ಮೈಸೂರು: ಕಾಂಗ್ರೆಸ್ ಮುಖಂಡ ನಾಗರಾಜ್ ಕಾರಿನಲ್ಲೇ ಆತ್ಮಹತ್ಯೆ

ಮೈಸೂರು: ಜಿಲ್ಲಾ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ, ಪಾಲಿಕೆ ಮಾಜಿ ಸದಸ್ಯ ಪಿ. ನಾಗರಾಜ್ (71) ಅವರು ನಗರದ ಸಿದ್ಧಾರ್ಥ ಬಡಾವಣೆಯ ಉದ್ಯಾನದ ಬಳಿ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಸಿದ್ಧಾರ್ಥ ಸ್ಪೋರ್ಟ್ಸ್ ಕ್ಲಬ್ ಮುಂಭಾಗದ ಉದ್ಯಾನದ ಬಳಿ ನಿಂತಿದ್ದ ಕಾರಿನಲ್ಲಿ ನಾಗರಾಜ್ ಅವರ ಮೃತದೇಹ ಪತ್ತೆಯಾಗಿದೆ. ಬಲಗೈ ರಕ್ತನಾಳ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಸ್ಥಳದಲ್ಲಿ ಬ್ಲೇಡ್ ದೊರೆತಿದೆ. ಕಾರಿನಿಂದ ರಕ್ತ ತೊಟ್ಟಿಕ್ಕುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಕಾರಿನಲ್ಲಿ ಸಿಕ್ಕ ನೋಟ್ ಪುಸ್ತಕದಲ್ಲಿ ‘ಎಲ್ಲರಿಗೂ ಧನ್ಯವಾದ’ ಎಂದು ಬರೆದಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಜರ್ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಮುಖಂಡ: ಮೈಸೂರಿನ ಹಿರಿಯ ಕಾಂಗ್ರೆಸ್ ಮುಖಂಡರಲ್ಲಿ ಪಿ. ನಾಗರಾಜ್ ಪ್ರಮುಖರು. 70ರ ದಶಕದಿಂದಲೂ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. 1993ರಿಂದ 95ರ ವರೆಗೆ ನಗರ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಶಾಸಕ ವಾಸು ಅವರು ಮೇಯರ್ ಆಗಿದ್ದ ಸಂದರ್ಭದಲ್ಲಿ ನಾಗರಾಜ್ ಪಾಲಿಕೆ ಸದಸ್ಯರಾಗಿದ್ದರು. ಈ ವೇಳೆ ಮೇಯರ್ ಸ್ಥಾನಕ್ಕೆ ಇವರ ಹೆಸರು ಬಲವಾಗಿ ಕೇಳಿಬಂದಿತ್ತು. ದಿ ಮೈಸೂರು ಕೋ– ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷರಾಗಿ ದೀರ್ಘ ಅವಧಿಯವರೆಗೆ ಸೇವೆ ಸಲ್ಲಿಸಿದ್ದಾರೆ.
ಮೈಸೂರು–ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್, ಜನತಾ ಬಜಾರ್ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರಾಗಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಅನಾರೋಗ್ಯ ಕಾರಣ?: ಸಿದ್ಧಾರ್ಥ ಬಡಾವಣೆಯ 8ನೇ ಕ್ರಾಸ್ನಲ್ಲಿ ಪುತ್ರ ದಿನೇಶ್ ಅವರೊಂದಿಗೆ ವಾಸವಾಗಿದ್ದ ನಾಗರಾಜ್ ಮಧುಮೇಹದಿಂದ ಬಳಲುತ್ತಿದ್ದರು. ಕಾಲಿಗೆ ಗಾಯವಾದ ಹಿನ್ನೆಲೆಯಲ್ಲಿ ಗ್ಯಾಂಗ್ರಿನ್ ಕೂಡ ಕಾಣಿಸಿಕೊಂಡಿತ್ತು. ಇದಕ್ಕೆ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಕಳೆದ ವಾರವಷ್ಟೇ ಚಿಕಿತ್ಸೆ ಪಡೆದಿದ್ದರು. ಅನಾರೋಗ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇವರಿಗೆ ಪತ್ನಿ ಜಯಲಕ್ಷ್ಮೀ, ಪುತ್ರರಾದ ದಿನೇಶ್, ದಿವ್ಯೇಶ್, ಪುತ್ರಿ ಜಯಶ್ರೀ ಇದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.