ಬುಧವಾರ, ಏಪ್ರಿಲ್ 14, 2021
29 °C

ಮೂಲನಿವಾಸಿಗಳು, ವಲಸಿಗರ ಹಗ್ಗಜಗ್ಗಾಟ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಆಗಸ್ಟ್ 3 ರ ಶುಕ್ರವಾರ ನಡೆಯುವ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ತೀವ್ರವಾಗಿ ಕುತೂಹಲ ಕೆರಳಿಸಿದೆ.ಮೊದಲ ಅವಧಿಯ 20 ತಿಂಗಳಲ್ಲಿ ಉಳಿದಿರುವ 3 ತಿಂಗಳುಗಳಿಗೆ ಅಧ್ಯಕ್ಷರಾಗಲು ಜೆಡಿಎಸ್ ಮತ್ತು ಪಕ್ಷೇತರರಾಗಿ ಗೆದ್ದು ಜೆಡಿಎಸ್ ತೆಕ್ಕೆಯಲ್ಲಿರುವ ಸದಸ್ಯರ ನಡುವೆ   ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಪಕ್ಷದ ಗುರುತಿನ ಮೇಲೆ ಜಯಗಳಿಸಿರುವ ಪುಟ್ಟಾಲಮ್ಮ ಅಥವಾ ನಿಂಗಮ್ಮ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕೆಲವರು ಪಟ್ಟು  ಹಿಡಿದಿದ್ದಾರೆ. ಆದರೆ, ಕೆಂಚನಹಳ್ಳಿ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದಿರುವ ಬಿ.ಜಿ.ಮಹೇಂದ್ರ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹಟ ಹಿಡಿದಿದ್ದಾರೆ. ಇದಕ್ಕೆ ಕಾರಣವಿದೆ.

 

ತಾಲ್ಲೂಕು ಪಂಚಾಯಿತಿ ಯಲ್ಲಿ ಜೆಡಿಎಸ್‌ನ 10 ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯಲು 13 ಮಂದಿ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜೆಡಿಎಸ್‌ನ ಮುಖಂಡರು ಪಕ್ಷೇತರರಾದ ಬಿ.ಜಿ.ಮಹೇಂದ್ರ, ಜಿ.ಗೋಪಾಲ ಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 20 ತಿಂಗಳ ಅವಧಿಯಲ್ಲಿ ಮೊದಲ ಹತ್ತು ತಿಂಗಳು ಜಿ.ಗೋಪಾಲಸ್ವಾಮಿ, ಉಳಿದ ಹತ್ತು ತಿಂಗಳು ಬಿ.ಜಿ.ಮಹೇಂದ್ರ ಅಧ್ಯಕ್ಷರಾಗುವುದು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಜಿ.ಗೋಪಾಲಸ್ವಾಮಿ 17 ತಿಂಗಳ ಆಡಳಿತ ನಡೆಸಿದರು. ಹೀಗಾಗಿ ಉಳಿದಿ ರುವ 3 ತಿಂಗಳ ಅವಧಿಗೆ ಒಪ್ಪಂದದಂತೆ ಅಧ್ಯಕ್ಷರನ್ನಾಗಿ ತಮ್ಮನ್ನೇ ಮಾಡಬೇಕು ಎಂದು ಬಿ.ಜಿ.ಮಹೇಂದ್ರ ಜೆಡಿಎಸ್ ಮುಖಂಡರನ್ನು ಕೋರಿದ್ದಾರೆ.ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 23 ಸದಸ್ಯರಿದ್ದು, ಜೆಡಿಎಸ್ 10, ಬಿಜೆಪಿ 5, ಕಾಂಗ್ರೆಸ್ 3, ಪಕ್ಷೇತರರು 5 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಪರಿಣಾಮ ಅಧ್ಯಕ್ಷ  ಸ್ಥಾನಕ್ಕೆ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ಅತಂತ್ರ ವಾಗಿತ್ತು. ಈ ಸಂದರ್ಭದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಜೆಡಿಎಸ್ ಅಧ್ಯಕ್ಷ ಸ್ಥಾನ ಹಿಡಿಯಲು ಮೂವರು ಪಕ್ಷೇತರ ಸದಸ್ಯರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿತು.ಜೆಡಿಎಸ್‌ನಿಂದ ಜಯಗಳಿಸಿದ್ದ ನಾಗನಹಳ್ಳಿ ಕ್ಷೇತ್ರದ ಸದಸ್ಯೆ ಪುಟ್ಟಾಲಮ್ಮ ಮತ್ತು ಹಿರೇಹಳ್ಳಿ ಕ್ಷೇತ್ರದ ಸದಸ್ಯೆ ನಿಂಗಮ್ಮ ಪರಿಶಿಷ್ಟ ಜಾತಿಯವರೇ ಆಗಿದ್ದು, ಪಕ್ಷದ ನಿಷ್ಠಾವಂತ ಸದಸ್ಯರಾಗಿದ್ದಾರೆ. ಆದ್ದರಿಂದ ಹೊರಗಿನಿಂದ ಬಂದವರಿಗೆ ಅವಕಾಶ ನೀಡಿದರೆ ಪಕ್ಷದವರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪಕ್ಷದಿಂದ ಗೆದ್ದಿರುವ ಪಟ್ಟಾಲಮ್ಮ ಇಲ್ಲವೇ ನಿಂಗಮ್ಮ ಅವರ ಪೈಕಿ ಯಾರಿಗಾದರೂ ಅಧ್ಯಕ್ಷ ಸ್ಥಾನವನ್ನು ನೀಡಲೇಬೇಕು ಎಂದು ಪಕ್ಷದ ಕೆಲವರು ಜಿಲ್ಲಾ ಮತ್ತು ರಾಜ್ಯಮಟ್ಟದ ವರಿಷ್ಠರ ಗಮನ  ಸೆಳೆಯಲು ಮುಂದಾಗಿದ್ದಾರೆ. ಹೀಗಾಗಿ 3ರಂದು ನಡೆಯುವ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವುದೇ  ಕುತೂಹಲಕ್ಕೆ ಕಾರಣವಾಗಿದೆ.ಉಪಾಧ್ಯಕ್ಷ ಸ್ಥಾನಕ್ಕೂ ಪೈಪೋಟಿ: ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣೇಗೌಡ ಮತ್ತು ಬಾಲಚಂದ್ರ ಅವರ ನಡುವೆ ಪೈಪೋಟಿ ಇದೆ. ಜೆಡಿಎಸ್‌ನಿಂದ ಜಯಗಳಿಸಿದ್ದ ಸದಸ್ಯರಿಗೆ ಸರಿಯಾದ ಸ್ಥಾನಮಾನ ನೀಡುತ್ತಿಲ್ಲ ಎನ್ನುವ ಅಸಮಾಧಾನ ಹೊಗೆಯಾಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.