ಬುಧವಾರ, ಏಪ್ರಿಲ್ 21, 2021
30 °C

ಮೆಟ್ರೊ: ಮಿನ್ಸ್ಕ್ ಚೌಕದ ನೆಲದಡಿ ನಿಲ್ದಾಣ ಕಾಮಗಾರಿಗೆ ವೇಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವೇಶ್ವರಯ್ಯ ಗೋಪುರದ ಹಿಂಬದಿಯಲ್ಲಿ ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ನಿರ್ಮಿಸಲು ಹೈಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದೆ. ಇದರೊಂದಿಗೆ ಮಿನ್ಸ್ಕ್ ಚೌಕದಲ್ಲಿ `ನಮ್ಮ ಮೆಟ್ರೊ~ದ ನೆಲದಡಿಯ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಇದ್ದ ತೊಡಕು ನಿವಾರಣೆಯಾಗಿದೆ. ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ನಿರ್ಮಿಸಿದ ಮೇಲೆ ನೆಲದಡಿಯ ನಿಲ್ದಾಣ ಕಾರ್ಯ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.ಕಬ್ಬನ್ ರಸ್ತೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಪಕ್ಕದಿಂದ ಮಿನ್ಸ್ಕ್ ಚೌಕದ ನೆಲದಡಿಯ ನಿಲ್ದಾಣದವರೆಗೆ ಸುರಂಗ ಕೊರೆಯುವ ಕಾರ್ಯವು ಸದ್ಯದಲ್ಲೇ ಆರಂಭವಾಗಲಿದೆ. ಈ ಸುರಂಗ ನಿರ್ಮಾಣಕ್ಕಾಗಿ ದೆಹಲಿಯಿಂದ ತರಿಸಿಕೊಂಡಿರುವ `ಟನೆಲ್ ಬೋರಿಂಗ್ ಮೆಷಿನ್~ನ (ಟಿಬಿಎಂ) ಜೋಡಣೆ ಕಾರ್ಯ ಮುಗಿದಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.ಒಟ್ಟು 24.20 ಕಿ.ಮೀ. ಉದ್ದದ ಉತ್ತರ- ದಕ್ಷಿಣ ಕಾರಿಡಾರ್‌ನಲ್ಲಿ ನಿರ್ಮಾಣವಾಗಲಿರುವ ಸುರಂಗದ ಉದ್ದ 4 ಕಿ.ಮೀ.; 18.10 ಕಿ.ಮೀ. ಉದ್ದದ ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ನಿರ್ಮಾಣವಾಗುವ ಸುರಂಗದ ಉದ್ದ 4.4 ಕಿ.ಮೀ. ಪೂರ್ವ- ಪಶ್ಚಿಮ ಕಾರಿಡಾರ್‌ನಲ್ಲಿ ಮೆಜೆಸ್ಟಿಕ್‌ನಿಂದ ಸೆಂಟ್ರಲ್ ಕಾಲೇಜುವರೆಗೆ ಜೋಡಿ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧದವರೆಗೆ ಜೋಡಿ ಸುರಂಗ ಕೊರೆಯುವ ಕಾರ್ಯವನ್ನು ಹೆಲೆನ್ ಮತ್ತು ಮಾರ್ಗರಿಟಾ ಹೆಸರಿನ ಟನೆಲ್ ಬೋರಿಂಗ್ ಮೆಷಿನ್‌ಗಳು ಪ್ರಾರಂಭಿಸಿವೆ. ಹೆಲೆನ್ 75 ಮೀಟರ್‌ಗಳಷ್ಟು ಮತ್ತು ಮಾರ್ಗರಿಟಾ 12 ಮೀಟರ್‌ಗಳಷ್ಟು ಸುರಂಗವನ್ನು ನಿರ್ಮಿಸಿವೆ. ಮೆಜೆಸ್ಟಿಕ್‌ನಿಂದ ನಗರ ರೈಲು ನಿಲ್ದಾಣ, ವಿಧಾನಸೌಧದಿಂದ ಮಿನ್ಸ್ಕ್ ಚೌಕದವರೆಗೆ ಸುರಂಗ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.ಜಕ್ಕರಾಯನಕೆರೆ ಮೈದಾನದ ಬಳಿಯಿಂದ ಮೆಜೆಸ್ಟಿಕ್ ಕಡೆಗೆ `ನಮ್ಮ ಮೆಟ್ರೊ~ ಮಾರ್ಗಕ್ಕಾಗಿ ಸುರಂಗ ಕೊರೆಯುವ ಕಾರ್ಯ ಸೆಪ್ಟೆಂಬರ್‌ನಿಂದ ಪ್ರಾರಂಭವಾಗಲಿದೆ. ಮೆಟ್ರೊದ ಉತ್ತರ- ದಕ್ಷಿಣ ಕಾರಿಡಾರ್‌ನ ಭಾಗವಾಗಲಿರುವ ಈ ಸುರಂಗವು ಮೆಜೆಸ್ಟಿಕ್‌ನಿಂದ ಕೃಷ್ಣ ರಾಜೇಂದ್ರ (ಕೆ.