನೋಡಿದ ನಂತರವೂ ಈ ಬೌಲರ್ ಬಗ್ಗೆ ಕೆಲವರು ಇನ್ನೂ ಕಟುವಾಗಿ ಬರೆಯುತ್ತಾರೆ. ಅಂಥವರ ಮೇಲೆ ನನಗೂ ಕೋಪವಿದೆ. ಇನ್ನೂ ಅನುಮಾನವಿದ್ದರೆ ಮತ್ತೆ ಪರೀಕ್ಷೆಗೆ ಒಳಗಾಗಲು ಸಿದ್ಧವೆಂದು ಮುರಳಿ ಹೇಳುವಾಗ ಮತ್ತದೇ ಮಾತು ಆಡುವವರನ್ನು ಕಂಡಾಗ ಬೇಸರ ಆಗುತ್ತದೆ’ ಎಂದ ಕಾಲಿಂಗ್‌ವುಡ್ ಅವರು ಸಂಪೂರ್ಣವಾಗಿ ತಮ್ಮ ಬೆಂಬಲ ಮುರಳಿಗೆ ಎನ್ನುವಂತೆ ಮಾತು ಮುಂದುವರಿಸಿದರು.

‘ವಿಚಿತ್ರ ಬುದ್ಧಿಯ ಕೆಲವರ ಮಿದುಳಿನಿಂದಲೂ ಮುರಳಿ ಬೌಲಿಂಗ್ ಶೈಲಿ ಅನುಮಾನಾಸ್ಪದ ಎನ್ನುವ ಹುಳುವನ್ನು ಕಿತ್ತು ಹಾಕಬೇಕು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾನವ ದೇಹ ಚಲನಾ ಪರಿಣತರ ಸಮಿತಿಯಲ್ಲಿರುವ ಪ್ರೊ. ಬ್ರೂಸ್ ಎಲಿಯಟ್ ಅವರಿಗೇ ಇಲ್ಲದ ಅನಮಾನ ಬೇರೆಯವರಿಗೆ ಯಾಕೆ?’ ಎಂದು ಪಾಲ್ ಪರೋಕ್ಷವಾಗಿ          ಆಸ್ಟ್ರೇಲಿಯಾದ ಮಾಧ್ಯಮಗಳ ಕಡೆಗೆ ತಮ್ಮ ಮಾತಿನ ಕಿಡಿ ಸಿಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.