ಸೋಮವಾರ, ಜನವರಿ 20, 2020
27 °C

ಮೇರಿ ಭಾವಾನಂದ!

ಸಂದರ್ಶನ: ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಮೇರಿ ಭಾವಾನಂದ!

ಅಲ್ಲಿ ಮೇರಿಯ ಗಾನ. ನೆರೆದವರ ಮೊಗದಲ್ಲಿ ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಆಗಿದ್ದ ನೆಚ್ಚಿನ ಕ್ರೀಡಾ ಪಟುವನ್ನು ನೋಡುವ ಕುತೂಹಲ. ಹೆಣ್ಣುಮಕ್ಕಳ ಕಂಗಳಲ್ಲಿ ಸಾಧಕಿಯನ್ನು ತುಂಬಿಕೊಳ್ಳುವ ಕಾತರ. ವೇದಿಕೆ ಮೇಲಿದ್ದ ಬಾಕ್ಸಿಂಗ್‌ ಗ್ಲೌಸ್‌ಗೆ ಪ್ರೀತಿಯ ಎಂ.ಸಿ.ಮೇರಿ ಕೋಮ್‌ ಕೈಸೇರುವ ತವಕ.ನಗರದ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ನಡೆದ ಮೇರಿ ಕೋಮ್‌ ಅವರ ಆತ್ಮಕಥನ ‘ಅನ್‌ಬ್ರೇಕಬಲ್‌‘ ಕೃತಿ ಬಿಡುಗಡೆ ಸಮಾರಂಭದಲ್ಲಿ ಕಂಡುಬಂದ ದೃಶ್ಯವಿದು. ಅಲ್ಲೇ ನಿಂತಿದ್ದ ಅಭಿಮಾನಿಯೊಬ್ಬ ‘ಮೇರಿ ಮೇರಿ‘ ಎಂದು ಕೂಗಿಕೊಳ್ಳುತ್ತಿದ್ದ. ಪಕ್ಕದಲ್ಲಿದ್ದ ವಯಸ್ಕರೊಬ್ಬರು ‘ಐದು ಪದಕ ಗೆದ್ದವರು ಅವರು, ಹೆಸರು ಹಿಡಿದು ಕೂಗಬೇಡ. ಮೇಡಂ ಎಂದು ಸೇರಿಸು’ ಎಂದು ಬುದ್ಧಿವಾದ ಹೇಳಿ ತಮ್ಮ ಅಭಿಮಾನವನ್ನು ತೋರ್ಪಡಿಸುತ್ತಿದ್ದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ಗಾಯಕಿ ಕವಿತಾ ಕೃಷ್ಣಮೂರ್ತಿ ಹಾಗೂ ವಯೊಲಿನ್‌ ವಿದ್ವಾಂಸ ಎಲ್‌. ಸುಬ್ರಹ್ಮಣ್ಯಂ ಆಗಮಿಸಿದ್ದರು. ವಿವಿಧ ಕ್ಷೇತ್ರದ ಮೂವರು ದಿಗ್ಗಜರಿಂದ ವೇದಿಕೆ ಕಳೆಗಟ್ಟಿತ್ತು. ಪುಸ್ತಕ ಅನಾವರಣ ಮಾಡುವ ಹೊತ್ತಿಗೆ ಮೇರಿ ಕೋಮ್‌ ಗದ್ಗದಿತರಾಗಿದ್ದರು. ‘ದೇಶದ ಎಲ್ಲರ ಆಶೀರ್ವಾದ ನನಗೆ ಬೇಕು. ಮುಂದಿನ ಬಾಕ್ಸಿಂಗ್‌ ಬದುಕಿನಲ್ಲಿ ದೇಶಕ್ಕಾಗಿ ಚಿನ್ನ ಗೆದ್ದು ಕೊಡಲಿ ಎಂದು ಪ್ರಾರ್ಥನೆ ಮಾಡಿ’ ಎಂದು ಮನವಿ ಮಾಡಿಕೊಂಡರು. ಕಾರ್ಯಕ್ರಮದ ನಂತರ ‘ಮೆಟ್ರೊ’ದೊಂದಿಗೆ ಮೇರಿ ಕೋಮ್‌ ಮಾತಿಗಿಳಿದರು.ಇಷ್ಟು ದಿನ ಬಾಕ್ಸರ್‌ ಎಂದು ಗುರುತಿಸಿಕೊಳ್ಳುತ್ತಿದ್ದಿರಿ. ಈಗ ಲೇಖಕಿಯಾಗಿದ್ದೀರಿ. ಹೇಗನಿಸುತ್ತಿದೆ?