ಆರ್.) ರಸ್ತೆವರೆಗೆ ನಿರ್ಮಾಣಗೊಳ್ಳಲಿದೆ.ಚೀನಾದ ಹೆರೆನ್‌ನೆಂಚ್ಟ್ ಕಂಪೆನಿಯ ಒಂದು `ಅರ್ಥ್ ಪ್ರೆಷರ್ ಬ್ಯಾಲೆನ್ಸ್‌ಡ್ ಮೆಷಿನ್~ (ಇಪಿಬಿಎಂ) ಎಂಬ ಸುರಂಗ ಕೊರೆಯುವ ಯಂತ್ರ ನಗರಕ್ಕೆ ಬಂದಿದ್ದು ಜಕ್ಕರಾಯನಕೆರೆ ಮೈದಾನದ ಬಳಿ ಅದನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೇ ಕಂಪೆನಿಯ ಮತ್ತೊಂದು `ಇಪಿಬಿಎಂ~ ನಗರಕ್ಕೆ ಮುಂದಿನ ವಾರ ಬರಲಿದೆ.ಚೀನಾದ ಸೆಲಿ ಕಂಪೆನಿಯಿಂದ ಮತ್ತೊಂದು ಸುರಂಗ ಕೊರೆಯುವ ಯಂತ್ರ ಬರಲಿದ್ದು, ಅದನ್ನು ಕೆ.ಆರ್.ರಸ್ತೆಯ ಶಿವಶಂಕರ್ ವೃತ್ತದ ಬಳಿಯಿಂದ ವಿಕ್ಟೋರಿಯಾ ಆಸ್ಪತ್ರೆ ಮುಂಭಾಗದವರೆಗೆ ಸುರಂಗ ಕೊರೆಯಲು ಬಳಸಲು ಉದ್ದೇಶಿಸಲಾಗಿದೆ.ಮೆಜೆಸ್ಟಿಕ್‌ನಲ್ಲಿ ಎರಡೂ ಕಾರಿಡಾರ್‌ಗಳು ಸಂಧಿಸಲಿವೆ. ಅಲ್ಲಿ ಒಂದರ ಮೇಲೊಂದರಂತೆ ಎರಡೂ ಕಾರಿಡಾರ್‌ನ ನಿಲ್ದಾಣಗಳು ನಿರ್ಮಾಣವಾಗಲಿವೆ. ಅದಕ್ಕಾಗಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಮೆಟ್ರೊ ಸಿಸಿಟಿವಿ ಪರಿಣಾಮ: ಸಿಕ್ಕಿಬಿದ್ದ ಕಳ್ಳರು!

`ನಮ್ಮ ಮೆಟ್ರೊ~ದ ನಿಲ್ದಾಣಗಳು ಮತ್ತು ರೈಲು ಗಾಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ತಂಡವೊಂದನ್ನು ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪತ್ತೆ ಹಚ್ಚಿದ ಬೆಂಗಳೂರು ಮೆಟ್ರೊ ರೈಲು ನಿಗಮದ ಭದ್ರತಾ ಸಿಬ್ಬಂದಿಯು ಆ ತಂಡವನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದೆ.ಇದರ ಹಿನ್ನೆಲೆ ಹೀಗಿದೆ: ಜೂ. 10ರಂದು ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಮೆಟ್ರೊ ರೈಲು ಹತ್ತುತ್ತಿದ್ದ ಪ್ರಯಾಣಿಕರೊಬ್ಬರ ಪರ್ಸ್ ಅನ್ನು ಕಳ್ಳರ ತಂಡ ಕಸಿದು ಪರಾರಿಯಾಗಿತ್ತು. ಆ ಪ್ರಯಾಣಿಕ, ನಿಲ್ದಾಣದ ನಿಯಂತ್ರಕರಿಗೆ ದೂರು ನೀಡಿದರು. ಅವರು ತಕ್ಷಣ ಕಣ್ಗಾವಲು ಘಟಕದ ಭದ್ರತಾ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು.ಅದೇ ದಿನ 6.50ರ ಹೊತ್ತಿಗೆ ಕಳ್ಳರ ತಂಡ ಬೈಯಪ್ಪನಹಳ್ಳಿ ನಿಲ್ದಾಣದಿಂದ ಹೊರ ಹೋಗಿರುವುದು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದ ದೃಶ್ಯಾವಳಿಗಳಿಂದ ಖಚಿತಗೊಂಡಿತು. ಕಳ್ಳರು ಹಣವನ್ನು ತೆಗೆದುಕೊಂಡು ಖಾಲಿ ಪರ್ಸ್ ಅನ್ನು ನಿಲ್ದಾಣವೊಂದರ ಆಸನದ ಕೆಳಗೆ ಬಿಸಾಡಿ ಹೋಗಿದ್ದರು.ಅದೇ ಕಳ್ಳರ ತಂಡ ಜೂ. 12ರಂದು ಬೈಯಪ್ಪನಹಳ್ಳಿ ನಿಲ್ದಾಣದ ಎಸ್ಕಲೇಟರ್‌ನಲ್ಲಿ ಬರುತ್ತಿದ್ದ ಮಹಿಳೆ ಹಿಡಿದುಕೊಂಡಿದ್ದ ಬ್ಯಾಗ್‌ನಿಂದ ಮೊಬೈಲ್ ಕಳ್ಳತನ ಮಾಡಿದ್ದರು.