ಶನಿವಾರ, ಜನವರಿ 18, 2020
20 °C

ಮೂವರಿಗೆ ನಾಡೋಜ ಗೌರವ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಹಂಪಿ ಕನ್ನಡ ವಿಶ್ವ ವಿದ್ಯಾ­ಲಯದ ‘ಅಕ್ಷರ’ ಗ್ರಂಥಾಲಯದ ಆವರ­ಣದಲ್ಲಿ ಶನಿವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ನಿವೃತ್ತ ಲೋಕಾ­ಯುಕ್ತ ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ನ್ಯಾಯಾಧೀಶ ಕೋ.ಚೆನ್ನಬಸಪ್ಪ ಹಾಗೂ ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಬಾಹ್ಯಾ­ಕಾಶದ ನಿರ್ದೇಶಕ ಎಸ್‌.ಕೆ.ಶಿವಕುಮಾರ ಅವರಿಗೆ ‘ನಾಡೋಜ’ ಗೌರವ ಪ್ರದಾನ ಮಾಡಲಾಯಿತು.ರಾಜ್ಯಪಾಲ ಎಚ್‌.ಆರ್‌.­ಭಾರ­ದ್ವಾಜ್‌, ಉನ್ನತ ಶಿಕ್ಷಣ ಸಚಿವ ಆರ್.ವಿ.­ದೇಶಪಾಂಡೆ ಅವರ ಗೈರು ಹಾಜರಿ­ಯಲ್ಲಿ ನಡೆದ ವಿಶ್ವವಿದ್ಯಾ­ಲಯದ 22ನೇ ನುಡಿಹಬ್ಬದ ಸರಳ ಸಮಾರಂಭ­ದಲ್ಲಿ ಕುಲಪತಿ ಡಾ. ಹಿ.ಚಿ.­ಬೋರಲಿಂಗಯ್ಯ ಗೌರವ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.ನುಡಿಹಬ್ಬದ ಭಾಷಣ ಮಾಡಿದ ಅಂಕಣಕಾರ ನಾಗೇಶ ಹೆಗಡೆ, ‘ಖಾಸಗಿ ಕಂಪೆನಿಗಳು ತಮ್ಮ ಲಾಭಕ್ಕಾಗಿ ನಮ್ಮದೇ ವಿಜ್ಞಾನಿಗಳ ನೆರವಿನಿಂದ ಸಂಶೋ­ಧನೆಯ ಹೆಸರಿನಲ್ಲಿ ತಳಿಗಣಿಗಾರಿಕೆ ನಡೆಸುತ್ತಿವೆ. ವಿಜ್ಞಾನದ ಫಲವನ್ನು ಲೋಕಕಲ್ಯಾಣಕ್ಕೆ ಅರ್ಪಿಸುವ ಕಾಲ ಎಂದೋ ಕಣ್ಮರೆಯಾಗಿದ್ದು, ಇಂದು ವಿಜ್ಞಾನ ಎಂದರೆ ಅಧಿಕಾರಶಾಹಿಗಳ, ಬಹುರಾಷ್ಟ್ರೀಯ ಕಂಪೆನಿಗಳ ಲಾಭಕ್ಕಾಗಿ ಹಾಗೂ ಸೇವೆಗಾಗಿ ಮುಡಿಪಾಗಿಡುವ ಜ್ಞಾನ ಶಾಖೆಯಾಗಿ ಮಾರ್ಪಟ್ಟಿದೆ’ ಎಂದು ವಿಷಾದಿಸಿದರು.‘ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾ­ಲಯ ಎಂದೇ ಕರೆಯಲಾಗುವ ಈ ಸಂಸ್ಥೆ ಅಸಾಂಪ್ರದಾಯಿಕ ವಿಜ್ಞಾನವನ್ನೂ ಪೋಷಿಸುವ, ದೇಶೀಯ ಜ್ಞಾನವನ್ನು ಸೃಷ್ಟಿಸುವ ಸಂಸ್ಥೆಯಾಗಿ ಆಧುನಿಕ ವಿಜ್ಞಾನಕ್ಕೆ ಹೊಸ ಪಾಠ ಹೇಳಬೇಕಿದೆ’ ಎಂದು ಅವರು ಹೇಳಿದರು.ಕುಲಸಚಿವ ಡಾ.ವಿಜಯ್‌ ಪೂಣಚ್ಚ ತಂಬಂಡ ಸ್ವಾಗತ ಭಾಷಣ ಮಾಡಿದರು.

ಪ್ರತಿಕ್ರಿಯಿಸಿ (+)