ತುಂಬಾ ಖುಷಿಯಾಗಿದ್ದೇನೆ. ನನಗೆ ಮಾತಾಡಲು ಆಗದಷ್ಟು ಭಾವುಕಳಾಗಿದ್ದೇನೆ. ಕಷ್ಟದಲ್ಲಿ ಬೆಳೆದವಳು ನಾನು. ಇಂದು ಇವನ್ನೆಲ್ಲಾ ಸಾಧಿಸಿದ್ದರೆ, ಅದು ಸಾಧ್ಯವಾಗಿದ್ದು ಜನರ ಹಾರೈಕೆಯಿಂದ.ಆತ್ಮಕಥನ ಬರೆಯಲು ಮನಸ್ಸು ಮಾಡಿದ್ದೇಕೆ?

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಸಾಧನೆಯ ದಾರಿಗೆ ತಂದೆ–ತಾಯಿಯಿಂದಲೇ ಪ್ರೋತ್ಸಾಹ ಕಡಿಮೆ. ಅವರಲ್ಲಿ ಸಾಧಿಸುವ ಹೆಬ್ಬಯಕೆ ಇದ್ದರೂ ಸಮಾಜಕ್ಕೆ ಹೆದರಿ ಮಂಕಾಗಬೇಕಾದ ಸಂದರ್ಭಗಳು ಸಾಕಷ್ಟಿವೆ. ಹೀಗಾಗಿ, ನನ್ನ ಬದುಕಿನ ಸೋಲು, ಅದನ್ನು ಮೀರಿದ ಬಗೆ ಎಲ್ಲವನ್ನೂ ಅಕ್ಷರ ರೂಪಕ್ಕೆ ಇಳಿಸಿದರೆ ಇನ್ನೂ ಅನೇಕ ಹೆಣ್ಣುಮಕ್ಕಳಿಗೆ ಇದು ಸ್ಫೂರ್ತಿಯಾಗುತ್ತದೆ ಎನಿಸಿತು. ಹೀಗಾಗಿ ಬರೆಯುವ ಮನಸ್ಸು ಮಾಡಿದೆ.ಬರವಣಿಗೆಗೂ ಮುಂಚೆ ಬೇರೆ ಯಾರದ್ದಾದರೂ ಆತ್ಮಕಥನ ಓದಿದ್ದೀರಾ?

ಇಲ್ಲ. ನನಗೆ ಅಷ್ಟೊಂದು ಸಮಯ ಎಲ್ಲಿದೆ ಹೇಳಿ? ನಾನು ಸದಾ ಅಭ್ಯಾಸದಲ್ಲೇ ತೊಡಗಿರುತ್ತೇನೆ.ಪುಸ್ತಕ ಬರೆಯಲು ಎಷ್ಟು ಸಮಯ ಬೇಕಾಯಿತು. ಕಷ್ಟ ಎನಿಸಲಿಲ್ಲವೇ?

ಒಂದು ವರ್ಷ ಬೇಕಾಯಿತು. ಬರವಣಿಗೆಗೆ ನನ್ನ ಸಹೋದರಿ ಸಹಕರಿಸಿದಳು.ಬಾಕ್ಸಿಂಗ್‌, ಬರವಣಿಗೆ–ಇವುಗಳಲ್ಲಿ ಯಾವುದು ಹೆಚ್ಚು ಕಷ್ಟ ಎನಿಸಿತು?

ಉಫ್‌... ಬರವಣಿಗೆ ಸುಲಭವಲ್ಲ. ಹಿಂದೆ ನಡೆದ ಸಂಗತಿಗಳನ್ನೆಲ್ಲಾ ದಿನಾಂಕ, ಸಂದರ್ಭಗಳ ಸಮೇತ ನೆನಪಿಸಿಕೊಳ್ಳುವುದು ನಿಜಕ್ಕೂ ತುಂಬಾ ಕಷ್ಟವೆನ್ನಿಸಿತು. ಆನಂತರ ಅಕ್ಷರಗಳನ್ನು ಜೋಡಿಸಿ ಅವುಗಳಿಗೆ ರೂಪು ಕೊಡುವುದು ಕಷ್ಟ. ಆದರೂ ಬರೆದೆ ಎಂಬುದೇ ಸಮಾಧಾನ.ಪುಸ್ತಕದಲ್ಲಿ ಏನೆಲ್ಲಾ ಅಂಶಗಳಿವೆ? ಅವುಗಳಲ್ಲಿ ನಿಮಗೆ ಹೆಚ್ಚು ಆಪ್ತವಾದ ವಿಷಯ ಯಾವುದು?