ಈ ಎರಡು ಘಟನೆಗಳ ನಂತರ ನಿಗಮವು ಕಳ್ಳರ ತಂಡ ಪತ್ತೆ ಹಚ್ಚಲು ಆಯ್ದ ಭದ್ರತಾ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿತು. ಜೂ. 25ರಂದು ಅದೇ ಕಳ್ಳರ ತಂಡವು ಎಂ.ಜಿ.ರಸ್ತೆ ನಿಲ್ದಾಣದಲ್ಲಿ ರೈಲು ಹತ್ತಿದ್ದನ್ನು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದ ವಿಶೇಷ ಭದ್ರತಾ ತಂಡ ಗಮನಿಸಿತು. ಅದು ನೀಡಿದ ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿ ಕಳ್ಳರ ತಂಡವನ್ನು ಹಿಡಿಯಿತು.ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ತನಿಖೆಯ ಪ್ರಗತಿ ಮತ್ತು ಕಳ್ಳತನಕ್ಕೆ ಒಳಗಾದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ ಎಂದು ನಿಗಮ ಹೇಳಿಕೊಂಡಿದೆ.ಸರಿಯಾದ ವಿಳಾಸ ನೀಡಲು ಮನವಿ 

 `ಸರಿಯಾದ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಿ. ನಿಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಸಹಕರಿಸಿ~ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಮೆಟ್ರೊ ಪ್ರಯಾಣಿಕರಲ್ಲಿ ಮನವಿ ಮಾಡಿದೆ.`ಬೈಯಪ್ಪನಹಳ್ಳಿಯಿಂದ ಮಹಾತ್ಮಗಾಂಧಿ ರಸ್ತೆವರೆಗಿನ ರೀಚ್- 1ರಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 32 ದೂರುಗಳನ್ನು ಸ್ವೀಕರಿಸಲಾಗಿದೆ. ಅವುಗಳ ಪೈಕಿ ಕೆಲವು ದೂರುಗಳು ರೈಲು ಚಾಲಕರು ಮತ್ತು ಭದ್ರತಾ ಸಿಬ್ಬಂದಿಯ ವರ್ತನೆಗೆ ಸಂಬಂಧಿಸಿದ್ದಾಗಿವೆ. ಬಹುತೇಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ. ಆದರೆ, ಕೆಲವರು ತಮ್ಮ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಿಲ್ಲ. ಅಂತಹವರಿಗೆ ಉತ್ತರ ಅಥವಾ ಕ್ರಮ ತೆಗೆದುಕೊಂಡ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ~ ಎಂದು ನಿಗಮವು ತಿಳಿಸಿದೆ.`ಕುಂದುಕೊರತೆ ಮಾತ್ರವಲ್ಲ; ಮೆಟ್ರೊ ಸಂಚಾರದ ಬಗ್ಗೆ ಪ್ರಯಾಣಿಕರು ತಮ್ಮ ಅನಿಸಿಕೆ, ಸಲಹೆ ಸೂಚನೆಗಳನ್ನು ನಿಗಮಕ್ಕೆ (ಇ-ಮೇಲ್: bmrcl@dataone.in)   ಮುಕ್ತವಾಗಿ ತಿಳಿಸಬಹುದು. ಆದರೆ, ನಿಗಮದೊಂದಿಗೆ ವ್ಯವಹರಿಸುವಾಗ ಪ್ರಯಾಣಿಕರು ತಪ್ಪದೇ ತಮ್ಮ ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆಯನ್ನು ತಿಳಿಸಬೇಕು~ ಎಂದು ಕೋರಿದೆ.ಪ್ಲಾಟ್‌ಫಾರಂ ಅಥವಾ ನಿಲ್ದಾಣಗಳಲ್ಲಿ ಬಿಟ್ಟು ಹೋದ ಮೊಬೈಲ್‌ಗಳು, ಪರ್ಸ್‌ಗಳು, ಟಿಫಿನ್ ಬಾಕ್ಸ್‌ಗಳು ಮತ್ತಿತರ ವಸ್ತುಗಳನ್ನು ಅವುಗಳ ವಾರಸುದಾರರಿಗೆ ತಲುಪಿಸಿದ ನಿಗಮದ ಸಿಬ್ಬಂದಿಯನ್ನು ಪ್ರಯಾಣಿಕರು ಪ್ರಶಂಸಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.