ಭಾನುವಾರ, ಜನವರಿ 19, 2020
28 °C

ಮೂರು ದಿನದ ಧಾರವಾಡ ಉತ್ಸವ ಮುಗಿದ ಮ್ಯಾಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಎತ್ತ ನೋಡಿದರತ್ತ ಕಸದ ರಾಶಿ... ಕಸವನ್ನು ಎತ್ತಿ ಒಗೆಯುವಲ್ಲಿ ನಿರತರಾದ ಪಾಲಿಕೆ ಕಾರ್ಮಿಕರು... ಇಡೀ ಕ್ರೀಡಾಂಗಣದ ತುಂಬ ಪ್ಲಾಸ್ಟಿಕ್‌ ಹಾಳೆಗಳ ದರ್ಬಾರ್‌... ಇದು ಕಂಡು ಬಂದದ್ದು ಇಲ್ಲಿನ ಕರ್ನಾಟಕ ಕಾಲೇಜು ಮೈದಾನದಲ್ಲಿ.ಕಳೆದ 13 ರಿಂದ 15ರ ವರೆಗೆ ಧಾರವಾಡ ಉತ್ಸವ ವಿಜೃಂಭಣೆಯಿಂದ ನಡೆಯಿತು. ಕರ್ನಾಟಕ ಕಲಾ ಕಾಲೇಜಿನ ಮೈದಾನದಲ್ಲಿ ನಿರ್ಮಿಸಲಾಗಿದ್ದ ಮುಖ್ಯ ವೇದಿಕೆ ಜನರ ಪ್ರಮುಖ ಆಕರ್ಷಣೆಯ ಕೇಂದ್ರವೂ ಆಗಿತ್ತು. ಮೊದಲ ದಿನ ಗುರುಕಿರಣ್‌ ಮತ್ತು ತಂಡದವರಿಂದ ನಡೆದ ರಸಮಂಜರಿ ಕಾರ್ಯಕ್ರಮ ನೋಡಲು ಜನ ತಂಡೋಪ ತಂಡವಾಗಿ ಬಂದು  ವೀಕ್ಷಿಸಿದರು. ಎರಡನೇ ದಿನ ವಿವಿಧ ತಂಡಗಳಿಂದ ನೃತ್ಯಗಳು ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆದಿದ್ದರಿಂದ ನಗರದ ಜನತೆ ಅವಧಿಗೆ ಮುನ್ನವೇ ತಮ್ಮ ಕುರ್ಚಿಗಳನ್ನು ಕಾಯ್ದಿರಿಸಿಕೊಂಡಿದ್ದರು.ಕೊನೆಯ ದಿನವಾದ ಭಾನುವಾರ ಬಾಲಿವುಡ್‌ನ ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್‌, ಕನ್ನಡದ ರಘು ದೀಕ್ಷಿತ್‌ ಮುಂತಾದವರಿಂದ ನಡೆದ ರಸಮಂಜರಿ ಹಾಗೂ ನೃತ್ಯಗಳನ್ನು ನೋಡಲು ಭಾರಿ ಸಂಖೆ್ಯಯಲ್ಲಿ ಜನ ಕ್ರೀಡಾಂಗಣದತ್ತ ಧಾವಿಸಿದ್ದರಿಂದ ಮೈದಾನ ಕಸದ ರಾಶಿಯಿಂದ ತುಂಬಿಕೊಂಡಿದೆ. ಮೂರು ದಿನಗಳ ಕಾಲ ರಾತ್ರಿ ಕಾರ್ಯಕ್ರಮಗಳು ನಡೆದದ್ದರಿಂದ ಜನರು, ತಾವು ಇದ್ದ ಸ್ಥಳದಲ್ಲಿಯೇ ಕುರಕುರಿ ಪ್ಯಾಕೇಟ್‌, ಹೋಟೆಲ್‌ನಿಂದ ತಂದ ಇಡ್ಲಿ ಪ್ಯಾಕೇಟ್‌, ಗುಟ್ಕಾ ಚೀಟಿಗಳು  ಕಟ್ಟಿಕೊಂಡು ಬಂದು ಕಾರ್ಯಕ್ರಮ­ದೊಂದಿಗೆ ಸವಿದರು.ಮೈದಾನದಲ್ಲಿ ನಿರ್ಮಿಸಲಾಗಿದ್ದ ಮುಖ್ಯ ವೇದಿಕೆಯನ್ನು ಸೋಮವಾರ ತೆರವುಗೊಳಿಸ­ಲಾಯಿತು. ಅಲ್ಲದೇ ಕ್ರೀಡಾಂಗಣದಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ಹಾಳೆಗಳು, ಗುಟ್ಕಾ ಚೀಟಿಗಳು ಮತ್ತು ಇನ್ನಿತರೆ ಕಸ ಕಡ್ಡಿಯನ್ನು ಪಾಲಿಕೆ ಪೌರ ಕಾರ್ಮಿಕರು ಸೋಮವಾರ ವಿಲೇವಾರಿ ಮಾಡುವಲ್ಲಿ ತಲ್ಲೀನರಾಗಿದ್ದರು.ಸೋಮವಾರ ಕ್ರೀಡಾಂಗಣ ಮುಕ್ಕಾಲು ಭಾಗ ಮಾತ್ರ ಸ್ವಚ್ಚಗೊಂಡಿದೆ. ಉಳಿದದ್ದನ್ನು ಮಂಗಳವಾರ ಸ್ವಚ್ಚಗೊಳಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದರು.‘ಅಶ್ಲೀಲ ನೃತ್ಯ: ಜಿಲ್ಲಾಡಳಿತ ಕ್ಷಮೆ ಕೇಳಲಿ’