ಬಾಲ್ಯದಿಂದ ಇಲ್ಲಿಯವರೆಗಿನ ನನ್ನ ಹೋರಾಟ, ಖುಷಿ, ದುಃಖ ಎಲ್ಲವನ್ನೂ ದಾಖಲಿಸಿದ್ದೇನೆ. ಪುಸ್ತಕ ಓದಿದರೆ ನಿಮಗೇ ಅರ್ಥವಾಗುತ್ತದೆ. ಅದರಲ್ಲಿನ ಭಾವುಕ ಸನ್ನಿವೇಶಗಳು ನನಗೆ ಹೆಚ್ಚು ಇಷ್ಟ.ಮನೆ, ತರಬೇತಿ, ಬರವಣಿಗೆ ಎಲ್ಲವನ್ನೂ ಹೇಗೆ ನಿಭಾಯಿಸಿದಿರಿ?

ಮನಸ್ಸಿದ್ದರೆ ಮಾರ್ಗ. ಅದೂ ಅಲ್ಲದೆ ನನ್ನೆಲ್ಲಾ ಸಾಧನೆಗೆ ಕುಟುಂಬದ ಬೆಂಬಲವಿತ್ತು. ಒಂಖೊಲರ್‌ ಅವರಂತೆ ಬೆಂಬಲ ನೀಡುವ ಪತಿ ಇದ್ದರೆ ಅಂದುಕೊಂಡಿದ್ದನ್ನು ಸಾಧಿಸುವುದು ಸುಲಭವಾಗುತ್ತದೆ.ನಿಮ್ಮ ಮಕ್ಕಳಿಗೂ ಬಾಕ್ಸಿಂಗ್‌ ಪರಿಚಯಿಸುತ್ತಿದ್ದೀರಾ?

ಅವರು ಇನ್ನೂ ಚಿಕ್ಕವರು. ಈಗ ಆಟದಲ್ಲೇ ಕಾಲ ಕಳೆಯುವ ಮನಸ್ಥಿತಿ ಅವರದ್ದು. ಆಗಾಗ ಗ್ಲೌಸ್‌ ಹಿಡಿದು ಆಡುತ್ತಾರೆ. ಗುದ್ದಾಡುವುದು ಅವರಿಗೆ ಮಜಾ ಅಷ್ಟೆ. ಅವರಿಗೆ ನಾನು ಮಾಡಿದ್ದನ್ನೇ ಮಾಡಿ ಎಂದು ತಾಕೀತು ಮಾಡುವುದಿಲ್ಲ. ಅವರಿಷ್ಟದ ದಾರಿಯಲ್ಲಿ ಹೋಗಲಿ. ಅದನ್ನು ನಾನು ಬೆಂಬಲಿಸುತ್ತೇನೆ. ಬಾಕ್ಸಿಂಗ್‌ ಕಲಿಯುವ ಇಚ್ಛೆ ತೋರಿದರೆ ತರಬೇತಿ ನೀಡಲೂ ಸಿದ್ಧ.ನಿಮ್ಮ ಬದುಕನ್ನು ಆಧರಿಸಿದ ಹಿಂದಿ ಸಿನಿಮಾ ಸಿದ್ಧವಾಗುತ್ತಿದೆ. ಏನನ್ನಿಸುತ್ತದೆ?

ಅದು ಬದುಕಿನ ಇನ್ನೊಂದು ಮೈಲಿಗಲ್ಲು. ಸಿನಿಮಾ ಶಾಶ್ವತವಾಗಿ ಉಳಿಯುತ್ತದೆ. ಹೀಗಾಗಿ ನನ್ನ ಪಾಲಿಗೆ ಅದು ಖುಷಿಯ ಸಂಗತಿ. ಅದೂ ಅಲ್ಲದೆ ನನ್ನ ನೆಚ್ಚಿನ ನಟಿ ಪ್ರಿಯಾಂಕಾ ಛೋಪ್ರಾ ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆ ಚಿತ್ರದ ಕುರಿತು ನನ್ನಲ್ಲೂ ಕುತೂಹಲ ಮೂಡಿಸಿದೆ.ಹೆಣ್ಣುಮಕ್ಕಳಿಗೆ ನಿಮ್ಮ ಸಂದೇಶ ಏನು?

