ಶನಿವಾರ, ಮೇ 8, 2021
26 °C

ಮೂಲಸೌಲಭ್ಯ ವಂಚಿತ ಗಡಿಭಾಗದ ಗ್ರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಶುರಾಂಪುರ: ಚಳ್ಳಕೆರೆ ತಾಲ್ಲೂಕು ಕೇಂದ್ರದಿಂದ ಸುಮಾರು 42 ಕಿ.ಮೀ. ದೂರದಲ್ಲಿರುವ ಆಂಧ್ರ ಗಡಿಭಾಗದ ಕಡೇಹುಡೇ ಗ್ರಾಮವು ಹೆಚ್ಚಾಗಿ ಪರಿಶಿಷ್ಟ ಜಾತಿ- ಪಂಗಡ ಜನರನ್ನು ಹೊಂದಿದ್ದು, ಮೂಲ ಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ.ಹಿಂದುಳಿದ ಸಮುದಾಯದ ಜನರು ಬಹುಪಾಲು ಈಗಲೂ ಗುಡಿಸಲುಗಳಲ್ಲಿ ವಾಸಿಸುವುದು ಸರ್ವೆ ಸಾಮಾನ್ಯವಾಗಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ಕೊಳಚೆ ನೀರು ರಸ್ತೆಗೆ ಹರಿದು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯನ್ನೂ ಇಲ್ಲಿನ ಜನರು ಎದುರಿಸುತ್ತಿದ್ದಾರೆ.ಪಿ. ಮಹಾದೇವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮವು ಹಿಂದೆ ಆಂಧ್ರಪ್ರದೇಶಕ್ಕೆ ಒಳಪಟ್ಟಿದ್ದು, ಭಾಷವಾರು ಪ್ರಾಂತ್ಯಗಳ ಆಧಾರದಲ್ಲಿ ವಿಂಗಡಣೆಯಾದಾಗ ಈ ಗ್ರಾಮ ಮತ್ತು ಸುತ್ತಮುತ್ತಲ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿದ್ದು,  ಹಿಂದಿನ ದಾಖಲೆಗಳು ತೆಲುಗಿನಲ್ಲಿ ಇವೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.1,500 ಜನಸಂಖ್ಯೆ ಹೊಂದಿರುವ ಈ ಗ್ರಾಮಕ್ಕೆ ರಸ್ತೆಗಳ ವ್ಯವಸ್ಥೆ ಅಸಮರ್ಪಕವಾಗಿದ್ದು,  ಮುಖ್ಯರಸ್ತೆಗಳಾದ ಪಾವಗಡ- ಚಳ್ಳಕೆರೆ ಹಾಗೂ ಅಮರಾಪುರ- ಪರಶುರಾಂಪುರ ರಸ್ತೆಯಿಂದ 5 ಕಿ.ಮೀ. ನಡೆದುಕೊಂಡೆ ಊರನ್ನು ತಲುಪಬೇಕು. ಯತೇಚ್ಛವಾಗಿ ಮಳೆ ಬಂದರೆ ರಸ್ತೆಗಳು ಜಲಾವೃತಗೊಂಡು ಗ್ದ್ದದೆಬದುಗಳ ಮೇಲೆಯೇ ನಡೆದು ಹೋಗಬೇಕಾದ ಅನಿವಾರ್ಯತೆ ಇದೆ. ಸ್ಥಳೀಯರ ಹೋರಾಟದ ಫಲವಾಗಿ 2 ಖಾಸಗಿ ಬಸ್ಸು ಬಂದುಹೊಗುತ್ತಿವೆ. ಒಮ್ಮಮ್ಮೆ ಅವು ಸಹ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತವೆ ಎಂದು ಗ್ರಾಮದ ಯುವಕ ರಾಜೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಪ್ರಮುಖ ದೇವಸ್ಥಾನಗಳು: ಗ್ರಾಮ ದೇವತೆ ಅಚ್ಚವಳ್ಳಿ ಮಾರಮ್ಮ, ಶನೇಶ್ವರ, ಆಂಜನೇಯ, ಇದರಲ್ಲಿ ಮಾರಮ್ಮ ಹಾಗೂ ಆಂಜನೇಯ ದೇವರುಗಳು ಮೂಲ ದೇವರುಗಳಾಗಿವೆ. ಊರ ಹೊರಗೆ `ಅಚ್ಚವಳ್ಳಿ ಈಚಲು~ ಎಂಬ ಪ್ರದೇಶವನ್ನು ಈಗಲೂ ಕಾಣಬಹುದು.ಶನೇಶ್ವರ ದೇವಸ್ಥಾನವು ಸುಮಾರು 70-80 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಅಂದಿನಿಂದಲೂ ಶನೇಶ್ವರ ಹಾಗೂ ಮಾರಮ್ಮನ ಜಾತ್ರೆ ಪ್ರತಿವರ್ಷ ಮಾಘಮಾಸದಲ್ಲಿ ಒಟ್ಟಿಗೆ ಆಚರಣೆ ಮಾಡುತ್ತಿರುವುದು ಇಲ್ಲಿನ ವಿಶೇಷ.ಸುಮಾರು 60 ವರ್ಷಗಳಿಂದ ಈ ಗ್ರಾಮದಲ್ಲಿ `ಥಿಯೋಸಾಫಿಕಲ್ ಸೊಸೈಟಿ~ ಅಸ್ತಿತ್ವದಲ್ಲಿದ್ದು, ನಿರಂತರ ಆಧ್ಯಾತ್ಮಿಕ ಕಾರ್ಯ ಚಟುವಟಿಕೆಗಳನ್ನು ಗ್ರಾಮೀಣ ಭಾಗದಲ್ಲಿ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಅಧ್ಯಕ್ಷ ವೆಂಕಟೇಶ್ ಹೇಳುತ್ತಾರೆ.ಈ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, ಒಂದು ಶಾಲೆಯ ಆವರಣದಲ್ಲಿರುವ ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದು, ಮತ್ತೊಂದು ಸುಮಾರು 27 ವರ್ಷಗಳಿಂದ ಕಟ್ಟಡವಿಲ್ಲದೇ ಶಿಥಿಲವಾದ ಕೋಣೆಯಲ್ಲಿ ನಡೆಯುತ್ತಿರುವುದು ಶೋಚನೀಯವಾಗಿದೆ.ಮೂಲಸೌಲಭ್ಯಗಳಿಂದ ವಂಚಿತವಾದ ಈ ಗ್ರಾಮಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಸೌಲಭ್ಯ ಒದಗಿಸಿ,  ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಸ್ಥಳೀಯರ ಆಗ್ರಹ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.