ಗುರುವಾರ , ಮೇ 13, 2021
24 °C

ಮೇಲ್ವರ್ಗದ ಮಿದುಳು ಹಾಗೂ ಬಡವರ ಅಕ್ಕಿ

ವಿಕಾಸ ಆರ್. ಮೌರ್ಯ Updated:

ಅಕ್ಷರ ಗಾತ್ರ : | |

ಒಂದು ರೂಪಾಯಿಗೆ ಬಡವರಿಗೆ ಅಕ್ಕಿ ಕೊಡುವ ಯೋಜನೆಯನ್ನು ಮುಖ್ಯಮಂತ್ರಿಗಳು ಘೋಷಿಸಿದ ಕೂಡಲೇ ಮೇಲ್ವರ್ಗದ ಮಿದುಳುಗಳು ವಿಷ ಕಾರುತ್ತ ಮನಬಂದ ಕಾರಣವನ್ನು ಕೊಡುತ್ತಾ 1 ರೂ ಅಕ್ಕಿ ಯೋಜನೆಯನ್ನು ವಿರೋಧಿಸುತ್ತಿವೆ. ಇವರ ಪ್ರಕಾರ ಕಡಿಮೆ ಬೆಲೆಗೆ ಅಕ್ಕಿ ಕೊಟ್ಟರೆ ಬಡವರು ಸೋಮಾರಿಗಳಾಗಿ ಬಿಡುತ್ತಾರೆ ಎಂಬುದಾದರೂ ಮೂಲತಃ ಇವರ ದಿಗಿಲಿರುವುದು `ಬಡವ ನೀ ಮಡುಗಿದ ಹಾಗಿರು' ಎಂಬ ಮಾತು ಉಲ್ಟಾ ಹೊಡೆಯಬಹುದು ಎಂಬುದರಲ್ಲಿ.ಆದರೆ ವಾಸ್ತವದಲ್ಲಿ ಈ ಉಲ್ಟಾ ಹೊಡೆಯುವ ಪ್ರಕ್ರಿಯೆ ಅಷ್ಟು ಸುಲಭದ್ದಲ್ಲ. ಇದು ಮೇಲ್ವರ್ಗದವರಿಗೆ ತಿಳಿದಿದೆಯಾದರೂ ಶ್ರಮಿಕ ವರ್ಗ ಅನುಭವಿಸುವ ಕಿಂಚಿತ್ ನಿರಾಳವನ್ನು ಸಹ ಅದು ಸಹಿಸದು.ಶೋಷಿಸುವುದು ಮೇಲ್ವರ್ಗಕ್ಕೆ ರಕ್ತಗತವಾಗಿ ಹೋಗಿರುವುದೇ ಇದಕ್ಕೆ ಕಾರಣ. 90 ರ ದಶಕದ ನಂತರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸರ್ಕಾರಗಳು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಎಂಬ ತ್ರಿಕರಣಗಳನ್ನು ಮೇಲ್ವರ್ಗದ ಪರವಾಗಿ ಜಾರಿಗೆ ತಂದು ಬಲೆ ಹೆಣೆದು ಅದರಲ್ಲಿ ಮಧ್ಯಮ ವರ್ಗವನ್ನು ಬಡಿದು ಒಳಹಾಕಿಕೊಂಡು ಕೆಳವರ್ಗಗಳ ಕತ್ತು ಹಿಸುಕುತ್ತಿರುವುದನ್ನು ಇಂದು ನಾವೆಲ್ಲರು ಕಾಣುತ್ತಿದ್ದೇವೆ.