ಹೆಣ್ಣುಮಕ್ಕಳು ಮನೆಗೆ ಮಾತ್ರ ಸೀಮಿತವಲ್ಲ. ಅವರಲ್ಲೂ ಸಾಧನೆ ಮಾಡುವ ಛಲವಿದೆ. ಅನಿಸಿದ್ದನ್ನು ಸಾಧಿಸುವವರೆಗೂ ಛಲ ಬಿಡಬೇಡಿ. ಹೆಣ್ಣಾಗಿ ನನ್ನಿಂದ ಸಾಧನೆ ಸಾಧ್ಯ ಎಂದಾದರೆ ಎಲ್ಲಾ ಹೆಣ್ಣುಮಕ್ಕಳಿಗೂ ಅದು ಸಾಧ್ಯ.ಬೆಂಗಳೂರಿನ ಬಗ್ಗೆ?

ಈ ನಗರ ನನಗೆ ತುಂಬಾ ಇಷ್ಟ.

ನನ್ನದೇನೂ ಪಾತ್ರವಿಲ್ಲ

ಇಡೀ ದೇಶ ಕೊಂಡಾಡುತ್ತಿರುವ ಮೇರಿಯಂಥವಳನ್ನು ಪತ್ನಿಯಾಗಿ ಪಡೆದ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ. ಬಾಕ್ಸಿಂಗ್‌ನಲ್ಲಿ ಸಾಧಿಸಬೇಕು ಎಂಬುದು ಮೇರಿಯೊಬ್ಬಳದ್ದೇ ಆಸೆ ಆಗಿರಲಿಲ್ಲ. ಅದು ಕುಟುಂಬದ, ಬಂಧುಗಳ ಹಾಗೂ ದೇಶದ ಆಸೆಯಾಗಿತ್ತು. ಅದನ್ನು ಅವಳು ಸಾಧಿಸಿದ್ದಾಳೆ.ಅವಳ ಸಾಧನೆಯಲ್ಲಿ ನನ್ನದೇನೂ ಪಾತ್ರವಿಲ್ಲ. ಪತಿಯಾಗಿ ಸಣ್ಣ ಪುಟ್ಟ ಕೆಲಸಗಳನ್ನು ನಾನು ನಿಭಾಯಿಸುತ್ತೇನೆ. ಮಕ್ಕಳ ಹೋಂವರ್ಕ್‌, ಅವರನ್ನು ಟ್ಯೂಶನ್‌ಗೆ ಕರೆದೊಯ್ಯುವುದು, ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ನಾನು ಮಾಡುತ್ತೇನೆ. ಇದರಿಂದ ಅವಳಿಗೆ ಅಭ್ಯಾಸದಲ್ಲಿ ನಿರತಳಾಗಲು ಸಹಾಯವಾಗುತ್ತದೆ, ಅಷ್ಟೆ. ಕೆಲವೊಮ್ಮೆ ಬದುಕಿನಲ್ಲಿ ಸಣ್ಣಪುಟ್ಟ ಸಂಗತಿಗಳೇ ದೊಡ್ಡ ಸಾಧನೆ ಮಾಡಲು ಪ್ರೇರೇಪಣೆಯಾಗುತ್ತವೆ.ವಿದ್ಯೆ, ಕ್ರೀಡೆ, ಸಂಗೀತ, ನೃತ್ಯ ಹೀಗೆ ಯಾವುದೇ ಕ್ಷೇತ್ರದಲ್ಲೇ ಇರಲಿ ಸಾಧನೆ ಮಾಡುವುದಕ್ಕೆ ಕುಟುಂಬದ ಬೆಂಬಲ, ಬಂಧುಗಳ ಹಾರೈಕೆ ಇರಲೇಬೇಕು. ಇಲ್ಲವಾದರೆ ಸಾಧನೆ ಎಂಬುದು ಮರೀಚಿಕೆಯಾಗಿಬಿಡುತ್ತದೆ ಅಲ್ಲವೇ?

–ಒಂಖೊಲರ್‌ ಕೋಮ್‌,  ಮೇರಿ ಕೋಮ್ ಪತಿ

 

ಪ್ರತಿಕ್ರಿಯಿಸಿ (+)