ಶನಿವಾರ, ಮೇ 8, 2021
26 °C

ಮೂವರಿಗೆ ಹಲ್ಲೆ, ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಂಗಿನಕಾಯಿ ದಾಸ್ತಾನು ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು ಮೂರು ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ರೂ 35 ಸಾವಿರ ನಗದು, ಚಿನ್ನಾಭರಣ ಮತ್ತು ಮೊಬೈಲ್ ಫೋನ್ ದರೋಡೆ ಮಾಡಿದ ಘಟನೆ ಕಾಮಾಕ್ಷಿ ಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.ಹೆಗ್ಗನಹಳ್ಳಿ ಮುಖ್ಯರಸ್ತೆಯ ಬಳಿ ಜಗದೀಶ್ ಎಂಬುವರಿಗೆ ಸೇರಿದ ತೆಂಗಿನಕಾಯಿ ದಾಸ್ತಾನು ಮಳಿಗೆ ಇದೆ. ಜಗದೀಶ್  ಅವರು ಸ್ನೇಹಿತರಾದ ರಾಜು, ಬೊರಲಿಂಗ, ಅಜಯ್ ಕುಮಾರ್, ರಂಗನಾಥ, ಚಿಕ್ಕಮುನಿಸ್ವಾಮಿ ಅವರು ಜೂಜು ಆಡುತ್ತ ಕುಳಿತಿದ್ದರು.

 

ಈ ಸಂದರ್ಭದಲ್ಲಿ ಏಕಾಏಕಿ ಒಳಗೆ ನುಗ್ಗಿದ ಆರೇಳು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರಂಗನಾಥ್, ಚಿಕ್ಕಮುನಿಸ್ವಾಮಿ ಮತ್ತು ಬೋರಲಿಂಗ ಅವರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನದ ಸರ, ಉಂಗುರ, ಬ್ರೇಸ್‌ಲೆಟ್ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಿದ್ದಾರೆ.ಆರೋಪಿಗಳು ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು ಎಂದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 `ಸ್ನೇಹಿತರು ಆಗಾಗ್ಗೆ ಒಟ್ಟಿಗೆ ಸೇರಿ ಇಸ್ಪೀಟ್ ಆಡುತ್ತಿದ್ದ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು. ಕಾಮಾಕ್ಷಿಪಾಳ್ಯ ಠಾಣೆ ದೂರು ದಾಖಲಿಸಿದೆ.ಶಾಲಾ ಬಸ್ ಡಿಕ್ಕಿ: ಬೈಕ್ ಸವಾರ ಸಾವು

ಖಾಸಗಿ ಶಾಲೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯನಗರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ಮೂಡಲಪಾಳ್ಯ ನಿವಾಸಿ ಮೆಕಾನಿಕ್ ಪ್ರಮೋದ್ (34) ಮೃತರು. ಅವರ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ವೆಂಕಟೇಶ್ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಅನಾರೋಗ್ಯಪೀಡಿತರಾಗಿ ಶೋಭಾ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರನ ಮಗನನ್ನು ನೋಡಲು ಪ್ರಮೋದ್ ಗೆಳೆಯ ವೆಂಕಟೇಶ್ ಜತೆ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ಇಬ್ಬರೂ ಮನೆಗೆ ವಾಪಸ್ ಬರುತ್ತಿದ್ದಾಗ ಹಿಂದಿನಿಂದ ಬಂದ ಖಾಸಗಿ ಶಾಲೆಯ ಬಸ್ ಬೈಕ್‌ಗೆ ಡಿಕ್ಕಿ ಹೊಡೆಯಿತು. ಕೆಳಗೆ ಬಿದ್ದ ಪ್ರಮೋದ್ ಮೇಲೆ ಅದೇ ವಾಹನದ ಚಕ್ರ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಜಯನಗರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಸಾವು

ಅನಾರೋಗ್ಯದ ಕಾರಣ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಲೋಕೇಶ್ (36) ಎಂಬುವರು ಮಂಗಳವಾರ ಮೃತಪಟ್ಟಿದ್ದಾರೆ.  ಮಾಗಡಿ ಸಮೀಪದ ಮಲ್ಲೂರು ನಿವಾಸಿಯಾದ ಲೋಕೇಶ್ ಅವರನ್ನು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸರು ಶನಿವಾರ ಬಂಧಿಸಿದ್ದರು. ನ್ಯಾಯಾಂಗ ಬಂಧನದ್ಲಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿತ್ತು.ಆ ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಮಾಲೆ ಹೆಚ್ಚಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.