ಕಳೆದ ಕೆಲವು ವರ್ಷಗಳಲ್ಲಿ ಹಲವು ಲಕ್ಷ ಕೋಟಿ ತೆರಿಗೆಯನ್ನು ಖಾಸಗಿ ಕಂಪೆನಿಗಳಿಗೆ ಬಿಟ್ಟುಕೊಟ್ಟಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪೆನಿಯೂ ಸಹ ತೆರಿಗೆ ಕಟ್ಟದೆ ಆಟವಾಡುತ್ತಿರುವುದು ಬಹಿರಂಗವಾಗಿದೆ. ಮೊನ್ನೆ ಬೆಂಗಳೂರಿನ ವಿಪ್ರೋ ಕಂಪೆನಿಯು 99 ಕೋಟಿ ರೂಪಾಯಿಯ ವಿದ್ಯುತ್ ಬಿಲ್ ಕಟ್ಟದೆ ಇರುವುದಕ್ಕೆ ಅಧಿಕಾರಿಗಳು ಕಂಪೆನಿ ಮುಂದೆ ತಮಟೆ ಬಾರಿಸಿದ್ದಾರೆ. (ನಾವು 100 ರೂ ವಿದ್ಯುತ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುತ್ತಾರೆ). ಸಂಡೂರಿನ ಪ್ರತಿಷ್ಠಿತ ಕಂಪೆನಿಯೊಂದರ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲಾಗಿತ್ತಂತೆ. ಹೀಗೆ ಹೇಳುತ್ತಾ ಹೋದರೆ ಉಳ್ಳವರ ಪರವಾಗಿ ಆಳುವ ಸರ್ಕಾರಗಳು ತೋರಿಸಿರುವ ಕರುಣೆ ಅಷ್ಟಿಷ್ಟಲ್ಲ.ಈ ಕರುಣೆಯ ಪರಿಣಾಮವಾಗಿಯೇ ಇಂದು  ಖಾಸಗಿ ಕಂಪನಿ ಒಡೆಯರು ನಮ್ಮ ದೇಶದ ಹಲವಾರು ವರ್ಷಗಳ ಆಯವ್ಯಯಕ್ಕೆ ಸಮಾನವಾದಷ್ಟು ಹಣವನ್ನು ಗಳಿಸಿದ್ದಾರೆ.  ಹೀಗೆ ಮೇಲ್ವರ್ಗದ ಆಸಾಮಿಗಳು ಒಂದು ಬೃಹತ್ ವ್ಯೆಹವನ್ನೇ ರಚಿಸಿಕೊಂಡು ಅದರಲ್ಲಿ ಸಮಾನ ಮನಸ್ಕರನ್ನು ತುಂಬಿಕೊಂಡು ಸಾಕುತ್ತಿವೆ. ಈ ರೀತಿ ಕೋಟಿ ಕೋಟಿಗಳನ್ನು ಮಳ್ಳರಂತೆ ಹೊಡೆಯುವ ಮೇಲ್ವರ್ಗವು ಕಡುಬಡವರಿಗೆ 1 ರೂಪಾಯಿಗೆ ಅಕ್ಕಿ ಕೊಟ್ಟುಬಿಟ್ಟರೆ ಅದು ಸಾರ್ವಜನಿಕ ಹಣದ ಪೋಲು ಮತ್ತು ಸೋಂಬೇರಿತನವನ್ನು ಸೃಷ್ಟಿಸುವಂತಹದ್ದು ಎಂದು ಬೊಬ್ಬೆಯಿಡುತ್ತಿವೆ.ಮೀಸಲಾತಿಯು ಶೋಷಿತರನ್ನು ಆರ್ಥಿಕವಾಗಿ ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಜೊತೆಗೆ ಒಂದು ವರ್ಗವನ್ನು ಸೃಷ್ಟಿಸುವಲ್ಲಿಯೂ ಗಮನಾರ್ಹ ಪಾತ್ರವಹಿಸಿದೆ. ಅದರ್ಲ್ಲಲೂ 1 ರೂಪಾಯಿಗೆ ಅಕ್ಕಿ ಎಂಬುದು ಸೃಷ್ಟಿಸಿರುವ ವಾದ ವಿವಾದಗಳೇ ಇದಕ್ಕೆ ಕಾರಣ. ಏನಿದು ಮೀಸಲಾತಿಗೂ, ಅಕ್ಕಿಗೂ ಇರುವ ಸಂಬಂಧ ಎಂದು ಆಶ್ಚರ್ಯಪಡದಿರಿ. ಜಾತಿಶ್ರೇಣಿಯ ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ಮಧ್ಯಮ ವರ್ಗ ಜಾತಿ ಪ್ರಜ್ಞೆಯನ್ನು ಬಿಟ್ಟು  ವರ್ಗದೃಷ್ಟಿಯಿಂದ ಆಲೋಚಿಸಿ ಬಹಿರಂಗವಾಗಿಯೇ ಅದನ್ನು ವ್ಯಕ್ತಪಡಿಸುತ್ತಿದೆ.