ಬುಧವಾರ, ಮಾರ್ಚ್ 3, 2021
25 °C

ಮೈತುಂಬಿ ಹರಿಯುತಿದೆ ತುಂಗಭದ್ರಾ

ಪ್ರಜಾವಾಣಿ ವಾರ್ತೆ/ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮೈತುಂಬಿ ಹರಿಯುತಿದೆ ತುಂಗಭದ್ರಾ

ಮುಂಡರಗಿ: ಶಿವಮೊಗ್ಗ ಮತ್ತು ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಬಿರುಸಿನ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿಗೆ ಒಂದೇ ದಿನ 10 ಟಿಎಂಸಿ ಅಡಿ ನೀರು ಹರಿದು ಬಂದಿದೆ.ಈ ಭಾಗದಲ್ಲಿ ಸಕಾಲಕ್ಕೆ ಮಳೆ ಬೀಳದೆ ಇದ್ದುದರಿಂದ ಬೆಳೆಗಳು ಒಣಗುವ ಹಂತದಲ್ಲಿದ್ದವು. ನದಿಯಲ್ಲಿ ಹರಿದು ಬರುತ್ತಿರುವ ನೀರಿನಿಂದಾಗಿ ನದಿ ತೀರದ ರೈತರ ಜಮೀನುಗಳಿಗೆ ಅನುಕೂಲವಾಗಿದೆ. ನದಿ ನೀರು ಬಳಸಿಕೊಂಡು ಬೆಳೆ ಪಡೆಯುವ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.ಗದಗ- ಬೆಟಗೇರಿ, ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ ಮೊದಲಾದ ಪಟ್ಟಣಗಳಿಗೆ, ನದಿ ಪಾತ್ರದ ಗ್ರಾಮಗಳಿಗೆ ತಾಲ್ಲೂಕಿನ ಕೊರ್ಲಹಳ್ಳಿ ಸಮೀಪದಲ್ಲಿ ನಿರ್ಮಿಸಿರುವ ನೀರು ಸರಬರಾಜು ಘಟಕದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ನದಿಯಲ್ಲಿ ಹೊಸ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯಾದ್ಯಂತ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗದು ಎನ್ನಲಾಗಿದೆ.ತಾಲ್ಲೂಕಿನ ಹಮ್ಮಗಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಘಟಕದಲ್ಲಿ ಈಗಾಗಲೇ 0.64 ಟಿಎಂಸಿ ನೀರು ಸಂಗ್ರಹವಾಗಿದೆ. ನೀರು ನಿರಂತರವಾಗಿ ಹರಿದು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಬ್ಯಾರೇಜಿನ 18 ಗೇಟ್‌ಗಳ ಮೂಲಕ ನಿತ್ಯ ಸುಮಾರು 75 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ತಾಲ್ಲೂಕಿನ ಸಿಂಗಟಾಲೂರ ವೀರಣ್ಣನ ಗುಡ್ಡ, ಸಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಹೆಸರೂರು ಗ್ರಾಮಗಳ ಎದುರು ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ.ಒಟ್ಟು 26 ಬೃಹತ್ ಗೇಟ್‌ಗಳುಳ್ಳ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಘಟಕದಲ್ಲಿ ಈಗಾಗಲೇ 504.5 ಮೀಟರ್ ನೀರು ಹರಿದು ಬಂದಿದೆ. ಬ್ಯಾರೇಜಿನಲ್ಲಿ ಹೆಚ್ಚ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳ ಬಹುದಾದರೂ ಬ್ಯಾರೇಜಿನ ಹಿನ್ನೀರಿನಲ್ಲಿ ಮುಳುಡೆಯಾಗಲಿರುವ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ನದಿ ನೀರನ್ನು ಹೊರಗೆ ಬಿಡಬೇಕಾಗಿದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ದಂಡೆಯಲ್ಲಿರುವ ಸಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ, ಹೂವಿನಹಡಗಲಿ ತಾಲ್ಲೂಕು ಮದಲಗಟ್ಟಿ ಆಂಜನೇಯನ ದೇವಸ್ಥಾನ, ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಘಟಕ, ಗುಮ್ಮಗೋಳದ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರವಾಸಿಗರು, ಭಕ್ತರ ಸಂಖ್ಯೆ ಹೆಚ್ಚಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.