ಧಾರವಾಡ: ಇದೇ 13ರಿಂದ 15ರ ವರೆಗೆ ಜಿಲ್ಲಾಡಳಿತವು ಹಮ್ಮಿಕೊಂಡಿದ್ದ ಮೂರು ದಿನಗಳ ಧಾರವಾಡ ಉತ್ಸವದ ಮುಖ್ಯ ವೇದಿಕೆಯಲ್ಲಿ ಪ್ರತಿದಿನ ಕಲಾವಿದೆಯರು ನಡೆಸಿಕೊಟ್ಟ ಅಶ್ಲೀಲ, ಮಾದಕ ನೃತ್ಯ ಹಾಗೂ ಅಬ್ಬರದ ಸಂಗೀತ ಕಾರ್ಯಕ್ರಮವು ನಗರದ ಸುಸಂಸ್ಕೃತ ನಾಗರಿಕರು ತಲೆತಗ್ಗಿಸುವಂತೆ ಮಾಡಿದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್‌.ಜಿ.­ದೇಸಾಯಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾಡಳಿತ, ಹುಬ್ಬಳ್ಳಿ-–ಧಾರವಾಡ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಜವಾಬ್ದಾರಿಯುತ ಸರ್ಕಾರಿ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಜನರ ತೆರಿಗೆ ಹಣವನ್ನು ವೆಚ್ಚ ಮಾಡಿ ಆಯೋಜಿಸಿದ್ದ ಈ ಉತ್ಸವ ನಿಜವಾದ ಅರ್ಥದಲ್ಲಿ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ಉತ್ಸವವಾಗಬೇಕಿತ್ತು. ಆದರೆ, ಕೇವಲ ಅಬ್ಬರದ ಸಂಗೀತದ ಮಧ್ಯೆ ಅಶ್ಲೀಲ ಹಾಡು ಹಾಗೂ ನರ್ತನ ಸೇರಿಕೊಂಡು ಪ್ರೇಕ್ಷಕರಲ್ಲಿ ಮುಜುಗರವುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.ಇಂತಹ ಕಾರ್ಯಕ್ರಮಗಳನ್ನು ಆಯೋಜಿ­ಸುವ ಮೂಲಕ ಜಿಲ್ಲಾಡಳಿತವು ಅಪರಾಧಿ ಸ್ಥಾನದಲ್ಲಿ ನಿಂತುಕೊಂಡಂತಾಗಿದೆ. ಕಲಾವಿದರ ಹಾಗೂ ಕಲಾತಂಡಗಳ ಆಯ್ಕೆ ಮಾಡಲೆಂದೇ ಉಪ ಸಮಿತಿಗಳನ್ನು ಜಿಲ್ಲಾಡಳಿತ ನೇಮಕ ಮಾಡಿತ್ತು. ಅಂತಹ ಉಪಸಮಿತಿಗಳ ಮೇಲ್ವಿಚಾರಣೆ ಮಾಡಲೆಂದೇ ಸಾಂಸ್ಕೃತಿಕ ಉಪಸಮಿತಿ ಎಂಬ ಇನ್ನೊಂದು ಸಮಿತಿ ರಚಿಸಲಾಗಿತ್ತು. ಸಮಿತಿಗಳ ಪರಿಶೀಲನೆಯ ಬಳಿಕವೂ ಇಂತಹ ಅಶ್ಲೀಲ ಕಾರ್ಯಕ್ರಮಗಳಿಗೆ ಅವಕಾಶ ಸಿಕ್ಕಿತೇ ಅಥವಾ ಒಂದೊಮ್ಮೆ ಜಿಲ್ಲಾಡಳಿತವೇನಾದರೂ ನೇರವಾಗಿ ಈ ಬಗ್ಗೆ ನಿರ್ಧಾರ ಕೈಗೊಂಡಿತೇ ಎಂಬುದನ್ನು ನಾಗರಿಕರ ಮುಂದಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಸಂಸ್ಕೃತಿ ಉಳಿಸುವ ಹೆಸರಿನಲ್ಲಿ ಜಿಲ್ಲಾಡಳಿತ ಕುಸಂಸ್ಕೃತಿ ಹರಡುವ ಕೆಲಸ ಮಾಡಬಾರದು. ಸಾಂಸ್ಕೃತಿಕ ಜಿಲ್ಲೆಯಲ್ಲಿ ಅಶ್ಲೀಲ ಕಾರ್ಯಕ್ರಮ­ಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯ ಪರಂಪರೆಗೆ ಧಕ್ಕೆ ತಂದಿದೆ. ಜಿಲ್ಲಾಡಳಿತ ಇಂತಹ ಕುಸಂಸ್ಕೃತಿ ಬಿಂಬಿಸುವ ಕಾಯಕ್ರಮ ಆಯೋಜಿಸಿದ್ದಕ್ಕಾಗಿ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಮತ್ತು ಮುಂದೆ ಹೀಗಾಗದಂತೆ ಎಚ್ಚರವಹಿಸಬೇಕು ಎಂದು ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)