ಮಂಗಳವಾರ, ಜೂನ್ 15, 2021
25 °C

ಮೂವರು ಅಲ್ಪಸಂಖ್ಯಾತರ ನಡುವೆ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೂವರು ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ.ಕಾಂಗ್ರೆಸ್ ತನ್ನ ಸದಸ್ಯ ಬಲದ ಆಧಾರದ ಮೇಲೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಬಹುದು. ರಾಜ್ಯಸಭೆಯ ಉಪಸಭಾಪತಿ ಕೆ. ರೆಹಮಾನ್ ಖಾನ್, ಕೇಂದ್ರದ ಮಾಜಿ ಸಚಿವರಾದ ಸಿ.ಕೆ. ಜಾಫರ್ ಷರೀಫ್ ಮತ್ತು ಸಿ.ಎಂ.ಇಬ್ರಾಹಿಂ ನಡುವೆ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಸಂಜೆಯ ವೇಳೆಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.ರೆಹಮಾನ್ ಖಾನ್ ನಾಲ್ಕನೆಯ ಬಾರಿಗೆ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಜಾಫರ್ ಷರೀಫ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿದು ಸೋಲನ್ನು ಅನುಭವಿಸಿದ್ದಾರೆ. ಎಐಸಿಸಿಗೆ ನಿಷ್ಠರು ಎನ್ನಲಾದ ಖಾನ್ ಅವರನ್ನು ಮತ್ತೆ ರಾಜ್ಯಸಭೆಗೆ ಆರಿಸಿ ಕಳಿಸಿದರೆ, ಬಿಜೆಪಿಯೇತರ ಪಕ್ಷಗಳ ಬೆಂಬಲ ಪಡೆದು ಪುನಃ ಉಪ ಸಭಾಪತಿ ಹುದ್ದೆ ಪಡೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಹೈಕಮಾಂಡ್‌ನಲ್ಲಿದೆ.ರಾಜ್ಯ ಕಾಂಗ್ರೆಸ್, ಇಬ್ರಾಹಿಂ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ. ಅವರು ಒಳ್ಳೆಯ ಮಾತುಗಾರ, ಜನರನ್ನು ಆಕರ್ಷಿಸಬಲ್ಲರು. ರಾಜ್ಯದ ಉದ್ದಗಲಕ್ಕೂ ಪರಿಚಯ ಇರುವವರು. ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಲ್ಲರು ಎಂಬುದು ಕೆಪಿಸಿಸಿ ಮೂಲಗಳ ವಾದ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ ಮಿಸ್ತ್ರಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.ಮಾತುಕತೆಯ ವೇಳೆ ರಾಜ್ಯಸಭೆ ಚುನಾವಣೆ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಚರ್ಚೆ ನಡೆಯಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸೋನಿಯಾ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಹಾಜರಿದ್ದರು.ರಾಜ್ಯಸಭೆಯ ನಾಲ್ಕನೆಯ ಅಭ್ಯರ್ಥಿಯಾಗಲು ಉದ್ಯಮಿಗಳಾದ ರಾಜೀವ್ ಚಂದ್ರಶೇಖರ್, ಆದಿಕೇಶವಲು, ಕಾಂಗ್ರೆಸ್‌ನ ಅಬ್ದುಲ್ ವಹಾಬ್ ಮತ್ತು ಕುಪೇಂದ್ರ ರೆಡ್ಡಿ ಪ್ರಯತ್ನ ನಡೆಸಿದ್ದಾರೆ. ಮೂವರು ಸದಸ್ಯರನ್ನು ಆಯ್ಕೆ ಮಾಡಿದ ಬಳಿಕ ಹೆಚ್ಚುವರಿಯಾಗಿ ಉಳಿಯಲಿರುವ ಕಾಂಗ್ರೆಸ್‌ನ 25, ಬಿಜೆಪಿಯ 28 ಹಾಗೂ ಜೆಡಿಎಸ್‌ನ 26 ಹಾಗೂ ಪಕ್ಷೇತರ ಸದಸ್ಯರ ಮತಗಳ ಮೇಲೆ ಈ ನಾಲ್ವರು ಕಣ್ಣಿಟ್ಟಿದ್ದಾರೆ.ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ಮತಗಳು ಬೀಳಲಾರವು. ಜೆಡಿಎಸ್ ಬೆಂಬಲ ಪಡೆದವರಿಗೆ ಮತ ನೀಡಲು ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ. ರಾಜೀವ್ ಜೆಡಿಎಸ್ ಮತ್ತು ಬಿಜೆಪಿ ಬೆಂಬಲದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.