ಈ ಹಿಂದೆಯೂ ಈ ರೀತಿಯ ವರ್ಗ ಪ್ರಜ್ಞೆಯನ್ನು ಮೆರೆದಿರುವ ನಮ್ಮ ದೇಶದ ಮಧ್ಯಮ ವರ್ಗದವರು ಇಂದು ದೇಶದ ಒಳಿತಿಗಾಗಿ ಸಾರ್ವಜನಿಕ ಹಣ ಪೋಲಾಗುತ್ತದೆ ಎಂದು ಮೇಲ್ವರ್ಗದವರಂತೆ ಆಲೋಚಿಸಿ 1 ರೂ ಅಕ್ಕಿ ಯೋಜನೆಯನ್ನು ವಿರೋಧಿಸುತ್ತಿದೆ. ಇದರ ಹಿಂದೆ ಜಾತಿ ಪ್ರಜ್ಞೆಗಿಂತ ವರ್ಗ ಪ್ರಜ್ಞೆ ಕೆಲಸ ಮಾಡಿರುವುದಂತೂ ಬಹಿರಂಗ. ಏಕೆಂದರೆ ಮುಂದುವರಿದ (ಮಧ್ಯಮ ವರ್ಗ) ಶೂದ್ರರು, ದಲಿತರು ಸಹ ತಮ್ಮ ಜಾತಿಯ ಬಡವರನ್ನು ಮರೆತಿದ್ದಾರೆ.ಈ ಹಿಂದೆ ಹಲವಾರು ಸವಲತ್ತುಗಳನ್ನು ಪಡೆದುಕೊಂಡು ಇಂದು ಮಧ್ಯಮ ವರ್ಗಗಳಾಗಿರುವ ಹಲವಾರು ಜಾತಿಗಳ ಜನತೆ ತಮ್ಮ ಬುಡಕ್ಕೆ ಸಂಬಂಧಿಸಿದ ವಿಷಯಕ್ಕೆ ಜಾತಿಯನ್ನೇ ಮುಂದಿಟ್ಟುಕೊಂಡು ವ್ಯವಹರಿಸುತ್ತಾರಾದರೂ ಆ ಜಾತಿಯಲ್ಲಿನ ವರ್ಗ ಪ್ರಜ್ಞೆಯಿಂದಾಗಿ ಆರ್ಥಿಕ ಶಕ್ತಿಯನ್ನು ಹುಡುಕಿಕೊಳ್ಳಲು, ಕಾಪಾಡಿಕೊಳ್ಳಲು ಮತ್ತು ವೃದ್ಧಿಸಿಕೊಳ್ಳಲು ತಮ್ಮ ತಮ್ಮ ಜಾತಿಯಲ್ಲಿಯೇ ಒಂದು ಮಧ್ಯಮ ವರ್ಗವನ್ನು ಸೃಷ್ಟಿಸಿಕೊಂಡಿರುವುದನ್ನು ಸಂಶೋಧಿಸುವ ಅಗತ್ಯ ಇಲ್ಲ.ಇಂತಹ ಜಾತಿಗಳೊಳಗಿನ ವರ್ಗಪ್ರಜ್ಞೆಯೇ ಇಂದು 1ರೂ ಅಕ್ಕಿಯನ್ನು ವಿರೋಧಿಸುತ್ತಿರುವುದು ಮತ್ತು ಬಡವರೆಲ್ಲ ಸೋಮಾರಿಗಳಾಗಿ ಬಿಡುತ್ತಾರೆ ಎಂದು ಬೊಬ್ಬೆ ಇಡುತ್ತಿರುವುದು. ಈ ಪ್ರಕ್ರಿಯೆಯ ಹಿಂದಿನ ಮರ್ಮವನ್ನು ಅರಿತುಕೊಳ್ಳುವ ಮೊದಲು ನಮ್ಮ ದೇಶದಲ್ಲಿನ ಶೋಷಿತರ  ವರ್ಗಪ್ರಜ್ಞೆಯನ್ನೊಮ್ಮೆ ತಿಳಿದುಕೊಳ್ಳಬೇಕಿದೆ.ಈ ಹಿಂದೆ ಕರ್ನಾಟಕದಲ್ಲಿಯೇ ಶೋಷಣೆಯ ವಿರುದ್ಧ ಬ್ರಾಹ್ಮಣೇತರ ಸಂಘಗಳನ್ನು ಕಟ್ಟಿಕೊಂಡು ಮಾಡಿದ ಹೋರಾಟದ ಫಲವಾಗಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ  ಮೀಸಲಾತಿ ಸೌಲಭ್ಯ ಪಡೆದು ನಂತರ ಅರಸು ಅವರ ಕಾಲದಲ್ಲಿ ಮುಂದುವರಿದ ಶೂದ್ರ ಜಾತಿಯ ಒಂದು ವರ್ಗ ಇಂದು ಏನಾಗಿದೆ ? ದಲಿತರು ಮತ್ತು ಬಡ ಶೂದ್ರರನ್ನು ಶೋಷಿಸುತ್ತಿವೆ. ದಲಿತರಿಗೆ ಸ್ವಾಭಿಮಾನ ತುಂಬಿ ತಲೆ ಎತ್ತಿ ನಡೆಯಲು ಕಲಿಸಿಕೊಟ್ಟ ದಲಿತ ಸಂಘಟನೆಯ ನಾಯಕರು ಮತ್ತು ಅದರ ಪ್ರಭಾವದಿಂದ ಮತ್ತು ಮೀಸಲಾತಿಯಿಂದ ಆರ್ಥಿಕವಾಗಿ ಉತ್ತಮರಾಗಿರುವ ದಲಿತರು ಇಂದು ಪ್ರಶ್ನಿಸುತ್ತಿರುವುದೇನು?ಖಾಸಗಿರಂಗದಲ್ಲಿ ಮೀಸಲಾತಿಯನ್ನು, ಮೀಸಲಾತಿಯಲ್ಲಿ ಬಡ್ತಿಯನ್ನು, ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆ ಪ್ರ್ರಕಾರ ತಮ್ಮ ಮಕ್ಕಳನ್ನು ಸೇರಿಸುವ ಪ್ರಕ್ರಿಯೆಯನ್ನು ಇವೆಲ್ಲವು ಪ್ರಶ್ನಿಸಲೇ ಬೇಕಾದವಾದರೂ ಸರ್ಕಾರವೇ ಒಪ್ಪಿಕೊಂಡಂತೆ ದಲಿತರ ಮೇಲೆ ದಿನಕ್ಕೆ ಮೂರು ಅತ್ಯಾಚಾರಗಳು, ಎರಡು ಕೊಲೆಗಳು, ಮೂರು ಮನೆಗಳು ಧ್ವಂಸವಾಗುತ್ತಿವೆ. ಭೂ ಹೋರಾಟಗಳು ನೆಲಕಚ್ಚಿವೆ ಇವುಗಳ ವಿರುದ್ಧ ಒಂದು ಹೋರಾಟವನ್ನು ಏಕೆ ರೂಪಿಸಲಾಗುತ್ತಿಲ್ಲ ? ಇವುಗಳನ್ನು ಏಕೆ ಪ್ರಶ್ನಿಸಲಾಗುತ್ತಿಲ್ಲ ?ಕಾವೇರಿ ನೀರು ತಮಿಳುನಾಡಿಗೆ ಹರಿಯುವಾಗ, ಬೆಂಬಲ ಬೆಲೆ ಬೇಕೆಂದಾಗ, ರಾಜಕೀಯ ಹಿತಾಸಕ್ತಿಗಳಿಗಾಗಿ ಹೋರಾಡುವ ನಮ್ಮ ರೈತನಾಯಕರು ಪ್ರಾಮಾಣಿಕವಾಗಿ ಭೂಮಿ ಪ್ರಶ್ನೆಯನ್ನು, ಸಣ್ಣ ರೈತರ ಬವಣೆಯನ್ನು, ಸಾಲವನ್ನು ಪಡೆಯಲು ಅರಿಯದ ಮುಗ್ಧ ರೈತನ ಪರವಾಗಿ, ಗೊಬ್ಬರ ಬೆಲೆ ಹೆಚ್ಚಳವನ್ನು ತಡೆಯಲು, ಕೃಷಿಯಲ್ಲಿ ಖಾಸಗೀಕರಣದ ಪಾಲನ್ನು ತಡೆಯಲು ಎಂದಾದರೂ ಬೀದಿಗೆ ಇಳಿದಿವೆಯೆ?ಈ ಹಿಂದೆ ಅಡುಗೆ ಅನಿಲವನ್ನು ವರ್ಷಕ್ಕೆ ಆರರಂತೆ ಮಿತಿಗೊಳಿಸಿದಾಗ, ಬೆಲೆ ಹೆಚ್ಚಿಸಿದಾಗ, ತೈಲಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದಾಗಲೂ ಸಹ ಈ ಮೇಲ್ಮಧ್ಯಮ ವರ್ಗ ಪ್ರಬಲವಾದ ವಿರೋಧವನ್ನೇ ಒಡ್ಡಿದೆ. ಆಗೆಲ್ಲ ಆಮ್ ಆದ್ಮಿಗಳ ವಕ್ತಾರರಂತೆ ಮಾತನಾಡಿವೆ. ಅಷ್ಟೆ ಯಾಕೆ  ಇದೇ 1ರೂ ಅಕ್ಕಿ ಜೊತೆಗೆ ಘೋಷಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನಿಗಮ ಮಂಡಳಿಯ ಸಾಲ ಮನ್ನಾ ಮಾಡಲಾಗಿದೆ. ಈ ಸೌಲಭ್ಯದ ವಿರುದ್ಧ ಯಾರಾದರೂ ಮಾತನಾಡಿದ್ದಾರೆಯೆ?ಇಲ್ಲ. ಕಾರಣ ಆ ಸಾಲ ಪಡೆದಿರುವುದೆಲ್ಲವೂ ಆಯಾ ಜಾತಿಗಳ ಮೇಲ್ಮಧ್ಯಮ ವರ್ಗ ! ಹೀಗೆ ಹಿಂದೊಮ್ಮೆ ಸರ್ಕಾರಗಳಿಂದ ಹಲವು ಸೌಲಭ್ಯಗಳನ್ನು ಪಡೆದು ಇಂದು ಒಂದು ಹಂತಕ್ಕೆ ಬಂದಿರುವ ಮಧ್ಯಮ ವರ್ಗವು 1 ರೂ ಅಕ್ಕಿ ಯೋಜನೆಯನ್ನು ವಿರೋಧಿಸುತ್ತಿರುವುದರಲ್ಲಿ ಅದರ ಮರೆಗುಳಿತನ, ಅವಕಾಶವಾದಿತನ ಅಡಗಿದೆ. ಹಾಗೆಯೇ ಸರ್ಕಾರಗಳನ್ನು ಬುಟ್ಟಿಗೆ ಹಾಕಿಕೊಂಡು ಕೋಟಿ ಕೋಟಿ ತೆರಿಗೆಗಳನ್ನು ನುಂಗುತ್ತಿರುವ ಮೇಲ್ವರ್ಗವು ಎಂದೆಂದಿಗೂ ಶೋಷಿತರನ್ನು ಬೆಂಬಲಿಸಿದ ಉದಾಹರಣೆಗಳೇ ಇಲ್ಲ.ಹೀಗೆ ಜಾತಿ ಪ್ರಜ್ಞೆ ಮತ್ತು ವರ್ಗ ಪ್ರಜ್ಞೆಯನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವ ಮೇಲ್ಮಧ್ಯಮ ವರ್ಗಗಳಿಗೆ ಬಡವರ ಅವಶ್ಯಕತೆಗಳು ತಿಳಿಯುವುದು ಕಷ್ಟ. ಆ ಕಷ್ಟಗಳು ತಿಳಿಯಬೇಕೆಂದರೆ ಇಲ್ಲೊಂದು ಕ್ರಾಂತಿ ಆಗಲೇಬೇಕು. ಅದು ಉಳ್ಳವರಿಂದ ಕಿತ್ತು ಇಲ್ಲದವರಿಗೆ ಕೊಟ್ಟಾಗ 1 ರೂ ಅಕ್ಕಿಯ ಬೆಲೆ ಅವರಿಗೆ ತಿಳಿಯುತ್ತದೆ. ಅದು ಸಾಧ್ಯವೆ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.